ಲಖಿಂಪುರ್ ಹಿಂಸಾಚಾರ: ಆರೋಪಿ ಆಶಿಶ್ ಮಿಶ್ರಾ 14 ದಿನ ನ್ಯಾಯಾಂಗ ಬಂಧನಕ್ಕೆ

ಲಖಿಂಪುರ್: ಅಕ್ಟೋಬರ್ 3ರಂದು ನಡೆದಿದ್ದ ಲಖಿಂಪುರ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ಸಚಿವ ಅಜಯ್ ಮಿಶ್ರ ಅವರ ಪುತ್ರ ಆಶಿಶ್ ಮಿಶ್ರಾ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಕಳೆದ ತಡರಾತ್ರಿ ಆಶಿಶ್ ಮಿಶ್ರಾ ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರುಪಡಿಸಲಾಗಿತ್ತು. ಸತತ 12 ಗಂಟೆಗಳ ಕಾಲ ಎಸ್‌ಐಟಿ ತಂಡ ವಿಚಾರಣೆ ನಡೆಸಿದ ನಂತರ ಕ್ರೈಮ್ ಬ್ರ್ಯಾಂಚ್ ಕಚೇರಿಯಲ್ಲಿ ವೈದ್ಯಕೀಯ ತಂಡ ತಪಾಸಣೆ ನಡೆಸಿ ನಂತರ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲು ಕರೆದೊಯ್ಯಲಾಯಿತು. ಅವರು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ ಎಂದು ಹಿರಿಯ ಪ್ರಾಸಿಕ್ಯೂಷನ್ ಅಧಿಕಾರಿ ಎಸ್ ಪಿ ಯಾದವ್ ತಿಳಿಸಿದ್ದಾರೆ.
ಆಶಿಶ್ ಮಿಶ್ರಾನನ್ನು ಪೊಲೀಸ್ ಕಸ್ಟಡಿಗೊಪ್ಪಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಾಧೀಶರು ನಾಳೆ ಬೆಳಗ್ಗೆ 11 ಗಂಟೆಗೆ ನಡೆಯುವ ಸಾಧ್ಯತೆಯಿದೆ.
ಅಕ್ಟೋಬರ್ 3ರಂದು ಲಖೀಂಪುರದಲ್ಲಿ ನಡೆದಿದ್ದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ 8 ಮಂದಿ ಮೃತಪಟ್ಟಿದ್ದರು. ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯರ ಭೇಟಿಯನ್ನು ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದ ರೈತರ ಮೇಲೆ ಹರಿಸಿದ ವಾಹನಗಳ ಪೈಕಿ ಒಂದು ಕಾರಿನಲ್ಲಿ ಆಶಿಶ್ ಮಿಶ್ರಾ ಕೂಡ ಇದ್ದರು ಎಂಬುದು ಪ್ರತಿಭಟನಾಕಾರರು ಮತ್ತು ಪ್ರತಿಪಕ್ಷಗಳ ಆರೋಪವಾಗಿದೆ.
ನಂತರ ನಡೆದ ಹಿಂಸಾಚಾರ, ಆಕ್ರೋಶ-ಪ್ರತಿಭಟನೆಯಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರು ಮತ್ತು ಅವರ ಚಾಲಕರನ್ನು ಆಕ್ರೋಶಭರಿತ ರೈತರು ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಹಿಂಸಾಚಾರದಲ್ಲಿ ಸ್ಥಳೀಯ ಪತ್ರಕರ್ತ ರಮಣ್ ಕಶ್ಯಪ್ ಕೂಡ ಅಸುನೀಗಿದ್ದಾರೆ. ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು ಮುಂದಿನ ವರ್ಷ ಚುನಾವಣೆ ನಡೆಯಲಿರುವ ಉತ್ತರ ಪ್ರದೇಶದ ಬಿಜೆಪಿ ಸರ್ಕಾರಕ್ಕೆ ತೀವ್ರ ತೊಂದರೆಯಾಗಬಹುದಾಗಿದೆ.
ಸ್ಥಳೀಯರಲ್ಲಿ ಮೋನು ಬೈಯ ಎಂದು ಹೆಸರಾಗಿರುವ ಕೇಂದ್ರ ಸಚಿವರ ಪುತ್ರ ಆಶಿಶ್ ಮಿಶ್ರ ನಿನ್ನೆ ರಾತ್ರಿ ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ಕಳೆದರು. ಎರಡನೇ ಬಾರಿ ಸಮನ್ಸ್ ಹೊರಡಿಸಿದ ನಂತರ ವಿಶೇಷ ತನಿಖಾ ತಂಡದ ಮುಂದೆ ನಿನ್ನೆ ಬೆಳಗ್ಗೆ 10.30ರ ಸುಮಾರಿಗೆ ಹಾಜರಾದರು. ಮೊದಲ ಬಾರಿ ಕರೆದಾಗ ಬಂದಿರಲಿಲ್ಲ. ನಿನ್ನೆ ತಡರಾತ್ರಿ 11 ಗಂಟೆ ಸುಮಾರಿಗೆ ವಿಶೇಷ ತನಿಖಾ ತಂಡ ಮತ್ತು ಅಪರಾಧ ವಿಭಾಗದ ಪೊಲೀಸರು ಸತತ ತನಿಖೆ ನಡೆಸಿ ಅವರನ್ನು ಬಂಧಿಸಿದರು.
ಸುಮಾರು 35 ವರ್ಷದ ಆಶಿಶ್ ಮಿಶ್ರಾ ಉತ್ತರ ಪ್ರದೇಶದ ಖೇರಿ ಪ್ರಾಂತ್ಯದಲ್ಲಿ ತಮ್ಮ ತಂದೆಯ ರಾಜಕೀಯ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಿದ್ದಾರೆ.

ಪ್ರಮುಖ ಸುದ್ದಿ :-   ಐಷಾರಾಮಿ ಕಾರು, ದುಬೈ, ಲಂಡನ್‌ನಲ್ಲಿ ಮನೆ... : ಈ ಬಿಜೆಪಿ ಅಭ್ಯರ್ಥಿ ಆಸ್ತಿ ₹1,400 ಕೋಟಿ

ಬಂಧನಕ್ಕೆ ಕಾರಣವಾದ ಅಂಶಗಳು…
ಶನಿವಾರ ಬೆಳಿಗ್ಗೆ ವಿಚಾರಣೆಗೆ ಹಾಜರಾಗಿದ್ದ ಆಶೀಶ್​ ಮಿಶ್ರಾ, ತನಿಖಾಧಿಕಾರಿಗಳು ಕೇಳಿದ ಅನೇಕ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡುವಲ್ಲಿ ಪರದಾಡಿದ್ದರು. ಹಾಗೂ ತನಿಖೆಗೆ ಸಹಕಾರ ನೀಡದ ಕಾರಣಕ್ಕೆ ಶನಿವಾರ ರಾತ್ರಿಯೇ ಬಂಧಿಸಲಾಗಿದೆ.
ಮೂಲಗಳ ಪ್ರಕಾರ ಕಳೆದ ಭಾನುವಾರ ಹಿಂಸಾಚಾರ ನಡೆದ ಸ್ಥಳದಿಂದ ಸುಮಾರು 4 ರಿಂದ 5 ಕಿ.ಮೀ. ದೂರದಲ್ಲಿ ನಡೆಯುತ್ತಿದ್ದ ಕುಸ್ತಿ ಪಂದ್ಯದಲ್ಲಿ ಭಾಗವಹಿಸಿದ್ದೆ. ನಾನು ಘಟನಾ ಸ್ಥಳದಲ್ಲಿರಲಿಲ್ಲ ಎಂದು ಆಶಿಶ್​ ಮಿಶ್ರಾ ತನಿಖಾ ತಂಡದ ಮುಂದೆ ಹೇಳಿದ್ದಾರೆ. ಆದರೆ, ಕುಸ್ತಿ ಪಂದ್ಯದ ಗಸ್ತಿನಲ್ಲಿದ್ದ ಪೊಲೀಸ್​ ಸಿಬ್ಬಂದಿ ಮತ್ತು ಜನರು ಹೇಳುವ ಪ್ರಕಾರ ಅಂದು ಕೇಂದ್ರ ಸಚಿವರ ಪುತ್ರ 2 ಮತ್ತು 4 ಗಂಟೆ ಸಮಯದಲ್ಲಿ ಕಾರ್ಯಕ್ರಮದಿಂದ ನಾಪತ್ತೆಯಾಗಿದ್ದರಂತೆ.
ಆಶೀಶ್​ ಮಿಶ್ರಾರ ಮೊಬೈಲ್​​ ಟವರ್​ ಲೊಕೇಶನ್​ ಕೂಡ ಘಟನೆ ನಡೆದ ದಿನ ಅದೇ ಸಮಯದಲ್ಲಿ, ಅದೇ ಜಾಗದಲ್ಲಿ ತೋರಿಸುತ್ತಿದೆ. ಆದಾಗ್ಯೂ ಅದನ್ನು ನಿರಾಕರಿಸಿರುವ ಮಿಶ್ರಾ ಘಟನೆ ನಡೆದ ಸ್ಥಳಕ್ಕೆ ಹತ್ತಿರವಿರುವ ಮತ್ತು ಅದೇ ಲೋಕೆಶನ್​ ವ್ಯಾಪ್ತಿಯಲ್ಲಿ ಬರುವ ನಮ್ಮ ರೈಸ್​ ಮಿಲ್​ನಲ್ಲಿ ಇದ್ದೆ ಎಂದು ವಿಚಾರಣೆ ವೇಳೆ ಹೇಳಿದ್ದಾರೆ.
ಆಶಿಶ್‌ ಮಿಶ್ರಾ ಬೇರೆಡೆ ಇದ್ದರು ಎಂದು ಹೇಳೆ ಅವರ ಆಪ್ತರು ತಮ್ಮ ಚಾಲಕ ಹರಿ ಓಂ ಸೇರಿದಂತೆ ಅವರ ಮೂವರನ್ನು ಕೊಂದ ಆರೋಪದ ಮೇಲೆ ರೈತರ ವಿರುದ್ಧವೇ ಎಫ್‌ಐಆರ್ ದಾಖಲಿಸಿದ ಕಾರಣ ಮಿಶ್ರಾ ಅವರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಬೇಕಾಯಿತು. ರೈತರ ಮೇಲೆ ಹರಿದ ಮಹೀಂದ್ರ ಥಾರ್​ ಕಾರನ್ನು ಮಿಶ್ರಾ ಅವರ ಚಾಲಕ ಹರಿ ಓಂ ಚಲಾಯಿಸುತ್ತಿದ್ದರು ಎಂದು ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಪೊಲೀಸರು ವಿಡಿಯೋ ಪರಿಶೀಲಿಸಿದಾಗ ಕಾರು ಓಡಿಸುತ್ತಿದ್ದ ವ್ಯಕ್ತ ಬಿಳಿ ಅಂಗಿ ಮತ್ತು ಕುರ್ತಾ ಧರಿಸಿದ್ದ. ಆದರೆ, ಚಾಲಕ ಹರಿ ಓಂ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದಾಗ ಆತ ಹಳದಿ ಕುರ್ತಾವನ್ನು ಧರಿಸಿದ್ದ ಎಂದು ತಿಳಿದುಬಂದಿದೆ.
ಈ ಮೂರು ಅಂಶಗಳ ಆಧಾರದ ಮೇಲೆ ಮತ್ತು ಮಿಶ್ರಾ ಅವರು ಕೇಳಲಾದ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡದ ಪೊಲೀಸರು ಮಿಶ್ರಾರನ್ನು ಬಂಧಿಸಿದ್ದಾರೆ. ಭಾನುವಾರ ಘಟನೆ ನಡೆದ ಬಳಿಕ ಕೊಲೆ ಪ್ರಕರಣ ದಾಖಲಿಸಿದ ಐದು ದಿನಗಳ ನಂತರ ಮಿಶ್ರಾರನ್ನು ಶನಿವಾರ ರಾತ್ರಿ ಬಂಧಿಸಲಾಗಿದೆ. ಮಿಶ್ರಾ ವಿರುದ್ಧ ಕೇಳಿಬಂದಿರುವ ಆರೋಪಗಳು ತುಂಬಾ ಗಂಭೀರವಾಗಿದ್ದು, ಇಂತಹ ಪ್ರಕರಣಗಳಲ್ಲಿ ಆರೋಪಿಯನ್ನು ತಕ್ಷಣಕ್ಕೆ ಬಂಧಿಸಲಾಗುತ್ತದೆ. ಆದರೆ, ತಂದೆ ಕೇಂದ್ರ ಸಚಿವರಾಗಿರುವುದರಿಂದ ಪ್ರಕರಣದ ಹಿಂದೆ ಪ್ರಭಾವಿಗಳಿರುವುದರಿಂದ ಆಶಿಶ್‌ ಮಿಶ್ರಾ ವಿಚಾರಣೆಗೆ ಹಾಜರಾಗಿರಲಿಲ್ಲ. ನಂತರ ಸುಪ್ರೀಂಕೋರ್ಟ್‌ ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ನಂತರ ಆಶಿಶ್‌ ಮಿಶ್ರಾ ಹಾಜರಾದರು. ನಂತರ ಅವರನ್ನು ಬಂಧಿಸಲಾಯಿತು.

ಪ್ರಮುಖ ಸುದ್ದಿ :-   ರಾಜ್‌ ಕುಂದ್ರಾಗೆ ಸೇರಿದ ₹97 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ.

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement