ಬೆಳಗಾವಿ: ಬೈಪಾಸ್‌ ರಸ್ತೆಗೆ ಜಮೀನು ವಶಕ್ಕೆ ವಿರೋಧಿಸಿ ಪ್ರತಿಭಟನೆ, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ರೈತ..!

ಬೆಳಗಾವಿ : ರೈತರ ತೀವ್ರ ವಿರೋಧದ ನಡುವೆಯೂ ಹಲಗಾ-ಮಚ್ಛೆ ಮಧ್ಯದ ಬೈಪಾಸ್ ಕಾಮಗಾರಿ ಪ್ರಾರಂಭವಾಗಿದೆ. ಈ ಸಂದರ್ಭದಲ್ಲಿ ಕಾಮಗಾರಿ ವಿರೋಧಿಸಿದ ಪ್ರತಿಭಟನೆ ನಡೆಸಿದ ರೈತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಹಲಗಾ-ಮಚ್ಛೆ ಮಧ್ಯೆ ಬೈಪಾಸ್ ಕಾಮಗಾರಿಯನ್ನು ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ನಡೆಸಲಾಗುತ್ತಿದೆ ಎಂದು ಆರೋಪಿಸಿ ರೈತರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವಿಕೋಪಕ್ಕೆ ಹೋಗುತ್ತಿದ್ದಂತೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡರು.
9.5 ಕಿಲೋ ಮೀಟರ್ ಉದ್ದದ ಹಲಗಾ-ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿಗೆ ಸರಕಾರ ರೈತರಿಂದ ಸುಮಾರು 134 ಎಕರೆ ಜಮೀನನ್ನು ವಶಕ್ಕೆ ಪಡೆದುಕೊಂಡಿದೆ. ಆದರೆ ಕೆಲ ರೈತರು ತಮ್ಮ ಭೂಮಿಯನ್ನು ನೀಡಲು ನಿರಾಕರಿಸಿದ್ದಾರೆ. ರೈತರ ವಿರೋಧವಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಸ್ತೆ ಕಾಮಗಾರಿ ಮಾಡಲು ಮುಂದಾಗಿದೆ. ಇದನ್ನು ವಿರೋಧಿಸಿ ರೈತರು ಸ್ಥಳದಲ್ಲಿ ಜಮಾವಣೆಗೊಂಡು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹಾಗೂ ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ಭೂಮಿಯನ್ನು ಕಸಿದುಕೊಳ್ಳುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.
ನಮಗೆ ಗುಂಡು ಹಾಕಿ ಬೇಕಾದರೆ ಪ್ರಾಣ ಬಿಡುತ್ತೇವೆ. ಆದರೆ ಭೂಮಿ ಕೊಡುವುದಿಲ್ಲ ಎಂದು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು. ಈ ಸಂದರ್ಭದಲ್ಲಿ ಕೆಲ ಮಹಿಳಾ ಹೋರಾಟಗಾರ್ತಿಯರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ವಿಕೋಪಕ್ಕೇರಿತು. ಕೆಲ ರೈತರು ಕೈಯಲ್ಲಿ ಕುಡುಗೋಲು ಹಿಡಿದು ಆತ್ಮಹತ್ಯೆಗೆ ಯತ್ನಿಸಿದರು. ಈ ಸಂದರ್ಭದಲ್ಲಿ ರೈತರಿಂದ ಕುಡುಗೋಲನ್ನು ಕಸಿದುಕೊಳ್ಳಲು ಪೊಲೀಸರು ಪ್ರಯಾಸ ಪಡಬೇಕಾಯಿತು. ಸ್ಥಳದಲ್ಲಿ ರೈತರು ಪ್ರತಿಭಟನೆ ನಡೆಸಿ ನಮ್ಮದು ಫಲವತ್ತಾದ ಜಮೀನು. ರಸ್ತೆ ಕಾಮಗಾರಿಗೆ ಮೊದಲು ನಿಗದಿಪಡಿಸಿದ ಜಮೀನು ಬಿಟ್ಟು ಬೇರೆ ಜಮೀನು ತೆಗೆದುಕೊಳ್ಳಲಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಜಮೀನಿನಲ್ಲಿ ರಸ್ತೆ ಕಾಮಗಾರಿ ನಡೆಸಿದರೆ ಮರದಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅಮಿತ್ ಅನಗೋಳಕರ್ ಎಂಬುವವರು ಮರ ಏರಿ ಕುಳಿತು ಪ್ರತಿಭಟನೆಗೆ ಕಾವು ಹೆಚ್ಚಿಸಿದರು.
ನಮ್ಮ ತಂದೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಮ್ಮದು 3 ಎಕರೆ ಫಲವತ್ತಾದ ಜಮೀನನ್ನು ರಸ್ತೆ ಕಾಮಗಾರಿಗೆ ಸರಕಾರ ಬಳಸಿಕೊಳ್ಳಲು ಮುಂದಾಗಿದೆ. ಒಂದು ವೇಳೆ ನಮ್ಮ ಜಮೀನನ್ನು ನಮಗೆ ನೀಡದಿದ್ದರೆ ಮರದ ಮೇಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ ಪ್ರಸಂಗವೂ ನಡೆಯಿತು.
ಆಕಾಶ ಅನಗೋಳಕರ ಎಂಬುವವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆಯಿತು. ತಕ್ಷಣ ಪೊಲೀಸರು ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ರೈತರೊಬ್ಬರು ಜೆಸಿಬಿ ಯಂತ್ರದ ಬಳಿ ಮಲಗಿ ಕಾಮಗಾರಿ ಸ್ಥಗಿತ ಗೊಳಿಸುವಂತೆ ಒತ್ತಾಯಿಸಿ ಪ್ರತಿಭಟಿಸಿದರು. ಪೊಲೀಸರು ರೈತನನ್ನು ಸರಿಸಲು ಯತ್ನಿಸಿದರು. ಮಹಿಳೆಯರು, ರೈತರು ಕಣ್ಣೀರಿಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಪ್ರಮುಖ ಸುದ್ದಿ :-   ರಾಜ್ಯದ ಹಲವೆಡೆ ಮಳೆ : ವಿಜಯಪುರದಲ್ಲಿ ಐತಿಹಾಸಿಕ ಸ್ಮಾರಕ ಮೆಹತರ್ ಮಹಲಿನ ಮೀನಾರ್ ಮೇಲ್ತುದಿಗೆ ಹಾನಿ, ಕುಷ್ಟಗಿಯಲ್ಲಿ ಸಿಡಿಲಿಗೆ ರೈತ ಸಾವು

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement