ಜಲಾಂತರ್ಗಾಮಿಯಿಂದ ಶಬ್ದಕ್ಕಿಂತ 9 ಪಟ್ಟು ವೇಗದ ಹೈಪರ್​ಸಾನಿಕ್ ಕ್ಷಿಪಣಿ ಯಶಸ್ವಿಯಾಗಿ ಉಡಾವಣೆ ಮಾಡಿದ ರಷ್ಯಾ

ಮಾಸ್ಕೊ: ಶಬ್ದದ ವೇಗಕ್ಕಿಂತಲೂ ಹಲವು ಪಟ್ಟು ವೇಗದಲ್ಲಿ ಸಂಚರಿಸುವ ಸಾಮರ್ಥ್ಯವಿರುವ ಅತ್ಯಾಧುನಿಕ ಹೈಪರ್​ಸಾನಿಕ್ ಕ್ಷಿಪಣಿಯೊಂದನ್ನು ರಷ್ಯಾ ನೌಕಾಪಡೆಅಣುಶಕ್ತಿ ಚಾಲಿತ ಜಲಾಂತರ್ಗಾಮಿಯಿಂದ (nuclear submarine) ಸೋಮವಾರ ಪರೀಕ್ಷಾರ್ಥ ಮಾಡಿದ ಉಡಾವಣೆ ಯಶಸ್ವಿಯಾಗಿದೆ.
ಪರೀಕ್ಷೆಯು ಯಶಸ್ವಿಯಾಗಿದ್ದು, ನಿಗದಿಪಡಿಸಿದ್ದ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಗಿದೆ ಎಂದು ರಷ್ಯಾದ ರಕ್ಷಣಾ ಇಲಾಖೆ ತಿಳಿಸಿದೆ. ಬರೆಂಟ್ಸ್​ ಸಾಗರದಲ್ಲಿದ್ದ ಅಣಕು ಗುರಿಯನ್ನು ಸೆವೆರೊಡ್ವಿನ್​ಸ್ಕ್​ ಜಲಾಂತರ್ಗಾಮಿಯಿಂದ ಹಾರಿಬಿಟ್ಟ ಝಿರ್​ಕೊನ್ ಕ್ಷಿಪಣಿಯು ಯಶಸ್ವಿಯಾಗಿ ತಲುಪಿತು ಎಂದು ರಷ್ಯಾ ಸರ್ಕಾರ ಹೇಳಿದೆ. ಕಳೆದ ಜುಲೈನಲ್ಲಿ ಇದೇ ಕ್ಷಿಪಣಿಯು ರಷ್ಯಾ ದಾಳಿಗೆ ಬಳಸುವ ಯುದ್ಧನೌಕೆಯಿಂದ (ಪ್ರಿಗೇಟ್) ಉಡಾಯಿಸಿ ಪರೀಕ್ಷೆ ಮಾಡಿತ್ತು.
1,000 ಕಿಲೋಮೀಟರ್​ಗೂ (620 ಮೈಲಿ) ಹೆಚ್ಚು ದೂರದ ಗುರಿಗಳನ್ನು ಧ್ವಂಸ ಮಾಡುವ ಸಾಮರ್ಥ್ಯವಿರುವ ಝಿರ್​ಕೊನ್ ಕ್ಷಿಪಣಿಯು ಶಬ್ದದ ವೇಗಕ್ಕಿಂತಲೂ 9 ಪಟ್ಟು ಹೆಚ್ಚು ವೇಗವಾಗಿ ಚಲಿಸಬಲ್ಲದು. ರಷ್ಯಾ ಸೇನಾಪಡೆಯ ಬತ್ತಳಿಕೆಗೆ ಈ ಕ್ಷಿಪಣಿ ಸೇರಿದರೆ, ಸೇನೆಯ ಸಾಮರ್ಥ್ಯ ಮತ್ತಷ್ಟು ಹೆಚ್ಚಾಗುತ್ತದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ. ಆದರೆ ಸೇನೆಯ ಬಳಕೆಗೆ ಈ ಕ್ಷಿಪಣಿ ಸೇರ್ಪಡೆಯಾಗಲು ಇನ್ನೂ ಕೆಲ ಪರೀಕ್ಷೆಗಳು ನಡೆಯಬೇಕಿದೆ. ಇವುಗಳು ಪೂರ್ಣಗೊಳ್ಳಲು ಮತ್ತೂ ಒಂದು ವರ್ಷ ಬೇಕಾಗಬಹುದು. 2022ರಲ್ಲಿಇದು ರಷ್ಯಾ ನೌಕಾಪಡೆಯ ಶಸ್ತ್ರಾಗಾರ ಸೇರಬಹುದು ಎಂದು ರಕ್ಷಣಾ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ರಷ್ಯಾ ಪ್ರಸ್ತುತ ಅಭಿವೃದ್ಧಿಪಡಿಸುತ್ತಿರುವ ಹೊಸ ತಲೆಮಾರಿನ ಹಲವು ಕ್ಷಿಪಣಿಗಳ ಪೈಕಿ ಝಿರ್​ಕೊನ್ ಮುಂಚೂಣಿಯಲ್ಲಿದೆ. ಮುಂದಿನ ವರ್ಷಗಳಲ್ಲಿ ರಷ್ಯಾದ ಬಹುತೇಕ ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿಗಳಲ್ಲಿ ಈ ಕ್ಷಿಪಣಿ ಅಳವಡಿಸಲು ಅಲ್ಲಿನ ಸರ್ಕಾರ ಉದ್ದೇಶಿಸಿದೆ. ಉಕ್ರೇನ್​ನ ಕ್ರಿಮಿಯನ್ ಪ್ರಸ್ತಭೂಮಿಯನ್ನು ರಷ್ಯಾ ವಶಪಡಿಸಿಕೊಂಡ ನಂತರ ಅಮೆರಿಕ ಸೇರಿದಂತೆ ಹಲವು ನ್ಯಾಟೊ ಸದಸ್ಯ ದೇಶಗಳೊಂದಿಗೆ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟಿವೆ. ನಂತರದಲ್ಲಿ ತನ್ನ ನೌಕಾಪಡೆಗೆ ಅತ್ಯಾಧುನಿಕ ಶಸ್ತ್ರಗಳನ್ನು ಸೇರಿಸಿಕೊಳ್ಳಲು ರಷ್ಯಾ ಕಾರ್ಯತಂತ್ರ ರೂಪಿಸಿದೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement