ರಾಜ್ಯೋತ್ಸವ ಪ್ರಶಸ್ತಿಯಿಂದ ಕರ್ನಾಟಕ ಕಲಾಶ್ರೀ ವರೆಗೆ…: ಅಂಗವೈಕಲ್ಯ ಮೆಟ್ಟಿ ನಿಂತ ಅಪ್ರತಿಮ ಕೀಬೋರ್ಡ್‌ ವಾದಕ ಕೂಜಳ್ಳಿ ಗಣೇಶ ಭಟ್ಟರ ಸಂಗೀತ ಪಯಣದ ಹಾದಿ

ಕುಮಟಾ: ದೈಹಿಕ ನ್ಯೂನತೆ ದೇಹಕ್ಕೆ ಮಾತ್ರವೇ ಹೊರತು ಮನಸ್ಸಿಗಲ್ಲ. ಸಾಧಿಸುವ ದೃಢ ಸಂಕಲ್ಪ ಮಾಡಿದರೆ ಅದು ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಜೀವಂತ ಸಾಕ್ಷಿ ಗಣೇಶ್ ಈಶ್ವರ ಭಟ್ ಅವರು.ಕೈ ಹಾಗೂ ಕಾಲುಗಳಿಗೆ ಒಂದೊಂದೇ ಬೆರಳುಗಳಿದ್ದರೂ ಸಾಮಾನ್ಯ ಕಲಾವಿದರಂತೆ ಇವರು ಕೀಬೋರ್ಡ್ ಬಾರಿಸುವ ಕಲೆ ಎಂಥವರನ್ನೂ ಬೆರಗುಗೊಳಿಸುತ್ತದೆ. ಅಪ್ರತಿಮವಾಗಿ ಕೀಬೋರ್ಡ್ ನುಡಿಸುತ್ತಾರೆ. ಕೀಬೋರ್ಡನ್ನು ಪರಿಪೂರ್ಣ 10 ಬೆರಳುಗಳಿಗೆ ವಿನ್ಯಾಸಗೊಳಿಸಲಾಗಿದೆ. ಆದರೆ ವಿಶೇಷವೆಂದರೆ ಬೆರಳುಗಳೇ ಮುಖ್ಯವಾಗಿರುವ ಕೀ ಬೋರ್ಡಿನಲ್ಲೇ ಅವರು ವಿಶೇಷ ಸಾಧನೆ ಮಾಡಿದ್ದಾರೆ..! ಇವರು ಅದಕ್ಕೆ
ಸುಗಮ ಸಂಗೀತ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯಿಂದ ಹಿಡಿದು 2019-20ನೇ ಸಾಲಿನ ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿಯಿಂದ ಕೊಡಲಾಗುವ ಕರ್ನಾಟಕ ಕಲಾಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮೈಸೂರಿನಲ್ಲಿ ವಾಸವಾಗಿರುವ ಗಣೇಶ ಈಶ್ವರ ಭಟ್ಟ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕೂಜಳ್ಳಿ ಗ್ರಾಮದ ಕೆಳಗಿನಕೇರಿಯವರು. ಕೂಜಳ್ಳಿಯ ದಿ.ಈಶ್ವರ ಭಟ್ ಹಾಗೂ ಕಾವೇರಿ ದಂಪತಿಗಳ ಪುತ್ರರು. ಆರ್ಥಿಕವಾಗಿ ಅತ್ಯಂತ ಕಷ್ಟಕರ ಸ್ಥಿತಿಯಲ್ಲಿ ತಮ್ಮ ಬಾಲ್ಯವನ್ನು ಕಳೆದು ನಮ್ಮ ಗುರುಪ್ರಸಾದ ಶಿಕ್ಷಣ ಸಂಸ್ಥೆಯಲ್ಲಿ ತಮ್ಮ ಮಾಧ್ಯಮಿಕ ಶಿಕ್ಷಣ ಪೂರೈಸಿದರು. ಅವರ ತಂದೆ ಈಶ್ವರ ಭಟ್‌ ಅವರು  ಸ್ವಲ್ಪ ಸಂಗೀತದ ಅಭ್ಯಾಸ ಮಾಡಿದವರಾಗಿದ್ದರು. ಯಕ್ಷಗಾನದ ಬಯಲಾಟದಲ್ಲಿ ವೇಷಧಾರಿಯಾಗಿದ್ದರು. ಯಕ್ಷಗಾನದ ಮದ್ದಳೆ ನುಡಿಸುತ್ತಿದ್ದರು. ಅಲ್ಲದೆ ಮಣ್ಣಿನ ಗಣಪತಿಗಳನ್ನು ಮಾಡುತ್ತಿದ್ದರು ಸಂಗೀತದ ಬಗ್ಗೆ ಒಲವಿದ್ದ ಕುಟುಂಬದಿಂದ ಬಂದ ಇವರು ಸಹಜವಾಗಿಯೇ ಅದರತ್ತ ಆಕರಷಿತರಾದರು. ಹೈಸ್ಕೂಲು ಕಲಿಯುವಾಗಲೆ ನಾಟಕಗಳಲ್ಲಿ ಕೀಬೋರ್ಡ್ ಬಾರಿಸುವ ಗೀಳನ್ನು ಅಂಟಿಸಿಕೊಂಡಿದ್ದರು. .ಇದೇ ಸಂದರ್ಭದಲ್ಲಿ ಹೆಸರಾಂತ ಹಿಂದುಸ್ತಾನೀ ಸಂಗೀತಗಾರರಾದ ದಿ.ಪಂಡಿತ ಷಡಕ್ಷರಿ ಗವಾಯಿಗಳವರಲ್ಲಿ ಶಾಸ್ತ್ರೀಯ ಸಂಗೀತ ಕೆಲಕಾಲ ಅಭ್ಯಸಿಸಿದರು. ಅನಿವಾರ್ಯ ಕಾರಣಗಳಿಂದ ಶಿಕ್ಷಣ ಸ್ಥಗಿತಗೊಳಿಸಬೇಕಾಗಿಬಂದರೂ ತಮ್ಮ 28ನೆಯ ವಯಸ್ಸಿನಲ್ಲಿ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ವಿಕಲಚೇತನರಿಗಾಗಿ ಇರುವ ಡಿಪ್ಲೋಮಾ ಕಾಲೇಜು ಸೇರಿ ತಮ್ಮ ಅಭ್ಯಾಸ ಮುಂದುವರಿಸಿದರು. ವಾಸ್ತುಶಿಲ್ಪದ ಡಿಪ್ಲೋಮಾ ಜೊತೆಗೆ ಸಂಗೀತಾಭ್ಯಾಸವನ್ನೂ ಮಾಡಿದರು. ಸಂಗೀತದ ಸ್ವಂತ ಅಭ್ಯಾಸಕ್ಕೆ ಧಕ್ಕೆಯಾಗಬಹುದೆಂದು ಸಕಲೇಶಪುರದ ಕಾಲೇಜಿನಲ್ಲಿ ಸಂಗೀತದ ಶಿಕ್ಷಕ ವೃತ್ತಿಯನ್ನೂ ತೊರೆದರು

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

ಅವರು ಹೆಚ್ಚಾಗಿ ‘ಸುಗಮ ಸಂಗೀತ’, ‘ಭಾವಗೀತೆ’, ‘ದಾಸರ ಪದ’ ಮತ್ತು ಇತರ ಲಘು ಸಂಗೀತ ಕಚೇರಿಗಳಲ್ಲಿ ಕೀಬೋರ್ಡ್ ನುಡಿಸುತ್ತಾರೆ ಮತ್ತು ದಿವಂಗತ ಸಿ ಅಶ್ವಥ್, ಪುತ್ತೂರು ನರಸಿಂಹ ನಾಯಕ್, ಎಚ್.ಆರ್. ಲೀಲಾವತಿ, ರತ್ನಮಾಲಾ ಪ್ರಕಾಶ್, ಶಂಕರ್ ಶಾನಬಾಗ್, ಎಂಡಿ ಪಲ್ಲವಿ ಮುಂತಾದ ಹೆಸರಾಂತ ಗಾಯಕರು ಮತ್ತು ಕಲಾವಿದರೊಂದಿಗೆ ಕೆಲಸ ಮಾಡಿದ್ದಾರೆ. ಈಗ ಅವರು ಹೆಚ್ಚು ಬೇಡಿಕೆಯಿರುವ ಕೀಬೋರ್ಡ್ ಪ್ಲೇಯರ್. ಅವರು ದೇಶವಲ್ಲದೆ ಕುವೈತ್, ಸಿಂಗಾಪುರ್, ಬಹ್ರೇನ್, ದುಬೈ ಮುಂತಾದ ಇತರ ದೇಶಗಳಲ್ಲಿ ಪ್ರವಾಸ ಮಾಡಿ ಪ್ರದರ್ಶನಗಳನ್ನು ನೀಡಿದ್ದಾರೆ. ಅವರು ಮೈಸೂರಿನ ತಮ್ಮ ನಿವಾಸದಲ್ಲಿಯೇ ಮಿನಿ ಸ್ಟುಡಿಯೊ ನಿರ್ಮಿಸಿದ್ದಾರೆ, ಅಲ್ಲಿ ಅವರು ಸಂಗೀತ ಸಂಯೋಜಿಸುತ್ತಾರೆ, ಅದನ್ನು ಮಿಶ್ರಣ ಮಾಡುತ್ತಾರೆ ಮತ್ತು ಅದನ್ನು ರೆಕಾರ್ಡ್ ಮಾಡುತ್ತಾರೆ.
ಇಲ್ಲಿಯವರೆಗೆ ಅವರು 100 ಕ್ಕೂ ಹೆಚ್ಚು ಆಡಿಯೊ ಸಿಡಿಗಳಿಗೆ ವಾದ್ಯಸಂಗೀತವನ್ನು ಏರ್ಪಡಿಸಿದ್ದಾರೆ ಮತ್ತು ಚಲನಚಿತ್ರಗಳು ಮತ್ತು ಕಿರುಚಿತ್ರಗಳಿಗೆ ಸಂಗೀತ ಸಂಯೋಜಿಸಿದ ಕೀರ್ತಿಯನ್ನು ಹೊಂದಿದ್ದಾರೆ. ‘ಶಂಭೋ ಮಹಾದೇವ’, ಮತ್ತು ‘ನಂಜನಗೂಡು ಶ್ರೀಕಂಠೇಶ್ವರ ಮಹಾತ್ಮೆ’ ಚಲನಚಿತ್ರ ಹಾಗೂ ಕಿರುಚಿತ್ರ.ಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.ಸರೆಗಮಪ ಜ್ಯುರೀ ಮೆಂಬರ ಆಗಿ ಕಾರ್ಯ ನಿರ್ವಹಿಸಿದ್ದಾರೆ.
ಕುರ್ಚಿ, ಬೈಕು ಅಥವಾ ಕಾರನ್ನು ನಮಗೆ ತಕ್ಕಂತೆ ಮಾರ್ಪಾಡು ಮಾಡಿಕೊಳ್ಳಬಹುದು, ಆದರೆ ಸಂಗೀತ ವಾದ್ಯಗಳನ್ನು ಈ ರೀತಿ ಮಾಡುವುದು ಕಷ್ಟಸಾಧ್ಯ ಎಂದು ಅವರು ಹೇಳುತ್ತಾರೆ. ಹೀಗಾಗಿ ನನ್ನ ಕೀಬೋರ್ಡ್ ಕೌಶಲ್ಯಗಳನ್ನು ಸುಧಾರಿಸಲು ನಾನು ಕಠಿಣ ಅಭ್ಯಾಸ ಮಾಡಿದೆ. ನನ್ನ ಅಂಗವೈಕಲ್ಯವು ನನ್ನ ಕಾರ್ಯಕ್ಷಮತೆಯನ್ನು ಕುಗ್ಗಿಸಲಿಲ್ಲ ಎಂದು ಅವರು ಹೇಳುತ್ತಾರೆ. ಅವರ ಪತ್ನಿ ಅವರ ಪತ್ನಿ ವಾಣಿಶ್ರೀ ಅವರು ಕರ್ನಾಟಕಿ ಸಂಗೀತದ ಗಾಯಕಿಯಾಗಿದ್ದಾರೆ.

ಪ್ರಶಸ್ತಿ-ಪುರಸ್ಕಾರಗಳು…
ಭಾರತ ಸರಕಾರದಿಂದ ರಾಷ್ಟ್ರಪತಿ ಪ್ರಶಸ್ತಿ, ರಾಜ್ಯ ಸರಕಾರದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ರಾಜ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ.
ಮಾಜಿ ರಾಷ್ಟ್ರಪತಿಗಳಾದ ದಿ.ಎ.ಪಿ.ಜೆ.ಅಬ್ದುಲ್ ಕಲಾಂ, ಶ್ರೀಮತಿ ಪ್ರತಿಭಾ ಪಾಟೀಲ್ ರಿಂದ ಪ್ರಶಂಸನಾ ಪತ್ರಗಳು ನೀಡಲ್ಪಟ್ಟಿವೆ. ಆರ್.ಎನ್. ಜಯಗೋಪಾಲ್-70 ಸನ್ಮಾನ, ಮೈಸೂರಿ ಭೂಮಿಕಾ ಬಳಗದ ಸನ್ಮಾನ ಹೊಯ್ಸಳ ಕನ್ನಡ ಸಂಘ(ಕಾವ್ಯದಸರಾ ಪ್ರಶಸ್ತಿ),ಮೈಸೂರು ಕಲಾಬಳಗ(ಕಲಾವಾದನ ಸಿರಿ),ಮೈಸೂರು ವಿಪ್ರ ಸಂಘದಿಂದ ಪ್ರಶಸ್ತಿ(ಕಲಾತಪಸ್ವಿ), ವಿಕಲಚೇತನರ ಹಾಗೂ ಹಿರಿಯ ನಾಗರಿಕರ ನಿರ್ದೇಶನಾಲಯದಿಂದ ರಾಜ್ಯಪ್ರಶಸ್ತಿ, ಹಾಗೂ ಇತ್ತೀಚೆಗೆ ರಾಷ್ಟ್ರೀಯ ಪುರಸ್ಕಾರ-2019. ಅಲ್ಲದೆ ಆಕಾಶವಾಣಿಯ ಗ್ರೇಡ್- II ಸಂಗೀತ ಸಂಯೋಜಕರಾಗಿಯೂ ಆಯ್ಕೆಯಾಗಿದ್ದಾರೆ.
ಸಂಗೀತಾರಾಧನೆಯ ಜೊತೆ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಓರ್ವ ಈಜುಗಾರರಾಗಿಯೂ ಗುರುತಿಸಿಕೊಂಡಿದ್ದಾರೆ. 2018ರಲ್ಲಿ ನೇಪಾಳದಲ್ಲಿ ನಡೆದ ಪ್ಯಾರಾ ಒಲಿಂಪಿಕ್ಸ್ನಲ್ಲಿ ಚಿನ್ನ ಮತ್ತು ಕಂಚು,2019ರಲ್ಲಿ ಕೊಲಂಬೊದಲ್ಲಿ ಚಿನ್ನ ಮತ್ತು ಬೆಳ್ಳಿ, ಕಳೆದ ಜನವರಿಯಲ್ಲಿ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಪಡೆದು ತಮ್ಮ ಹಿರಿಮೆಯನ್ನು ಮೆರೆದಿದ್ದಾರೆ. 2020 ರಲ್ಲಿ ಮಲೇಷ್ಯಾದಲ್ಲಿ ನಡೆಯುತ್ತಿರುವ ಪ್ಯಾರಾ ಒಲಿಂಪಿಕ್ಸ್ ನಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

ಗಣೇಶ ಭಟ್ ಅವರು ತಮ್ಮದೇ ಆದ ಸಂಗೀತ ಶಾಲೆಯೊಂದನ್ನು ತೆರೆದು ಹಲವಾರು ಶಿಷ್ಯರಿಗೆ ಕೀಬೋರ್ಡ್ ಕಲಿಸುತ್ತಿದ್ದಾರೆ. ಅಂಗವಿಕಲರಿಗಾಗಿಯೇ ಒಂದು ಸಂಸ್ಥೆಯನ್ನು ತಮ್ಮ ಸಹ ಸಂಗೀತಾಸಕ್ತರೊಂದಿಗೆ ಸೇರಿ ಸ್ಥಾಪಿಸಿದ್ದಾರೆ. ಅದರ ಮೂಲಕ ಕೊರೋನಾ ಸಂಕಷ್ಟ ಕಾಲದಲ್ಲಿ ” ಕಲಾಸಮರ್ಪಣೆ ” ಎಂಬ ಸುಗಮ ಸಂಗೀತದ ಕಾರ್ಯಕ್ರಮಗಳನ್ನು ಸಂಘಟಿಸಿ ಅದರಿಂದ ಒಟ್ಟಾದ ಹಣದಿಂದ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಲಾವಿದರಿಗೆ ನೆರವು ನೀಡುತ್ತಿದ್ದಾರೆ. ಗಣೇಶ ಭಟ್ಟರ ಮತ್ತೊಂದು ವಿಶೇಷತೆಯೆಂದರೆ ಇಂಥ ಅಂಗ ವೈಕಲ್ಯದಲ್ಲೂ ಗಣೇಶ ಭಟ್ಟರು ಮೈಸೂರಿನ ಜನನಿಬಿಡ ರಸ್ತೆಯಲ್ಲಿ ಲೀಲಾಜಾಲವಾಗಿ ಕಾರನ್ನು ಓಡಿಸುತ್ತಾರೆ.

4.5 / 5. 10

  1. Subray Bhat

    Ganesh Bhat is a person well known to me as his native place is very near to my home and we studied in same highschool.His brother Krishnanand Bhat is my friend and colleague.I am knowing about his background and study matters and also the various music events in which he took part,after he left Kujalli with a firm decision to do something good and meaningful. Inspite of poverty and physical shortcomings he grew up to a good position and status of popularity with his hard work and dedication and also fetched name & fame for our area/district/state. I wish him best of luck and pray for more achievements in the years to come.
    CONGRATULATIONS

ನಿಮ್ಮ ಕಾಮೆಂಟ್ ಬರೆಯಿರಿ

advertisement