ಹೈಕೋರ್ಟ್‌ನಲ್ಲಿ ಹಿಜಾಬ್‌ ಪ್ರಕರಣ: ಸಾರ್ವಜನಿಕ ಸ್ಥಳದಲ್ಲಿ ನಾವು ಹಿಜಾಬ್ ತೆಗೆಯುವುದಿಲ್ಲ ಎಂಬ ವಿದ್ಯಾರ್ಥಿನಿಯರ ಹೇಳಿಕೆ ಸುಳ್ಳು, ಆಧಾರ್ ಕಾರ್ಡಿನಲ್ಲಿ ಹಿಜಾಬ್ ಧರಿಸಿಲ್ಲ: ವಕೀಲ ನಾಗಾನಂದ

ಬೆಂಗಳೂರು: ಶಿಕ್ಷಕರ ಪರ ವಕಾಲತ್ತು ವಹಿಸಿರುವ ಹಿರಿಯ ವಕೀಲ ಎಸ್ ನಾಗಾನಂದ ಅವರು, ಬುಧವಾರ ವಾದ ಮುಂದುವರಿಸಿದರು. ಇಬ್ಬರು ಅರ್ಜಿದಾರರು ಸಾರ್ವಜನಿಕ ಸ್ಥಳದಲ್ಲಿ ತಾವು ಯಾವಾಗಲೂ ಹಿಜಾಬ್ ಧರಿಸಿಯೇ ಇರುತ್ತೇವೆ ಎಂಬ ವಿದ್ಯಾರ್ಥಿನಿಯರ ಹೇಳಿಕೆ ಸತ್ಯವಲ್ಲ ಎಂದು ವಾದಿಸಿದ ಅವರು, ಇಬ್ಬರು ಅರ್ಜಿದಾರರು ಹಿಜಾಬ್ ಧರಿಸದ ಆಧಾರ್ ಕಾರ್ಡ್ ಚಿತ್ರವನ್ನು ಅವರು ನ್ಯಾಯಾಲಯದ ಗಮನಕ್ಕೆ ತಂದರು.
2021ರ ಡಿಸೆಂಬರ್‌ 30ರಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಎಂಬ ಸಂಘಟನೆಯು ಕಾಲೇಜು ಅಧಿಕಾರಿಗಳನ್ನು ಭೇಟಿ ಮಾಡಿ, ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಒತ್ತಾಯಿಸಿತ್ತು. ಇದಕ್ಕೆ ಅವರು ಒಪ್ಪದಿದ್ದಾಗ, ನಂತರ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಬರಲು ಆರಂಭಿಸಿದರು. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ) ಪ್ರತಿಭಟನೆಗಳನ್ನು ಆಯೋಜಿಸುತ್ತಿದೆ. ಸಿಎಫ್‌ಐ ಅಧಿಕೃತ ಮಾನ್ಯತೆ ಪಡೆದ ವಿದ್ಯಾರ್ಥಿ ಸಂಘಟನೆಯಲ್ಲ, ಈ ಸಂಘಟನೆ ಗದ್ದಲಗಳನ್ನು ಸೃಷ್ಟಿಸುತ್ತದೆ ಎಂದು ಅವರು ಆರೋಪಿಸಿದರು.
ಮುಖ್ಯ ನ್ಯಾಯಮೂರ್ತಿ ರಿತುರಾಜ ಅವಸ್ಥಿ ಅವರು ಸರ್ಕಾರಕ್ಕೆ ಈ ಸಂಘಟನೆಗಳ ಬಗ್ಗೆ ಮಾಹಿತಿ ಇರಬೇಕು ಎಂದು ಹೇಳಿದರು. ಅದಕ್ಕೆ, ನಾಗಾನಂದ್ ಅವರು, “ಗುಪ್ತಚರ ಸಂಸ್ಥೆಗೆ ಇರಬಹುದು” ಎಂದರು.
ಬಳಿಕ ಮುಖ್ಯ ನ್ಯಾಯಮೂರ್ತಿಗಳು ಸರ್ಕಾರ ಪರ ವಕೀಲ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಅವರಿಗೆ “ಈ ಸಂಘಟನೆ ಬಗ್ಗೆ ನಿಮಗೆ ಗುಪ್ತಚರ ಮಾಹಿತಿ ಇದೆಯೇ?” ಎಂದು ಪ್ರಶ್ನಿಸಿದರು. “ನನ್ನ ಬಳಿ ಕೆಲವು ಮಾಹಿತಿ ಇದೆ. ಅದನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುತ್ತೇನೆ” ಎಂದು ಎಜಿ ತಿಳಿಸಿದರು. “ಇದ್ದಕ್ಕಿದ್ದಂತೆ ಇದು ಹೇಗೆ ಸೃಷ್ಟಿಯಾಯಿತು ಎಂದು ಸಿಜೆ ಅಚ್ಚರಿ ವ್ಯಕ್ತಪಡಿಸಿದರು.

ಮಧ್ಯಪ್ರವೇಶಿಸಿದ ಅರ್ಜಿದಾರರ ಪರ ವಕೀಲ ತಾಹಿರ್, “ಈ ಘಟನೆಯಲ್ಲಿ ಕೇಸರಿ ಶಾಲು ಹಂಚಿದ ವರದಿಗಳೂ ಇವೆ. ಒಂದು ಸಂಘಟನೆ ಬಗ್ಗೆ ವರದಿ ಕೇಳಿದರೆ, ಇನ್ನೊಂದು ಸಂಘಟನೆ ಬಗ್ಗೆ ಕೇಳಬೇಕಾಗುತ್ತದೆ” ಎಂದರು. ಇದನ್ನು ಪರಿಶೀಲಿಸುತ್ತೇವೆ ಎಂದು ಸಿಜೆ ಹೇಳಿದರು.
ಬಳಿಕ ವಾದ ಮುಂದುವರಿಸಿದ ನಾಗಾನಂದ, “ಸಿಎಫ್‌ಐ ಸಂಘಟನೆಯಿಂದ ಕೆಲವು ಶಿಕ್ಷಕರಿಗೆ ಬೆದರಿಕೆಗಳು ಕೂಡ ಬಂದಿವೆ. ಅವರ ದೂರು ನೀಡಲು ಹೆದರುತ್ತಿದ್ದಾರೆ. ಒಬ್ಬ ಶಿಕ್ಷಕರು ನಿನ್ನೆ ದೂರು ನೀಡಿದ್ದಾರೆ. ಶಿಕ್ಷಕರು ವಿದ್ಯಾರ್ಥಿಗಳನ್ನು ನಿಂದಿಸುತ್ತಾರೆ ಎಂದು ಮತ್ತೊಂದು ಆರೋಪ ಮಾಡಲಾಗಿದೆ. ಶಿಕ್ಷಕರು ಹಲವು ವರ್ಷಗಳಿಂದ ಮಕ್ಕಳನ್ನು ತಮ್ಮ ಮಕ್ಕಳು ಹಾಗೂ ಸಂಬಂಧಿಕರಂತೆ ನೋಡುತ್ತಿದ್ದಾರೆ ಎಂದು ಹೇಳಿದರು.
“ಈ ಬಗ್ಗೆ ದೂರು ದಾಖಲಾಗಿದೆಯೇ? ಸರ್ಕಾರ ಈ ಬಗ್ಗೆ ಬಹಿರಂಗಪಡಿಸಬೇಕಿತ್ತು” ಎಂದು ನ್ಯಾ. ಕೃಷ್ಣ ಎಸ್ ದೀಕ್ಷಿತ್ ಪ್ರಶ್ನಿಸಿದರು. “ಈ ಬಗ್ಗೆ ನನಗೆ ತಿಳಿದಿಲ್ಲ. ಪರಿಶೀಲಿಸುತ್ತೇನೆ” ಎಂದು ಎಜಿ ತಿಳಿಸಿದರು. “ನೀವು ಹೆದರಿದ್ದೀರೋ ಅಥವಾ ಏನು?” ಎಂದು ನ್ಯಾ. ದೀಕ್ಷಿತ್ ಮರು ಪ್ರಶ್ನಿಸಿದರು. “ಖಂಡಿತಾ ಇಲ್ಲ” ಎಂದು ಎಜಿ ಉತ್ತರಿಸಿದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಮತದಾನಕ್ಕೂ ಮುನ್ನವೇ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ...!

ಶಿಕ್ಷಕರು ಬೈಯುತ್ತಿದ್ದಾರೆ ಎಂದು ಅರ್ಜಿದಾರರು ದೂರುತ್ತಿದ್ದಾರೆ. ಇದು ಗಂಭೀರ ಆರೋಪಗಳಾಗಿವೆ. ಇದಕ್ಕೆ ಅರ್ಜಿದಾರರು ಸಮರ್ಥನೆ ನೀಡಿಲ್ಲ. ತಮ್ಮನ್ನು ಗೈರು ಹಾಜರಿ ಎಂದು ನಮೂದಿಸುವುದಾಗಿ ಶಿಕ್ಷಕರು ಬೆದರಿಕೆ ಹಾಕಿದ್ದಾರೆ ಎಂದು ದೂರುತ್ತಾರೆ. ಅವರು ತರಗತಿಗೆ ಹಾಜರಾಗದಿದ್ದರೆ, ಅವರು ಗೈರು ಎಂದೇ ನಮೂದಿಸಲಾಗುತ್ತದೆ. ಇದರಲ್ಲೇನು ಬೆದರಿಕೆ ಇದೆ ಎಂದು ಪ್ರಶ್ನಿಸಿದ ನಾಗಾನಂದ ಅವರು, ಇಂಟರ್ನಲ್ ಅಂಕಗಳನ್ನು ನೀಡುತ್ತಿದ್ದಾರೆ. 2021ರ ಸೆಪ್ಟೆಂಬರ್‌ನಿಂದಲೂ ಅವರು ಸುಳ್ಳು ಆರೋಪಗಳನ್ನು ಮಾಡುತ್ತ ಬಂದಿದ್ದಾರೆ. ಅರ್ಜಿದಾರರಿಗೆ ತರಗತಿಗಳಲ್ಲಿ ತಾರತಮ್ಯ ಖಂಡಿತಾ ಆಗಿಲ್ಲ” ಎಂದು ವಾದಿಸಿದರು.
2004-05ರಿಂದಲೂ ಸಮವಸ್ತ್ರಗಳು ಕಡ್ಡಾಯ ಎಂದು ನೀವು ಹೇಳುತ್ತೀರಾ?” ಎಂಬುದಾಗಿ ಸಿಜೆ ಪ್ರಶ್ನಿಸಿದರು. “ಹೌದು, ಇದು 2004ರಿಂದಲೂ ಹೀಗೆಯೇ ಇದೆ. ಆಗ ಯಾವ ಸಮಸ್ಯೆಯೂ ಇರಲಿಲ್ಲ” ಎಂದು ನಾಗಾನಂದ್ ಹೇಳಿದರು. ವಿದ್ಯಾರ್ಥಿನಿಯ ಅರ್ಜಿಗೆ ಆಕೆಯ ತಾಯಿ ಅಫಿಡವಿಟ್ ಪರಿಶೀಲನೆ ಮಾಡಿದ್ದನ್ನು ನಾಗಾನಂದ ಆಕ್ಷೇಪಿಸಿದರು.
ಶಾಲೆಗಳು ಶಿಸ್ತು ಕಾಪಾಡಬೇಕು. ಈ ಸಮವಸ್ತ್ರ ನೀತಿ 2004ರಿಂದಲೂ ಜಾರಿಯಲ್ಲಿದೆ. 18 ವರ್ಷಗಳಲ್ಲಿ ಇದನ್ನು ಪ್ರಶ್ನಿಸಿರಲಿಲ್ಲ. 20 ವರ್ಷ ನಮಗೆ ಸಮವಸ್ತ್ರಗಳಿತ್ತು. ಎಲ್ಲವೂ ಶಾಂತಿಯುತವಾಗಿತ್ತು. ಇದ್ದಕ್ಕಿದ್ದಂತೆ ಸಿಎಫ್‌ಐನಂತಹ ಸಂಘಟನೆ ಬಂದು ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಪ್ರಚೋದಿಸಿದೆ. ಈಗ ಇಡೀ ಶಿಕ್ಷಣ ಒದ್ದಾಡುತ್ತಿದೆ” ಎಂದು ನಾಗಾನಂದ ಹೇಳಿದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಮತದಾನಕ್ಕೂ ಮುನ್ನವೇ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ...!

ಮೂಲಭೂತ ಹಕ್ಕು ಪರಿಪೂರ್ಣವಲ್ಲ
“ಯಾವ ಮೂಲಭೂತ ಹಕ್ಕೂ ಪರಿಪೂರ್ಣವಲ್ಲ. 25ನೇ ವಿಧಿಯು “ಸಂಬಂಧಿಸಿದ್ದಾಗಿದೆ” ಎಂದೇ ಆರಂಭವಾಗುತ್ತದೆ. ಇದನ್ನು ಸುಪ್ರೀಂಕೋರ್ಟ್ ಅನೇಕ ತೀರ್ಪುಗಳಲ್ಲಿ ಹೇಳಿದೆ” ಎಂದು ಅವರು ಚರ್ಚ್‌ಗಳಲ್ಲಿ ಧ್ವನಿವರ್ಧಕ ಬಳಸುವುದರ ನಿರ್ಧಾರವನ್ನು ಪ್ರಸ್ತಾಪಿಸಿದರು.
ಪಟಾಕಿಗಳನ್ನು ಹೊಡೆಯುವುದು ಹಬ್ಬದ ಅಗತ್ಯ ಭಾಗ ಎಂಬ ಹಿಂದೂಗಳ ವಾದವನ್ನು ಕೋರ್ಟ್ ನಿರಾಕರಿಸಿತ್ತು. ಮಸೀದಿಗಳಲ್ಲಿ ಆಜಾನ್ ಕೂಗಲು ಧ್ವನಿವರ್ಧಕ ಬಳಸುವುದು ಅವಿಭಾಜ್ಯ ಭಾಗ ಅಲ್ಲ ಎಂದು ಅಲಾಹಾಬಾದ್ ಕೋರ್ಟ್ ಹೇಳಿತ್ತು ಎಂದು ಅವರು ಉದಾಹರಿಸಿದರು.
ಮಕ್ಕಳು ಶಾಲೆಗೆ ಬರಲಿ. ತಮ್ಮ ಧರ್ಮದ ಬಾಹ್ಯ ಸಂಕೇತಗಳನ್ನು ಧರಿಸದೆ ಇರಲಿ. ಈಗ ಬಲಪಂಥೀಯ ಸಂಘಟನೆಯು ಕೇಸರಿ ಶಾಲು ಧರಿಸುವಂತೆ ಬಯಸುತ್ತದೆ. ನಾಳೆ ಮುಸ್ಲಿಂ ಹುಡುಗರು ಟೊಪ್ಪಿ ಧರಿಸಿ ಬರುತ್ತಾರೆ. ಇದಕ್ಕೆ ಅಂತ್ಯವೆಲ್ಲಿದೆ? ಎಂದು ನಾಗಾನಂದ್ ವಾದ ಮಂಡಿಸಿದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement