ಅಪ್ರಾಪ್ತರು, ಅತ್ಯಾಚಾರದ ಗರ್ಭಧಾರಣೆಯಲ್ಲಿ 24 ವಾರಗಳ ವರೆಗೆ ಗರ್ಭಪಾತಕ್ಕೆ ಅವಕಾಶ: ಹೊಸ ನಿಯಮಕ್ಕೆ ಕೇಂದ್ರದಿಂದ ಅಧಿಸೂಚನೆ

ನವದೆಹಲಿ: ದುರ್ಬಲ ಮಹಿಳೆಯರ ಕೆಲವು ವರ್ಗಗಳಿಗೆ ಗರ್ಭಪಾತಕ್ಕೆ ಗರಿಷ್ಠ ಸಮಯಾವಕಾಶದ ಮಿತಿಯನ್ನು ಬುಧವಾರ ಪರಿಷ್ಕರಿಸಿರುವ ಕೇಂದ್ರ ಸರಕಾರವು ಅದನ್ನು 20 ವಾರಗಳಿಂದ 24 ವಾರಗಳಿಗೆ ಹೆಚ್ಚಿಸಿದೆ.
ವೈದ್ಯಕೀಯ ಗರ್ಭಪಾತ (ತಿದ್ದುಪಡಿ) ನಿಯಮಗಳು 2021ರಡಿ ಹೊಸ ನಿಯಮಗಳ ಬಗ್ಗೆ ಕೇಂದ್ರವು ಅಧಿಸೂಚನೆ ಹೊರಡಿಸಿದೆ. ಲೈಂಗಿಕ ದೌರ್ಜನ್ಯ, ಅತ್ಯಾಚಾರ ಮತ್ತು ನಿಷಿದ್ಧ ಲೈಂಗಿಕ ಸಂಪರ್ಕಕ್ಕೆ ಒಳಗಾದ ಮಹಿಳೆಯರು ಮತ್ತು ಅಪ್ರಾಪ್ತ ವಯಸ್ಕರಿಗೆ ಈ ನಿಯಮಗಳು ಅನ್ವಯವಾಗಲಿವೆ. ಮಾನಸಿಕ ಅಸ್ವಸ್ಥತೆ ಮತ್ತು ದೈಹಿಕ ವೈಕಲ್ಯಗಳನ್ನು ಹೊಂದಿರುವ ಮಹಿಳೆಯರಿಗೂ ಈ ನಿಯಮಗಳು ಅನ್ವಯವಾಗಲಿದೆ.
ಗರ್ಭ ಧರಿಸಿದ್ದಾಗ ಅಪಾಯದ ಅಥವಾ ತುರ್ತು ಸ್ಥಿತಿಯಲ್ಲಿರುವ ಮಹಿಳೆಯರು ಮತ್ತು ಗರ್ಭಿಣಿಯಾಗಿದ್ದಾಗ ವೈವಾಹಿಕ ಸ್ಥಿತಿ ಬದಲಾಗಿರುವ ಮಹಿಳೆಯರಿಗೂ 24 ವಾರಗಳವರೆಗೆ ಗರ್ಭಪಾತಕ್ಕೆ ಅವಕಾಶ ಕಲ್ಪಿಸಲಾಗಿದೆ.
ಹಿಂದಿನ ನಿಯಮಗಳಲ್ಲಿ 12 ವಾರಗಳ ಒಳಗೆ ಗರ್ಭಪಾತಕ್ಕೆ ಓರ್ವ ವೈದ್ಯರ ಮತ್ತು 12ರಿಂದ 20 ವಾರಗಳ ನಡುವೆ ಗರ್ಭಪಾತಕ್ಕೆ ಇಬ್ಬರು ವೈದ್ಯರ ಅನುಮತಿ ಬೇಕಾಗಿತ್ತು.
ಭ್ರೂಣ ವಿರೂಪಗೊಂಡ ಪ್ರಕರಣಗಳಲ್ಲಿ 24 ವಾರಗಳ ನಂತರ ಗರ್ಭಪಾತ ಸಾಧ್ಯವೇ ಎನ್ನುವುದನ್ನು ನಿರ್ಧರಿಸಲು ರಾಜ್ಯಮಟ್ಟದ ವೈದ್ಯಕೀಯ ಮಂಡಳಿಗಳ ರಚನೆಗೆ ನಿಯಮಗಳಲ್ಲಿ ಸೂಚಿಸಲಾಗಿದೆ. ಈಗ ಮಹಿಳೆ ಮತ್ತು ಆಕೆಯ ವರದಿಗಳ ತಪಾಸಣೆಯ ಬಳಿಕ ಮನವಿಯನ್ನು ಸಲ್ಲಿಸಿದ ಮೂರು ದಿನಗಳಲ್ಲಿ ಮಂಡಳಿಯು ಗರ್ಭಪಾತದ ತನ್ನ ಅಭಿಪ್ರಾಯವನ್ನು ನೀಡಲಿದೆ ಮತ್ತು ಕೋರಿಕೆಯು ಸಲ್ಲಿಕೆಯಾದ ಐದು ದಿನಗಳಲ್ಲಿ ಸುರಕ್ಷಿತ ಗರ್ಭಪಾತ ನಡೆಯುವಂತೆ ನೋಡಿಕೊಳ್ಳಲಿದೆ.

ಪ್ರಮುಖ ಸುದ್ದಿ :-   ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement