ಸರಣಿ ಲೇಖನ – ಕೃಷಿ ಕಾಯ್ದೆ ವಿರೋಧಿಸಿ ಅನ್ನದಾತರೇಕೆ ಪಟ್ಟು ಬಿಡದೆ ಹೋರಾಟ ಮಾಡಿದರು..?

ಲೇಖನ-ಎಚ್‌.ಆರ್‌.ಸುರೇಶ, ಮಾಜಿ ಸ್ಥಾನಿಕ ಸಂಪಾದಕರು, ಸಂಯುಕ್ತ ಕರ್ನಾಟಕ- ಹುಬ್ಬಳ್ಳಿ

(ಕಳೆದ ಒಂದು ವರ್ಷದಿಂದ ರೈತರು ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸಿದ್ದಾರೆ. ಒಂದು ವರ್ಷದಿಂದ ದೇಶದ ರಾಜಧಾನಿ ದಿಲ್ಲಿಯ ಗಡಿಯಲ್ಲಿ ಗಜಮ್ಮನೆ ಕುಳಿತುಬಿಟ್ಟಿದ್ದಾರೆ.
ಕೃಷಿ ಕಾಯ್ದೆಗಳನ್ನು ಅಂಗೀಕರಿಸಿರುವ ಕೇಂದ್ರ ಸರ್ಕಾರದ ಈ ಕಾಯ್ದೆಗಳು ಸಣ್ಣ ಮತ್ತು ಮಧ್ಯಮ ಹಿಡುವಳಿದಾರ ರೈತರ ಸಂಕಷ್ಟಗಳನ್ನು ನಿವಾರಿಸುವ ಮತ್ತು ಅವರನ್ನು ಆರ್ಥಿಕವಾಗು ಸದೃಢಗೊಳಿಸುವ ಉದ್ದೇಶ ಹೊಂದಿದ್ದವು ಎಂದು ಕೇಂದ್ರ ಸರ್ಕಾರ ಸಾರಿಸಾರಿ ಹೇಳಿದರೂ ಅವರು ಕಳೆದು ಒಂದು ವರ್ಷದಿಂದ ನಿರಂತರವಾಗಿ ದೆಹಲಿ ಗಡಿಯಲ್ಲಿ ಬಂಡೆಗಲ್ಲಿನಂತೆ ಕುಳಿತು ರಾಷ್ಟ್ರಪತಿ ಅನುಮೋದನೆ ಪಡೆದ ನೂತನ ಕೃಷಿ ಕಾಯ್ದೆಯನ್ನೇ ಸರ್ಕಾರ ಹಿಂಪಡೆಯುವಂತೆ ಮಾಡಿದ್ದಾರೆ.
ಹಾಗಾದರೆ ಅವರು ಇಷ್ಟು  ಅವಧಿಗೆ ಯಾಕಾಗಿ ಹೋರಾಟ ಮಾಡಿದರು..? ಈ ಮೂರು ಕೃಷಿ ಕಾಯ್ದೆಗಳಲ್ಲಿದ್ದ ಯಾವೆಲ್ಲ ಅಂಶಗಳು ರೈತರ ಹೋರಾಟಕ್ಕೆ ಕಾರಣವಾದವು ಎಂಬುದರ ಬಗ್ಗೆ ಸಂಯುಕ್ತ ಕರ್ನಾಟಕದ ಮಾಜಿ ಸ್ಥಾನಿಕ ಸಂಪಾದಕರಾದ ಎಚ್.ಆರ್.ಸುರೇಶ ಅವರು ಈ ಮೂರು ಕೃಷಿ ಕಾಯ್ದೆಗಳ ಪ್ರಮುಖ ಅಂಶಗಳ ಬಗ್ಗೆ ವಿಶ್ಲೇಷಿಸಿದ್ದಾರೆ. ಅದನ್ನು ಇಂದಿನಿಂದ ಸರಣಿ ಲೇಖನ ರೂಪದಲ್ಲಿ ನೀಡಲಾಗುತ್ತದೆ)

 

ಭಾಗ-1

ರೈತರು ನಿಮ್ಮ ಕಾಯ್ದೆಗಳು ನಮ್ಮ ಕುತ್ತಿಗೆಗೆ ಉರುಳಾಗಲಿವೆ. ಅನ್ನದ ತಟ್ಟೆಯ ಮೇಲಿನ ನಮ್ಮ ಅಧಿಕಾರವನ್ನು ಮತ್ತು ಭೂಮಿಯ ಮೇಲಿನ ನಮ್ಮ ಹಕ್ಕನ್ನು ಕಿತ್ತುಕೊಳ್ಳಲಿವೆ ಎಂದು ಪ್ರತಿಪಾದಿಸುತ್ತ ಬಂದರು. ನೀವು ತಂದಿರುವ ಕಾಯ್ದೆಗಳು ನಮ್ಮ ಪಾಲಿನ `ಕರಾಳ ಕಾಯ್ದೆ’ಗಳು ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದರು. ಕೊನೆಗೆ ದೆಹಲಿ ಗಡಿಯಲ್ಲಿ ಅಲ್ಲಾಡದೆ ಕುಳಿತುಬಿಟ್ಟರು. ಇದಕ್ಕೆ ಸರ್ಕಾರವೇ ಮಣಿಯಬೇಕಾಯಿತು.
ಮೂರು ಕೃಷಿ ಕಾಯ್ದೆ ವಿರೋಧಿಸಿ ರೈತರೇಕೆ  ಇಷ್ಟೊಂದು ದೀರ್ಘಕಾಲ   ಹೋರಾಟ ಮಾಡಿದರು..?  ಈ ಕಾಯ್ದೆಗಳು ಹೇಳುವುದಾದರೂ ಏನನ್ನು? ಆ ಕಾಯ್ದೆಗಳು ಹೇಗಿವೆ? ಅವುಗಳ ಸ್ವರೂಪವಾದರೂ ಏನು? ಅವು ತಕ್ಷಣಕ್ಕೆ ಪರಿಣಾಮ ಬೀರುವಂಥವೇ ಅಥವಾ ಕಾಲಾವಧಿಯಲ್ಲಿ ಪರಿಣಾಮ ಬೀರುವಂಥವೇ? ಇವುಗಳಿಂದ ಸಮಾಜದ ಮೇಲೆ ಆಗುವ ಪರಿಣಾಮವೇನು? ಕಾಯ್ದೆಗಳಿಂದ ಯಾರಿಗೆ ಲಾಭ? ನಷ್ಟ ಅನುಭವಿಸುವವರು ಯಾರು? ಎಂಬ ಹತ್ತು ಹಲವು ಪ್ರಶ್ನೆಗಳಿಗೆ  ರೈತರ ಹೋರಾಟ ಮೂಲಕವೇ ಉತ್ತರ ಕಂಡುಕೊಂಡಿದ್ದಾರೆ. ಆಂದೋಲನಕ್ಕೆ ಹೊಸ ಭಾಷ್ಯ ಬರೆದಿದ್ದಾರೆ. ರೈತರ ಯಾಕೆ ವಿರೋಧಿಸಿದರು ಎಂಬ ಹಿನ್ನೆಲೆಯಲ್ಲಿ  ಕಾಯ್ದೆಗಳನ್ನು ಪರಾಮರ್ಶಿಸುವುದು-ಅದರಲ್ಲೂ ಸಾಮಾಜಿಕ ಹಿನ್ನೆಲೆಯಲ್ಲಿ ಪರಾಮರ್ಶಿಸುವುದು ಸೂಕ್ತ.
ಈ ಕಾಯ್ದೆಗಳೆಂದರೆ-

೧. ಕೃಷಿಕರ (ಸಬಲೀಕರಣ ಮತ್ತು ಸಂರಕ್ಷಣಾ) ಉತ್ಪಾದನೆಗಳ ಬೆಲೆಗಳ ಭರವಸೆ ಮತ್ತು ಕೃಷಿ ಸೇವಾ ಕಾಯ್ದೆ-೨೦೨೦.
೨. ಕೃಷಿ ಉತ್ಪಾದನೆಗಳ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ-೨೦೨೦
೩. ಅಗತ್ಯ ವಸ್ತುಗಳ (ತಿದ್ದುಪಡಿ) ಕಾಯ್ದೆ-೨೦೨೦.

ಮೊದಲನೇ ಕಾಯ್ದೆ ಹೇಳುವುದೇನೆಂದರೆ- ಕೃಷಿಕರನ್ನು ಸಬಲೀಕರಣಕ್ಕೆ ಮತ್ತು ಸಂರಕ್ಷಿಸುವುದಕ್ಕೆ ಕೃಷಿ ಉತ್ಪಾದನೆಗಳ ಬೆಲೆಗಳ ಭರವಸೆ ನೀಡುವುದು ಮತ್ತು ಕೃಷಿ ಕ್ಷೇತ್ರದ ಸೇವೆಗಳನ್ನು ಉತ್ತಮಗೊಳಿಸುವುದೇ ಆಗಿದೆ.
ಮೇಲ್ನೋಟಕ್ಕೆ ಈ ಕಾಯ್ದೆ ಕೃಷಿಕರನ್ನು ಸಂರಕ್ಷಿಸಲು ಮತ್ತು ಅವರನ್ನು ಸಬಲರನ್ನಾಗಿ ಮಾಡಲು ರೂಪಿಸಿದ ಕಾಯ್ದೆಯಂತೆಯೇ ಗೋಚರಿಸುತ್ತದೆ. ಏಕೆಂದರೆ ಇದರಲ್ಲಿ ಕೃಷಿ ಉತ್ಪನ್ನಗಳ ಬೆಲೆಗಳಿಗೆ ಭರವಸೆ ನೀಡುವುದು ಮತ್ತು ಆ ಕ್ಷೇತ್ರದ ಸೇವಾ ವಿಭಾಗಕ್ಕೆ ಸಂಬಂಧಿಸಿದ ಅಗತ್ಯಗಳನ್ನು ಪೂರೈಸುವ ಅಂಶಗಳು ಅಳವಡಿಸಲ್ಪಟ್ಟಿವೆ ಎನ್ನಿಸುತ್ತದೆ.

ಈಗಾಗಲೇ ಇರುವ ವ್ಯವಸ್ಥೆಗೆ ಕಾಯ್ದೆಯ ರೂಪ
ಇದರಲ್ಲಿರುವ ಮೊಟ್ಟಮೊದಲ ಅಂಶವೇ ಒಪ್ಪಂದ ಕೃಷಿಗೆ ಸಂಬಂಧಿಸಿದ್ದು. ವಾಸ್ತವವಾಗಿ ಒಪ್ಪಂದ ಕೃಷಿ ಎನ್ನುವುದು ದಶಕಗಳಿಂದಲೂ ದೇಶದಲ್ಲಿ ಚಾಲ್ತಿಯಲ್ಲಿದೆ. ಆದರೆ ಇದಕ್ಕೆ ಪ್ರದೇಶವಾರು ವಿಭಿನ್ನ ಹೆಸರುಗಳಿವೆ. ಕರ್ನಾಟಕದಲ್ಲಿಯೇ ೧೯೭೫ಕ್ಕೆ ಮೊದಲು ಭೂಮಿಯ ಒಡೆಯ ಒಬ್ಬನಾಗಿದ್ದು, ಅದನ್ನು ಉಳುಮೆ ಮಾಡಿ ಬೆಳೆ ಬೆಳೆದು ತನ್ನ ಪಾಲಿನದನ್ನು ತಾನು ತೆಗೆದುಕೊಂಡು ಉಳಿದಿದ್ದನ್ನು ಒಪ್ಪಂದದಂತೆ ಭೂಮಿಯ ಮಾಲಿಕರಿಗೆ ನೀಡುವುದು ಚಾಲ್ತಿಯಲ್ಲಿತ್ತು. ಇದನ್ನು ಗೇಣಿ ಪದ್ಧತಿ ಎಂದೇ ಹಳೆ ಮೈಸೂರು ಪ್ರಾಂತ್ಯದಲ್ಲಿ ಕರೆಯಲಾಗುತ್ತಿತ್ತು. ಇದರಲ್ಲಿ ಎರಡು ವಿಧಗಳಿರುತ್ತಿತ್ತು. ೧. ಕಾಳು ಕೊಡುವುದು ೨. ಹಣ ಕೊಡುವುದು. ಇದರ ಅನ್ವಯವೇ ಕಾಳು ಗುತ್ತಿಗೆಯಾಗಿದ್ದರೆ ಕೃಷಿ ಹಂಗಾಮಿನ ನಂತರ ಕಾಳನ್ನು ಅಥವಾ ಹಣವನ್ನು ಭೂಮಿ ಉಳುಮೆ ಮಾಡುತ್ತಿದ್ದವರು ನೀಡುವುದು ರೂಢಿಯಲ್ಲಿತ್ತು.
bimba pratibimbaಯಾವಾಗ ೧೯೭೫ರಲ್ಲಿ ಉಳುವವನೇ ಭೂ ಒಡೆಯ ಕಾಯ್ದೆ ಜಾರಿಗೆ ಬಂದಿತೋ ಆಗಿನಿಂದ ಉಳುಮೆ ಮಾಡುತ್ತಿದ್ದವರೇ ಭೂಮಿಯ ಒಡೆಯರಾದರು. ಹೀಗಿದ್ದೂ ಇಂದಿಗೂ ಭೂಮಿಯನ್ನು ಗುತ್ತಿಗೆ ಪಡೆದು ಉಳುಮೆ ಮಾಡುವುದು ರಾಜ್ಯದಲ್ಲಿ ನಡೆದೇ ಇದೆ. ಇದೇ ಪದ್ಧತಿ ಉತ್ತರ ಭಾರತದಲ್ಲಿಯೂ ಇದೆ. ಅಲ್ಲಿನ ಕೃಷಿಕರು ಅದರಲ್ಲೂ ಪಂಜಾಬ್ ಮತ್ತು ಹರಿಯಾಣದ ಬೇಸಾಯಗಾರರು ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಬೆಳೆ ಬೆಳೆದುಕೊಡುವುದನ್ನು ಮಾಡುತ್ತಿದ್ದಾರೆ. ಅಲ್ಲಿನ ರೈತರು ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಆಲೂಗಡ್ಡೆ, ಸಾಸಿವೆ ಮತ್ತಿತರ ಬೆಳೆಗಳನ್ನು ಬೆಳೆದುಕೊಡುತ್ತಿದ್ದಾರೆ. ಇದಲ್ಲದೇ ಆಯರ‍್ವೇದ ಔಷಧಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ನೆಲ್ಲಿಕಾಯಿ ಮತ್ತಿತರ ಗಿಡಮೂಲಿಕೆಗಳನ್ನು ಬೆಳೆದುಕೊಡುವುದೂ ನಡೆದಿದೆ.
ಆದರೆ ಆಯಾ ರಾಜ್ಯದ ಪರಿಸ್ಥಿತಿ ಮತ್ತು ಕಟ್ಟುಪಾಡುಗಳ ಅನ್ವಯವೇ ಕಂಪನಿಗಳು ಕೃಷಿಕರೊಂದಿಗೆ ಒಪ್ಪಂದ ಮಾಡಿಕೊಂಡು ಕೃಷಿ ಉತ್ಪನ್ನಗಳನ್ನು ಬೆಳೆದುಕೊಡಲು ಬೇಡಿಕೆ ಸಲ್ಲಿಸುತ್ತವೆ. ಆಗೆಲ್ಲ ತಾವು ಬಯಸುವ ರೀತಿಯದೇ ಬೆಳೆಗಾಗಿ ಬೀಜ, ರಸಗೊಬ್ಬರ, ಕ್ರಿಮಿನಾಶಕ, ಕೀಟನಾಶಕ, ಕಳೆನಾಶಕ, ಪೋಷಕಾಂಶಗಳನ್ನು ಕಂಪನಿಗಳು ರೈತರಿಗೆ ಒದಗಿಸುತ್ತವೆ. ಕೃಷಿ ಉತ್ಪನ್ನವನ್ನು ಮೊದಲೇ ನಿಗದಿಯಾದ ಮೊತ್ತಕ್ಕೆ ಬೆಳೆಗಾರರಿಂದ ಉತ್ಪನ್ನವನ್ನು ಖರೀದಿಸುತ್ತವೆ. ಹೀಗಿದ್ದೂ ಅಲ್ಲಿ ಅನೇಕ ಬಾರಿ ಕೃಷಿಕರು ಮತ್ತು ಕಂಪನಿಗಳ ಮಧ್ಯೆ ತಕರಾರುಗಳು ಎದ್ದಿದ್ದೂ ಇದೆ. ರೈತರು ನಷ್ಟವನ್ನು ಅನುಭವಿಸಿದ್ದೂ ಇದೆ. ಆದರೆ ಈಗಿನಂತೆ ಕಾಯ್ದೆಯ ಚೌಕಟ್ಟು ಇರಲಿಲ್ಲ ಅಷ್ಟೇ.
ಈ ಕಾಯ್ದೆಯನ್ವಯ ಬೆಳೆ ಬೆಳೆದುಕೊಡುವವರನ್ನು ಕೃಷಿಕರೂ ಎಂತಲೂ, ಇವರೊಂದಿಗೆ ಒಪ್ಪಂದ ಮಾಡಿಕೊಳ್ಳುವವರನ್ನು ಪ್ರಾಯೋಜಕರೂ ಎಂತಲೂ ಗುರುತಿಸಲಾಗಿದೆ. ಇವರಿಬ್ಬರ ಮಧ್ಯೆ ಕಾಯ್ದೆಯನ್ವಯ ವ್ಯಾಪಾರ ಮತ್ತು ವಾಣಿಜ್ಯ ಕಾಯ್ದೆಯಡಿಯೇ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ. ಈ ಕಾಯ್ದೆಯ ಅನ್ವಯವೇ ಒಪ್ಪಂದದಲ್ಲಿ ಉಲ್ಲೇಖಿಸಲ್ಪಟ್ಟ ರೀತಿಯಲ್ಲಿ, ಉಲ್ಲೇಖಿಸಲ್ಪಟ್ಟ ಗುಣಮಟ್ಟದ ಉತ್ಪನ್ನವನ್ನು ಬೆಳೆಗಾರರು ತೆಗೆದುಕೊಡಬೇಕಾಗುತ್ತದೆ. ಆಗ ಒಪ್ಪಂದದಂತೆ ಕೃಷಿಕರಿಗೆ ಪ್ರಾಯೋಜಕರಿಂದ ಹಣ ದೊರೆಯುತ್ತದೆ.

ಗುಣಮಟ್ಟವೆಂಬುದೇ ಗೊಂದಲಮಯ!
ಉಲ್ಲೀಖಿಸಲ್ಪಟ್ಟ `ಗುಣಮಟ್ಟದ ಉತ್ಪನ್ನ’ ಎಂಬ ಅಂಶವನ್ನೇ ಇಟ್ಟುಕೊಂಡು ಕೊಯ್ಲೋತ್ತರದ ಪರಿಸ್ಥಿತಿಯಲ್ಲಿ ಹೇಗಾದರೂ ವಿಶ್ಲೇಷಿಸಿ ಒಪ್ಪಂದ ಕೃಷಿಗೆ ಕರಾರು ಮಾಡಿಕೊಂಡು ಬೆಳೆಗಾರನ ಫಸಲನ್ನು ತಿರಸ್ಕರಿಸುವ ಪರಿಸ್ಥಿತಿ ನಮ್ಮ ದೇಶದಲ್ಲಿ ಇಲ್ಲ ಎಂದು ಹೇಳಲಿಕ್ಕೇ ಆಗದು. ಏಕೆಂದರೆ ಗುಣಮಟ್ಟವನ್ನು ನಿರ್ಧರಿಸಿ ಕೊಳ್ಳುವ ಅಥವಾ ತಿರಸ್ಕರಿಸುವ ಅಧಿಕಾರವನ್ನು ಈ ಕಾಯ್ದೆ ಕಂಪನಿಗೆ ಒದಗಿಸಿತ್ತು. ಇದು ಕಂಪನಿಗಳ ಹಿತದೃಷ್ಟಿ ಕಾಯುತ್ತದೆಯೇ ಹೊರತು ಕೃಷಿಕರ ಹಿತ ಕಾಯುವುದಿಲ್ಲ ಎಂಬುದು ರೈತರ ವಾದವಾಗಿತ್ತು.
ಇದಕ್ಕೆ ಒಂದು ಚಿಕ್ಕ ಉದಾಹರಣೆಯೆಂದರೆ  ಕೆಲರ‍್ಷಗಳ ಹಿಂದೆ ಮಹಾರಾಷ್ಟ್ರದ ನಾಸಿಕ್ ಮಾರುಕಟ್ಟೆಗೆ ಅಧಿಕ ಪ್ರಮಾಣದಲ್ಲಿ ಈರುಳ್ಳಿ ಆವಕವಾದಾಗ ಅಲ್ಲಿ ಸಸ್ತಾ ದರದಲ್ಲಿ ಖರೀದಿ ಮಾಡಿದ ವ್ಯಾಪಾರಸ್ಥರು ಅದನ್ನು ಹುಬ್ಬಳ್ಳಿ ಮಾರುಕಟ್ಟೆಗೆ ರಾತ್ರೋರಾತ್ರಿ ರವಾನಿಸಿದ್ದುಂಟು. ಆಗ ಸ್ಥಳೀಯವಾಗಿ ಬೆಳೆದಿದ್ದ ಈರುಳ್ಳಿಗೆ ಬೆಲೆ ಬಿದ್ದು ಹೋಯಿತು. ಅಂದು ವಣಿಕರು ನೀಡಿದ ಕಾರಣವೇನೆಂದರೆ ಈರುಳ್ಳಿ ಗುಣಮಟ್ಟ ಸರಿಯಾಗಿಲ್ಲ ಎಂಬುದೇ ಆಗಿತ್ತು. ಸ್ಥಳೀಯ ಈರುಳ್ಳಿ ಅದಾಗಲೇ ಮಾರುಕಟ್ಟೆಗೆ ಬರಲು ಆರಂಭಿಸಿ ಕೆಲವು ವಾರಗಳೇ ಕಳೆದುಹೋಗಿತ್ತು. ಈ ಮಧ್ಯದ ಅವಧಿಯಲ್ಲಿ ನಾಸಿಕ್ ಈರುಳ್ಳಿ ಅಧಿಕ ಪ್ರಮಾಣದಲ್ಲಿ ಇಲ್ಲಿನ ಮಾರುಕಟ್ಟೆಗೆ ಬಂದುದರಿಂದ ಸ್ಥಳೀಯ ಈರುಳ್ಳಿಯನ್ನು ಗುಣಮಟ್ಟದ ನೆಪವೊಡ್ಡಿ ತಿರಸ್ಕರಿಸುವ ಸಾಹಸವನ್ನು ಇಲ್ಲಿನ ವಣಿಕರು ಮಾಡಿದ್ದರು. ಇಂತಹದೇ ಮರ‍್ಗವನ್ನು ಗುತ್ತಿಗೆ ಕೃಷಿ ಒಪ್ಪಂದ ಮಾಡಿಕೊಂಡ ಕಂಪನಿ ಮಾಡುವುದಿಲ್ಲ, ಅದಕ್ಕೆ ಪೂರಕವಾಗಿ ಇಲ್ಲಿನ ಆಡಳಿತ ಕೈಗೂಡಿಸುವುದಿಲ್ಲ ಎಂದು ಹೇಗೆ ನಂಬುವುದು ಎಂಬುದು ರೈತರ ಪ್ರಶ್ನೆಯಾಗಿತ್ತು.
ಹಾಗಾಗಿಯೇ ಗುಣಮಟ್ಟದ ಉತ್ಪನ್ನ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ರೈತರು ಎತ್ತಿರುವ ತಕರಾರೆಂದರೆ- ನಾವು ನಿಸರ್ಗದೊಂದಿಗೆ ಗುದ್ದಾಡುತ್ತ ಬೆಳೆ ಬೆಳೆವ ಜೂಜಾಟಕ್ಕೆ ಇಳಿಯುವವರು. ಒಂದೊಮ್ಮೆ ನಿಸರ್ಗವೇನಾದರೂ ನಮ್ಮ ಮೇಲೆ ಮುನಿಸಿಕೊಂಡು ಮಳೆಯೇ ಆಗದಿದ್ದರೆ, ಅಗತ್ಯಕ್ಕಿಂತ ಕಡಿಮೆ ಮಳೆಯಾದರೆ, ಹವಾಮಾನ ಏರುಪೇರಾಗಿ ಧಾರಾಕಾರ ಮಳೆ ಸುರಿದರೆ ಅಥವಾ ಬರ ಎದುರಾದರೆ ಹಂಗಾಮಿನಾದ್ಯಂತ ನಾವು ಮಾಡಿದ ಪ್ರಯತ್ನವೆಲ್ಲ ವ್ಯರ್ಥವಾಗುತ್ತದೆ. ಇಷ್ಟು ಮಾತ್ರವಲ್ಲ ಒಂದೊಮ್ಮೆ ಹವಾಮಾನ, ಅದೃಷ್ಟ ಎಲ್ಲವೂ ಉತ್ತಮವಾಗಿದ್ದು ಬೆಳೆ ಭರಪೂರವಾಗಿ ದೊರೆತರೂ  ಒಪ್ಪಂದಕ್ಕೆ ಅನ್ವಯವಾಗಿ ಇರದೇ ಇದ್ದರೆ ಒಪ್ಪಂದ ಮಾಡಿಕೊಂಡ ಗುಣಮಟ್ಟದ್ದನ್ನು ಹಾಗೂ ಒಪ್ಪಂದ ಮಾಡಿಕೊಂಡ ಪ್ರಮಾಣದಷ್ಟನ್ನು ಮಾತ್ರ ಕಂಪನಿಗಳು ಖರೀದಿಸುತ್ತವೆ. ಉಳಿದಿದ್ದನ್ನು ನಾವು ಮುಕ್ತ ಮಾರುಕಟ್ಟೆಯಲ್ಲಿಯೇ ಮಾರಬೇಕಾಗುತ್ತದೆ. ಆಗಲೂ ನಾವು ನಷ್ಟವನ್ನೇ ಅನುಭವಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಯಾವುದೇ ಸರ್ಕಾರವೂ ನಮ್ಮ ಸಹಾಯಕ್ಕಾಗಲೀ, ಬೆಂಬಲಕ್ಕಾಗಲೀ ನಿಲ್ಲುವುದಿಲ್ಲ. ಇದೇ ಸಂದರ್ಭ ಎಂದುಕೊಂಡು ಅಧಿಕಾರಿ ವರ್ಗ ನಮ್ಮ ಶೋಷಣೆಗೆ ಇಳಿಯುತ್ತದೆ ಎಂಬುದು ರೈತರ ಆತಂಕಕ್ಕೆ ಕಾರಣವಾಗಿತ್ತು.

ಕಾರ‍್ಪೊರೇಟ್ ಸಂರಕ್ಷಕ
ಇಂತಹ ಸಂದರ್ಭ ಎದುರಿಸಲೆಂದೇ ಈ ಕಾಯ್ದೆಯಲ್ಲಿ `ಪೋಸ್ ಮ್ಯಾಷರ್’ ಎಂಬ ಫ್ರೆಂಚ್ ಸಿವಿಲ್ ಕೋಡ್‌ ಅಂಶವನ್ನು ಉಲ್ಲೇಖಿಸಲಾಗಿದೆ. `ಪೋಸ್ ಮ್ಯಾಷರ್’ನಲ್ಲಿ ಎರಡು ವಿಭಾಗಗಳು ಇವೆ. ೧. ದೈವಿ ನಿಯಮ ೨. ಮಾನವ ನಿರ್ಮಿತ ಪರಿಸ್ಥಿತಿ.
ದೈವ ನಿಯಮದಂತೆ ಎದುರಾಗುವ ಕ್ಷಾಮ, ಪ್ರವಾಹ, ಕೆಟ್ಟ ಹವಾಗುಣ, ಭೂಕಂಪ, ಸಾಂಕ್ರಾಮಿಕ ರೋಗ ಹರಡುವಿಕೆ, ಕೀಟಗಳ ದಾಳಿಯಂಥವುಗಳ ಸಂದರ್ಭದಲ್ಲಿ ಮತ್ತು ದ್ವಿಪಕ್ಷೀಯ ಒಪ್ಪಂದಗಾರರ ಕೈಮೀರಿದ ಪರಿಸ್ಥಿತಿ ಸೃಷ್ಟಿಯಾದ ಸಮಯದಲ್ಲಿ ಕರಾರಿನ ಅನ್ವಯ ನಡೆದುಕೊಳ್ಳಬೇಕಿಲ್ಲ. ಇನ್ನು ಕಾಯ್ದೆಯಲ್ಲಿ ಎರಡನೇ ವಿಭಾಗದ ಅಂಶ ಎದುರಾದಾಗ ಏನು ಮಾಡಬೇಕು ಎಂಬುದನ್ನು ಉಲ್ಲೇಖಿಸಲಾಗಿಲ್ಲ. ಅದೆಂದರೆ ಆಂತರಿಕ ಸಂರಕ್ಷೆ,, ಬಾಹ್ಯ ವೈಷಮ್ಯಗಳಿಂದಾಗಿ ಎದುರಾಗುವ ಸಮಸ್ಯೆಗಳ ಸಂದರ್ಭದಲ್ಲಿ ಏನು ಪರಿಹಾರ ಎಂಬುದನ್ನೇ ಇದರಲ್ಲಿ ಕೈಬಿಡಲಾಗಿತ್ತು.
ಗುತ್ತಿಗೆ ಕೃಷಿ ಎಂಬುದು ಸಣ್ಣ ಮತ್ತು ಮಧ್ಯಮ ವರ್ಗದ ಕೃಷಿಕರಿಗೆ ಒಳಪ್ರವೇಶಿಸುವುದಷ್ಟೆ ಗೊತ್ತಿದ್ದು, ಅಲ್ಲಿಂದ ಹೊರಬರಲಾಗದೇ ಅವಸಾನ ಕಂಡ `ಅಭಿಮನ್ಯು’ವಿನ ಪಾತ್ರವನ್ನು ನೆನಪಿಗೆ ತರುತ್ತದೆ. ಒಪ್ಪಂದ ಕೃಷಿ ಹೇಗೆಂದರೆ ಬೀಜ, ಕೀಟನಾಶಕ, ಕಳೆನಾಶಕ, ಕ್ರಿಮಿನಾಶಕ ಎಲ್ಲವನ್ನೂ ನೀಡುವುದು ಕಂಪನಿ, ಕೃಷಿ ಕಾರ‍್ಯ ನಡೆಸಲು ಬೇಕಾಗುವ ಯಂತ್ರೋಪಕರಣ, ತಂತ್ರಜ್ಞಾನವನ್ನು ಕೊಡಮಾಡುವುದೂ ಕಂಪನಿ. ಇಷ್ಟು ಮಾತ್ರವಲ್ಲ ಅಂತಿಮವಾಗಿ ಫಸಲು ಯಾವ ಸಮಯಕ್ಕೆ ಯಾವ ಗುಣಮಟ್ಟದಲ್ಲಿ ಮತ್ತು ಎಷ್ಟು ಪ್ರಮಾಣದಲ್ಲಿ ದೊರಕಬೇಕು ಎಂಬುದನ್ನು ನಿರ್ಧರಿಸುವುದೂ ಕಂಪನಿಯೇ. ಒಮ್ಮೆ ಇದನ್ನೆಲ್ಲ ಒಪ್ಪಿಕೊಂಡು ಕೃಷಿ ಮಾಡಲು ಆರಂಭಿಸಿದರೆ ಸಣ್ಣ ಮತ್ತು ಮಧ್ಯಮ ಹಿಡುವಳಿದಾರ ತನ್ನ ಮನೆಗೆ ಬೇಕಾದುದನ್ನು ತನ್ನದೇ ಹೊಲದಲ್ಲಿ ಬೆಳೆದುಕೊಳ್ಳಲೂ ಆಗದು. ಏಕೆಂದರೆ ಅವನ ಬಳಿ ಅದಕ್ಕೆ ಅಗತ್ಯವಾದ ಭೂಮಿ ಉಳಿದಿರುವ ಸಾಧ್ಯತೆ ಕಡಿಮೆ ಇರುತ್ತದೆ. ಹೇಗೆಂದರೆ ಒಪ್ಪಂದ ಮಾಡಿಕೊಳ್ಳುವಾಗಲೇ ಇಷ್ಟು ಪ್ರದೇಶದಲ್ಲಿ, ಇಷ್ಟು ಅವಧಿಗಾಗಿ ಇಂತಹ ಬೆಳೆಯನ್ನು ಬೆಳೆದುಕೊಡುತ್ತೇನೆ ಎಂಬ ಕರಾರಿಗೆ ಕೃಷಿಕ ಒಳಪಟ್ಟಿರುತ್ತಾನೆ.
ಇದಕ್ಕೆ ಒಂದು ಉದಾಹರಣೆಯನ್ನು ನೀಡಬಹುದೆಂದರೆ ಸಾವಯವ ಕೃಷಿ ಉತ್ಪಾದನೆ ಎಂಬುದರ ಪ್ರಮಾಣೀಕರಣಕ್ಕೆ ಸಂಬಂಧಿಸಿದಂತೆ ಇರುವ ಕಟ್ಟುಪಾಡುಗಳ ಪಟ್ಟಿ. ಸಾವಯವ ಕೃಷಿ ಉತ್ಪಾದನೆಗಳ ಪ್ರಮಾಣೀಕರಣಕ್ಕೆ ಕೃಷಿ ಆರಂಭಿಸಿದ ನಂತರದ ಮೂರು ರ‍್ಷಗಳವರೆಗೆ ಯಾವುದೇ ರಸಾಯನಿಕ ಬಳಕೆ ಆಗಿರಕೂಡದು. ಇದಲ್ಲದೇ ಅಕ್ಕಪಕ್ಕದ ಕೃಷಿ ಭೂಮಿಯಿಂದಲೂ ಸಾವಯವ ಕೃಷಿ ನಡೆಯುತ್ತಿರುವ ಭೂಮಿಗೆ ರಸಾಯನಿಕಗಳ ಪ್ರವೇಶ ಆಗಿರಕೂಡದು. ನಿಗದಿತ ನಿಯಮಾವಳಿಗಳಿಗೆ ಅನುಸಾರವಾಗಿಯೇ ಸಾವಯವ ಕೃಷಿಯನ್ನು ಮಾಡುತ್ತಿರಬೇಕು. ಇದು ಸತತ ಪರಾರ‍್ಶೆಗೆ ಒಳಪಟ್ಟು ಅಂಗೀಕರಿಸಲ್ಪಟ್ಟ ನಂತರವೇ `ಸಾವಯವ ಕೃಷಿ ಉತ್ಪನ್ನ’ ಎಂಬ ಪ್ರಮಾಣೀಕರಣವನ್ನು ನೀಡಲಾಗುತ್ತದೆ. ಇದಕ್ಕೆಂದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮಿತಿಗಳು ಇವೆ. ಇವುಗಳಿಂದ ಅಂಗೀಕಾರ ದೊರೆತ ನಂತರವೇ ಸಾವಯವ ಉತ್ಪನ್ನ ಎಂಬ ಪ್ರಮಾಣೀಕರಣ ದೊರೆಯುತ್ತದೆ. ಇಷ್ಟು ಮಾತ್ರವಲ್ಲ ಪ್ರಮಾಣೀಕರಣ ದೊರೆತ ನಂತರ ನಿಯಮಿತವಾಗಿ ನವೀಕರಣವನ್ನೂ ಮಾಡಿಸಿಕೊಳ್ಳುತ್ತಿರಬೇಕು. ಆಗ ಮಾತ್ರ ಸಾವಯವ ಉತ್ಪನ್ನಕ್ಕೆ ಮಾರುಕಟ್ಟೆಯನ್ನು ಗಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಇಷ್ಟೇ ಏಕೆ ನಮ್ಮ ದೇಶದಲ್ಲಿ ಸಾವಯವ ಉತ್ಪನ್ನಗಳ ಮಾರಾಟಕ್ಕೆಂದು ಪ್ರತ್ಯೇಕ ವ್ಯವಸ್ಥೆ ಇಲ್ಲವೇ ಇಲ್ಲ… (ಮುಂದುವರಿಯುವುದು)
 

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement