ಶಿವಲಿಂಗ ಶುದ್ಧೀಕರಣ ವಿಚಾರವಾಗಿ ಆಳಂದದಲ್ಲಿ ಕಲ್ಲು ತೂರಾಟ, ಲಾಠಿ ಚಾರ್ಜ್

ಕಲಬುರಗಿ: ಆಳಂದದ ಲಾಡ್ಲೆ ಮಶಾಕ್ ದರ್ಗಾ ಆವರಣದಲ್ಲಿರುವ ರಾಘವ ಚೈತನ್ಯ ಶಿವಲಿಂಗದ ಶುದ್ಧೀಕರಣ ವಿಚಾರದ ಗದ್ದಲ ವಿಕೋಪಕ್ಕೆ ಹೋಗಿ ಪೊಲೀಸರು ಲಾಠಿಚಾರ್ಜ್‌ ಮಾಡಿದ ಘಟನೆ ನಡೆದಿದೆ.
ಶಿವಲಿಂಗದ ಶುದ್ಧೀಕರಣಕ್ಕೆ ಹಿಂದೂಪರ ಸಂಘಟನೆಗಳು ಪಟ್ಟು ಹಿಡಿದಿದ್ದು, ಆಂದೋಲಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಕಲಬುರಗಿಯಿಂದ ಆಳಂದ ಚಲೋಗೆ ಕರೆ ಕೊಟ್ಟಿದ್ದರು. ಆದರೆ ಇದಕ್ಕೆ ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ.

ಶಿವರಾತ್ರಿ ಹಬ್ಬದಂದೇ ಮುಸ್ಲಿಮರ ಸಂದಲ್ ಮತ್ತು ಶಬ್‍ಏ ಬರಾತ್ ಇರುವುದರಿಂದ ಶಾಂತಿ ಭಂಗವಾಗುವ ಸಾಧ್ಯತೆಯಿದೆ ಎಂದು ಜಿಲ್ಲಾಡಳಿತದಿಂದ ಆಳಂದ ಚಲೋಗೆ ಅನುಮತಿ ಸಿಕ್ಕಿರಲಿಲ್ಲ. ಪ್ರಮೋದ್ ಮುತಾಲಿಕ್ ಹಾಗೂ ಚೈತ್ರಾ ಕುಂದಾಪುರ ಕಲಬುರಗಿ ಜಿಲ್ಲೆಗೆ ಬರುವುದಕ್ಕೆ ನಿಷೇಧ ಸಹ ಹೇರಲಾಗಿತ್ತು.
ಇಂದು ಹಿಂದೂಪರ ಸಂಘಟನೆ ಕಾರ್ಯಕರ್ತರು ದರ್ಗಾ ಪ್ರವೇಶಿಸಬಾರದು ಎಂದು ಯುವಕರ ಗುಂಪೊಂದು ನಿಷೇಧಾಜ್ಞೆ ಮಧ್ಯೆಯೇ ತಲ್ವಾರ್, ದೊಣ್ಣೆ ಪ್ರದರ್ಶಿಸಿತ್ತು. ಆದರೆ ಪೊಲೀಸರು ಯಾರಿಗೂ ಅವಕಾಶ ನೀಡಿರಲಿಲ್ಲ. ಕೇಂದ್ರ ಸಚಿವರು, ಶಾಸಕ, ಸ್ವಾಮೀಜಿ ಆಗಮಿಸಿದ್ದ ಸಂದರ್ಭದಲ್ಲೇ ಕಲ್ಲು ತೂರಾಟ ನಡೆಸಿದ ಘಟನೆ ಬಗ್ಗೆಯೂ ವರದಿಯಾಗಿದೆ.

ಕೇಂದ್ರ ಸಚಿವ ಭಗವಂತ ಖೂಬಾ ಮೇಲೆ ಅಲ್ಪಸಂಖ್ಯಾತ ಸಮುದಾಯದವರು ಕಲ್ಲು ತೂರಾಟ ಮಾಡಿದ ಘಟನೆ ನಡೆದಿದೆ.ಕಲಬುರಗಿ ಜಿಲ್ಲಾಧಿಕಾರಿ ಕಾರು, ಶಾಸಕ ಸುಭಾಷ್ ಗುತ್ತೇದಾರ್ ಅವರ ಕಾರು ಸೇರಿದಂತೆ ಅನೇಕ ಕಾರಿನ ಗಾಜುಗಳು ಪುಡಿಪುಡಿಯಾಗಿವೆ. ಕೇಂದ್ರ ಸಚಿವರ ಕಾರ್, ಸ್ಥಳದಲ್ಲಿದ್ದ ಪೊಲೀಸ್, ಮಾಧ್ಯಮದರ ಮೇಲೆ ಕಲ್ಲು ತೂರಾಟವಾಗಿದ್ದು, ವಿದ್ಯುನ್ಮಾನ ಮಾಧ್ಯಮದ ಹಲವರಿಗೆ ಗಾಯಗಳಾಗಿವೆ.

ಪ್ರಮುಖ ಸುದ್ದಿ :-   ರಾಜ್ಯದಲ್ಲಿ ತಾಪಮಾನ ಏರಿಕೆ : ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕ ರಾಜಕುಮಾರ ಪಾಟೀಲ್, ಬಸವರಾಜ ಮತ್ತಿಮೂಡು, ಕಡಗಂಚಿ ಮಠದ ಸ್ವಾಮೀಜಿ ಸೇರಿ ಹತ್ತು ಜನರ ತಂಡ ಕಲ್ಲು ತೂರಾಟದ ನಡುವೆಯೇ ದರ್ಗಾದೊಳಗೆ ಹೋಗಿ ಪೂಜೆ ಮಾಡಿ ಬಂದಿದೆ. ತೀವ್ರ ಗದ್ದಲ, ಗಲಾಟೆ ನಡೆಸಿದ್ದಕ್ಕೆ ಪೊಲೀಸರು ಲಾಠಿಚಾರ್ಜ್ ನಡೆಸಿ ನಿಯಂತ್ರಿಸಿದ್ದಾರೆ.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement