ಪರಮ್ ಬೀರ್ ಸಿಂಗ್ ‘ಘೋಷಿತ ಅಪರಾಧಿ’ ಎಂದು ಘೋಷಿಸಲು ಮುಂಬೈ ನ್ಯಾಯಾಲಯ ಅನುಮತಿ

ಮುಂಬೈ: ಹಫ್ತಾ ವಸೂಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರನ್ನು ‘ಘೋಷಿತ ಅಪರಾಧಿ’ ಎಂದು ಮುಂಬೈ ಕೋರ್ಟ್ ಬುಧವಾರ ಘೋಷಿಸಿದೆ.
ತಲೆಮರೆಸಿಕೊಂಡಿರುವ ಹಿರಿಯ ಐಪಿಎಸ್ ಅಧಿಕಾರಿ ವಿರುದ್ಧ ಈಗಾಗಲೇ ಮೂರು ಬಾರಿ ಜಾಮೀನು ರಹಿತ ಬಂಧನ ವಾರಂಟ್ ಜಾರಿಗೊಳಿಸಿದ್ದ ಮುಂಬೈ ಮ್ಯಾಜಿಸ್ಟ್ರೇಟ್ ಕೋರ್ಟ್ ಈಗ ಪೊಲೀಸ್ ಅಧಿಕಾರಿ ಘೋಷಿತ ಅಪರಾಧಿ ಎಂದು ಹೇಳಿದೆ.
ಪರಮ್ ಬೀರ್ ಸಿಂಗ್ ಅವರ ವಿರುದ್ಧ ದಾಖಲಾಗಿರುವ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ 30 ದಿನಗಳಲ್ಲಿ ವಿಚಾರಣೆಗೆ ಹಾಜರಾಗಲು ನಿರಾಕರಿಸಿದರೆ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ನ್ಯಾಯಾಲಯ ಆದೇಶಿಸಿದೆ.
ಸಿಂಗ್ ಅವರನ್ನು “ಪರಾರಿ”ಯಾಗಿರುವ ಆರೋಪಿ ಎಂದು ಘೋಷಿಸಬೇಕು ಎಂದು ಕೋರಿ ರಾಜ್ಯದ ಅಪರಾಧ ತನಿಖಾ ಇಲಾಖೆ(ಸಿಐಡಿ) ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ಸ್ವೀಕರಿಸಿದೆ. ಜಾಮೀನು ರಹಿತ ವಾರೆಂಟ್‌ಗಳನ್ನು ಹೊರಡಿಸಿದ್ದರೂ ಸಿಂಗ್ ಪತ್ತೆಯಾಗದ ಕಾರಣ ಸಿಐಡಿ ಈ ಕ್ರಮ ಕೈಗೊಂಡಿದೆ.
ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರು 100 ಕೋಟಿ ಹಫ್ತಾ ವಸೂಲಿ ಮಾಡುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದರು ಎಂದು ಆರೋಪಿಸಿ ಪರಮ್ ಬೀರ್ ಸಿಂಗ್ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಪತ್ರ ಬರೆದಿದ್ದರು.
ಈ ಸಂಬಂಧ ಜುಲೈ 23 ರಂದು ಪರಮ್ ಬೀರ್ ಸಿಂಗ್, ಸಚಿನ್ ವಾಜೆ ಮತ್ತು ಇತರರ ವಿರುದ್ಧ ಗೋರೆಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂಬೈ ಅಪರಾಧ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ.

ಪ್ರಮುಖ ಸುದ್ದಿ :-   ಅಮೆರಿಕ ಮಾದರಿಯಲ್ಲಿ ಭಾರತದಲ್ಲೂ 50% ಉತ್ತರಾಧಿಕಾರ ತೆರಿಗೆ : ಸ್ಯಾಮ್ ಪಿತ್ರೊಡಾ ಹೇಳಿಕೆಯಿಂದ ವಿವಾದ ; ಬಿಜೆಪಿ ವಾಗ್ದಾಳಿ, ಇದು ನಮ್ಮ ಕಲ್ಪನೆಯಲ್ಲ ಎಂದ ಕಾಂಗ್ರೆಸ್

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement