ವಿಜ್ಞಾನ ಕಲಿಕೆಗೆ ನೀಡುವ ಒತ್ತು ಇತಿಹಾಸದ ಸಂಶೋಧನೆ-ಅಧ್ಯಯನಕ್ಕೂ ಸಿಗಬೇಕಿದೆ: ಹೊರಟ್ಟಿ

posted in: ರಾಜ್ಯ | 0

ಧಾರವಾಡ : ಇತಿಹಾಸ ಸಂಶೋಧನೆಯಲ್ಲಿ ಯುವಕ ಸಂಶೋಧಕರು ಹೆಚ್ಚು ತೊಡಗಿಸಿಕೊಳ್ಳಬೇಕು. ಕೇವಲ ವಿಜ್ಞಾನದ ಕಲಿಕೆಗೆ ಒತ್ತುಕೊಡುವ ಪರಿಸ್ಥಿತಿ ಹಾಗೂ ಮನಸ್ಥಿತಿ ಇಂದು ಪಾಲಕರಲ್ಲಿ ಕಂಡುಬರುತ್ತಿದೆ. ಅದೇರೀತಿ ಇತಿಹಾಸದ ಸಂಶೋಧನೆ ಹಾಗೂ ಅಧ್ಯಯನದ ಬಗ್ಗೆಯೂ ಮಹತ್ವ ನೀಡಬೇಕು ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಬೆಂಗಳೂರಿನ ಕರ್ನಾಟಕ ಇತಿಹಾಸ ಪರಿಷತ್ತು, ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ ನವದೆಹಲಿ ಐ.ಸಿ.ಎಚ್.ಆರ್ ಮತ್ತು ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆ ಸಹಯೋಗದಲ್ಲಿ ಕರ್ನಾಟಕ ಇತಿಹಾಸ ಪರಿಷತ್ತಿನ ೩೧ನೇ ಮಹಾ ಸಮ್ಮೇಳನದ ಉದ್ಘಾಟನೆ ಮಾಡಿ ಅವರು ಮಾತನಾಡಿದರು. ಇತಿಹಾಸದ ಪುನರ್ ನೆನಹು ಆಗಬೇಕು. ಅಂದಾಗ ಮಾತ್ರ ದೇಶದ ಹಾಗೂ ರಾಜ್ಯದ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ತಿಳಿಯಲು ಸಾಧ್ಯವಾಗುತ್ತದೆ ಎಂಬ ಅಭಿಪ್ರಾಯಪಟ್ಟರು.
ಸಂಶೋಧನೆಗೆ ಸಂಬಂಧಿಸಿದ ಕಾರ್ಯಗಳು ಏನೇ ಇದ್ದರೂ, ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಚರ್ಚಿಸುವ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಡಾ. ಶ. ಶೆಟ್ಟರ್ ಅವರು ಸಂಪಾದಿಸಿದ ಮೊದಲನೇ ಸಹಸ್ರಮಾನದ ಕನ್ನಡ ಶಾಸನಗಳು- ೮ ಸಂಪುಟ ಬಿಡುಗಡೆ ಮಾಡಿದರು.
ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಎಂ. ಜಮುನಾ ಮಾತನಾಡಿ, ತಳ ಸಮುದಾಯ ಹಾಗೂ ದೇವದಾಸಿ ಪದ್ಧತಿಗಳು ಹಾಗೂ ಸಮಸ್ಯೆಗಳ ಕುರಿತಾದ ಅಧ್ಯಯನ ಆಗಬೇಕು ಎಂದು ಹೇಳಿದರು.
ಮಹಿಳೆಯರ ಸಾಧನೆ, ಅವರು ಈ ದೇಶಕ್ಕೆ ನೀಡಿದ ಕೊಡುಗೆ ಇತ್ಯಾದಿ ಸಂಗತಿಗಳ ಬಗ್ಗೆ ರಾಜಮಹಾರಾಜರ ಕಾಲದಿಂದ ಇಂದಿನ ವರೆಗೂ ಅಧ್ಯಯನ ನಡೆಯಬೇಕಿದೆ. ರಂಗಭೂಮಿ, ಕಲೆ, ಸಾಹಿತ್ಯ ಹೀಗೆ ಹಲವಾರು ಕ್ಷೇತ್ರಗಳಿಗೆ ಮಹಿಳೆಯರು ಕೊಡುಗೆ ನೀಡಿದ್ದಾರೆ. ಅದು ಇತಿಹಾಸದಲ್ಲಿ ಹುದುಗಿದೆ. ಹೊಸ ಬೆಳಕಿನ ನೆಲೆಯಲ್ಲಿ ಅದು ರಚನೆಯಾಗಬೇಕು ಆ ಕೆಲಸವನ್ನು ಇತಿಹಾಸ ಪರಿಷತ್ತು ಮಾಡಬೇಕು ಅಂದಾಗ ಮಾತ್ರ ಮರೆಯಾದ ಮಹನೀಯರ ಬದುಕು, ಅವರ ಸಾಧನೆ ನಮ್ಮ ಯುವಪೀಳಿಗೆಗೆ ಗೊತ್ತಾಗಲು ಸಾಧ್ಯ ಎಂದರು.
ಕರ್ನಾಟಕ ಇತಿಹಾಸ ಪರಿಷತ್ತಿನ ಲಾಂಛನ ಬಿಡುಗಡೆ ಮಾಡಿದ ಡಾ. ಎನ್. ರಾಜಶೇಖರ ಅವರು, ಶಾಸನಗಳನ್ನು ಅವಲೋಕಿಸಿ, ಸತ್ಯಶೋಧನೆ ಮಾಡುವುದು ಇತಿಹಾಸ. ಅದು ನಿರಂತರವಾಗಿ ಮುಂದುವರಿಯಬೇಕು ಎಂದರು.
ಬೆಳಗಾವಿ ಜಿಲ್ಲೆಯ ಜೈನ ಧರ್ಮದ ಇತಿಹಾಸ ಮತ್ತು ಪುರಾತತ್ವ ಗ್ರಂಥವನ್ನು ಮಹಾವೀರ ಪಡ್ನಾಡ ಬಿಡುಗಡೆ ಮಾಡಿದರು. ಜೆ.ಎಸ್.ಎಸ್ ನ ವಿತ್ತಾಧಿಕಾರಿ ಡಾ. ಅಜಿತ ಪ್ರಸಾದ ಅವರು ಆದಿತ್ಯ ಆರ್. ಹೆಗಡೆ ಅವರಿಗೆ “ಕುಂದಣ” ಪ್ರಶಸ್ತಿ ಪ್ರದಾನ ಮಾಡಿದರು..
ಮೂವತ್ತನೆಯ ಮಹಾಸಮ್ಮೇಳನದ ಪ್ರೊಸಿಡಿಂಗ್ಸ್ ಸಂಪುಟ ಸಂಪಾದಕರಾದ ಡಾ. ಆರ್. ಎಂ. ಷಡಕ್ಷರಯ್ಯ ಮಾತನಾಡಿ ಪ್ರೊಸಿಡಿಂಗ್ಸ್ ನೂರೈವತ್ತಕ್ಕೂ ಹೆಚ್ಚು ಲೇಖನಗಳನ್ನು ಒಳಗೊಂಡ ಪುಸ್ತಕ ಇದಾಗಿದೆ. ಯುವ ಬರಹಗಾರರ ಲೇಖನಗಳಿಗೆ ವಿಶೇಷ ಪ್ರಾಶಸ್ತ್ಯ ನೀಡಲಾಗಿದೆ ಎಂದರು.
೩೦ನೇ ಮಹಾಸಮ್ಮೇಳನದ ಪ್ರೊಸಿಡಿಂಗ್ಸ್‌ ಬಿಡುಗಡೆ ಮಾಡಿದ ಡಾ. ಎಂ. ಕೊಟ್ರೇಶ ಮಾತನಾಡಿ, ಈ ಪುಸ್ತಕವು ಯುವ ಸಂಶೋಧಕರ, ಹಿರಿಯ ಸಂಶೋಧಕರ ಅತ್ಯಂತ ಉಪಯುಕ್ತ, ಮೌಲ್ಯಯುತ ಉತ್ತಮ ಲೇಖನಗಳನ್ನು ಹೊಂದಿದ ಕೃತಿಯಾಗಿದೆ. ಕರ್ನಾಟಕ ಇತಿಹಾಸ ಪರಿಷತ್ತು ಉತ್ತಮ ದಿಕ್ಕಿನತ್ತ ಹೆಜ್ಜೆ ಹಾಕುತ್ತಿದೆ. ಇನ್ನೂ ಹಲವಾರು ಕೃತಿಗಳು ಹೊರಬರಲಿ ಇದರಿಂದ ಯುವ ಸಂಶೋಧಕರಿಗೆ ಅನುಕೂಲವಾಗಲಿ ಎಂದರು.
೨೬ನೇ ಮಹಾಸಮ್ಮೇಳನದ ಪ್ರೊಸಿಡಿಂಗ್ಸ್‌ ಅನ್ನು ಮಂಜುಳಾ ಎಲಿಗಾರ ಬಿಡುಗಡೆಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಆರ್. ರಾಜಣ್ಣ ಅವರು, ಇತಿಹಾಸ ಸಂಶೋಧಕರು, ಆಸಕ್ತರು ಸೇರಿ ನಿರ್ಮಿಸಿದ ಸಂಸ್ಥೆ ಇದಾಗಿದ್ದು, ಮುಂದಿನ ಪೀಳಿಗೆಗೆ ಇದರ ಉಪಯೋಗವಾಗುತ್ತದೆ ಎಂಬ ಆಶಯ ಇಟ್ಟುಕೊಂಡು ಕಟ್ಟಿದ್ದಾರೆ. ೧೯೮೧ರಲ್ಲಿ ಕರ್ನಾಟಕ ಇತಿಹಾಸ ಪರಿಷತ್ತು ರಚನೆಯಾಗಿದೆ. ನಿರಂತರವಾಗಿ ಅಲ್ಲಿಂದ ಇಲ್ಲಿಯವರೆಗೆ ಸಂಶೋಧನಾ ಕ್ಷೇತ್ರದಲ್ಲಿ ಈ ಸಂಸ್ಥೆ ತನ್ನನ್ನು ತಾನು ತೊಡಗಿಸಿಕೊಂಡಿದೆ ಎಂದರು.
ಡಾ. ಐ. ಕೆ. ಪತ್ತಾರ ಕರ್ನಾಟಕ ಇತಿಹಾಸ ಪರಿಷತ್ತಿನ ವರದಿ ವಾಚನ ಮಾಡಿದರು.
ದೀಪಾ ಪ್ರಾರ್ಥಿಸಿದರು ಡಾ. ವಿಷ್ಣುವರ್ಧನ ಸ್ವಾಗತಿಸಿದರು ಡಾ. ಜಿನದತ ಹಡಗಲಿ ನಿರೂಪಿಸಿದರು. ಡಾ. ಭರಮಪ್ಪ ಬಾವಿ ವಂದಿಸಿದರು. ಡಾ. ವಾಸುದೇವ ಬಡಿಗೇರ, ಡಾ. ಎನ್.ವಿ ಅಸ್ಕಿ, ಡಾ. ವಿರೂಪಾಕ್ಷಿ ಪೂಜಾರಹಳ್ಳಿ, ಡಾ. ಎಸ್. ನಾಗರತ್ನ, ಡಾ. ಆರ್.ಎಂ ಷಡಕ್ಷರಯ್ಯ, ಡಾ. ಐ.ಕೆ ಪತ್ತಾರ, ಡಾ. ಎಚ್.ಆರ್ ದೇಸಾಯಿ , ಡಾ. ಆರ್.ವಿ ಚಿಟಗುಪ್ಪಿ, ಡಾ. ಅಶೋಕ ಶೆಟ್ಟರ, ಡಾ. ಜೆ.ಎಂ ನಾಗಯ್ಯ, ಮಹಾವೀರ ಉಪಾದ್ಯೆ, ಡಾ. ಸಂಗಯ್ಯ ಶಿವಪ್ಪಯ್ಯನಮಠ, ಜಿನೇಂದ್ರ ಕುಂದಗೋಳ ಮೊದಲಾದವರಿದ್ದರು.

ಓದಿರಿ :-   ಮುಂದಿನ 15 ದಿನಗಳ ಕಾಲ ಅಧಿಕಾರಿಗಳು ರಜೆ ತೆಗೆದುಕೊಳ್ಳುವಂತಿಲ್ಲ:ಸಿಎಂ ಬೊಮ್ಮಾಯಿ ಸೂಚನೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ