ಸರಣಿ ಲೇಖನ-ಕೃಷಿ ಕಾನೂನಿನಲ್ಲಿ ಬೆಳೆದು ಕೊಟ್ಟ ಫಸಲು ಒಪ್ಪಂದದಂತೆ ಇಲ್ಲವೆಂದು ಪ್ರಾಯೋಜಕ ತಿರಸ್ಕರಿಸಿದರೆ ಕೃಷಿಕ ನ್ಯಾಯಾಲಯಕ್ಕೆ ಹೋಗುವಂತಿರಲಿಲ್ಲ..!

ಲೇಖನ-ಎಚ್‌.ಆರ್‌.ಸುರೇಶ, ಮಾಜಿ ಸ್ಥಾನಿಕಸಂಪಾದಕರು ಸಂಯುಕ್ತ ಕರ್ನಾಟಕ- ಹುಬ್ಬಳ್ಳಿ

(ಕಳೆದ ಒಂದು ವರ್ಷದಿಂದ ರೈತರು ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ ಒಂದು ವರ್ಷದಿಂದ ದೇಶದ ರಾಜಧಾನಿ ದಿಲ್ಲಿಯ ಗಡಿಯಲ್ಲಿ ಗಜಮ್ಮನೆ ಕುಳಿತುಬಿಟ್ಟಿದ್ದಾರೆ.ಕೃಷಿ ಕಾಯ್ದೆಗಳನ್ನು ಅಂಗೀಕರಿಸಿರುವ ಕೇಂದ್ರ ಸರ್ಕಾರದ ಈ ಕಾಯ್ದೆಗಳು ಸಣ್ಣ ಮತ್ತು ಮಧ್ಯಮ ಹಿಡುವಳಿದಾರ ರೈತರ ಸಂಕಷ್ಟಗಳನ್ನು ನಿವಾರಿಸುವ ಮತ್ತು ಅವರನ್ನು ಆರ್ಥಿಕವಾಗು ಸದೃಢಗೊಳಿಸುವ ಉದ್ದೇಶ ಹೊಂದಿದ್ದವು ಎಂದು ಕೇಂದ್ರ ಸರ್ಕಾರ ಸಾರಿಸಾರಿ ಹೇಳಿದರೂ ಅವರು ಕಳೆದು ಒಂದು ವರ್ಷದಿಂದ ನಿರಂತರವಾಗಿ ದೆಹಲಿ ಗಡಿಯಲ್ಲಿ ಬಂಡೆಗಲ್ಲಿನಂತೆ ಕುಳಿತು ರಾಷ್ಟ್ರಪತಿ ಅನುಮೋದನೆ ಪಡೆದಕೃಷಿ ಕಾಯ್ದೆಯನ್ನೇ ಸರ್ಕಾರ ಹಿಂಪಡೆಯುವಂತೆ ಮಾಡಿದ್ದಾರೆ.
ಅವರು ಇಷ್ಟು  ಅವಧಿಗೆ ಯಾಕಾಗಿ ಹೋರಾಟ ಮಾಡಿದರು..? ಈ ಮೂರು ಕೃಷಿ ಕಾಯ್ದೆಗಳಲ್ಲಿದ್ದ ಯಾವೆಲ್ಲ ಅಂಶಗಳು ರೈತರ ಹೋರಾಟಕ್ಕೆ ಕಾರಣವಾದವು ಎಂಬುದರ ಬಗ್ಗೆ ಸಂಯುಕ್ತ ಕರ್ನಾಟಕದ ಮಾಜಿ ಸ್ಥಾನಿಕ ಸಂಪಾದಕರಾದ ಎಚ್.ಆರ್.ಸುರೇಶ ಅವರು ಈ ಮೂರು ಕೃಷಿ ಕಾಯ್ದೆಗಳ ಪ್ರಮುಖ ಅಂಶಗಳ ಬಗ್ಗೆ ವಿಶ್ಲೇಷಿಸಿದ್ದಾರೆ. ಅದನ್ನು ಇಂದಿನಿಂದ ಸರಣಿ ಲೇಖನ ರೂಪದಲ್ಲಿ ನೀಡಲಾಗುತ್ತಿದೆ)

 

 

 

 

ಭಾಗ-2

(ನಿನ್ನೆಯಿಂದ ಮುಂದುವರಿದಿದೆ..)

ಸಾವಯವ ಕೃಷಿ ಉತ್ಪಾದನೆ ಎಂಬುದರ ಪ್ರಮಾಣೀಕರಣಕ್ಕೆ ಸಂಬಂಧಿಸಿದಂತೆ ಇರುವ ಕಟ್ಟುಪಾಡುಗಳ ಪಟ್ಟಿ. ಸಾವಯವ ಕೃಷಿ ಉತ್ಪಾದನೆಗಳ ಪ್ರಮಾಣೀಕರಣಕ್ಕೆ ಕೃಷಿ ಆರಂಭಿಸಿದ ನಂತರದ ಮೂರು ವರ್ಷಗಳವರೆಗೆ ಯಾವುದೇ ರಸಾಯನಿಕ ಬಳಕೆ ಆಗಿರಕೂಡದು. ಇದಲ್ಲದೇ ಅಕ್ಕಪಕ್ಕದ ಕೃಷಿ ಭೂಮಿಯಿಂದಲೂ ಸಾವಯವ ಕೃಷಿ ನಡೆಯುತ್ತಿರುವ ಭೂಮಿಗೆ ರಸಾಯನಿಕಗಳ ಪ್ರವೇಶ ಆಗಿರಕೂಡದು. ಇದು ಸತತ ಪರಾಮರ್ಶೆಗೆ ಒಳಪಟ್ಟು ಅಂಗೀಕರಿಸಲ್ಪಟ್ಟ ನಂತರವೇ `ಸಾವಯವ ಕೃಷಿ ಉತ್ಪನ್ನ’ ಎಂಬ ಪ್ರಮಾಣೀಕರಣವನ್ನು ನೀಡಲಾಗುತ್ತದೆ. ಇಷ್ಟು ಮಾತ್ರವಲ್ಲ ಪ್ರಮಾಣೀಕರಣ ದೊರೆತ ನಂತರ ನಿಯಮಿತವಾಗಿ ನವೀಕರಣವನ್ನೂ ಮಾಡಿಸಿಕೊಳ್ಳುತ್ತಿರಬೇಕು. ಆಗ ಮಾತ್ರ ಸಾವಯವ ಉತ್ಪನ್ನಕ್ಕೆ ಮಾರುಕಟ್ಟೆಯನ್ನು ಗಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಇಷ್ಟೇ ಏಕೆ ನಮ್ಮ ದೇಶದಲ್ಲಿ ಸಾವಯವ ಉತ್ಪನ್ನಗಳ ಮಾರಾಟಕ್ಕೆಂದು ಪ್ರತ್ಯೇಕ ವ್ಯವಸ್ಥೆ ಇಲ್ಲವೇ ಇಲ್ಲ.

ಗುತ್ತಿಗೆ ಕೃಷಿಯೆಂಬ ಚಕ್ರವ್ಯೂಹ
ಇಂಥದ್ದೇ ಸ್ಥಿತಿ ಗುತ್ತಿಗೆ ಕೃಷಿಯಲ್ಲೂ ಉದ್ಭವಿಸಲು ಪೂರಕವಾದ ಎಲ್ಲ ವಾತಾವರಣ ನಮ್ಮಲ್ಲಿ ಈಗಾಗಲೇ ನಿರ್ಮಾಣಗೊಂಡಿದೆ. ಅದು ಆಳುವವರು ಮತ್ತು ಅಧಿಕಾರಿ ವರ್ಗದಿಂದ ನಿರ್ಮಾಣಗೊಂಡಿರುವಂಥದು. ಪರಿಸ್ಥಿತಿ ಹೀಗಿರುವುದಿರಿಂದ ಒಮ್ಮೆ ಈಗಿನ ಕಾಯ್ದೆಯ ಅನ್ವಯ ಒಪ್ಪಂದ ಕೃಷಿಯ `ಚಕ್ರವ್ಯೂಹ’ದಲ್ಲಿ ಸಣ್ಣ ಮತ್ತು ಮಧ್ಯಮ ಹಿಡುವಳಿದಾರರು ಪ್ರವೇಶಿಸುತ್ತಿದ್ದಂತೆ ಅವರ ಸುತ್ತ ಊಹಿಸಲೂ ಸಾಧ್ಯವಿಲ್ಲದಂಥ ಒಂದು ವರ್ತುಲ ನಿರ್ಮಾಣಗೊಳ್ಳುತ್ತದೆ. ಹೇಗೆಂದರೆ ಒಪ್ಪಂದ ಮಾಡಿಕೊಂಡ ಕೃಷಿಕ ಕಂಪನಿಯವರು ಹೇಳಿದಂತೆಯೇ ಕೇಳಬೇಕಾಗುತ್ತದೆ. ಅಕಸ್ಮಾತ್ ಯಾವುದೋ ಕಾರಣದಿಂದ ತಾನು ಮಾಡುತ್ತಿರುವುದರಲ್ಲಿ ಏನೋ ಕೊರತೆ ಇದೆ ಎನ್ನಿಸಿ ಕಂಪನಿಯ ಒಪ್ಪಿಗೆ ಇಲ್ಲದೇ ಏನಾದರೂ ಕ್ರಮ ಕೈಗೊಳ್ಳಲು ಮುಂದಾಗಿ ಯಶಸ್ವಿಯಾದರೆ ಅಂತಹ ಕೃಷಿಕ ಮುಂದೆ ಎದುರಾಗಬಹುದಾದ ದುಸ್ಥಿತಿಯಿಂದ ಪಾರಾಗುತ್ತಾನೆ. ಒಂದೊಮ್ಮೆ ಆತ ನಡೆಸಿದ ಪ್ರಯತ್ನ ಕೈಕೊಟ್ಟು ವಿಫಲವಾದರೆ ಎಲ್ಲದಕ್ಕೂ ಕೃಷಿಕನನ್ನೇ ಹೊಣೆಗಾರನನ್ನಾಗಿ ಮಾಡಿ ಎಲ್ಲ ವೆಚ್ಚವನ್ನೂ ಅವನ ತಲೆಗೆ ಕಟ್ಟುವುದಿಲ್ಲ ಎಂಬ ಭರವಸೆಯೇ ಕೃಷಿ ಕಾನೂನಿನಲ್ಲಿ ಇಲ್ಲ. ಹೀಗೆ ಆದಾಗ ಕೃಷಿಕನ ಮೇಲಿನ ಹಣಕಾಸಿನ ಹೊರೆ ದುಪ್ಪಟ್ಟುಗೊಳ್ಳುತ್ತದೆ. ಇದೇ ಸ್ಥಿತಿ ಒಂದೆರಡು ಹಂಗಾಮಿನ ವರೆಗೂ ಮುಂದುವರಿಯಿತೆಂದರೆ ಕಂಪನಿಯ ಸಂಕೋಲೆಯೊಳಗೆ ಕೃಷಿಕ ಸಿಕ್ಕಿಕೊಂಡಂತೆಯೇ ಸರಿ. ಏಕೆಂದರೆ ಇಲ್ಲಿನ ಅಧಿಕಾರಿ ವರ್ದವರು ಧ್ವನಿ ಇಲ್ಲದವನ ಪರವಾಗಿ ನಿಲ್ಲುವುದೇ ಇಲ್ಲ.
ಲಾಭ ಗಳಿಸಲೆಂದೇ ಬಂಡವಾಳ ಹೂಡುವ ಕಾರ್ಪೊರೇಟ್ ಕಂಪನಿಗಳು ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುವುದಿಲ್ಲ, ಅದಕ್ಕೆ ಅಧಿಕಾರಿ ವರ್ಗ, ಆಡಳಿತ ನಡೆಸುವವರು ಕೈಗೂಡಿಸುವುದಿಲ್ಲ ಎಂದು ನಂಬುವುದು ಹೇಗೆ ಎಂಬ ಪ್ರಶ್ನೆ ಎತ್ತಿರುವ ಕೃಷಿಕರು ಇದಕ್ಕೆ ಸಂಬಂಧಿಸಿದಂತೆ ಸಾಲುಸಾಲು ಘಟನೆಗಳನ್ನೇ ಉದಾಹರಿಸುತ್ತಾರೆ.

ಕೃಷಿಕರ ಹಿತಕ್ಕಿಂತ ಕಾರ್ಪೊರೇಟ್ ಹಿತವೇ ಮುಖ್ಯ
ಇಂತಹವೇ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಎನ್‌ಡಿಟಿವಿಯ `ಮುಕಾಬುಲಾ’ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅರಿವಳಿಕೆ ತಜ್ಞ(ಅನಸ್ತೆಟಿಸ್ಟ್)ರೂ ಆಗಿರುವ ಕೃಷಿಕ, ರೈತನಾಯಕ ಡಾ. ದರ್ಶನ್ ಪಾಲ್ ಹೇಳುವುದೇನೆಂದರೆ- “ರೈತರ ಈಗಿನ ಆಂದೋಲನ ಪ್ರಸ್ತುತ ಸಂದರ್ಭಕ್ಕೆ ತಕ್ಕಂತೆ ನಡೆಯುತ್ತಿದೆ. ೧೯೮೦ರ ದಶಕಕ್ಕೆ ಮುಂಚಿನ ಆಂದೋಲನಗಳಿಗೆ ಹೋಲಿಸಿದಲ್ಲಿ ಈಗಿನದು ಅತ್ಯಂತ ಸಂಕೀರ್ಣ ಮತ್ತು ಸಂಕಷ್ಟದ ಪರಿಸ್ಥಿತಿ. ಆಗ ಈಗಿನಂತೆ ಮಾಧ್ಯಮವೂ ವ್ಯಾಪಕವಾಗಿ ಹರಡಿಕೊಂಡಿರಲಿಲ್ಲ. ಈಗಿನಷ್ಟು ಒಳಸುರಿ ವೆಚ್ಚ (ಇನ್‌ಪುಟ್ ಕಾಸ್ಟ್) ಕೃಷಿಯಲ್ಲಿ ಇರಲಿಲ್ಲ. ನಾವು ವಿಶ್ವ ವ್ಯಾಪಾರ ಸಂಘಟನೆ(ಡಬ್ಲ್ಯುಟಿಒ)ಯ ಗ್ಯಾಟ್-ಡಂಕೆಲ್ ಒಪ್ಪಂದಗಳಿಗೆ ಒಳಪಟ್ಟಿರಲಿಲ್ಲ. ಈಗಿನಂತೆ ರೈತರ ಆತ್ಮಹತ್ಯೆಗಳೂ ನಡೆಯುತ್ತಿರಲಿಲ್ಲ. ಕೃಷಿಯನ್ನು ಅನ್ನ ನೀಡುವ ಕ್ಷೇತ್ರವಾಗಿ ನೋಡಲಾಗುತ್ತಿತ್ತೇ ಹೊರತು ಬೃಹತ್ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವ ಕ್ಷೇತ್ರವಾಗಿ ನೋಡುತ್ತಿರಲಿಲ್ಲ. ಹಸಿರು ಕ್ರಾಂತಿಯ ಮುಂಚೂಣಿ ರಾಜ್ಯಗಳಾದ ಹರಿಯಾಣ ಮತ್ತು ಪಂಜಾಬ್‌ಗಳ ಸ್ಥಿತಿ ಈಗಿನಂತೆ ಇರಲಿಲ್ಲ.
bimba pratibimba“೧೯೯೦ರಲ್ಲಿ ನಾವು ಯಾವಾಗ ವಿಶ್ವ ವ್ಯಾಪಾರ ಸಂಘಟನೆ (ಡಬ್ಲುö್ಯಟಿಒ) ವ್ಯಾಪ್ತಿಗೆ ಒಳಪಟ್ಟೆವೋ ಆಗಿನಿಂದ ಹೊಸ ಹೊಸ ತಂತ್ರಜ್ಞಾನಗಳು ಕೃಷಿ ಕ್ಷೇತ್ರವನ್ನು ಪ್ರವೇಶಿಸಿದವು. ವಿಧವಿಧದ ಸಂಕರಣ ತಳಿಗಳು, ವಿಧವಿಧದ ಕೀಟನಾಶಕಗಳು, ಕಳೆನಾಶಕಗಳು, ಯಂತ್ರೋಪಕರಣಗಳು ಕೃಷಿ ಕ್ಷೇತ್ರವನ್ನು ಪ್ರವೇಶಿಸಿವೆ. ಇದರಿಂದ ಕೃಷಿ ಕ್ಷೇತ್ರದಲ್ಲಿ ಬಣ್ಣಿಸಲು ಆಗದಂತಹ ರೀತಿಯಲ್ಲಿ ಬದಲಾವಣೆಗಳು ಆಗಿವೆ. ಕೃಷಿಕರ ಮನಸ್ಥಿತಿಯೂ ಬದಲಾಗಿದೆ. ಇದೆಲ್ಲದರ ಪರಿಣಾಮವಾಗಿ ನಮ್ಮ ದೇಶದಲ್ಲಿ ಈವರೆಗೆ ಮೂರೂವರೆ ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ದೇಶದ ಎಲ್ಲ ರೈತರಿಗೂ ತಿಳಿದಿದೆ.
“ಇಂತಹ ಸಂದರ್ಭದಲ್ಲಿ ವಿಶ್ವ ವ್ಯಾಪಾರ ಸಂಘಟನೆ (ಡಬ್ಲುö್ಯಟಿಒ) ಮತ್ತು ದೇಶಿ ಮತ್ತು ವಿದೇಶಿ ಕಾರ್ಪೊರೇಟ್ ಕಂಪನಿಗಳ ಒತ್ತಡಕ್ಕೆ ಮಣಿದು ಈಗಿನ ಕಾಯ್ದೆಗಳನ್ನು ರೂಪಿಸಲಾಗಿದೆ. ಹೀಗಿದ್ದೂ ನಾವು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಮಿನಿಮಮ್ ಸಪೋರ್ಟ್ ಪ್ರೈಸ್‌- ಎಂಎಸ್‌ಪಿ) ದೊರೆಯುತ್ತಿಲ್ಲ. ನಮಗೆ ದೊರೆಯಬೇಕಾದ ಸಿ೨+೫೦% (ಕಾಂಪ್ರೆಹೆನ್ಸಿವ್ ಕಾಸ್ಟ್+ ೫೦%) ದೊರೆಯುತ್ತಿಲ್ಲ ಎಂಬುದು ಕೃಷಿಕರಿಗೆ ಮನವರಿಕೆ ಆಗಿದೆ. ಇವೆಲ್ಲವನ್ನೂ ಒಂದರೊಡನೆ ಒಂದು ಜೋಡಿಸಿ ನೋಡಿದ ನಂತರವೇ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಇದ್ಯಾವುದನ್ನೂ ಗಮನಕ್ಕೆ ತೆಗೆದುಕೊಳ್ಳದೇ ಕೋವಿಡ್-೧೯ರಂತಹ ಸಂಕಷ್ಟಮಯ ಪರಿಸ್ಥಿತಿಯಲ್ಲಿ ಈ ಮಸೂದೆಗಳಿಗೆ ಸಂಬಂಧಿಸಿದಂತೆ ಮೊದಲು ಸುಗ್ರೀವಾಜ್ಞೆಯನ್ನು ಜೂನ್ ತಿಂಗಳಲ್ಲಿ ತರಲಾಯಿತು. ನಂತರ ಸಂಖ್ಯಾಬಲ ಇಲ್ಲದಿದ್ದರೂ ರಾಜ್ಯ ಸಭೆಯಲ್ಲಿ ಅಸಂವೈಧಾನಿಕವಾಗಿ ಮಸೂದೆಗಳನ್ನು ಅಂಗೀಕರಿಸಲಾಯಿತು.
“ಈಗಿನ ಸ್ಥಿತಿಯನ್ನು ನಾನೊಬ್ಬ ವೈದ್ಯನಾಗಿ ವಿಶ್ಲೇಷಿಸುವುದಾದರೆ ಔಷಧ ಕಂಪನಿಗಳು ಆರೋಗ್ಯ ಕ್ಷೇತ್ರವನ್ನು ಹುನ್ನಾರಗಳನ್ನು ರೂಪಿಸಿ ಹೇಗೆ ತಮ್ಮ ಕೈಗೆ ತೆಗೆದುಕೊಂಡವೋ ಅಂಥದೇ ಪ್ರಯತ್ನ ಕೃಷಿ ಕ್ಷೇತ್ರವನ್ನು ತೆಗೆದುಕೊಳ್ಳಲು ನಡೆದಿದೆ. ಔಷಧ ಕಂಪನಿಗಳು ಪಾಶ್ಚಿಮಾತ್ಯ ಮತ್ತು ಅಮೆರಿಕದ ಮೊದಲಾದ ದೇಶಗಳನ್ನು ನಿಯಂತ್ರಿಸುತ್ತಿರುವ ರೀತಿಯಿಂದ ಅಲ್ಲಿ ಜನಸಾಮಾನ್ಯರಿಗೆ ಆರೋಗ್ಯ ಸೇವೆಯೂ ಈಗ ಭಾರೀ ತುಟ್ಟಿಯಾಗಿ ಪರಿಣಮಿಸಿದೆ. ಹೀಗಿದ್ದೂ ಅಲ್ಲಿ ಸಾಮಾಜಿಕ ಸುರಕ್ಷೆ ಇರುವುದರಿಂದ ಅಲ್ಲಿನ ಪ್ರಜೆಗಳು ಸಹಿಸಿಕೊಂಡಿದ್ದಾರೆ. ಒಂದೊಮ್ಮೆ ಕೃಷಿ ಕ್ಷೇತ್ರ ಕಾರ್ಪೊರೇಟ್ ಕಂಪನಿಗಳ ಕೈಗೆ ಸಿಕ್ಕಿದರೆ ಕೆಳಮಧ್ಯಮ ವರ್ಗದವರು ಮತ್ತು ಬಡವರು ತುತ್ತು ಅನ್ನಕ್ಕೂ ತತ್ವಾರ ಪಡಬೇಕಾದ ಸ್ಥಿತಿ ಸೃಷ್ಟಿಯಾಗುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ” ಎನ್ನುತ್ತಾರೆ ಡಾ. ದರ್ಶನ್ ಪಾಲ್. ಹೀಗಾಗಿಯೇ ಕಾರ್ಪೊರೇಟ್‌ ಕೈಗಳಿಗೆ ಕೃಷಿ ಹೋಗದಂತೆ ತಡೆಯಲು ಈ ಹೋರಾಟ ನಡೆದಿದೆ ಎಂದು ಅವರು ಹೇಳುತ್ತಾರೆ.

ಇಲ್ಲ ಎಂಎಸ್‌ಪಿ ಎಂಬ ಸುರಕ್ಷಾ ಕವಚ
ಕೃಷಿಕರು ಬೆಲೆಗಳ ಭರವಸೆಗೆ ಸಂಬಂಧಿಸಿದಂತೆ ರೈತರು ಎತ್ತಿರುವ ಪ್ರಶ್ನೆ ಏನೆಂದರೆ ಗುರುತಿಸಲ್ಪಟ್ಟಿರುವ ೨೩ ಕೃಷಿ ಉತ್ಪನ್ನಗಳ ವಿಚಾರವಾಗಿ ಮೊದಲು ಕನಿಷ್ಠ ಬೆಂಬಲ ಬೆಲೆಯನ್ನು (ಮಿನಿಮಮ್ ಸಪೋರ್ಟ್ ಪ್ರೈಸ್‌-ಎಂಎಸ್‌ಪಿ) ದೇಶಾದ್ಯಂತ ಕಾಯ್ದೆ ಬದ್ಧಗೊಳಿಸಿಲ್ಲ ಯಾಕೆ ಎಂದು. ದೇಶಾದ್ಯಂತ ಕಾಯ್ದೆ ಬದ್ಧಗೊಳಿಸಿ ಒಂದೊಮ್ಮೆ ಎಂಎಸ್‌ಪಿಗಿಂತ ಕಡಿಮೆ ಬೆಲೆಯಲ್ಲಿ ಯಾರಾದರೂ ಖರೀದಿಸಿದರೆ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು, ಕ್ರಿಮಿನಲ್ ಪ್ರಕರಣ ನಡೆಸಿ ದಂಡ ಮತ್ತು ಜೈಲು ಶಿಕ್ಷೆ ವಿಧಿಸುವ ಅವಕಾಶವನ್ನು ಕಾಯ್ದೆಯಲ್ಲಿ ಕಲ್ಪಿಸಿ ಎಂದೇ ರೈತರು ಒತ್ತಾಯಿಸುತ್ತಿದ್ದಾರೆ. ಅದಕ್ಕಾಗಿಯೇ ಈಗ ಕೃಷಿ ಕಾಯ್ದೆಗಳನ್ನು ಹಿಂಪಡೆದರೂ ರೈತರ ಹೋರಾಟ ಮುಂದುವರಿದಿರುವುದು.
ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೇಳುವುದೇನೆಂದರೆ- ಎಂಎಸ್‌ಪಿ ಹಿಂದೆಯೂ ಇತ್ತು, ಇಂದೂ ಇದೆ, ಮುಂದೆಯೂ ಇರಲಿದೆ. ಆದ್ದರಿಂದ ಕೃಷಿಕರು ಹೆದರಬೇಕಾದ ಅಗತ್ಯವಿಲ್ಲವೆಂದು ಅದು ಹೇಳುತ್ತದೆ.
ಆದರೆ ಕೃಷಿಕರು ಎತ್ತಿರುವ ಪ್ರಶ್ನೆ ಏನೆಂದರೆ- ಈ ಮುನ್ನ ಕೃಷಿ ಎನ್ನುವುದು ಸಂವಿಧಾನದ ಅನ್ವಯ ರಾಜ್ಯಗಳಿಗೆ ಸಂಬಂಧಿಸಿದ ವಿಷಯವಾಗಿತ್ತು. ರಾಜ್ಯಗಳು ತಮ್ಮ ತಮ್ಮ ಪರಿಸ್ಥಿತಿ ಮತ್ತು ಉತ್ಪನ್ನಗಳಿಗೆ ಅನುಗುಣವಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳನ್ನು (ಮೊದಲು ಇದ್ದದ್ದು ನಿಯಂತ್ರಿತ ಮಾರುಕಟ್ಟೆ ಸಮಿತಿ/ರೆಗ್ಯುಲೇಟೆಡ್ ಮಾರ್ಕೆಟ್ ಕಮಿಟಿ) ರಚಿಸುತ್ತಿದ್ದವು. ಅವುಗಳ ಮೂಲಕವೇ ಕೃಷಿ ಕ್ಷೇತ್ರದ ಆಗು-ಹೋಗುಗಳನ್ನು ಅವಲೋಕಿಸಿ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳುತ್ತಿದ್ದವು. ಆದರೆ ಈಗ ಇವುಗಳನ್ನೆಲ್ಲ ನಿಯಂತ್ರಿಸುವ ರೀತಿಯಲ್ಲಿ ಕೇಂದ್ರ ಸರ್ಕಾರ ಕಾಯ್ದೆಗಳನ್ನು ರೂಪಿಸಿದೆ. ಹಾಗಾಗಿಯೇ ರೈತರು ಅದರಲ್ಲೂ ದೇಶಕ್ಕೆ ಅಗತ್ಯವಿರುವ ಗೋದಿ, ಭತ್ತ ಉತ್ಪಾದಿಸಿ ಅನ್ನದ ಬಟ್ಟಲು ಎಂದೇ ಕರೆಸಿಕೊಳ್ಳುವ ಪಂಜಾಬ್, ಹರಿಯಾಣ ಹಾಗೂ ಪಶ್ಚಿಮ ಉತ್ತರ ಪ್ರದೇಶದ ಕೃಷಿಕರು ಸುಗ್ರೀವಾಜ್ಞೆ ಹೊರಡಿಸಿದ ದಿನದಿಂದಲೇ ಹೋರಾಟವನ್ನು ಆರಂಭಿಸಿದ್ದರು. ಸುಗ್ರೀವಾಜ್ಞೆ ಹೊರಡಿಸಿದ ಸಂದರ್ಭದಲ್ಲಿ ಕೊರೋನಾ ಹಾವಳಿ ವಿಪರೀತವಾಗಿದ್ದು, ದೇಶಕ್ಕೇ ದೇಶವೇ ಬೀಗ ಹಾಕಿಕೊಂಡು ಕುಳಿತಿದ್ದಾಗ ಅಲ್ಲಿನ ರೈತರು ತಮ್ಮ ತಮ್ಮ ಮನೆಗಳ ಮೇಲೆ ಪ್ರತಿದಿನವೂ ಸೇರಿ ಕಪ್ಪು ಬಾವುಟ ಪ್ರದರ್ಶಿಸುವುದಲ್ಲದೇ ಸರ್ಕಾರದ ನಿರ್ಧಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದುದಾಗಿ ಮಾಧ್ಯಮಗಳು ವರದಿ ಮಾಡಿತ್ತು. ಆ ವೇಳೆಗಾಗಲೇ ಅವರಿಗೆ ತಮ್ಮ ಅನ್ನದ ತಟ್ಟೆಗೆ ಸರ್ಕಾರ ಕೈ ಹಾಕಲಿರುವ ಅನುಮಾನ ದಟ್ಟವಾಗಿ ಕಾಡಿತ್ತು. ಅದೇ ಹೋರಾಟ ನಂತರ ದೆಹಲಿ ಗಡಿ ಭಾಗಕ್ಕೆ ಬಂದು ತಲುಪಿತು.
ಇವರ ಈ ಹೋರಾಟಕ್ಕೆ ಕಾರಣವೂ ಇದೆ. ಅದೇನೆಂದರೆ –ಎರಡೂ ರಾಜ್ಯಗಳಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ವ್ಯವಸ್ಥಿತವಾಗಿದ್ದು, ಈ ಮಾರುಕಟ್ಟೆಗಳನ್ನೇ ಅಲ್ಲಿನ ರೈತರು ನೆಚ್ಚಿಕೊಂಡಿದ್ದಾರೆ. ಹೀಗಿದ್ದೂ ಕನಿಷ್ಠ ಬೆಂಬಲ ಬೆಲೆಗಿಂತ ಅತ್ಯಲ್ಪ ಕಡಿಮೆ ಮೊತ್ತದ ಬೆಲೆ ಅಲ್ಲಿನ ರೈತರಿಗೆ ದೊರೆಯುತ್ತಿದೆ. ಇದಕ್ಕೆಲ್ಲ ಕಾರಣ ಮುಂಧೋರಣೆಯ ರೈತ ನಾಯಕ ಎನ್ನಿಸಿಕೊಂಡಿದ್ದ ಸರ್ ಛೋಟೂರಾಮ್. ಅಂದು ಇವರು ಕೃಷಿಕರ ಸಂಕಷ್ಟಗಳನ್ನು ದೂರಮಾಡಲು ಪ್ರಯತ್ನಿಸದೇ ಇದ್ದಿದ್ದರೆ ಇಂದಿಗೂ ಅಲ್ಲಿನ ಕೃಷಿಕರ ಸ್ಥಿತಿ ಹಾಗೆಯೇ ಇರುತ್ತಿತ್ತು. ಇಷ್ಟು ಮಾತ್ರವಲ್ಲ ಅಲ್ಲಿನ ವರ್ತಕರು ಇತರೆಡೆಯ ವರ್ತಕರಂತೆ ವರ್ತಿಸದೇ ಕೃಷಿಕರ ಏಳಿಗೆಯಲ್ಲೇ ತಮ್ಮ ಏಳಿಗೆಯನ್ನು ಸಾಧಿಸಿಕೊಂಡು ಬಂದಿರುವುದೂ ಅಲ್ಲಿನ ಮಾರುಕಟ್ಟೆ ಜಾಗತಿಕ ಮನ್ನಣೆ ಗಳಿಸಿರುವುದಕ್ಕೆ ಮತ್ತೊಂದು ಕಾರಣ.

ಪಂಜಾಬಿನ ಸುವ್ಯವಸ್ಥಿತ ಮಾರುಕಟ್ಟೆ
೭೭ ವರ್ಷದ ಬಲಬೀರ ಸಿಂಗ್ ರಾಜೇವಾಲ ಪಂಜಾಬಿನ ಹಿರಿಯ ರೈತ ನಾಯಕರಲ್ಲಿ ಒಬ್ಬರಾಗಿದ್ದು, ಓರ್ವ ಸ್ನಾತಕೋತ್ತರ ಪದವೀಧರ, ನಿವೃತ್ತ ಸೇನಾಧಿಕಾರಿ. ಪದವಿ ಶಿಕ್ಷಣಾನಂತರ ಇವರು ತಮ್ಮ ತಂದೆಯವರೊಡನೆ ಕೃಷಿಯಲ್ಲಿ ತೊಡಗಿದವರು. ಕೃಷಿಕರಿಗೆ ಆಗುವ ಅನ್ಯಾಯಗಳ ವಿರುದ್ಧ ಹೋರಾಟಗಳನ್ನು ರೂಪಿಸುತ್ತ ನಾಯಕರಾದವರು. ಇವರು ನ್ಯೂಸ್‌ಲಾಂಡ್ರಿ.ಕಾಂಗೆ ನೀಡಿದ ಸಂದರ್ಶನದಲ್ಲಿ ಹೇಳುವುದೇನೆಂದರೆ -“ಪಂಜಾಬ್ ಮತ್ತು ಹರಿಯಾಣದ ಎಪಿಎಂಸಿಗಳ ವಹಿವಾಟುದಾರರು ಇತರೆಡೆಯ ವಹಿವಾಟುದಾರರಿಗಿಂತ ಭಿನ್ನ. ಫಸಲು ಕೊಯ್ಲಾಗಿ ಮಾರುಕಟ್ಟೆಗೆ ಬಂದಾಗ ಅದನ್ನು ಯಂತ್ರಗಳನ್ನು ಬಳಸಿ ಸ್ವಚ್ಛಗೊಳಿಸುತ್ತಾರೆ. ಕಾಳುಗಳೊಂದಿಗೆ ಸೇರಿಕೊಂಡ ಕಸ-ಕಡ್ಡಿಗಳನ್ನು ಪ್ರತ್ಯೇಕಗೊಳಿಸುತ್ತಾರೆ. ತೂಕ ಹಾಕಿಸುತ್ತಾರೆ. ಚೀಲಗಳಿಗೆ ತುಂಬಿಸುತ್ತಾರೆ. ಈ ಎಲ್ಲ ಕಾರ್ಯಗಳಿಗೂ ಅವರು ಸೇವಾ ಶುಲ್ಕವಾಗಿ ಶೇಕಡಾ ಒಂದೂವರೆಯಷ್ಟು ಮೊತ್ತವನ್ನು ಪಡೆದುಕೊಳ್ಳುತ್ತಾರೆ. ಹಾಗಾಗಿ ನಾವು ಎಪಿಎಂಸಿ ವರ್ತಕರನ್ನು ದಲ್ಲಾಳಿಗಳೆಂದಾಗಲೀ, ಕಮೀಷನ್ ಏಜೆಂಟ್‌ಗಳೆಂದಾಗಲೀ ಗುರುತಿಸುವುದಿಲ್ಲ. ಇಷ್ಟು ಮಾತ್ರವಲ್ಲ ಸಂಕಷ್ಟದಲ್ಲಿರುವ ಕೃಷಿಕರಿಗೆ ಹಣಕಾಸೂ ಒಳಗೊಂಡಂತೆ ಎಲ್ಲ ಬಗೆಯ ಸಹಾಯವನ್ನೂ ಮಾಡುತ್ತಾರೆ. ಹಾಗಾಗಿಯೇ ನಮ್ಮದು ಜಗತ್ತಿನ ಮಾರುಕಟ್ಟೆಗಳ ಜಾಲದಲ್ಲಿಯೇ ಅತ್ಯುತ್ತಮ ಎನ್ನಿಸಿಕೊಂಡಿದೆ ಎಂದು ಅವರು ಹೇಳುತ್ತಾರೆ.
ಅದೇ ಸಂದರ್ಶನದಲ್ಲಿ ಅವರು ಹೇಳುವ ಮತ್ತೊಂದು ಮಹತ್ವದ ಅಂಶವೇನೆಂದರೆ “ಒಂದೊಮ್ಮೆ ದೊಡ್ಡ ದೊಡ್ಡ ಕಂಪನಿಗಳು ನಮ್ಮ ಮಾರುಕಟ್ಟೆ ಪ್ರವೇಶಿಸಿದರೆ ಮೊದಲು ಕೆಲವು ವರ್ಷ ನಿಗದಿತ ಬೆಲೆಗಿಂತ ಹೆಚ್ಚಿನ ಮೊತ್ತವನ್ನು ನೀಡಿ ಖರೀದಿಸುತ್ತವೆ. (ಸಂಗ್ರಾಹಕನ ಉದಾಹರಣೆ- ಪ್ರಸಕ್ತ ೨೦೨೦-೨೧ನೇ ಸಾಲಿನಲ್ಲಿ ಕೆಲವು ಕಂಪನಿಗಳು ನಮ್ಮ ರಾಜ್ಯದ ರಾಯಚೂರು ಜಿಲ್ಲೆಯಲ್ಲಿ ಭತ್ತವನ್ನು ನಿಗದಿತ ಬೆಲೆಗಿಂತ ಕ್ವಿಂಟಾಲಿಗೆ ೧೦೦ ರೂಪಾಯಿ, ಕಲಬುರ್ಗಿ ಜಿಲ್ಲೆಯಲ್ಲಿ ತೊಗರಿಯನ್ನು ಕ್ವಿಂಟಾಲ್‌ಗೆ ೧೦೦೦ ರೂಪಾಯಿ ಹೆಚ್ಚು ಬೆಲೆ ನೀಡಿ ಖರೀದಿಸಿದೆ. ಇದರಿಂದ ಎಷ್ಟು ಮಂದಿ ವರ್ತಕರು ಪ್ರಸಕ್ತ ಸಾಲಿನಲ್ಲಿ ಖರೀದಿ ನಿಲ್ಲಿಸಿದ್ದಾರೆ ಎಂಬ ದಾಖಲೆ ದೊರೆಯಬೇಕಿದೆ.) ಈ ಹಂತದಲ್ಲಿ ಸಣ್ಣ ಪ್ರಮಾಣದಿಂದ ಮಧ್ಯಮ ಪ್ರಮಾಣದ ವರೆಗೆ ಖರೀದಿಸುವ ಸಾಮರ್ಥ್ಯ ಹೊಂದಿದ ವರ್ತಕರು ಕೃಷಿ ಉತ್ಪನ್ನಗಳ ಖರೀದಿ ಪ್ರಕ್ರಿಯೆಯಿಂದ ಹೊರಗುಳಿಯುತ್ತಾರೆ. ಹೀಗೆ ದೂರ ಉಳಿಯುವುದರಿಂದ ಅವರ ಬಳಿ ಕೆಲಸ ಮಾಡುವ ಕಾರ್ಮಿಕರು ನಿರುದ್ಯೋಗಿಗಳಾಗುತ್ತಾರೆ. ಹೀಗೆಯೇ ಕೆಲ ವರ್ಷ ನಡೆಯುವುದರೊಳಗೆ ಎಪಿಎಂಸಿಗಳಲ್ಲಿ ಇರುವ ವರ್ತಕರು ಮಾರುಕಟ್ಟೆಯಿಂದ ದೂರವಾಗುತ್ತಾ ಹೋಗುತ್ತಾರೆ. ಇದರಿಂದ ಅವರ ಬಳಿಯಿರುವ ಕೆಲಸಗಾರರು ನಿರುದ್ಯೋಗಿಗಳಾಗುತ್ತಾರೆ. ಏಕೆಂದರೆ ದೊಡ್ಡ ದೊಡ್ಡ ಕಂಪನಿಗಳು ತಮ್ಮ ಖರೀದಿ ಪ್ರಕ್ರಿಯೆಯನ್ನು ಮಾರುಕಟ್ಟೆಯಿಂದ ಹೊರಗೆ ಯಾವುದೇ ತೆರಿಗೆ ನೀಡದೇ ಮಾಡುತ್ತವೆ; ಮತ್ತು ಅವು ಯಾಂತ್ರೀಕೃತ ಖರೀದಿ ಪ್ರಕ್ರಿಯೆಗೇ ಹೆಚ್ಚು ಒತ್ತು ಕೊಡುತ್ತವೆ. ಹೀಗೆ ಆಗುವುದರಿಂದ ನಿರುದ್ಯೋಗಿಗಳ ದೊಡ್ಡ ಸಮೂಹವೇ ಸೃಷ್ಟಿಯಾಗುತ್ತದೆ ಎಂದು ಅವರು ಹೇಳಿದ್ದಾರೆ.
ರಾಜೇವಾಲ ಅವರು ಹೇಳುವ ಪರಿಸ್ಥಿತಿ ನಮ್ಮೆದುರು ತಕ್ಷಣಕ್ಕೇ ಆಗುವುದಿಲ್ಲ. ಇದು ಅನಾವರಣಗೊಳ್ಳಲು ನಾಲ್ಕಾರು ವರ್ಷಗಳು ಬೇಕಾಗುತ್ತದೆ. ಅದು ಕಾಣಿಸಿಕೊಳ್ಳುವ ವೇಳೆಗೆ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಖರೀದಿಸುವ ವರ್ತಕರು ಕೊನೆಗಂಡಿರುತ್ತಾರೆ. ಏಕೆಂದರೆ ಇವರಿಗೆ ಕಂಪನಿಗಳೊಂದಿಗೆ ಜಿದ್ದಿಗೆ ಬಿದ್ದು ಖರೀದಿಸುವ ಸಾಮರ್ಥ್ಯವೂ ಇರುವುದಿಲ್ಲ, ಆಳುವವರ ಬೆಂಬಲವೂ ಇರುವುದಿಲ್ಲ. ಆ ವೇಳೆಗೆ ಕಂಪನಿಗಳು ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸಾಧಿಸಿರುತ್ತವೆ. ಇದಾದ ನಂತರ ಕಂಪನಿಗಳು ತಮ್ಮ ಮುಖವಾಡಗಳನ್ನು ಕಳಚಲು ಆರಂಭಿಸುತ್ತವೆ. ತಾವು ಬಯಸುವ ಗುಣಮಟ್ಟವಿದ್ದರೆ ಮಾತ್ರ ತಾವು ಹೇಳಿದ ಬೆಲೆಗೆ ಖರೀದಿಸಲು ಆರಂಭಿಸುತ್ತವೆ.

ಅರೆಪ್ರಜ್ಞಾವಸ್ಥೆಯಲ್ಲಿ ಬಿಎಸ್‌ಎನ್‌ಎಲ್ ಉದಾಹರಣೆ
ಇದಕ್ಕೆ ಉದಾಹರಣೆಯನ್ನು ನೀಡಬೇಕೆಂದರೆ –ಮೊಬೈಲ್ ಸಂಪರ್ಕ. ಇದು ಆರಂಭವಾದ ವರ್ಷಗಳಲ್ಲಿ ಬಿಎಸ್‌ಎನ್‌ಎಲ್ ಮಾತ್ರ -ಸರ್ಕಾರಿ ಕ್ಷೇತ್ರದ್ದಾಗಿಯೂ- ಏಕಸ್ವಾಮ್ಯ ಸ್ಥಾಪಿಸಿಕೊಳ್ಳಲು ಪ್ರಯತ್ನಿಸಿತು. ಯಾವಾಗ ಖಾಸಗಿ ಕ್ಷೇತ್ರದ ಏರ್‌ಟೆಲ್, ರಿಲಯನ್ಸ್, ವೊಡಾಫೋನ್, ಐಡಿಯಾ ಇತ್ಯಾದಿಗಳಿಗೆ ಪ್ರವೇಶ ದೊರಕಿತೋ ಅವು ಮಾಡಿದ ಮೊದಲ ಕೆಲಸವೆಂದರೆ ಬಿಎಸ್‌ಎನ್‌ಎಲ್ ಅನ್ನೇ ದುರ್ಬಲಗೊಳಿಸಿದ್ದು, ತಮ್ಮ ಸಿಗ್ನಲ್‌ ಗಳಿಗಾಗಿ ಬಿಎಸ್‌ಎನ್‌ಎಲ್‌ ಟವರ್‌ಗಳನ್ನು ಬಾಡಿಗೆ ಪಡೆದು ಕಾರ್ನಿರ್ವಹಿಸತೊಡಗಿದರು.ಇದು ಕ್ರಮೇಣ ಬಿಎಸ್‌ಎನ್‌ಎಲ್‌ ಸಂಪರ್ಕ ಹೊಂದಿದ ಗ್ರಾಹಕರಿಗೆ ಮಾತನಾಡಲೂ ಅವಕಾಶ ಸಿಕ್ಕದಂತೆ ನೆಟ್‌ವರ್ಕ್ ಸಮಸ್ಯೆ ತಂದೊಡ್ಡಿತು. ಇದರಿಂದ ಗ್ರಾಹಕರು ಬಿಎಸ್‌ಎನ್‌ಎಲ್ -ದೇಶಾದ್ಯಂತ ಜಾಲ ಹೊಂದಿದ್ದರೂ- ಸೇವೆಗಳ ಬಗೆಗೆ ಬೇಸರಗೊಳ್ಳತೊಡಗಿದರು. ಎಲ್ಲರ ಕೈಯಲ್ಲೂ ಖಾಸಗಿ ಕಂಪನಿಗಳ ಸಿಮ್ ಹೊಂದಿದ ಮೊಬೈಲ್ ಫೋನ್‌ಗಳು ಬಂದವು. ಕ್ರಮೇಣ ಬಿಎಸ್‌ಎನ್‌ಎಲ್ ರೋಗಗ್ರಸ್ತವಾಗತೊಡಗಿತು. ಇತ್ತೀಚೆಗೆ ಇದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಆಗಿದೆ.
ಈಗ್ಗೆ ಎರಡು ವರ್ಷಗಳ ಹಿಂದೆ ರಿಲಯನ್ಸ್ ಗುಂಪಿನ ಜಿಯೋ ಮೊಬೈಲ್ ಮಾರುಕಟ್ಟೆಗೆ ಬಂತು. ಜಿಯೋ ಸಹ ಈ ಹಿಂದೆ ಇತರೆ ಖಾಸಗಿ ಕಂಪನಿಗಳು ಮಾಡಿದ್ದನ್ನೇ ಮಾಡಿತು. ಇಷ್ಟು ಮಾತ್ರವಲ್ಲ ಒಂದು ಹೆಜ್ಜೆ ಮುಂದೆ ಹೋಗಿ ದರ ಸಮರಕ್ಕೆ ಇಳಿಯಿತು. ಅತ್ಯಂತ ಸಸ್ತಾ ಇಲ್ಲವೇ ನಗಣ್ಯ ದರದಲ್ಲಿ ಜಿಯೋ ನೆಟ್‌ವರ್ಕ್ ಸಂಪರ್ಕ ಒದಗಿಸಿತು. ಇದರಿಂದ ಮೊದಲೇ ಹಣ್ಣುಗಾಯಿ-ನೀರುಗಾಯಿ ಆಗಿದ್ದ ಬಿಎಸ್‌ಎನ್‌ಎಲ್ ಅನ್ನು ಕೇಳುವವರೇ ಇಲ್ಲದಂತಾಯಿತು. ಅದಾಗಲೇ ಮೊಬೈಲ್ ಸೇವಾ ಕ್ಷೇತ್ರದಲ್ಲಿ ನೆಲೆಯೂರಿದ್ದ ಕಂಪನಿಗಳೂ ತತ್ತರಿಸತೊಡಗಿದವು. ಯಾವಾಗ ಎಲ್ಲರ ಕೈಯಲ್ಲೂ ಜಿಯೋ ನೆಟ್‌ವರ್ಕ್ನ ಸಿಮ್ ಇರುವ ಸ್ಥಿತಿ ನಿರ್ಮಾಣವಾಯಿತೋ ಆಗ ರಿಲಯನ್ಸ್ ತನ್ನ ನೆಟ್‌ವರ್ಕ್ ಬಳಕೆದಾರರಿಂದ ಇತರರು ನಿಗದಿ ಪಡಿಸಿದ್ದ ದರ ದರ ಆಕರಿಸತೊಡಗಿತು.

ಇದು ಹೊಟ್ಟೆಗೆ ಸಂಬಂಧಿಸಿದ ಸಂಗತಿ
ಸ್ಪರ್ಧಾತ್ಮಕತೆ ಹೆಸರಿನಲ್ಲಿ ಆಗುವ ಅವಾಂತರಕ್ಕೆ ಇದೊಂದು ತಾಜಾ ಉದಾಹರಣೆಯಷ್ಟೇ. ಇಲ್ಲಿ ನಮ್ಮ ಜೀವನಕ್ಕೆ ಸಂಬಂಧಿಸಿದ ವಿಷಯವಿದ್ದರೂ ಹೊಟ್ಟೆಗೆ ಸಂಬಂಧಿಸಿದ ವಿಷಯ ನೇರವಾಗಿ ಇಲ್ಲ. ಆದರೆ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಕ್ಕೆ ಬಂದರೆ ಅದು ನೇರವಾಗಿ ನಮ್ಮ ಹೊಟ್ಟೆಗೇ ಸಂಬಂಧಿಸಿದ ವಿಷಯವಾಗಿರುತ್ತದೆ. ಒಂದೊಮ್ಮೆ ಕೃಷಿ ಮಾರುಕಟ್ಟೆಯಲ್ಲಿ ಪಾಶ್ಚಿಮಾತ್ಯ ದೇಶಗಳಲ್ಲಿ ಇರುವಂತೆ- ಕಾರ್ಪರೇಟ್‌ ಏಕಸ್ವಾಮ್ಯವೇನಾದರೂ ಆಗಿಬಿಟ್ಟರೆ ಆಗ ನಮ್ಮ ಆಹಾರ ಭದ್ರತೆ ಕಾನೂನು ಧೂಳೀಪಟ ಆಗುತ್ತದೆ. ನ್ಯಾಯಬೆಲೆ ಅಂಗಡಿಗಳು ಬಾಗಿಲು ಮುಚ್ಚುತ್ತವೆ. ಆಹಾರ ಮತ್ತು ನಾಗರಿಕ ಸರಬರಾಜು ವ್ಯವಸ್ಥೆಯೇ ಬುಡಸಮೇತ ನೆಲಕ್ಕೆ ಉರುಳುತ್ತದೆ. ಇದನ್ನೇ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ಕೃಷಿಕರು ಹೇಳಿದ್ದು ಹಾಗೂ ಹೇಳುತ್ತಿರುವುದು. ಅವರು ಇದನ್ನು ವ್ಯಾಪಾರದ ದೃಷ್ಟಿಯಲ್ಲಷ್ಟೆ ನೋಡಬೇಡಿ ಎನ್ನುತ್ತಾರೆ.
ಈ ಕಾಯ್ದೆಯ ಎರಡನೇ ಭಾಗ ಹೇಳುವುದೇನೆಂದರೆ –ಒಪ್ಪಂದದ ಸಂದರ್ಭದಲ್ಲಿಯೇ ಯಾವ ಫಸಲನ್ನು, ಯಾವ ಸಮಯಕ್ಕೆ, ಯಾವ ಗುಣಮಟ್ಟದ್ದು, ಯಾವ ದರ್ಜೆಯದು, ಯಾವ ಗುಣಲಕ್ಷಣಗಳದ್ದು, ಎಷ್ಟು ದರದ್ದು ಮತ್ತು ಇತರೆ ವಿಷಯಕ್ಕೆ ಸಂಬಂಧಿಸಿದಂತೆ ಬೆಳೆಗಾರ ಮತ್ತು ಪ್ರಾಯೋಜಕರ ಮಧ್ಯೆ ಲಿಖಿತ ಒಪ್ಪಂದವನ್ನು ಮಾಡಿಕೊಳ್ಳತಕ್ಕದ್ದು ಎಂದು.
ಇದರ ಅನ್ವಯ ಫಸಲನ್ನು ಉತ್ಪಾದಿಸಿ ಕೊಡಲು ಅಗತ್ಯವಿರುವ ಪರಿಕರಗಳನ್ನು ಪ್ರಾಯೋಜಕ ಬೆಳೆಗಾರನಿಗೆ ಒದಗಿಸುವುದು. ಈ ಒಪ್ಪಂದವು ಕನಿಷ್ಠ ಒಂದು ಬೆಳೆಗೆ ಅಥವಾ ಪಶು ಸಂಗೋಪನೆಗೆ ಸಂಬಂಧಿಸಿದ್ದಾಗಿದ್ದರೆ ಒಂದು ಉತ್ಪಾದನಾ ಆವರ್ತನದ ಅವಧಿಗೆ ಮಾಡಿಕೊಳ್ಳತಕ್ಕದ್ದು, ಈ ಅವಧಿಯು ಐದು ವರ್ಷಗಳವರೆಗಿನದೂ ಆಗಿರಬಹುದು.
ಒಪ್ಪಂದ ಕೃಷಿಗೆ ಆಡಳಿತಗಾರರ ಶ್ರೀರಕ್ಷೆ
ಯಾವ ಫಸಲನ್ನು ಬೆಳೆದುಕೊಡಲು ಒಪ್ಪಂದ ಮಾಡಿಕೊಳ್ಳಲಾಗಿದೆಯೋ ಅದನ್ನು, ನಿಗದಿತ ಸಮಯದಲ್ಲಿ ನಿಗದಿತ ಗುಣಮಟ್ಟ, ದರ್ಜೆ, ಗುಣಲಕ್ಷಣಗಳನ್ನು ಹೊಂದಿರುವಂತೆ ಉತ್ಪಾದಿಸಿ ಕೊಡುವುದು ಒಪ್ಪಂದ ಮಾಡಿಕೊಂಡ ಬೆಳೆಗಾರನಿಗೆ ಸಂಬಂಧಿಸಿದ್ದು, ಇದಕ್ಕೆ ಅಗತ್ಯವಿರುವ ಎಲ್ಲ ಪರಿಕರಗಳನ್ನು ಪ್ರಾಯೋಜಕ ಬೆಳೆಗಾರನಿಗೆ ಒದಗಿಸತಕ್ಕದ್ದು.
ಇದಾದ ನಂತರದಲ್ಲಿ ಬೆಳೆಗಾರ ಒಪ್ಪಂದದಲ್ಲಿ ಉಲ್ಲೇಖಿಸಲಾಗಿರುವಂತೆ ಫಸಲನ್ನು ಒದಗಿಸಿದ ಸಂದರ್ಭದಲ್ಲಿ ಪ್ರಾಯೋಜಕ ನಿಗದಿತ ದರದ ಪೈಕಿ ಮೂರನೇ ಎರಡು ಭಾಗ ಮೊತ್ತವನ್ನು ಬೆಳೆಗಾರನಿಗೆ ಪಾವತಿಸತಕ್ಕದ್ದು, ಉಳಿದ ಮೊತ್ತವನ್ನು ಬೆಳೆ ಒಪ್ಪಂದದ ಅನ್ವಯ ಇದೆಯೇ ಎಂಬುದನ್ನು ಖಾತ್ರಿಪಡಿಸುವ ಪ್ರಮಾಣೀಕರಣ ಸಂದರ್ಭದಲ್ಲಿ ಪಾವತಿಸತಕ್ಕದ್ದು, ಈ ಅವಧಿ ೩೦ ದಿನಗಳಿಗೆ ಮೀರುವಂತಿಲ್ಲ ಎಂದು ಕಾಯ್ದೆಯಲ್ಲಿ ಹೇಳಲಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಕೃಷಿಕರು ಎತ್ತಿರುವ ಪ್ರಶ್ನೆ ಏನೆಂದರೆ -ಬೆಳೆದು ಕೊಡಲಾದ ಫಸಲನ್ನು ಒಪ್ಪಂದದಂತೆ ಇಲ್ಲ ಎಂದು ಪ್ರಾಯೋಜಕ ತಿರಸ್ಕರಿಸಿದಲ್ಲಿ ಅದನ್ನು ಪ್ರಶ್ನಿಸಲು ಕೃಷಿಕ ನ್ಯಾಯಾಲಯದ ಮೆಟ್ಟಿಲನ್ನು ಏರುವಂತಿಲ್ಲ. ಬದಲಾಗಿ ಉಪವಿಭಾಗಾಧಿಕಾರಿ ಬಳಿ ಅರ್ಜಿ ಸಲ್ಲಿಸಬೇಕು. ತಕರಾರು ಇತ್ಯರ್ಥಕ್ಕೆ ಉಪವಿಭಾಗಾಧಿಕಾರಿ ರಚಿಸುವ ಸಮಿತಿ ಕ್ರಮ ಕೈಗೊಳ್ಳುತ್ತದೆ. ಇದನ್ನು ಹೆಚ್ಚೆಂದರೆ ಜಿಲ್ಲಾಧಿಕಾರಿ ಅಥವಾ ಹೆಚ್ಚುವರಿ ಜಿಲ್ಲಾಧಿಕಾರಿಯ ಬಳಿ ಆದೇಶ ನೀಡಲ್ಪಟ್ಟ ೩೦ ದಿನಗಳೊಳಗೆ ಪ್ರಶ್ನಿಸಬಹುದು. ಮುಂದಿನ ೩೦ ದಿನಗಳೊಳಗೆ ಮೇಲ್ಮನವಿ ಪ್ರಾಧಿಕಾರಿಯು ಆದೇಶವನ್ನು ಹೊರಡಿಸಬೇಕೆಂದು ಕಾಯ್ದೆಯಲ್ಲಿ ಹೇಳಲಾಗಿದೆ. ನಮ್ಮಲ್ಲಿನ ಅಧಿಕಾರಿಗಳು ಮತ್ತು ಸರ್ಕಾರಿ ನೌಕರರು ಹೇಗೆ ಇದ್ದಾರೆ ಎಂಬುದು ನಮಗೆ ತಿಳಿದೇ ಇದೆ. ಅವರು ಪ್ರಬಲರ ಹಣದ ಮುಂದೆ ಮಣಿದು ಬೇಸಾಯಗಾರರ ವಿರುದ್ಧ ಆದೇಶ ನೀಡುವುದಿಲ್ಲ ಎಂದು ಹೇಗೆ ನಂಬುವುದು? ಹೀಗೆ ಆದಾಗ ಕೃಷಿಕರು ಎಲ್ಲಿಗೆ ಹೋಗುವುದು. ಆದ ನಷ್ಟವನ್ನು ಹೇಗೆ ತುಂಬಿಕೊಡುವುದು. ಒಂದೊಮ್ಮೆ ತುಂಬಿಕೊಡಲು ಸಾಧ್ಯವಾಗದಿದ್ದಲ್ಲಿ ಸ್ಥಿತಿವಂತರಾದ ಪ್ರಾಯೋಜಕರು ನಮ್ಮ ಭೂಮಿಯ ಮೇಲೆ ಕಣ್ಣು ಹಾಕುವುದಿಲ್ಲ ಎಂದು ಹೇಗೆ ನಂಬುವುದು ಎನ್ನುತ್ತಾರೆ ಕೃಷಿಕರು.
ಇಷ್ಟು ಮಾತ್ರವಲ್ಲ ಉಪವಿಭಾಗಾಧಿಕಾರಿ ಮತ್ತು ಮೇಲ್ಮನವಿ ಪ್ರಾಧಿಕಾರಿಗಳ ಆದೇಶದ ನಂತರ ಯಾವುದೇ ದಿವಾಣಿ ನ್ಯಾಯಾಲಯ ಇಂತಹ ಪ್ರಕರಣಗಳನ್ನು ದಾಖಲಿಸಿಕೊಳ್ಳುವಂತಿಲ್ಲ. ಕಾಯ್ದೆಯ ಅನ್ವಯ ಅಥವಾ ಕಾಯ್ದೆಯ ಅಡಿಯಲ್ಲಿ ರೂಪಿಸಲಾದ ನಿಯಮಾವಳಿಗಳನ್ವಯ ನೀಡಲಾದ ಆದೇಶಕ್ಕೆ ತಡೆಯಾಜ್ಞೆ ನೀಡುವಂತಿಲ್ಲ.. (ಮುಂದುವರಿಯುವುದು)

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement