ಸರಣಿ ಲೇಖನ-ಕೃಷಿ ಕಾನೂನಿನಲ್ಲಿ ಕೃಷಿ ಉತ್ಪನ್ನಗಳ ಪಟ್ಟಿಯಲ್ಲಿ ಆಹಾರ ಸಾಮಗ್ರಿ- ತೈಲ ಸಹ ಸೇರ್ಪಡೆ

ಲೇಖನ-ಎಚ್‌.ಆರ್‌.ಸುರೇಶ, ಮಾಜಿ ಸ್ಥಾನಿಕಸಂಪಾದಕರು ಸಂಯುಕ್ತ ಕರ್ನಾಟಕ- ಹುಬ್ಬಳ್ಳಿ

(ಕಳೆದ ಒಂದು ವರ್ಷದಿಂದ ರೈತರು ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ ಒಂದು ವರ್ಷದಿಂದ ದೇಶದ ರಾಜಧಾನಿ ದಿಲ್ಲಿಯ ಗಡಿಯಲ್ಲಿ ಗಜಮ್ಮನೆ ಕುಳಿತುಬಿಟ್ಟಿದ್ದಾರೆ.ಕೃಷಿ ಕಾಯ್ದೆಗಳನ್ನು ಅಂಗೀಕರಿಸಿರುವ ಕೇಂದ್ರ ಸರ್ಕಾರದ ಈ ಕಾಯ್ದೆಗಳು ಸಣ್ಣ ಮತ್ತು ಮಧ್ಯಮ ಹಿಡುವಳಿದಾರ ರೈತರ ಸಂಕಷ್ಟಗಳನ್ನು ನಿವಾರಿಸುವ ಮತ್ತು ಅವರನ್ನು ಆರ್ಥಿಕವಾಗು ಸದೃಢಗೊಳಿಸುವ ಉದ್ದೇಶ ಹೊಂದಿದ್ದವು ಎಂದು ಕೇಂದ್ರ ಸರ್ಕಾರ ಸಾರಿಸಾರಿ ಹೇಳಿದರೂ ಅವರು ಕಳೆದು ಒಂದು ವರ್ಷದಿಂದ ನಿರಂತರವಾಗಿ ದೆಹಲಿ ಗಡಿಯಲ್ಲಿ ಬಂಡೆಗಲ್ಲಿನಂತೆ ಕುಳಿತು ರಾಷ್ಟ್ರಪತಿ ಅನುಮೋದನೆ ಪಡೆದಕೃಷಿ ಕಾಯ್ದೆಯನ್ನೇ ಸರ್ಕಾರ ಹಿಂಪಡೆಯುವಂತೆ ಮಾಡಿದ್ದಾರೆ.
ಅವರು ಇಷ್ಟು  ಅವಧಿಗೆ ಯಾಕಾಗಿ ಹೋರಾಟ ಮಾಡಿದರು..? ಈ ಮೂರು ಕೃಷಿ ಕಾಯ್ದೆಗಳಲ್ಲಿದ್ದ ಯಾವೆಲ್ಲ ಅಂಶಗಳು ರೈತರ ಹೋರಾಟಕ್ಕೆ ಕಾರಣವಾದವು ಎಂಬುದರ ಬಗ್ಗೆ ಸಂಯುಕ್ತ ಕರ್ನಾಟಕದ ಮಾಜಿ ಸ್ಥಾನಿಕ ಸಂಪಾದಕರಾದ ಎಚ್.ಆರ್.ಸುರೇಶ ಅವರು ಈ ಮೂರು ಕೃಷಿ ಕಾಯ್ದೆಗಳ ಪ್ರಮುಖ ಅಂಶಗಳ ಬಗ್ಗೆ ವಿಶ್ಲೇಷಿಸಿದ್ದಾರೆ. ಅದನ್ನು ಇಂದಿನಿಂದ ಸರಣಿ ಲೇಖನ ರೂಪದಲ್ಲಿ ನೀಡಲಾಗುತ್ತಿದೆ)

 

 

 

         ಭಾಗ-3

             (ನಿನ್ನೆಯಿಂದ ಮುಂದುವರಿದಿದೆ..)

 

ಎರಡನೆಯದು ಕೃಷಿ ಉತ್ಪಾದನೆಯ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ-೨೦೨೦

ಇದರಲ್ಲಿ ಕೃಷಿ ಉತ್ಪನ್ನ, ವಿದ್ಯುನ್ಮಾನ ವ್ಯಾಪಾರ ಮತ್ತು ವಹಿವಾಟು ಕಟ್ಟೆ, ಕೃಷಿಕ, ಕೃಷಿಕರ ಉತ್ಪಾದನಾ ಸಂಘಟನೆಗಳು, ಅಂತಾರಾಜ್ಯ ವ್ಯಾಪಾರ, ಆಂತರಿಕ ರಾಜ್ಯ ವಹಿವಾಟು ಮತ್ತಿತರೆ ಅಂಶಗಳು ಅಳವಡಿಕೆಯಾಗಿವೆ.

ಕೃಷಿ ಉತ್ಪನ್ನಗಳ ಪಟ್ಟಿಯಲ್ಲಿ ಗೋದಿ, ಅಕ್ಕಿ ಅಥವಾ ಏಕದಳ ಧಾನ್ಯಗಳು, ದ್ವಿದಳ ಧಾನ್ಯಗಳು, ಖಾದ್ಯ ತೈಲಬೀಜಗಳು, ಸಾಂಬಾರ ಪದಾರ್ಥಗಳು, ಹಣ್ಣುಗಳು, ಕಬ್ಬು, ಇತ್ಯಾದಿಗಳೊಂದಿಗೆ `ಆಹಾರ ಸಾಮಗ್ರಿ’ ಮತ್ತು `ತೈಲ’ಗಳನ್ನೂ ಸೇರಿಸಲಾಗಿದೆ. ವಾಸ್ತವವಾಗಿ ಕೃಷಿಕರು ಆಹಾರ ಸಾಮಗ್ರಿಗಳನ್ನಾಗಲೀ, ತೈಲವನ್ನಾಗಲೀ ಬೆಳೆಯುವುದಿಲ್ಲ. ಅವರೇನಿದ್ದರೂ ಆಹಾರ, ತೈಲವನ್ನು ತಯಾರಿಸಬಹುದಾದ ಧಾನ್ಯ, ಹಣ್ಣು, ಕಾಯಿಗಳನ್ನು ಬೆಳೆಯುತ್ತಾರೆ. ಹಾಗಾಗಿಯೇ ಈ ವಿಚಾರಕ್ಕೆ ಸಂಬಂಧಿಸಿದಂತೆ ರೈತ ನಾಯಕ ರಾಜೇವಾಲ ತಕರಾರು ಎತ್ತಿದ್ದು, ಆಹಾರ ಸಾಮಗ್ರಿಗಳನ್ನು ಬೆಳೆದುಕೊಡುವವರು ಎಂದು ಏಕೆ ಉಲ್ಲೇಖಿಸಲಾಗಿದೆ ಎಂದು ಪ್ರಶ್ನಿಸಿದ್ದಾರೆ.

ಆನ್‌ಲೈನ್ ಖರೀದಿ ಮತ್ತು ಮಾರಾಟಕ್ಕಾಗಿ ವಿದ್ಯುನ್ಮಾನ ವ್ಯಾಪಾರ ಮತ್ತು ವಹಿವಾಟು ವೇದಿಕೆಯನ್ನು ನಿರ್ಮಿಸಿ ವಿದ್ಯುನ್ಮಾನ ಉಪಕರಣಗಳನ್ನು ಮತ್ತು ಅಂತರ್ಜಾಲ ಸಂಪರ್ಕ ಹೊಂದಿದ ಅಪ್ಲಿಕೇಷನ್‌ಗಳನ್ನು ಬಳಸುವ ಜಾಲ ರೂಪಿಸುವಂತೆ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ.

ಅಂತಾರಾಜ್ಯ ಮತ್ತು ಆಂತರಿಕ ರಾಜ್ಯ ವಹಿವಾಟು ಮತ್ತು ವಾಣಿಜ್ಯ ಚಟುವಟಿಕೆಗಳಲ್ಲಿನ ವ್ಯಕ್ತಿಗಳ ಹೊರತುಪಡಿಸಿ ಯಾವುದೇ ವ್ಯಕ್ತಿ ಆದಾಯ ತೆರಿಗೆ ಕಾಯ್ದೆ-೧೯೬೧ರ ಅಡಿಯಲ್ಲಿ ಪ್ಯಾನ್ (ಪರ್ಮನೆಂಟ್ ಅಕೌಂಟ್ ನಂಬರ್) ಹೊಂದಿದವರು ಪಾಲ್ಗೊಳ್ಳಬಹುದು ಎಂದು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದು ಕೃಷಿಕರಲ್ಲಿ ಹಲವು ವಿಧದ ಶಂಕೆಗಳಿಗೆ ಅವಕಾಶ ಕಲ್ಪಿಸಿದೆ.

 

೨೦೧೭ರಲ್ಲೇ ನಡೆದಿತ್ತು ಸಿದ್ಧತೆ

ಕೃಷಿಕರ ಈ ಅನುಮಾನವನ್ನು ಪುಷ್ಟೀಕರಿಸುವಂತಹ ಘಟನೆಯೊಂದು ೨೦೧೭ರ ಅಕ್ಟೋಬರ್ ತಿಂಗಳಲ್ಲಿಯೇ ನಡೆದಿರುವುದನ್ನು ರೈತ ನಾಯಕ ಬಲಬೀರ ಸಿಂಗ್ ರಾಜೇವಾಲ ಪಂಜಾಬಿನ ಜಾಗ್ರಾವ್‌ನಲ್ಲಿ ನಡೆದ ಕೃಷಿಕ ಪಂಚಾಯತಿಯಲ್ಲಿ ತೆರೆದಿಟ್ಟಿದ್ದಾರೆ. ಅವರು ಏನು ಹೇಳಿದ್ದಾರೆ ಎಂಬುದರ ವಿಸ್ತೃತ ಭಾವಾನುವಾದ ಇಲ್ಲಿದೆ.

“ನಾನು ಮಾತನಾಡಲು ಆರಂಭಿಸುವ ಮುನ್ನ ಒಂದು ಘಟನೆಯನ್ನು ನಿಮ್ಮ ಮುಂದೆ ಇರಿಸಲು ಬಯಸುತ್ತೇನೆ. ಇದು ಇಂದಿನ ಈ ಆಂದೋಲನಕ್ಕೆ ಕಾರಣ ಏನೆಂಬುದನ್ನು ತೆರೆದಿಡುತ್ತದೆ. ಅಕ್ಟೋಬರ್ ೨೦೧೭ರಲ್ಲಿ ಕೇಂದ್ರದ ನೀತಿ ಆಯೋಗ ದಿಲ್ಲಿಯಲ್ಲಿ ಸಭೆಯೊಂದನ್ನು ಆಯೋಜಿಸಿತ್ತು. ರೈತರ ಪ್ರತಿನಿಧಿಯಾಗಿ ನಾನು ಅದರಲ್ಲಿ ಪಾಲ್ಗೊಂಡಿದ್ದೆ. ಸಭೆಯಲ್ಲಿ ೧೦೦ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಇವರಲ್ಲಿ ಬಹಳಷ್ಟು ಕಂಪನಿಗಳ ಮಾಲೀಕರು, ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು, ಸರ್ಕಾರದ ಪರವಾಗಿದ್ದ ಅರ್ಥಶಾಸ್ತ್ರಜ್ಞರು, ಅಧಿಕಾರಿಗಳು ಭಾಗವಹಿಸಿದ್ದರು. ಸಭೆಯ ಉದ್ದೇಶ ಏನಾಗಿತ್ತೆಂದರೆ ಕೃಷಿ ಕ್ಷೇತ್ರ ಸಮಸ್ಯೆ. ಆ ಸಮಸ್ಯೆಗಳ ನಿವಾರಣೆ ಹೇಗೆಂಬುದು ಮುಖ್ಯ ಪ್ರಶ್ನೆಯಾಗಿತ್ತು. ಸಭೆಯ ಆರಂಭದಲ್ಲಿ ಸರ್ಕಾರದ ಪರವಾದ ಅರ್ಥಶಾಸ್ತ್ರಜ್ಞರೊಬ್ಬರು ಕ್ಷೇತ್ರದ ಸಮಸ್ಯೆಗಳಿಂದಾಗಿ ಕೃಷಿಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತಡೆಯಬೇಕೆಂದರೆ ಕೃಷಿ ಕ್ಷೇತ್ರದ ಪುನರುಜ್ಜೀವನಕ್ಕೆ ಅಗತ್ಯವಿರುವ ಬಂಡವಾಳ ಬೇಕಾಗಿದೆ. ಖಾಸಗಿ ಕ್ಷೇತ್ರದ ಕಂಪನಿಗಳು ಬಂಡವಾಳ ತೊಡಗಿಸಲು ಮುಂದೆ ಬರಬೇಕೆಂದು ವಿನಂತಿಸಿದರು.

ಭೂಮಿ ನಮಗೆ ಕೊಡಿ ಎನ್ನುವ ಕಾರ್ಪೊರೇಟ್

“ಇವರ ಮಾತು ಮುಗಿಯುತ್ತಿದ್ದಂತೆಯೇ ಕಂಪನಿಯೊಂದರ ಸಿಇಒ ಒಬ್ಬರು ಮಾತಿಗಾರಂಭಿಸಿ ನಾವು ಕೃಷಿ ಕ್ಷೇತ್ರದಲ್ಲಿ ಬಂಡವಾಳ ತೊಡಗಿಸಲು ಸಿದ್ಧರಿದ್ದೇವೆ. ಆದರೆ ಬಂಡವಾಳ ತೊಡಗಿಸಲು ನಮ್ಮದೊಂದು ಷರತ್ತಿದೆ. ಅದೆಂದರೆ ನಮಗೆ ಐದೈದು ಸಾವಿರ, ಏಳೇಳು ಸಾವಿರ ಎಕರೆಯಷ್ಟು ಭೂಮಿಯ ಗುಂಪನ್ನು ಮಾಡಿ ನಮಗೆ ಕೊಡಿ. ಏಕೆಂದರೆ ಯಾರದೋ ಐದು ಎಕರೆ ಭೂಮಿ ಇದೆ. ಮತ್ಯಾರದೋ ಹತ್ತು ಎಕರೆ ಭೂಮಿ ಇದೆ, ಇನ್ಯಾರದೋ ೨೦-೨೫ ಎಕರೆ ಭೂಮಿ ಇದೆ. ಇವರ ಭೂಮಿಯನ್ನೆಲ್ಲ ಸೇರಿಸಿ ನಾವು ಹೇಳಿದಂತೆ ಐದೈದು ಏಳೇಳು ಸಾವಿರ ಎಕರೆ ಗುಂಪನ್ನಾಗಿ ಮಾಡಿ ನಮಗೆ ಒದಗಿಸಿ. ಅದರ ಬೆಲೆಯನ್ನು ಸರ್ಕಾರ ನಿರ್ಧರಿಸಲಿ. ಸರ್ಕಾರ ನಿರ್ಧರಿಸಿದ ಮೊತ್ತವನ್ನು ಸರ್ಕಾರದ ಖಜಾನೆಗೆ ನಾವು ಭರಿಸುತ್ತೇವೆ. ಭರಿಸಿದ ಮೊತ್ತವನ್ನು ಸರ್ಕಾರ ಕೃಷಿಕರಿಗೆ ನೀಡಲಿ. ಕೃಷಿಕರು ಯಾವುದೇ ಕಾರಣಕ್ಕೂ ನಮ್ಮೊಂದಿಗೆ ತಕರಾರು ಎತ್ತಕೂಡದು. ಕೃಷಿಕರ ಹೆಸರಿನಲ್ಲಿರುವ ಭೂಮಿಯನ್ನೆಲ್ಲ ಕಂಪನಿಗಳ ಹೆಸರಿಗೆ ಮಾಡಿಕೊಡಲಿ. ನಾವು ಪಡೆದ ಭೂಮಿಯಲ್ಲಿ ಕೃಷಿಕರು ಬೇಕಾದರೆ ಕಾರ್ಮಿಕರಾಗಿ ದುಡಿಯಲಿ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಸುಪ್ರೀಂ ಕೋರ್ಟ್ ತರಾಟೆ ನಂತರ ದೊಡ್ಡದಾಗಿ ಕ್ಷಮೆಯಾಚನೆ ಪ್ರಕಟಿಸಿದ ಪತಂಜಲಿ ಸಂಸ್ಥೆ

“ಇವರಂತೆಯೇ ಇನ್ನೂ ಅನೇಕರು ಮಾತನಾಡಿದರು. ನನ್ನ ಸರದಿ ಬಂದಾಗ ಅಧಿಕಾರಿಗಳು ನಿಮ್ಮ ಮಾತನ್ನು ನಂತರ ಕೇಳುತ್ತೇವೆ, ಇರಿ ಎಂದು ಹೇಳಿ ಸುಮ್ಮನೇ ಕೂಡಿಸುತ್ತಿದ್ದರು. ರಾಂಪಾಲ್ ಜಾಟ್ ಸರದಿ ಬಂದಾಗಲೂ ನಿಮ್ಮ ಮಾತು ಕೇಳುತ್ತೇವೆ ಇರಿ. ವಿಜಯ್ ಜವಾಂಧಿಯಾ ಸರದಿ ಬಂದಾಗಲೂ ನಿಮ್ಮ ಮಾತು ಕೇಳುತ್ತೇವೆ ಇರಿ ಎಂದು ಸುಮ್ಮನೇ ಕೂಡ್ರಿಸಿದರು. ಸಭೆ ಮುಕ್ತಾಯಗೊಳ್ಳಲು ಇನ್ನು ಅರ್ಧ ಗಂಟೆ ಮಾತ್ರ ಉಳಿದಿತ್ತು. ನನಗನ್ನಿಸಿತು, ಇವರು ನಮ್ಮನ್ನು ಕರೆದಿರುವುದು ಈ ಸಭೆಯಲ್ಲಿ ಕೃಷಿಕ ನಾಯಕರೂ ಹಾಜರಿದ್ದರು ಎಂದು ಹಾಜರಿಪಟ್ಟಿ ಸಿದ್ಧಪಡಿಸುವುದು ಮತ್ತು ಅದನ್ನು ದೇಶದ ರೈತರ ಮುಂದೆ ಇರಿಸುವುದು ಅವರ ಇರಾದೆಯಾಗಿತ್ತು. ಇದು ನನಗೆ ಅರ್ಥವಾಗುತ್ತಿದ್ದಂತೆ ನಾನು ಕುಳಿತಿದ್ದಲ್ಲಿಂದ ಎದ್ದು ಬಾಗಿಲೆಡೆ ಸಾಗಿದೆ. ಬಾಗಿಲ ಚಿಲಕವನ್ನು ತೆಗೆಯಲು ಮುಂದಾದೆ. ಸಭೆಯ ಅಧ್ಯಕ್ಷರು ನನ್ನನ್ನು ಕೂಗಿ ಕರೆದು ಬನ್ನಿ ಕುಳಿತುಕೊಳ್ಳಿ. ನಿಮ್ಮ ಮಾತನ್ನೂ ಕೇಳುತ್ತೇವೆ ಎಂದರು.

“ನಾನು ಬಾಗಿಲ ಬಳಿಯಿಂದಲೇ ಸಭೆ ಮುಕ್ತಾಯಗೊಳ್ಳಲು ಇನ್ನು ಅರ್ಧ ಗಂಟೆ ಮಾತ್ರ ಉಳಿದಿದೆ. ನನಗಾಗಿ ನೂರಾರು ಕೃಷಿಕರು ಹೊರಗೆ ಕಾಯುತ್ತ ಕುಳಿತಿದ್ದಾರೆ. ಅವರಿಗೆ ನಾನು ಉತ್ತರ ಕೊಡಬೇಕಾಗುತ್ತದೆ. ಈ ಸಭೆಗೆ ನಾವು ಬಂದಿದ್ದೆವು ಎಂಬ ಹಾಜರಿಪಟ್ಟಿ ಸಿದ್ಧಪಡಿಸುವ ಯೋಜನೆ ನೀವು ಸಿದ್ಧಪಡಿಸಿಟ್ಟುಕೊಂಡಿದ್ದೀರಿ. ನಿಮ್ಮಲ್ಲಿ ಧೈರ್ಯವಿದ್ದರೆ ಬಾಗಿಲ ಚಿಲಕವನ್ನು ತೆಗೆದು ಹೊರಗೆ ಬಂದು ಅಲ್ಲಿ ನೆರೆದಿರುವವರೆದುರು ಮಾತನಾಡಿ, ಆಗ ತಿಳಿಯುತ್ತದೆ ಎಂದೆ. ಇಷ್ಟಕ್ಕೆ ಸುಮ್ಮನಾಗದೇ ನಾನೂ ದೇಶವಾಸಿಗಳೆದುರು ಇಲ್ಲಿ ಏನು ನಡೆಯಿತು ಎಂಬುದನ್ನು ಹೇಳುತ್ತೇನೆ. ನನಗೆ ನನ್ನ ಆತ್ಮಸಾಕ್ಷಿ ಮುಖ್ಯ, ಪ್ರಾಮಾಣಿಕತೆ ಮುಖ್ಯ ಎಂದು ಹೇಳಿದೆ.

“ಇದರಿಂದ ಗಲಿಬಿಲಿಗೊಂಡ ಸಭೆಯ ಅಧ್ಯಕ್ಷರು ಬನ್ನಿ ಕುಳಿತುಕೊಳ್ಳಿ, ನಿಮ್ಮ ಮಾತನ್ನು ಕೇಳುತ್ತೇವೆ ಎಂದು ಹೇಳಿ ಮಾತನಾಡಲು ಅವಕಾಶ ಕಲ್ಪಿಸಿದರು. ನಾನು ಅಲ್ಲಿ ಅನೇಕ ವಿಷಯಗಳನ್ನು ಹೇಳಿದೆ. ಅದರಲ್ಲಿ ಮುಖ್ಯವಾದದ್ದೆಂದರೆ ಪಂಜಾಬಿನ ಜಟ್ಟ, ಹರಿಯಾಣದ ಜಾಟರ ಸಂಸ್ಕೃತಿ, ಸಂಸ್ಕಾರಗಳೆರಡೂ ಒಂದೇ. ಹಳ್ಳಿಯಲ್ಲಿ ಇರುವ ಭೂಮಿಯನ್ನು ಮಾರಿ ಪಟ್ಟಣದಲ್ಲೋ, ನಗರದಲ್ಲೋ ನೆಲೆಸಿದ್ದರೂ ತಮ್ಮನ್ನು ತಾವು ಭೂಮಿಪುತ್ರರು ಎಂದೇ ಇವರು ಕರೆದುಕೊಳ್ಳುತ್ತಾರೆ. ಹೊಸದಾಗಿ ಕೌಟುಂಬಿಕ ಸಂಬಂಧ ಬೆಳೆಸಲು ಮುಂದಾದಾಗ ವಧುವಿನ ಕಡೆಯವರು ಕೇಳುವ ಮೊದಲ ಮತ್ತು ಕೊನೆಯ ಪ್ರಶ್ನೆಯೆಂದರೆ ಎಷ್ಟು ಭೂಮಿ ಇದೆ ಎಂದು. ಇದರ ಅರ್ಥವೆಂದರೆ ಇವರು ಭೂಮಿಯೊಂದಿಗೆ ಸಂಬಂಧ ಹೊಂದಿರುವ ಮಂದಿ ಎಂಬುದೇ ಆಗಿರುತ್ತದೆ ಎಂದು ಅವರು ಹೇಳಿದ್ದಾರೆ.

 

ಜವಾಬ್ದಾರಿ ಕಳಚಿಕೊಳ್ಳಲು ಸರ್ಕಾರದ ಆಟ

“ಡಬ್ಲ್ಯುಟಿಒ ಮತ್ತು ಕಾರ್ಪೊರೇಟ್ ಕ್ಷೇತ್ರದ ಒತ್ತಡಕ್ಕೆ ಸಿಲುಕಿರುವ ಸರ್ಕಾರ ಇಂತಹ ಪ್ರಯತ್ನ ಮಾಡುತ್ತಿದೆ ಎಂಬ ಅನುಮಾನ ನನ್ನ ಮನದಲ್ಲಿ ಮೂಡಿತು. ಈ ದಿಶೆಯಲ್ಲಿ ಸರ್ಕಾರ ಎಲ್ಲ ಕಾರ್ಯಗಳನ್ನು ಮಾಡುತ್ತಿರುವ ಶಂಕೆ ನನ್ನನ್ನು ಕಾಡುತ್ತಿತ್ತು. ಇದಾದ ನಂತರ ನಾನು ಗೌಪ್ಯವಾಗಿಯೇ ದಾಖಲೆಗಳನ್ನು ಒಟ್ಟುಗೂಡಿಸುವುದರಲ್ಲಿ ನಿರತನಾದೆ. ಹೀಗಿರುವಾಗಲೇ ಸಮಿತಿಯೊಂದರ ವರದಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನನಗೆ ಲಭ್ಯವಾಯಿತು. ಇದರಲ್ಲಿ ರಾಜ್ಯ ಸರ್ಕಾರಗಳು ಧಾನ್ಯ ಖರೀದಿಯಲ್ಲಿ ತೊಡಗಕೂಡದು, ಧಾನ್ಯಗಳ ಖರೀದಿ ಮತ್ತು ಮಾರಾಟಗಳೇನಿದ್ದರೂ ವ್ಯಾಪಾರಿಗಳ ಕೆಲಸ. ಆದುದರಿಂದ ಧಾನ್ಯಗಳ ಖರೀದಿ ಪ್ರಕ್ರಿಯೆಯನ್ನು ಕಾರ್ಪೊರೇಟ್ ಕಂಪನಿಗಳಿಗೆ ವಹಿಸುವುದು ಉಚಿತ ಎಂಬ ಮಾಹಿತಿ ಇತ್ತು. ಇದಾದ ಆರು ತಿಂಗಳ ನಂತರ ಸುತ್ತೋಲೆಯೊಂದು ನನ್ನ ಕೈಸೇರಿತು. ಇದು ಪ್ರಧಾನ ಮಂತ್ರಿಗಳ ಕಚೇರಿಯಿಂದ ಬಂದುದಾಗಿತ್ತು. ಎಲ್ಲ ರಾಜ್ಯ ಸರ್ಕಾರಗಳ ಮುಖ್ಯಮಂತ್ರಿಗಳನ್ನು  ಉದ್ದೇಶಿಸಿ ಬರೆದುದಾಗಿತ್ತು. ಅದರಲ್ಲಿ ಇದ್ದುದೇನೆಂದರೆ ಪಂಜಾಬ್ ಮತ್ತು ಹರಿಯಾಣದಿಂದ ಧಾನ್ಯಗಳನ್ನು ಖರೀದಿಸಲು ವ್ಯಯಿಸುತ್ತಿರುವ ಮೊತ್ತ ವಿಪರೀತವಾಗುತ್ತಿದೆ. ಆದ್ದರಿಂದ ಧಾನ್ಯಗಳನ್ನು ಸರ್ಕಾರಗಳು ಖರೀದಿ ಮಾಡದಿರುವಂತೆ ಪ್ರಸ್ತಾಪಿಸಲಾಗಿತ್ತು. ಧಾನ್ಯಗಳ ಖರೀದಿಗಾಗಿ ಪಂಜಾಬ್ ಸರ್ಕಾರಕ್ಕೆ ತೆರಿಗೆಯಲ್ಲಿ ಶೇ. ೮.೫ರಷ್ಟು ಮತ್ತು ಹರಿಯಾಣ ಸರ್ಕಾರಕ್ಕೆ ಶೇ. ೬.೫ರಷ್ಟು ಮೊತ್ತವನ್ನು ಕೇಂದ್ರ ಒದಗಿಸುತ್ತಿದೆ. ಧಾನ್ಯಗಳ ಖರೀದಿ ವ್ಯಾಪಾರದಲ್ಲಿ ರಾಜ್ಯ ಸರ್ಕಾರಗಳು ಪಾಲ್ಗೊಳ್ಳುವ ಅಗತ್ಯವಿಲ್ಲ. ಆದುದರಿಂದ ರಾಜ್ಯ ಸರ್ಕಾರ ಖರೀದಿಯನ್ನು ನಿಲ್ಲಿಸಬೇಕು ಎಂಬ ಒಕ್ಕಣೆ ಪತ್ರದಲ್ಲಿತ್ತು. ಈ ಪತ್ರವನ್ನು ಕಂಡು ನಾನು ದಿಗ್ಮೂಢನಾದೆ. ಎಲ್ಲ ದಾಖಲೆ ಪತ್ರಗಳನ್ನು ಒಟ್ಟುಗೂಡಿಸಿದ ನಾನು ಕಳೆದ (೨೦೨೦) ಸಾಲಿನ ಫೆಬ್ರುವರಿ ೧೭ರಂದು ನಕಲು ಪ್ರತಿ ಮಾಡಿಸಿ ಎಲ್ಲ ಪಕ್ಷಗಳ ನಾಯಕರಿಗೆ ಕಳುಹಿಸಿದೆ. ಇದನ್ನು ಓದಿ. ನಿಮ್ಮ ಅಭಿಪ್ರಾಯ ಏನೆಂಬುದನ್ನು ತಿಳಿಸಿ. ನಾನು ನಿಮಗೆ ಈ ವಿಚಾರವಾಗಿ ಕೆಲವು ಪ್ರಶ್ನೆಗಳನ್ನು ಕೇಳುಬೇಕಿದೆ ಎಂದೂ ಹೇಳಿದ್ದೆ. ಇತರೆ ಪಕ್ಷಗಳ ನಾಯಕರು ಅವರವರಿಗೆ ತಿಳಿದಿದ್ದನ್ನು ವಿಶ್ಲೇಷಿಸಿದರೆ ಕಾಂಗ್ರೆಸ್ ಪಕ್ಷದ ಸುನೀಲ್ ಜಾಖಡ್ ಅವರು ಮಾತ್ರ ಎಂಎಸ್‌ಪಿ ಮುಗಿಯಿತು…. ಎಂಎಸ್‌ಪಿ ಮುಗಿಯಿತು…. ಎಂಎಸ್‌ಪಿ ಮುಗಿಯಿತು…. ಎಂದು ನನ್ನೊಡನೆ ದೂರವಾಣಿಯಲ್ಲಿ ಮಾತನಾಡುತ್ತ ಮೇಜು ಕುಟ್ಟಿ ಹೇಳಿದರು ಎಂದು ರೈತರಿಗೆ ಮಾತನಾಡುವಾಗ ರಾಜೇವಾಲ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಮೈಸೂರು ಅನಂತಸ್ವಾಮಿ ಧಾಟಿಯಲ್ಲಿ ನಾಡಗೀತೆ : ರಾಜ್ಯ ಸರ್ಕಾರದ ಆದೇಶ ಎತ್ತಿ ಹಿಡಿದ ಹೈಕೋರ್ಟ್‌ ; ದಶಕಗಳ ಸಮಸ್ಯೆಗೆ ತೆರೆ

 

ಹೋರಾಟದ ಮೊದಲ ರಣಕಹಹಳೆ

“ಇವೇ ಪತ್ರಗಳ ಪ್ರತಿಗಳನ್ನು ಕೃಷಿಕ ನಾಯಕರಿಗೂ ಕಳುಹಿಸಿದೆ. ಕೃಷಿಕರ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರ ಸಂಕಿರಣ ಆಯೋಜಿಸಬೇಕು ಎಂದುಕೊಂಡೆ. ಆ ವಿಚಾರ ಸಂಕಿರಣಕ್ಕೆ ಎಲ್ಲ ರಾಜಕೀಯ ಪಕ್ಷಗಳ ಮುಖಂಡರನ್ನು ಆಹ್ವಾನಿಸಬೇಕು ಎಂದು ವಿನಂತಿಸಿದೆ. ಇದು ಸೂಕ್ತ ಸಂದರ್ಭ ಎಂದು ಭಾವಿಸಿ ಗಂಭೀರವಾಗಿ ಯೋಚಿಸಿ, ಒಟ್ಟಾಗಿ. ಇವತ್ತು ಗಂಭೀರವಾಗಿ ಯೋಚಿಸಿ ಒಂದಾಗಿ ಹೋರಾಟ ರೂಪಿಸದೇ ಇದ್ದಲ್ಲಿ ಪಂಜಾಬ್ ರಾಜ್ಯವನ್ನು ಯಾರೂ ಕಾಪಾಡಲು ಸಾಧ್ಯವಿಲ್ಲ ಎಂದೂ ನಾನು ರೈತ ನಾಯಕರಲ್ಲಿ ವಿನಂತಿಸಿದೆ. ಅವರ ಪ್ರತಿಕ್ರಿಯೆಗಾಗಿ ಕಾಯುತ್ತ ಕೂಡದೇ ೨೦೨೦ರ ಫೆಬ್ರವರಿ ೨೪ರಂದು ಚಂಡೀಗಢದಲ್ಲಿ ನಮ್ಮ ಸಂಘಟನೆಯಿಂದ ರ‍್ಯಾಲಿಯೊಂದನ್ನು ಏರ್ಪಡಿಸಲು ನಿರ್ಧರಿಸಿದೆವು. ಆಗ ಸರ್ಕಾರಕ್ಕೆ ಅನ್ನಿಸಿದ್ದೇನೆಂದರೆ ಕೃಷಿಕರು ರ‍್ಯಾಲಿ ಹಮ್ಮಿಕೊಂಡಿದ್ದಾರೆ, ಅದರಿಂದ ಏನು ಮಹಾ ಆದೀತು ಎಂದುಕೊಂಡು ರ‍್ಯಾಲಿಗೆ ಅನುಮತಿ ನೀಡಿತು. ಚಂಡೀಗಢದ ಪರೇಡ್ ಮೈದಾನದಲ್ಲಿ ರ‍್ಯಾಲಿಗಾಗಿ ಸಿದ್ಧತೆಗಳು ನಡೆದವು. ಅಂದಿನ ರ‍್ಯಾಲಿಗೆ ಪಂಜಾಬಿನ ಎಲ್ಲ ದಿಕ್ಕಿನಿಂದಲೂ ರೈತರು ಬಸ್ಸುಗಳಲ್ಲಿ, ಇತರೆ ವಾಹನಗಳಲ್ಲಿ ಆಗಮಿಸತೊಡಗಿದ್ದರು. ಇದನ್ನು ಕಂಡ ರಾಜ್ಯ ಸರ್ಕಾರ ೨೪ರಂದು ಬೆಳಗ್ಗೆ ೯:೦೦ ಗಂಟೆಯ ವೇಳೆಗೆ ಚಂಡೀಗಢದಲ್ಲಿ ನಿಷೇಧಾಜ್ಞೆ ವಿಧಿಸಿತು. ಆ ವೇಳೆಗಾಗಲೇ ಚಂಡೀಗಢದ ಸುತ್ತಲಿನ ೨೦ ಕಿ.ಮೀ. ವ್ಯಾಪ್ತಿಯೊಳಗೆ ಸಂಚಾರ ದಟ್ಟಣೆ ವಿಪರೀತವಾಗಿ ಸಂಚಾರವೇ ಸ್ತಬ್ಧಗೊಳ್ಳುವ ಸ್ಥಿತಿ ಸೃಷ್ಟಿಯಾಗಿತ್ತು. ಚಂಡೀಗಢದ ಮೊಹಾಲಿ ವೃತ್ತದಲ್ಲಿ ಸಂಚಾರ ಸ್ತಬ್ಧವಾಗಿತ್ತು. ಇದನ್ನು ಅರಿತ ರೈತರು ೧೫-೨೦ ಕಿ.ಮೀ. ಅಂತರವನ್ನು ನಡೆದುಕೊಂಡೇ ಪರೇಡ್ ಮೈದಾನವನ್ನು ತಲುಪಿದ್ದರು. ಇದು  ಹೋರಾಟದ ಮೊದಲ ರಣಕಹಳೆಯಾಗಿತ್ತು.

“ಇದಾದ ನಂತರ ಜೂನ್ ೫ರಂದು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೆಸರಿನಲ್ಲಿ ಕೃಷಿ ಕಾಯ್ದೆಗಳನ್ನು ರೈತರ ಮೇಲೆ ತರುವ ಪ್ರಯತ್ನ ನಡೆಯಿತು. ಇದಾದ ನಂತರ ನಾವೆಲ್ಲ ಏಕೆ  ನಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಬಾರದು ಎಂಬ ಭಾವನೆ ರೈತ ಸಂಘಟನೆಗಳಲ್ಲಿ ಮೂಡಿತು.  ಇಲ್ಲದಿದ್ದರೆ ಕೃಷಿ ಕ್ಷೇತ್ರ ಸರ್ವನಾಶವಾಗುತ್ತದೆ. ಜೊತೆಗೆ ನಾವೂ ನಾಶವಾಗುತ್ತೇವೆ, ಅನಂತರ ನಾವು ಎಷ್ಟು ಹೋರಾಟ ನಡೆಸಿದರೂ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದೆ. ಎಲ್ಲರೂ ನನ್ನ ಅಭಿಪ್ರಾಯಕ್ಕೆ ಮನ್ನಣೆ ನೀಡಿದರು. ನಾವು ರೈಲು ಸಂಚಾರ ತಡೆದೆವು. ಮೋರ್ಚಾಗಳನ್ನು ನಡೆಸಿದೆವು. ಪಂಜಾಬಿ ರೈತರ ನಂತರ ಹರಿಯಾಣದ ರೈತರು ಹೋರಾಟಕ್ಕೆ ಸೇರ್ಪಡೆಯಾದರು. ಪಶ್ಚಿಮ ಉತ್ತರ ಪ್ರದೇಶದವರು, ಉತ್ತರಾಖಂಡದವರು ನಮ್ಮ ಹೋರಾಟಕ್ಕೆ ಕೈಗೂಡಿಸಿದರು. ರಾಜಾಸ್ಥಾನದವರೂ ಒಟ್ಟುಗೂಡಿದರು.

“ನಾವು ದಿಲ್ಲಿಯ ಗಡಿಗಳನ್ನು ತಲುಪಿದಾಗ  ಇವರು ಇಲ್ಲಿ ನಾಲ್ಕು ದಿನ ಇರುತ್ತಾರೆ, ನಂತರ ಎದ್ದು ಹೋಗುತ್ತಾರೆ ಎಂದು ಸರ್ಕಾರ ಭಾವಿಸಿತ್ತು. ನಂತರದಲ್ಲಿಅದು ಸುಳ್ಳು ಎಂಬುದು ಸಾಬೀತಾಯಿತು.  ಸರ್ಕಾರ ರೂಪಿಸಿದ ಕೃಷಿ ಕಾಯ್ದೆಗಳಲ್ಲಿ ಏನೇನು ಕೊರತೆಗಳಿವೆ ಎಂಬುದನ್ನು ಪ್ರತಿಯೊಂದು ಅಂಶಗಳಿಗೆ ಅನುಸಾರವಾಗಿ ತೆರೆದಿಡುವಂತೆ ಸಚಿವರೊಂದಿಗಿನ ಸಂಧಾನ ಸಭೆ ಸಂದರ್ಭದಲ್ಲಿ ಕೇಳಲಾಯಿತು. ನಾವೂ ಯಾವ್ಯಾವ ಅಂಶಗಳಲ್ಲಿ ಏನು ಕೊರತೆಯಿದೆ ಎಂಬುದನ್ನು  ತೆರೆದಿಟ್ಟೆವು.   ಕಾಯ್ದೆಯಲ್ಲಿನ ಕೊರತೆ ಅಂಶಗಳನ್ನು ತೆರೆದಿಡುವುದು ನೋಡಿದರೆ ಕಾಯ್ದೆಯೇ ನಿರರ್ಥಕ ಎನ್ನುವಂತೆ ಹೇಳುತ್ತಿದ್ದೀರಿ. ನಾವು ಇಡೀ ದೇಶವನ್ನೇ ಒಂದು ಮಾರುಕಟ್ಟೆ ವಲಯವಾಗಿ ರೂಪಿಸಲು ಪ್ರಯತ್ನಿಸುತ್ತಿದ್ದೇವೆ. ನೀವು ಅದನ್ನೂ ಪ್ರಶ್ನಿಸುತ್ತಿದ್ದೀರಿ. ಈ ಕಾಯ್ದೆಯಿಂದ ದೇಶಾದ್ಯಂತದ ರೈತರಿಗೆ ತಮ್ಮ ಫಸಲನ್ನು ಎಲ್ಲಿ ಬೇಕಾದರೂ ಮಾರುವ ಅವಕಾಶ ದೊರೆಯಲಿದೆ ಎಂದು ಆ ಪ್ರಭಾವಿ ಮಂತ್ರಿ ಹೇಳಿದರು ಎಂದು ರಾಜೇವಾಲ ಹೇಳಿದ್ದಾರೆ. (ಮುಂದುವರಿಯುವುದು)

 

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement