ಹೈದರಾಬಾದ್: ದೇಶದ ಮುಂಚೂಣಿ ಇಲೆಕ್ಟ್ರಿಕ್ ಬಸ್ ಕಾರ್ಯಾಚರಣೆ ಸಂಸ್ಥೆ ಇವಿ ಟ್ರಾನ್ಸ್ ಪ್ರೈವೇಟ್ ಲಿಮಿಟೆಡ್ ‘ಪುರಿಬಸ್’ (PuriBus) ಬ್ರಾಂಡ್ ಅಡಿಯಲ್ಲಿ ಪುಣೆ-ಮುಂಬೈ ಮಾರ್ಗದಲ್ಲಿ ಬುಧವಾರ ಇಲೆಕ್ಟ್ರಿಕ್ ಬಸ್ ಸೇವೆ ಆರಂಭಿಸಿದೆ.
ಮೇಘಾ ಎಂಜಿನಿಯರಿಂಗ್ ಲಿಮಿಟೆಡ್ (MEIL) ಗ್ರೂಪ್ನ ಭಾಗವಾಗಿರುವ ಈ ಕಂಪನಿಯು ಇದೇ ಮೊದಲ ಬಾರಿಗೆ ದೇಶದಲ್ಲಿ ಎರಡು ಮುಖ್ಯ ನಗರಗಳ ನಡುವೆ ಇಲೆಕ್ಟ್ರಿಕ್ ಬಸ್ ಸೇವೆಗೆ ಪ್ರಾಯೋಗಿಕವಾಗಿ ಚಾಲನೆ ನೀಡಿದೆ. ವಿಜಯದಶಮಿಯಿಂದ (ಅಕ್ಟೋಬರ್ 15ರಿಂದ) ಈ ಸೇವೆ ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ.
ಫೇಮ್-1 ಮತ್ತು ಫೇಮ್-2 ಉಪಕ್ರಮಗಳ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾರ್ವಜನಿಕ ಸಾರಿಗೆಯಲ್ಲಿ ಇಲೆಕ್ಟ್ರಿಕ್ ಬಸ್ಗಳ ಬಳಕೆಯನ್ನು ಉತ್ತೇಜಿಸುತ್ತಿವೆ. ಪುರಿಬಸ್ ಸೇವೆಯ ಸೌಲಭ್ಯಗಳ ಬಗ್ಗೆ ವಿವರಿಸಿದ ಇವಿ ಟ್ರಾನ್ಸ್ನ ಪ್ರಧಾನ ವ್ಯವಸ್ಥಾಪಕ ಸಂದೀಪ್ ರೈಜಾದಾ, ‘ಭಾರತದಲ್ಲಿ ಎರಡು ನಗರಗಳ ನಡುವೆ ಇ-ಬಸ್ ಸೇವೆ ಆರಂಭಿಸಿದ ಬಗ್ಗೆ ನಮಗೆ ಹೆಮ್ಮೆಇದೆ. ಒಮ್ಮೆ ಚಾರ್ಜ್ ಮಾಡಿದ ನಂತರ ಪುರಿಬಸ್ 350 ಕಿಮೀ ಅಂತರ ಕ್ರಮಿಸಬಲ್ಲದು. ಹೊಗೆ ಉಗುಳದ ಈ ವಾಹನವು ವಿವಿಧ ನಗರಗಳ ನಡುವೆ ಬಸ್ ಸೇವೆ ಒದಗಿಸುವವರಿಗೆ ಉತ್ತಮ ಆಯ್ಕೆ ಆಗಬಲ್ಲದು. ಸಾಕಷ್ಟು ಉಳಿತಾಯದ ಲಾಭಗಳೂ ಇವೆ’ ಎಂದು ಹೇಳಿದರು.
ಬಸ್ ಉದ್ದ 12 ಮೀಟರ್
ಇಂಟರ್ಸಿಟಿ ಎಲೆಕ್ಟ್ರಿಕ್ ಕೋಚ್ ಬಸ್ನಲ್ಲಿ 45 ಪ್ರಯಾಣಿಕರು, ಚಾಲಕ, ಸಹಚಾಲಕರಿಗೆ ಕೂರುವಷ್ಟು ಸ್ಥಳಾವಕಾಶವಿದೆ. ದೂರ ಪ್ರಯಾಣಕ್ಕಾಗಿಯೇ ವಿನ್ಯಾಸ ಮಾಡಿರುವ ಈ ಹವಾನಿಯಂತ್ರಿತ ಬಸ್ನಲ್ಲಿ ಆರಾಮದಾಯಕ ಮತ್ತು ಐಷಾರಾಮಿ ಪುಶ್ಬ್ಯಾಕ್ ಸೀಟ್ಗಳಿವೆ. ಟಿವಿ ಮತ್ತು ಇನ್ಫೋಟೈನ್ಮೆಂಟ್ ವ್ಯವಸ್ಥೆಯ ಜೊತೆಗೆ ವೈ-ಫೈ ಸಹ ಇದೆ. ಪ್ರತಿ ಸೀಟ್ ಸಮೀಪ ಯುಎಸ್ಬಿ ಚಾರ್ಜರ್ ಇರುತ್ತದೆ. ಲಗೇಜ್ ಇರಿಸಲೆಂದು ಐದು ಕ್ಯೂಬಿಕ್ ಮೀಟರ್ನಷ್ಟು ಜಾಗವಿದೆ.
ವಿವಿಧ ನಗರಗಳ ನಡುವೆ ಬಸ್ಗಳನ್ನು ಓಡಿಸುತ್ತಿರುವ ಬಸ್ ಆಪರೇಟರ್ಗಳಿಗೆ ಹಲವು ಆರ್ಥಿಕ ಅನುಕೂಲಗಳನ್ನೂ ಈ ಬಸ್ ಒದಗಿಸುತ್ತದೆ. ಅಭಾರತದಲ್ಲಿ ಈ ಬಸ್ಗಳನ್ನು ಒಲೆಕ್ಟ್ರಾ ಗ್ರೀನ್ಟೆಕ್ ಲಿಮಿಟೆಡ್ ನಿರ್ಮಿಸುತ್ತಿದೆ. ಲಿಯಾನ್ ಫಾಸ್ಪೇಟ್ ಬ್ಯಾಟರಿಗಳಿಂದ ಈ ಬಸ್ಗಳು ಸಂಚರಿಸುತ್ತವೆ.
ಬಸ್ನಲ್ಲಿ ಹಲವು ಸುರಕ್ಷಾ ವ್ಯವಸ್ಥೆಗಳು ಇವೆ. ಐರೋಪ್ಯ ಒಕ್ಕೂಟ ಮಾನದಂಡಕ್ಕೆ ಅನುಗುಣವಾದ ಟಿಯುವಿ ಪ್ರಮಾಣಪತ್ರದ ಎಫ್ಡಿಎಸ್ಎಸ್ ವ್ಯವಸ್ಥೆ, ಎಡಿಎಎಸ್ ವ್ಯವಸ್ಥೆ (Advanced Driver Assistance System – ADAS) ಮತ್ತು ಭಾರತೀಯ ನಿಯಂತ್ರಣ ಪ್ರಾಧಿಕಾರ ರೂಪಿಸಿರುವ ನಿಯಮಗಳಿಗೆ ಅನುಗುಣವಾದ ಐಟಿಎಸ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಸಂಕಷ್ಟ ಪರಿಸ್ಥಿತಿಯಲ್ಲಿ ಅಲಾರಾಂ ಮೊಳಗಿಸುವ ಮತ್ತು ಬೆಳಕು ಹೊತ್ತಿಕೊಳ್ಳುವ ವ್ಯವಸ್ಥೆಗಳು ಬಸ್ನಲ್ಲಿ ಇವೆ. ಸೂರತ್, ಸಿಲ್ವಾಸಾ, ಗೋವಾ, ಹೈದರಾಬಾದ್, ಡೆಹ್ರಾಡೂನ್ ಸೇರಿದಂತೆ ಹಲವು ನಗರಗಳಲ್ಲಿ ಈಗಾಗಲೇ ಇ-ಬಸ್ಗಳನ್ನು ಕಂಪನಿ ಓಡಿಸುತ್ತಿದೆ. ನಮ್ಮ ಕಂಪನಿಗೆ ಪುರಿಬಸ್ ಸೇರಿಸಿಕೊಳ್ಳುವ ಮೂಲಕ ಮತ್ತೊಮ್ಮೆ ನಮ್ಮ ಕಾರ್ಯಾಚರಣೆ ಸಾಮರ್ಥ್ಯವನ್ನು ನಿರೂಪಿಸಿದ್ದೇವೆ ಎಂದು ಕಂಪನಿ ಹೇಳಿದೆ.
ನಿಮ್ಮ ಕಾಮೆಂಟ್ ಬರೆಯಿರಿ