ತಮ್ಮ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲಿನ ಮತಕ್ಕೆ ಮೊದಲು ಮತ್ತೊಂದು ಮಿತ್ರಪಕ್ಷ ಕಳೆದುಕೊಂಡ ಪಾಕ್ ಪ್ರಧಾನಿ ಇಮ್ರಾನ್ ಖಾನ್

ಇಸ್ಲಾಮಾಬಾದ್: ಇಸ್ಲಾಮಾಬಾದ್‌ನಲ್ಲಿ ಪಾಕಿಸ್ತಾನ ಇಮ್ರಾನ್ ಖಾನ್ ಬೃಹತ್‌ ರ್ಯಾಲಿ ಮೂಲಕ ಶಕ್ತಿ ಪ್ರದರ್ಶನಕ್ಕೆ ಒಂದು ಗಂಟೆಯ ಮೊದಲು, ತಮ್ಮ ಸರ್ಕಾರಕ್ಕೆ ಜಮ್ಹೂರಿ ವತನ್ ಪಾರ್ಟಿ (ಜೆಡಬ್ಲ್ಯುಪಿ) ಮುಖ್ಯಸ್ಥ ಶಹಜೈನ್ ಬುಗ್ತಿ ಅವರ ಬೆಂಬಲ ಕಳೆದುಕೊಂಡಿದ್ದಾರೆ – ಅವರು . ದೇಶದ ಪ್ರಧಾನಿ ವಿರುದ್ಧ ಅವಿಶ್ವಾಸ ನಿರ್ಣಯದಲ್ಲಿ ಸರ್ಕಾರದಿಂದ ಬೆಂಬಲ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ್ದು, ವಿರೋಧಪಕ್ಷಗಳ ಒಕ್ಕೂಟದ ಪರವಾಗಿ ಮತ ಹಾಕುವುದಾಗಿ ಹೇಳಿದ್ದಾರೆ.

ಬಲೂಚಿಸ್ತಾನದಲ್ಲಿ ಇಮ್ರಾನ್‌ಖಾನ್‌ರ ವಿಶೇಷ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಶಹಜೈನ್ ಬುಗ್ತಿ ಅವರು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೋ-ಜರ್ದಾರಿ ಅವರನ್ನು ಭೇಟಿಯಾದ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.
ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳಿಗೆ ಬೆಂಬಲ ನೀಡುವುದಾಗಿ ಬುಗ್ತಿ ಘೋಷಿಸಿದರು. ಇಮ್ರಾನ್ ಖಾನ್ ಅವರ ಪಕ್ಷ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಅವಿಶ್ವಾಸ ನಿರ್ಣಯವನ್ನು ಎದುರಿಸಲು ಸಿದ್ಧವಾಗಿದೆ. ಇಂದು, ಸೋಮವಾರ ಅಧಿವೇಶನ ಕರೆಯಲಾಗಿದೆ.

ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅನೇಕ ಪಿಟಿಐ ಶಾಸಕರು ಬಹಿರಂಗವಾಗಿ ಬಂಡೆದ್ದಿರುವುದರಿಂದ ವಿರೋಧ ಪಕ್ಷವು ತನ್ನ ಅವಿಶ್ವಾಸ ನಿರ್ಣಯ ಗೆಲ್ಲುವ ವಿಶ್ವಾಸದಲ್ಲಿದೆ. ನಿರ್ಣಾಯಕ ಅವಿಶ್ವಾಸ ಗೊತ್ತುವಳಿ ಮಂಡನೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಆಡಳಿತ ಪಕ್ಷಕ್ಕೆ ಸೇರಿದ ಕನಿಷ್ಠ 50 ಸಚಿವರು ‘ಕಾಣೆಯಾಗಿದ್ದಾರೆ’ ಎಂದು ಮೂಲಗಳನ್ನು ಉಲ್ಲೇಖಿಸಿ ಟ್ರಿಬ್ಯೂನ್ ವರದಿ ಮಾಡಿದೆ.
ಪಾಕಿಸ್ತಾನಿ ರಾಷ್ಟ್ರೀಯ ಅಸೆಂಬ್ಲಿಯು ಒಟ್ಟು 342 ಸದಸ್ಯರ ಬಲವನ್ನು ಹೊಂದಿದೆ, ಸರಳ ಬಹುಮತಕ್ಕೆ 172 ಜನರ ಬೆಂಬಲ ಬೇಕಾಗುತ್ತದೆ.

ಪಿಟಿಐ ನೇತೃತ್ವದ ಒಕ್ಕೂಟವು 179 ಸದಸ್ಯರ ಬೆಂಬಲದೊಂದಿಗೆ ರಚನೆಯಾಯಿತು, ಇಮ್ರಾನ್ ಖಾನ್ ಅವರ ಪಿಟಿಐ 155 ಸದಸ್ಯರನ್ನು ಹೊಂದಿದೆ ಮತ್ತು ನಾಲ್ಕು ಪ್ರಮುಖ ಮಿತ್ರಪಕ್ಷಗಳಾದ ಮುತ್ತಹಿದಾ ಕ್ವಾಮಿ ಮೂವ್ಮೆಂಟ್-ಪಾಕಿಸ್ತಾನ್ (ಎಂಕ್ಯೂಎಂ-ಪಿ), ಪಾಕಿಸ್ತಾನ್ ಮುಸ್ಲಿಂ ಲೀಗ್-ಕ್ವೈಡ್ (ಪಿಎಂಎಲ್-ಕ್ಯೂ), ಬಲೂಚಿಸ್ತಾನ್ ಅವಾಮಿ ಪಾರ್ಟಿ (BAP) ಮತ್ತು ಗ್ರ್ಯಾಂಡ್ ಡೆಮಾಕ್ರಟಿಕ್ ಅಲಯನ್ಸ್ (GDA) ಕ್ರಮವಾಗಿ ಏಳು, ಐದು, ಐದು ಮತ್ತು ಮೂರು ಸದಸ್ಯರನ್ನು ಹೊಂದಿದೆ.
ನಾಲ್ಕು ಮಿತ್ರಪಕ್ಷಗಳಲ್ಲಿ ಮೂರು, ಅಂದರೆ, MQM-P, PML-Q ಮತ್ತು BAP ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯಕ್ಕೆ ತಮ್ಮ ಬೆಂಬಲವನ್ನು ಸೂಚಿಸಿವೆ ಮತ್ತು ಅವಿಶ್ವಾಸ ನಿರ್ಣಯದ ಪರವಾಗಿ ಮತ ಚಲಾಯಿಸುವುದಾಗಿ ಹೇಳಿರುವುದರಿಂದ ಇಮ್ರಾನ್ ಖಾನ್ ಸರ್ಕಾರದ ಪರಿಸ್ಥಿತಿ ಅನಿಶ್ಚಿತವಾಗಿದೆ.
ಕೊನೆಯ ಪ್ರಯತ್ನದಲ್ಲಿ, ಇಮ್ರಾನ್ ಖಾನ್ ಇತ್ತೀಚೆಗೆ ಮಿತ್ರಪಕ್ಷಗಳನ್ನು ಭೇಟಿ ಮಾಡಲು ಹಿರಿಯ ಪಿಟಿಐ ನಾಯಕರ ತಂಡವನ್ನು ಕಳುಹಿಸಿದರು ಮತ್ತು ಅವರಿಗೆ ಇರುವ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement