ಐದು ರಾಜ್ಯಗಳ ಚುನಾವಣೆ: ಸಮಾವೇಶ, ರೋಡ್​ ಶೋಗೆ ನಿರ್ಬಂಧ ಜನವರಿ 22ರ ವರೆಗೆ ವಿಸ್ತರಣೆ

ನವದೆಹಲಿ: ಫೆಬ್ರವರಿಯಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿರುವ ಐದು ರಾಜ್ಯಗಳಲ್ಲಿ ರಾಜಕೀಯ ಪಕ್ಷಗಳ ನಾಯಕರು ಸಾರ್ವಜನಿಕ ಸಭೆ, ರೋಡ್​ ಶೋ, ಪ್ರಚಾರ ಸಭೆಗಳನ್ನು ನಡೆಸಲು ವಿಧಿಸಲಾಗಿದ್ದ ನಿರ್ಬಂಧದ ಅವಧಿಯನ್ನು ಇಂದು ಚುನಾವಣಾ ಆಯೋಗ ಜನವರಿ 22ರವರೆಗೂ ವಿಸ್ತರಣೆ ಮಾಡಿದೆ.
ಜನವರಿ 8ರಂದು ಸುದ್ದಿಗೋಷ್ಠಿ ನಡೆಸಿದ್ದ ಚುನಾವಣಾ ಆಯೋಗ, ಕೊವಿಡ್​ 19 ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈ ಐದು ರಾಜ್ಯಗಳಲ್ಲಿ ಜನವರಿ 15ರ ವರೆಗೆ ಯಾವುದೇ ಪಕ್ಷಗಳೂ ರೋಡ್ ಶೋ, ಸಾರ್ವಜನಿಕ ಸಭೆ, ರ್ಯಾಲಿಗಳನ್ನು ನಡೆಸುವಂತಿಲ್ಲ ಎಂದು ಹೇಳಿತ್ತು. ಇಂದು ಚುನಾವಣಾ ಆಯೋಗವು ಅದನ್ನು ಜನವರಿ 22ರವರೆಗೂ ವಿಸ್ತರಿಸಿದೆ.
ಉತ್ತರಪ್ರದೇಶ, ಗೋವಾ, ಮಣಿಪುರ, ಉತ್ತರಾಖಂಡ ಮತ್ತು ಪಂಜಾಬ್​​ ರಾಜ್ಯಗಳಲ್ಲಿ ಫೆಬ್ರವರಿ 10ರಿಂದ ಚುನಾವಣೆ ನಡೆಯಲಿದೆ. ಮಾರ್ಚ್​ 10ರಂದು ಮತ ಎಣಿಕೆ ನಡೆಯುತ್ತದೆ. ಕೊರೊನಾ ಹೆಚ್ಚುತ್ತಿರುವ ಕಾರಣಕ್ಕೆ ಚುನಾವಣಾ ಆಯೋಗದ ಅಧಿಕಾರಿಗಳು, ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಆಗಾಗ ಸಭೆ-ಸಮಾಲೋಚನೆ ಮಾಡುತ್ತಿದ್ದು, ಇಂದು ಶನಿವಾರ ಕೂಡ ಸಭೆ ನಡೆಸಿದ ನಂತರ ಈ ನಿರ್ಧಾರ ಹೊರಬಿದ್ದಿದೆ.
ಸಭೆ ವೇಳೆ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ಮತ್ತು ಐದು ರಾಜ್ಯಗಳ ಪ್ರಮುಖ ಆರೋಗ್ಯ ಕಾರ್ಯದರ್ಶಿಗಳು ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಿ, ಕೊರೊನಾ ವೈರಸ್​ ಹರಡುವಿಕೆ ಪ್ರಮಾಣ ಕಡಿಮೆಯಾಗಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಈಗ ನಿರ್ಬಂಧ ಸಡಿಲಿಸಲು ಸೂಕ್ತ ಕಾಲವಲ್ಲ ಎಂದೂ ಮನವರಿಕೆ ಮಾಡಿಕೊಟ್ಟಿದ್ದಾರೆ. ಇಷ್ಟಾದರೂ ಕೂಡ ಸಾರ್ವಜನಿಕರು, ರಾಜಕೀಯ ಕೆಲ ಮುಖಂಡರು ಕೊವಿಡ್​ 19 ಶಿಷ್ಟಾಚಾರವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಸಭೆಯಲ್ಲಿ ಆರೋಗ್ಯ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ಆದರೆ ಚುನಾವಣಾ ಆಯೋಗ ಯಾವುದೇ ರಾಜಕೀಯ ಪಕ್ಷಗಳು ಗರಿಷ್ಠ 300 ವ್ಯಕ್ತಿಗಳನ್ನೊಳಗೊಂಡ ಒಳಾಂಗಣ ಸಭೆ ನಡೆಸಬಹುದು ಅಥವಾ ಯಾವುದೇ ಸಭಾಂಗಣದ ಶೇ.50ರ ಸಾಮರ್ಥ್ಯದಲ್ಲಿ ಜನರನ್ನು ಸೇರಿಸಬಹುದು ಎಂದು ಹೇಳಿದೆ. ಐದು ರಾಜ್ಯಗಳಲ್ಲಿ ಜನವರಿ 8ರಿಂದ ನೀತಿ ಸಂಹಿತೆ ಜಾರಿಯಾಗಿದೆ. ನೀತಿ ಸಂಹಿತೆಯೊಂದಿಗೆ ಕೊವಿಡ್ 19 ನಿಯಂತ್ರಣದ ಮಾರ್ಗಸೂಚಿಗಳನ್ನೂ ಪಾಲನೆ ಮಾಡಲುರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಸೂಚಿಸಿದೆ.

ಪ್ರಮುಖ ಸುದ್ದಿ :-   ರೈಲು ನಿಲ್ದಾಣದಲ್ಲಿ ವ್ಯಕ್ತಿಯ ಸಾವಿನ ರಹಸ್ಯ ಭೇದಿಸಿದ ರೈಲು ಪ್ರಯಾಣಿಕನ ಮೊಬೈಲ್‌ ಸೆಲ್ಫಿ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement