ನವದೆಹಲಿ: ಸೇನಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಹಾಗೂ ಇತರ ಹನ್ನ್ನೆರಡು ಜನ ಹೆಲಿಕಾಪ್ಟ್ರ್ ದುರಂತದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಇಡೀ ದೇಶದ ಜನರೀಗ ದುಃಖದಲ್ಲಿದ್ದಾರೆ. ಯಾರೂ ಊಹಿಸಿಕೊಳ್ಳಲಾರದ ದುರಂತ ಘಟನೆಯನ್ನು ಬಹುತೇಕರಿಗೆ ಇನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ. ದುರಂತಕ್ಕೆ ದೇಶವೇ ಮರುಗುತ್ತಿದೆ.
ಈ ದುರಂತದಲ್ಲಿ ಮಡಿದವರಿಗೆ ಎಲ್ಲರೂ ನಮನ ಸಲ್ಲಿಸುತ್ತಿದ್ದಾರೆ. ಇಲ್ಲೊಬ್ಬರು ಕಲಾವಿದರು ವಿಶಿಷ್ಟವಾಗಿ ತಮ್ಮ ಅಪರೂಪದ ಕಲೆಯ ಮೂಲಕವೇ ಕಲಾತ್ಮಕವಾಗಿ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಕಲಾವಿದ ಶಶಿ ಅಡ್ಕರ್ ಈ ಹೆಲಿಕಾಪ್ಟರ್ ದುರಂತದಲ್ಲಿ ಮಡಿದವರಿಗೆ ವಿಭಿನ್ನ ರೀತಿಯಲ್ಲಿ ಗೌರವ ಸಲ್ಲಿಸಿದವರು. ಅಶ್ವತ್ಥ ವೃಕ್ಷದ ಎಲೆಯಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ಭಾವಚಿತ್ರವನ್ನು ಮಾಡಿ ಅವರು ರಾವತ್ ಅವರಿಗೆ ತಮ್ಮ ನಮನ ಸಲ್ಲಿಸಿದ್ದು, ಈ ಚಿತ್ರದ ವಿಡಿಯೊಕ್ಕೆ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಕಲಾವಿದ ಶಶಿ ಅವರು ತಾನು ಭಾವಚಿತ್ರ ಮೂಡಿಸಿರುವ ಎಲೆಯನ್ನು ನಿಧಾನವಾಗಿ ಆಗಸದತ್ತ ಹಿಡಿಯುವ ದೃಶ್ಯದ ಮೂಲಕ 26 ಸೆಕೆಂಡಿನ ಈ ಕ್ಲಿಪ್ ಶುರುವಾಗುತ್ತದೆ. ಹೀಗೆ ಎಲೆ ಹಿಡಿದ ಕೈ ನಿಧಾನವಾಗಿ ಮೇಲಕ್ಕೆ ಬರುತ್ತಿರುವಂತೆಯೇ ಅಲ್ಲಿ ಭಾರತದ ವೀರ ಸೇನಾನಿ ಬಿಪಿನ್ ರಾವತ್ ಅವರ ಚಿತ್ರ ಮೂಡಲು ಆರಂಭವಾಗುತ್ತದೆ. ಅನಂತರ ಸಂಪೂರ್ಣವಾಗಿ ಬಿಪಿನ್ ರಾವತ್ ಅವರ ಭಾವಚಿತ್ರ ಮೂಡುತ್ತದೆ.
ಸದ್ಯ ಈ ವಿಡಿಯೋವನ್ನು ಹಲವರು ತಮ್ಮ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್, ನಟ ಅನುಪಮ್ ಖೇರ್ ಸೇರಿದಂತೆ ಹಲವರು ಜನರು ಈ ವಿಡಿಯೋವನ್ನು ತಮ್ಮ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡು ದುರಂತದಲ್ಲಿ ಮಡಿದ ಎಲ್ಲರಿಗೂ ನಮನ ಸಲ್ಲಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ