ರೈತರ ಮೇಲಿನ ಸುಳ್ಳು ಎಫ್‌ಐಆರ್ ರದ್ದುಗೊಳಿಸಿ, ಎಂಎಸ್‌ಪಿ ಕಾನೂನು ಬದ್ಧಗೊಳಿಸಿ : ಪ್ರಧಾನಿಗೆ ಪತ್ರ ಬರೆದ ವರುಣ್‌ ಗಾಂಧಿ

ನವದೆಹಲಿ: ಬಿಜೆಪಿ ಸಂಸದ ವರುಣ್​ ಗಾಂಧಿ ರೈತರ ಹೋರಾಟಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿರ್ಧಾರಗಳನ್ನು ಅನೇಕ ಸಂದರ್ಭಗಳಲ್ಲಿ ವಿರೋಧಿಸಿದ್ದಾರೆ. ನಿನ್ನೆ ಪ್ರಧಾನಿ ನರೇಂದ್ರ ಮೋದಿ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುತ್ತಿರುವುದಾಗಿ ಘೋಷಿಸಿದ ಬೆನ್ನಲ್ಲೇ ವರುಣ್​ ಗಾಂಧಿ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದು, ಕೆಲವು ಬೇಡಿಕೆಗಳನ್ನೂ ಮುಂದಿಟ್ಟಿದ್ದಾರೆ.
ಕೃಷಿ ಕಾಣೂನು ಹಿಂಪಡೆಯುವುದಾಗಿ ಭರವಸೆ ನೀಡಿರುವ ಪ್ರಧಾನಿ ಮೋದಿ ಹಾಗೂ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿರುವ ಅವರು, ನೀವು ಈ ಮೂರು ಕೃಷಿ ಕಾಯ್ದೆಗಳನ್ನು ವಾಪಸ್​ ಪಡೆದಿದ್ದಕ್ಕೆ ತುಂಬ ಧನ್ಯವಾದಗಳು. ಆದರೆ ಈ ಕೆಲಸವನ್ನು ಮೊದಲೇ ಮಾಡಿದ್ದರೆ, ಚಳವಳಿಯಲ್ಲಿ ಪ್ರಾಣತೆತ್ತ 700ಕ್ಕೂ ಹೆಚ್ಚು ಅನ್ನದಾತರು ಈಗಲೂ ಜೀವಂತವಾಗಿಯೇ ಇರುತ್ತಿದ್ದರು. ದಯವಿಟ್ಟು ಮೃತರ ಕುಟುಂಬಕ್ಕೆ ತಲಾ 1 ಕೋಟಿ ರೂಪಾಯಿ ಪರಿಹಾರ ನೀಡಿ ಎಂದು ವರುಣ್​ ಗಾಂಧಿ ಬೇಡಿಕೆ ಇಟ್ಟಿದ್ದಾರೆ. ಹಾಗೇ, ಪ್ರತಿಭಟನಾ ನಿರತ ರೈತರ ವಿರುದ್ಧ, ಹಲವು ರಾಜಕೀಯ ಪ್ರೇರಿತ ಎಫ್​ಐಆರ್​ಗಳು ದಾಖಲಾಗಿವೆ. ಅಂಥ ಎಲ್ಲ ಎಫ್​ಐಆರ್​ಗಳನ್ನು ಕೂಡಲೇ ರದ್ದುಗೊಳಿಸಿ ಎಂದೂ ಕೇಳಿಕೊಂಡಿದ್ದಾರೆ.
ಅಲ್ಲದೆ, ವರುಣ್​ ಗಾಂಧಿಯವರು, ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನು ಬದ್ಧಗೊಳಿಸಬೇಕು ಎಂದು ತಮ್ಮ ಪತ್ರದಲ್ಲಿ ಪ್ರಧಾನಿ ಮೋದಿ ಅವರನ್ನು ಒತ್ತಾಯಿಸಿದ್ದಾರೆ. ನಮ್ಮ ದೇಶದಲ್ಲಿ ಶೇ.85ಕ್ಕಿಂತ ಹೆಚ್ಚು ಸಣ್ಣ ಮತ್ತು ಅತಿಸಣ್ಣ ರೈತರಿದ್ದಾರೆ. ಅಂಥ ರೈತರ ಸಬಲೀಕರಣ ಮಾಡಲು ಅವರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿದ್ದಾ ರೈತರು ಮತ್ತು ದೇಶದ ಹಿತದೃಷ್ಟಿಯಿಂದ ಈ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದ್ದಾರೆ.

ತಮ್ಮ ಪತ್ರದಲ್ಲಿ ಲಖಿಂಪುರ ಖೇರಿ ಹಿಂಸಾಚಾರವನ್ನೂ ಪ್ರಸ್ತಾಪ ಮಾಡಿರುವ ಸಂಸದ ವರುಣ್​ ಗಾಂಧಿ, ಈ ಪ್ರಕರಣದಲ್ಲಿ ಕೇಂದ್ರ ಸಚಿವರು ಮತ್ತುವರ ಪುತ್ರನ ಹೆಸರು ಕೇಳಿಬರುತ್ತಿದ್ದು, ಆ ಕೇಂದ್ರ ಸಚಿವರ ವಿರುದ್ಧ ನೀವು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ವರುಣ್​ ಗಾಂಧಿಯವರು ರೈತರ ಹೋರಾಟದ ವಿಚಾರದಲ್ಲಿ ಪದೇಪದೆ ಕೇಂದ್ರ ಸರ್ಕಾರದ ನಿಲುವಿನ ವಿರುದ್ಧ ಮಾತನಾಡಿದ್ದರು. ನಂತರ ಅವರನ್ನು ಈ ಬಾರಿ ರಾಷ್ಟ್ರೀಯ ಕಾರ್ಯಕಾರಿಣಿಯಿಂದಲೂ ಕೈಬಿಡಲಾಗಿದೆ. ಆದರೂ ಅವರು ರೈತರ ಹೋರಾಟ ಹಾಗೂ ಅವರ ಬೇಡಿಕೆಗಳಿಗೆ ತಮ್ಮ ಬೆಂಬಲ ಮುಂದುವರಿಸಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ