ಕೃಷಿ ಕಾನೂನು ಸರಣಿ ಲೇಖನ-ಕನಿಷ್ಠ ಬೆಂಬಲ ಬೆಲೆಗೆ ಕಾಯ್ದೆ ರೂಪ ನೀಡಲು ಸರ್ಕಾರಗಳು ಹಿಂದೇಟು ಹಾಕುತ್ತಿರುವುದಕ್ಕೆ ಕಾರಣವೇನೆಂದರೆ…

ಲೇಖನ-ಎಚ್‌.ಆರ್‌.ಸುರೇಶ, ಮಾಜಿ ಸ್ಥಾನಿಕ ಸಂಪಾದಕರು ಸಂಯುಕ್ತ ಕರ್ನಾಟಕ- ಹುಬ್ಬಳ್ಳಿ

(ಕಳೆದ ಒಂದು ವರ್ಷದಿಂದ ರೈತರು ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ ಒಂದು ವರ್ಷದಿಂದ ದೇಶದ ರಾಜಧಾನಿ ದಿಲ್ಲಿಯ ಗಡಿಯಲ್ಲಿ ಗಜಮ್ಮನೆ ಕುಳಿತುಬಿಟ್ಟಿದ್ದಾರೆ.ಕೃಷಿ ಕಾಯ್ದೆಗಳನ್ನು ಅಂಗೀಕರಿಸಿರುವ ಕೇಂದ್ರ ಸರ್ಕಾರದ ಈ ಕಾಯ್ದೆಗಳು ಸಣ್ಣ ಮತ್ತು ಮಧ್ಯಮ ಹಿಡುವಳಿದಾರ ರೈತರ ಸಂಕಷ್ಟಗಳನ್ನು ನಿವಾರಿಸುವ ಮತ್ತು ಅವರನ್ನು ಆರ್ಥಿಕವಾಗು ಸದೃಢಗೊಳಿಸುವ ಉದ್ದೇಶ ಹೊಂದಿದ್ದವು ಎಂದು ಕೇಂದ್ರ ಸರ್ಕಾರ ಸಾರಿಸಾರಿ ಹೇಳಿದರೂ ಅವರು ಕಳೆದು ಒಂದು ವರ್ಷದಿಂದ ನಿರಂತರವಾಗಿ ದೆಹಲಿ ಗಡಿಯಲ್ಲಿ ಬಂಡೆಗಲ್ಲಿನಂತೆ ಕುಳಿತು ರಾಷ್ಟ್ರಪತಿ ಅನುಮೋದನೆ ಪಡೆದಕೃಷಿ ಕಾಯ್ದೆಯನ್ನೇ ಸರ್ಕಾರ ಹಿಂಪಡೆಯುವಂತೆ ಮಾಡಿದ್ದಾರೆ.
ಅವರು ಇಷ್ಟು  ಅವಧಿಗೆ ಯಾಕಾಗಿ ಹೋರಾಟ ಮಾಡಿದರು..? ಈ ಮೂರು ಕೃಷಿ ಕಾಯ್ದೆಗಳಲ್ಲಿದ್ದ ಯಾವೆಲ್ಲ ಅಂಶಗಳು ರೈತರ ಹೋರಾಟಕ್ಕೆ ಕಾರಣವಾದವು ಎಂಬುದರ ಬಗ್ಗೆ ಸಂಯುಕ್ತ ಕರ್ನಾಟಕದ ಮಾಜಿ ಸ್ಥಾನಿಕ ಸಂಪಾದಕರಾದ ಎಚ್.ಆರ್.ಸುರೇಶ ಅವರು ಈ ಮೂರು ಕೃಷಿ ಕಾಯ್ದೆಗಳ ಪ್ರಮುಖ ಅಂಶಗಳ ಬಗ್ಗೆ ವಿಶ್ಲೇಷಿಸಿದ್ದಾರೆ. ಅದನ್ನು ಇಂದಿನಿಂದ ಸರಣಿ ಲೇಖನ ರೂಪದಲ್ಲಿ ನೀಡಲಾಗುತ್ತಿದೆ)

 

                                      

                                     ಭಾಗ-4

                (ನಿನ್ನೆಯಿಂದ ಮುಂದುವರಿದಿದೆ..)

 

 

ಇನ್ನು ಮೂರನೇ ಕಾಯ್ದೆಯೆಂದರೆ ಅವಶ್ಯಕ ವಸ್ತುಗಳ (ನಿರ್ವಹಣಾ) ಕಾಯ್ದೆ-೨೦೨೦
ಇದು ೧೯೫೫ರಲ್ಲಿ ಜಾರಿಗೆ ಬಂದ ಅಗತ್ಯ ವಸ್ತುಗಳ ಕಾಯ್ದೆಗೆ ತಿದ್ದುಪಡಿ ಮಾಡಲ್ಪಟ್ಟದ್ದಾಗಿದೆ. ಆ ಕಾಯ್ದೆಯಲ್ಲಿ ಯಾರೇ ಆಗಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಮಾಡುವಂತಿಲ್ಲ ಎಂದಿದೆ. ಅದನ್ನೇ ತಿದ್ದುಪಡಿ ತೆಗೆದು ಹಾಕಿದ್ದು, ಯಾರು ಎಷ್ಟು ಪ್ರಮಾಣದಲ್ಲಿ ಬೇಕಿದ್ದರೂ ದಾಸ್ತಾನು ಮಾಡಬಹುದು ಎಂದು ಅದು ಹೇಳುತ್ತದೆ.
ಈ ಕಾಯ್ದೆಯಲ್ಲಿನ ಎರಡನೇ ಅಂಶ ಹೇಳುವುದೇನೆಂದರೆ- ಕೃಷಿ ಉತ್ಪನ್ನಗಳ ದಾಸ್ತಾನು ಪ್ರಮಾಣ ನಿರ್ಬಂಧಕ್ಕೆ ಮಾರುಕಟ್ಟೆಯಲ್ಲಿ ಬೆಲೆಗಳಲ್ಲಿನ ಹೆಚ್ಚಳವೇ ಆಧಾರ ಮತ್ತು ಅದಕ್ಕೆ ಈ ಕಾಯ್ದೆಯಡಿ ಕೃಷಿ ಉತ್ಪನ್ನಗಳ ದಾಸ್ತಾನು ಪ್ರಮಾಣವನ್ನು ನಿಯಂತ್ರಿಸಲು ಆದೇಶವನ್ನು ನೀಡಬಹುದಾಗಿದೆ. ಅಂತಹ ಪರಿಸ್ಥಿತಿ ಯಾವುದೆಂದರೆ-

(೧) ತೋಟಗಾರಿಕಾ ಉತ್ಪನ್ನಗಳಾದರೆ ಚಿಲ್ಲರೆ/ಕಿರುಕಳ ಮಾರುಕಟ್ಟೆಯಲ್ಲಿ ಅವುಗಳ ಬೆಲೆಯಲ್ಲಿ ಶೇಕಡಾ ೧೦೦ರಷ್ಟು ಹೆಚ್ಚಳವಾಗಿರಬೇಕು.
(೨) ಹಾಳಾಗದಿರುವ ಕೃಷಿ ಸಾಮಗ್ರಿಗಳಾದರೆ ಮಾರುಕಟ್ಟೆಯಲ್ಲಿನ ಚಿಲ್ಲರೆ/ಕಿರುಕಳ ಬೆಲೆಗಳು ಶೇಕಡಾ ೫೦ರಷ್ಟು ಹೆಚ್ಚಾಗಿರಬೇಕು.
ಬೆಲೆಗಳ ಹೆಚ್ಚಳಕ್ಕೆ ಸಂಬಂಧಿಸಿದಂತೆ ಹೇಳಬೇಕೆಂದರೆ ಈ ಹೆಚ್ಚಳಗೊಂಡ ಬೆಲೆಗಳು ಹಿಂದಿನ ಹನ್ನೆರಡು ತಿಂಗಳಲ್ಲಿಯೇ ಹೆಚ್ಚಿನದು ಆಗಿರಬೇಕು ಅಥವಾ ಹಿಂದಿನ ಐದು ವರ್ಷಗಳಲ್ಲಿಯ ಚಿಲ್ಲರೆ/ಕಿರುಕಳ ಮಾರುಕಟ್ಟೆಯ ಸರಾಸರಿ ಮೊತ್ತದಲ್ಲಿ ಅತ್ಯಂತ ಕಡಿಮೆ ಯಾವುದಿದೆಯೋ ಅದು ಆಗಿರಬೇಕು.

ಇಂತಹ ಆದೇಶವು ಕೃಷಿ ಉತ್ಪನ್ನಗಳ ಯಾವುದೇ ಸಂಸ್ಕರಣಕಾರರು ಅಥವಾ ಮೌಲ್ಯ(ವರ್ಧಿತ) ಉತ್ಪನ್ನಗಳ ಸರಪಳಿಯ ಭಾಗೀದಾರರಿಗೆ ಅನ್ವಯಿಸುವುದಿಲ್ಲ, ಇವರ ನಿಗದಿತ ಸಂಸ್ಕರಣಾ ಸಾಮರ್ಥ್ಯದ ಪ್ರಮಾಣ ಅಥವಾ ರಫ್ತುದಾರರಾಗಿದ್ದರೆ ನಿಗದಿತ ರಫ್ತು ಪ್ರಮಾಣದ ದಾಸ್ತಾನಿಗಿಂತ ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಇರದಿದ್ದರೆ ಈ ಆದೇಶ ಅನ್ವಯಿಸುವುದಿಲ್ಲ.
ಮೇಲಿನ ಎರಡೂ ವಿಚಾರಕ್ಕೆ ಸಂಬಂಧಿಸಿದಂತೆ ರೈತ ನಾಯಕರು ಹೇಳುವುದು ಏನೆಂದರೆ ಅಗತ್ಯ ವಸ್ತುಗಳ (ನಿರ್ವಹಣಾ) ಕಾಯ್ದೆ-೨೦೨೦ ಅನ್ನು ರೂಪಿಸಿರುವುದೇ ಕಾರ್ಪೊರೇಟ್ ಕ್ಷೇತ್ರದ ದೊಡ್ಡ ದೊಡ್ಡ ವ್ಯಾಪಾರಿಗಳ ಸಲುವಾಗಿ. ಇವರಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದ ಹೊರಗೆ ಕೃಷಿ ಉತ್ಪನ್ನಗಳನ್ನು ಖರೀದಿಸಲು ಉಳಿದೆರಡು ಕಾಯ್ದೆಗಳು ಮುಕ್ತ ಅವಕಾಶ ಕಲ್ಪಿಸುತ್ತವೆ. ಇದಲ್ಲದೇ ಅವರಿಗೆ ಎಪಿಎಂಸಿ ಪ್ರಾಂಗಣದಲ್ಲಿ ವಿಧಿಸಲ್ಪಡುವ ಯಾವುದೇ ವಿಧದ ತೆರಿಗೆ ಅಥವಾ ಸೆಸ್‌ಗಳು ಅನ್ವಯಿಸುವುದಿಲ್ಲ. ಇದರಿಂದಾಗಿ ಇವರು ಯಾವುದೇ ನಿಖರ ಲೆಕ್ಕವಿಲ್ಲದೇ ಎಷ್ಟು ಬೇಕಾದರೂ ದಾಸ್ತಾನು ಮಾಡಿ ಇಟ್ಟುಕೊಳ್ಳಬಹುದು. ಹೀಗೆ ಆಗುವುದರಿಂದ ಇಡೀ ಸಾರ್ವಜನಿಕ ವಿತರಣಾ ಪ್ರಣಾಳಿಯೇ ಇವರ ಅಡಿಯಾಳಾಗಿ ಮಾರ್ಪಾಡಾಗುತ್ತದೆ. ನ್ಯಾಯಬೆಲೆ ಅಂಗಡಿಗಳನ್ನೇ ನಂಬಿಕೊಂಡಿರುವ ಕೆಳವರ್ಗದವರು, ಬಡವರು, ಕೆಳ ಮಧ್ಯಮ ವರ್ಗದವರು ತುತ್ತು ಅನ್ನಕ್ಕೂ ಪರಿತಪಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಏಕೆಂದರೆ ಖಾಸಗಿ ಕ್ಷೇತ್ರದ ವ್ಯಾಪಾರಿಗಳಿಗೆ ತಮ್ಮ ಲಾಭ ಮುಖ್ಯವಾಗಿರುತ್ತದೆಯೇ ಹೊರತು ಸಾಮಾನ್ಯ ಜನರ ಜೀವನದ ವಿಚಾರಗಳು ಸಂಬಂಧಿಸಿಯೇ ಇರುವುದಿಲ್ಲ. ಇಷ್ಟು ಮಾತ್ರವಲ್ಲ ಮೊದಲ ಮೂರ‍್ನಾಲ್ಕು ವರ್ಷ ಸರ್ಕಾರ ನಿಗದಿಪಡಿಸುವ ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚಿನ ಬೆಲೆಯನ್ನು ಕೊಟ್ಟು ಇವರು ಕೃಷಿ ಉತ್ಪನ್ನಗಳನ್ನು ಕೊಳ್ಳಬಹುದು. ಯಾವಾಗ ಎಪಿಎಂಸಿಗಳಲ್ಲಿನ ಸಣ್ಣ, ಮಧ್ಯಮ ಪ್ರಮಾಣದ ಸಾಮರ್ಥ್ಯ ಹೊಂದಿರುವ ವ್ಯಾಪಾರಸ್ಥರು ಮಾರುಕಟ್ಟೆಯಿಂದ ಹೊರತಳ್ಳಲ್ಪಡುತ್ತಾರೋ ಅನಂತರದಲ್ಲಿ ಇವರು ಮಾರುಕಟ್ಟೆಯ ಮೇಲೆ ಏಕಸ್ವಾಮ್ಯ ಸಾಧಿಸುತ್ತಾರೆ. ಇದಾದ ನಂತರ ಇವರು ಹೇಳಿದ ಬೆಲೆಗೇ ಕೃಷಿಕರು ತಮ್ಮ ಉತ್ಪನ್ನಗಳನ್ನು ಇವರಿಗೆ ಮಾರಬೇಕಾಗುತ್ತದೆ. ಒಂದೊಮ್ಮೆ ಇವರು ಕೃಷಿಕರಿಂದ ಉತ್ಪನ್ನಗಳನ್ನು ಖರೀದಿಸಿದ ನಂತರ ನಾಪತ್ತೆಯಾದರೆ ಇವರನ್ನು ಪತ್ತೆ ಮಾಡಿ ನಮ್ಮ ಹಣವನ್ನು ನಮಗೆ ಕೊಡಿಸಿ ಎಂದು ಕೇಳಲು ಯಾವುದೇ ವೇದಿಕೆಯೂ ನಮಗೆ ಲಭ್ಯವಿರುವುದಿಲ್ಲ. ಇದೆಲ್ಲದರ ಪರಿಣಾಮ ಕೃಷಿಕರು ಮತ್ತಷ್ಟು ಸಾಲದ ಕೂಪದಲ್ಲಿ ಸಿಲುಕಿ ತಮ್ಮ ಅಸ್ತಿತ್ವಕ್ಕೆ ಕಾರಣವಾದ ಭೂಮಿಯನ್ನೇ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬ ಆತಂಕದ ಕಾರಣಕ್ಕೆ ಅವರು ಈ ಕಾಯ್ದೆಯನ್ನು ವಿರೋಧಿಸಿದ್ದಾರೆ.

ಒಂದರೊಡನೊಂದು ಸಂಬಂಧ
ಇಲ್ಲಿ ಒಂದು ಅಂಶವನ್ನು ನಾವು ಗಮನಿಸಬೇಕು. ಅದೆಂದರೆ ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ)ಗೂ, ಎಪಿಎಂಸಿಗೂ, ಮಾರುಕಟ್ಟೆಗೂ ಮತ್ತು ಸಂಸ್ಕರಣಾ ಅಥವಾ ರಫ್ತು ಜಾಲಕ್ಕೂ ಒಂದರೊಡನೊಂದು ಸಂಬಂಧವಿದೆ.
ಈ ವಿಚಾರವಾಗಿ `ಇಂಡಿಯಾ ಟುಡೆ’ ನಿಯತಕಾಲಿಕದ ಹಿಂದಿ ಭಾಷೆಯ ಸಂಪಾದಕ ಅನ್ಷುಮನ್ ತಿವಾರಿ ಅವರು ಡಿಜಿಟಲ್ ವಾಹಿನಿ `ಲಲ್ಲನ್‌ಟಾಪ್’ನ `ಅರ್ಥಾತ್’ ಸಂವಾದದ ಒಂದು ಸಂಚಿಕೆಯಲ್ಲಿ ಹೇಳಿದ ಅಂಶವೆಂದರೆ- ಭಾರತ ದೇಶವಿನ್ನೂ ಶೇ. ೧೦೦ರಷ್ಟು ಸಂಸ್ಕರಿತ ಆಹಾರ ಸೇವಿಸುವ ರಾಷ್ಟ್ರವಾಗಿಲ್ಲ. ಇಲ್ಲಿ ಇಂದಿಗೂ ಧಾನ್ಯಗಳನ್ನು ಮತ್ತು ತರಕಾರಿಗಳನ್ನು ಕಚ್ಚಾ ರೂಪದಲ್ಲಿಯೇ ತಂದು ಸೇವಿಸುವ ರೂಢಿ ಇರುವವರ ಸಂಖ್ಯೆಯೇ ಅಧಿಕವಾಗಿದೆ. ಸಂಸ್ಕರಿತ ಆಹಾರ ಸೇವಿಸುವವರ ದೇಶವಾಗಬೇಕು ಅಥವಾ ಈಗ ಸೇವಿಸುವುದಕ್ಕಿಂತಲೂ ಹೆಚ್ಚು ತಾಜಾ ಆದ ಕೃಷಿ ಉತ್ಪನ್ನಗಳನ್ನು ಸೇವಿಸುವವರ ದೇಶವಾಗಬೇಕು ಎಂದರೆ ಇದಕ್ಕೆ ಅಗತ್ಯವಿರುವ `ಹೊಲದಿಂದ ಗ್ರಾಹಕನ ವರೆಗೆ’ ಕೃಷಿ ಉತ್ಪನ್ನಗಳನ್ನು ತಲುಪಿಸುವ ಜಾಲವೊಂದನ್ನು ನಾವು ಸೃಷ್ಟಿಸಬೇಕು. ಹಾಗೆ ಆದಾಗ ಮಾತ್ರ ಕನಿಷ್ಠ ಬೆಂಬಲ ಬೆಲೆಯನ್ನು ಕೃಷಿಕರಿಗೆ ಒದಗಿಸಲು ಸಾಧ್ಯ.
ಇದು ಹೇಗೆಂದರೆ ಕೃಷಿ ಉತ್ಪನ್ನಗಳನ್ನು ಹೊಲಗಳಿಂದ ಕನಿಷ್ಠ ಅಂತರಕ್ಕೆ ತಂದು ಮಾರಾಟ ಮಾಡುವ ಜಾಲವನ್ನು ನಿರ್ಮಿಸಬೇಕು. ಇದಾದ ನಂತರ ಮಾರುಕಟ್ಟೆಗೆ ಆವಕವಾದ ಕೃಷಿ ಉತ್ಪನ್ನಗಳನ್ನು ಅಷ್ಟೇ ತ್ವರಿತವಾಗಿ ಸಂಸ್ಕರಣಾ ಘಟಕಕ್ಕೆ ಅಥವಾ ಗ್ರಾಹಕರು ಕೊಂಡುಕೊಳ್ಳಲು ಬರುವ ಶೀತಲಗೃಹ ಸಹಿತ (ಕೋಲ್ಡ್ ಸ್ಟೋರೇಜ್) ಮಾರುಕಟ್ಟೆಗೆ ತಲುಪಿಸುವಂತಹ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕು. ಅಲ್ಲಿ ಅದು ಸಂಸ್ಕರಣಾ ಘಟಕಕ್ಕೆ ಅಥವಾ ಗ್ರಾಹಕರಿಗೆ ಲಭ್ಯವಾಗುತ್ತದೆ. ಹೀಗೆ ಮಾಡಲು ಅಗತ್ಯವಿರುವ ಸಾರಿಗೆ, ಶೀತಲಗೃಹ, ಮಾರುಕಟ್ಟೆ ಜಾಲ ನಮ್ಮಲ್ಲಿದೆಯೇ ಎಂದು ಪ್ರಶ್ನಿಸಿಕೊಂಡರೆ ಸಿಕ್ಕುವುದು `ಇಲ್ಲ’ ಎಂಬ ನಕಾರಾತ್ಮಕ ಉತ್ತರವೇ ಹೊರತು ಬೇರೇನೂ ಅಲ್ಲ. ಇದೇ ಹಿನ್ನೆಲೆಯಲ್ಲಿ ಎಂಎಸ್‌ಪಿಗೆ ಕಾಯ್ದೆಯ ರೂಪ ನೀಡಲು ಇಲ್ಲಿನ ಸರ್ಕಾರಗಳು ಇಂದಿಗೂ ಹಿಂದೇಟು ಹಾಕುತ್ತಿರುವುದು ಎಂದು ಹೇಳಿದ್ದಾರೆ ಅನ್ಷುಮನ್ ತಿವಾರಿ.

ರೂಪಿಸಬೇಕಿದೆ ಮಾರುಕಟ್ಟೆ ಜಾಲ
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರಕರ್ತ, ಕೃಷಿ ತಜ್ಞ ದೇವೀಂದರ್ ಶರ್ಮಾ ಅವರು ಹೇಳುವುದೇನೆಂದರೆ- ನಮ್ಮ ದೇಶದಲ್ಲಿ ಇಂದು ಇರುವುದು ಕೇವಲ ೭೦೦೦ ಕೃಷಿ ಉತ್ಪನ್ನ ಮಾರುಕಟ್ಟೆಗಳಷ್ಟೇ. ಇದು ಇನ್ನೂ ಆರು ಪಟ್ಟು ಅಂದರೆ ೪೨೦೦೦ ಮಾರುಕಟ್ಟೆಗಳ ಸಂಖ್ಯೆಗೆ ಏರಬೇಕು, ಅದೂ ಪ್ರತಿ ಐದು ಕಿ.ಮೀ. ಸುತ್ತಳತೆಗೆ ಒಂದು ಮಾರುಕಟ್ಟೆಯಂತೆ. ಆಗ ಕೃಷಿ ಉತ್ಪನ್ನಗಳನ್ನು ನಷ್ಟವಿಲ್ಲದಂತೆ ಮಾರುಕಟ್ಟೆಗೆ ತಲುಪಿಸಲು ಸಾಧ್ಯವಾಗುತ್ತದೆ. ಅಲ್ಲಿಯ ವರೆಗೆ ನಮ್ಮ ದೇಶದ ಕೃಷಿಕರನ್ನು ಈಗಿರುವ ಎಪಿಎಂಸಿಗಳ ವ್ಯಾಪ್ತಿಯಿಂದ ಮುಕ್ತ ಮಾರುಕಟ್ಟೆ ವ್ಯವಸ್ಥೆಯೊಳಗೆ ಕೊಂಡೊಯ್ಯಬಾರದು. ಒಂದೊಮ್ಮೆ ಇವನ್ನೆಲ್ಲ ಸೃಷ್ಟಿಸದೇ ಈಗಿರುವ ಸ್ಥಿತಿಯಲ್ಲಿಯೇ ಕೃಷಿಕರನ್ನು ಮುಕ್ತ ಮಾರುಕಟ್ಟೆ ವ್ಯಾಪ್ತಿಗೆ ತಂದಲ್ಲಿ ಘೋರ ದುರಂತವೇ ಎದುರಾಗುತ್ತದೆ. ಹೇಗೆಂದರೆ ಮುಕ್ತ ಮಾರುಕಟ್ಟೆಯನ್ನು ಪ್ರವೇಶಿಸುವ ಬೃಹತ್ ಕಂಪನಿಗಳು ತಮ್ಮದೇ ಸರಬರಾಜು, ಸಂಸ್ಕರಣೆ ಮತ್ತು ವಿತರಣಾ ಜಾಲವನ್ನು ಸ್ಥಾಪಿಸಿಕೊಳ್ಳುತ್ತವೆ. ಇದಕ್ಕೆ ತಗಲುವ ವೆಚ್ಚವನ್ನೆಲ್ಲ ಕೃಷಿಕರಿಂದ, ಗ್ರಾಹಕರಿಂದ ಒಂದಲ್ಲ ಒಂದು ರೀತಿಯಲ್ಲಿ ವಸೂಲು ಮಾಡುತ್ತವೆ. ಅವು ವಸೂಲು ಮಾಡುವ ಮೊತ್ತವನ್ನು ಕೃಷಿಕರಾಗಲೀ, ಗ್ರಾಹಕರಾಗಲೀ, ಸರ್ಕಾರವಾಗಲೀ ಪ್ರಶ್ನಿಸುವಂತೆಯೇ ಇಲ್ಲ.

ಮುಗಿಸುವ ಮುನ್ನ:
ನಮ್ಮ ದೇಶದಲ್ಲಿ ರೂಪಿಸಲ್ಪಡುವ ಕಾಯ್ದೆಗಳು ಹೇಗೆ ಎರಡಲಗಿನ ಕತ್ತಿಗಳಾಗಿ ಪ್ರಜೆಗಳನ್ನು ಕತ್ತರಿಸುತ್ತವೆ ಎಂಬುದಕ್ಕೆ ಕರ್ನಾಟಕ ರಾಜ್ಯದಲ್ಲಿರುವ ಕೈಗಾರಿಕೆಗಾಗಿ ಕೃಷಿ ಭೂಮಿಯನ್ನು ಪರಿವರ್ತಿಸುವ ಮತ್ತು ಕೈಗಾರಿಕೆಗಳಿಗೆ ಅದರಲ್ಲೂ ಗಣಿ ಕೈಗಾರಿಕೆಗೆ ಇರುವ ಕಾಯ್ದೆಗಳೇ ಸಾಕ್ಷಿ.
ಕೃಷಿ ಭೂಮಿಯನ್ನು ಕೈಗಾರಿಕೆಗಾಗಿ ಪರಿವರ್ತಿಸುವ ಕಾಯ್ದೆಯಲ್ಲಿ ಇರುವ ಒಂದು ಅಂಶವೆಂದರೆ ಪರಿವರ್ತಿಸಬೇಕಾಗಿರುವ ಭೂಮಿಗೆ ಸಂಪರ್ಕ ರಸ್ತೆ ಇರಬೇಕು. ಅದರ ಸುತ್ತಲಿನಲ್ಲಿ ಯಾವುದೇ ಪುರಾತನ ದೇವಾಲಯ (೨೦೦ ಮೀಟರ್ ಅಂತರ), ಅದು ವನ್ಯಜೀವಿ (ಸರೀಸೃಪಗಳನ್ನೂ ಒಳಗೊಂಡಂತೆ) ಯಾವುದೇ ಧಾಮ ಇರಬಾರದು ಎಂದು. ಕೃಷಿ ಭೂಮಿಯಲ್ಲಿ ಒಂದಲ್ಲ ಒಂದು ಸರೀಸೃಪಗಳ ಸಂಕುಲ ಇದ್ದೇ ಇರುತ್ತದೆ. ಇದನ್ನು ಬದಿಗಿಟ್ಟು ಕೃಷಿ ಭೂಮಿಯನ್ನು ಕೈಗಾರಿಕೆಗಾಗಿ ಪರಿವರ್ತಿಸಿ ಕೊಡಲು ಅಧಿಕಾರಿಗಳ ಮಟ್ಟದಲ್ಲಿ ಭೂಮಿ ಪರಿವರ್ತನೆಗೆಂದು ಭ್ರಷ್ಟಾಚಾರ ನಡೆದೇ ನಡೆಯುತ್ತದೆ. ಇದು ಭೂಮಿ ಪರಿವರ್ತಿಸಿ ಕೊಡಲು ಅರ್ಜಿ ಸಲ್ಲಿಸಿದ ವ್ಯಕ್ತಿಯ ಮೇಲೆ ಹೊರೆಯೇ ಆಗಿರುತ್ತದೆ.
ಇನ್ನು ಕೃಷಿ ಭೂಮಿ ಪರಿವರ್ತನೆಗೊಂಡ ನಂತರ ಕೈಗಾರಿಕೆ ಸ್ಥಾಪನೆಗಾಗಿ (ಗಣಿಗಾರಿಕೆ) ಪರವಾನಗಿ ನೀಡಲು ಇರುವ ನಿಯಮಾವಳಿ ಎಂದರೆ ಪರಿವರ್ತಿತ ಭೂಮಿ ರಸ್ತೆಯಿಂದ ೨೦೦ ಮೀಟರ್ ಅಂತರದಲ್ಲಿ ಇರಬೇಕು. ಆಸುಪಾಸಿನಲ್ಲಿ ಹಳ್ಳಿ, ಪಟ್ಟಣ ಅಥವಾ ನಗರ ಪ್ರದೇಶ ೨ ಕಿ.ಮೀ. ವ್ಯಾಪ್ತಿಯಲ್ಲಿ, ಶಾಲೆ, ವಸತಿ ಪ್ರದೇಶ ೧ ಕಿ.ಮೀ. ವ್ಯಾಪ್ತಿಯಲ್ಲಿ ಇರಕೂಡದು ಎಂದಿದೆ. ಇದರ ಅರ್ಥ ಸುತ್ತಮುತ್ತಲಿನಲ್ಲಿ ಜನಸಂಚಾರ ಇರಕೂಡದು ಎಂಬುದೇ ಆಗಿದೆ. ಆದರೆ ಇಷ್ಟೆಲ್ಲ ಬಿಗಿ ನಿಯಮಾವಳಿಗಳಿದ್ದೂ ಕೈಗಾರಿಕೆಗಳಿಗೆ (ಗಣಿಗಾರಿಕೆಗೆ) ಪರವಾನಗಿಯನ್ನು ನೀಡಲಾಗುತ್ತದೆ. ಹೇಗೆ ಎಂಬುದಕ್ಕೆ ಉತ್ತರ ಎಲ್ಲರಿಗೂ ಗೊತ್ತಿದೆ.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement