ಸಾಲದ ಸುಳಿಯಲ್ಲಿ ಸಿಲುಕಿರುವ ಶ್ರೀಲಂಕಾದಲ್ಲಿ ಡೀಸೆಲ್‌ ಮಾರಾಟ ಸ್ಥಗಿತ- ಗ್ಯಾರೇಜ್‌ಗಳಲ್ಲಿರುವ ಬಸ್‌ಗಳಿಂದ ಇಂಧನ ತೆಗೆದು ಬಳಕೆ..!

ಕೊಲಂಬೊ: ಶ್ರೀಲಂಕಾ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಅತ್ಯಂತ ಅವಶ್ಯಕ ವಸ್ತುಗಳ ಆಮದುಗಳಿಗೂ ಪಾವತಿಸಲು ವಿದೇಶಿ ಕರೆನ್ಸಿಯ ಕೊರತೆ ಎದುರಾಗಿದ್ದು, ಹೀಗಾಗಿ ಗುರುವಾರ ದೇಶಾದ್ಯಂತ ಡೀಸೆಲ್‌ ಮಾರಾಟ ಸ್ಥಗಿತಗೊಳಿಸಲಾಗಿದೆ.
ಶ್ರೀಲಂಕಾದಲ್ಲಿ ಗುರುವಾರ ಡೀಸೆಲ್ ಮಾರಾಟವಾಗಲಿಲ್ಲ. ಸುಮಾರು 2.2 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಸಾರಿಗೆ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರಲಿದೆ.
ದ್ವೀಪ ರಾಷ್ಟ್ರವು ಸ್ವಾತಂತ್ರ್ಯದ ನಂತರದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಬಸ್‌ ಮತ್ತು ವಾಣಿಜ್ಯ ವಾಹನಗಳಿಗೆ ಡೀಸೆಲ್‌ ಅತ್ಯಗತ್ಯ ಇಂಧನವಾಗಿದೆ. ಆದರೆ ಬಂಕ್‌ಗಳಲ್ಲಿ ಡೀಸೆಲ್‌ ಮಾರಾಟ ಸ್ಥಗಿತಗೊಳಿಸಲಾಗಿದೆ. ಪೆಟ್ರೋಲ್‌ ಮಾರಾಟವಾಗುತ್ತಿದೆ. ಆದರೆ ಪೂರೈಕೆ ಕಡಿಮೆಯಿದೆ. ಹೀಗಾಗಿ ಜನರು ಕಾರುಗಳನ್ನು ರಸ್ತೆಯುದ್ದಕ್ಕೂ ಸರತಿ ಸಾಲಿನಲ್ಲಿ ನಿಲ್ಲಿಸಿದ್ದಾರೆ.

ದುರಸ್ತಿಗೆ ಗ್ಯಾರೇಜ್‌ನಲ್ಲಿರುವ ಬಸ್‌ಗಳಿಂದ ನಾವು ಇಂಧನವನ್ನು ಹೊರತೆಗೆಯುತ್ತೇವೆ. ಆ ಡೀಸೆಲ್‌ನ್ನು ಅಗತ್ಯ ಸೇವೆಯ ವಾಹನಗಳನ್ನು ಚಲಾಯಿಸಲು ಬಳಸುತ್ತೇವೆ ಎಂದು ಸಾರಿಗೆ ಸಚಿವ ದಿಲುಮ್ ಅಮುನುಗಮ ಹೇಳಿದ್ದಾರೆ.
ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಖಾಸಗಿ ಬಸ್‌ಗಳ ಮಾಲೀಕರು ಮೂರನೇ ಎರಡು ಭಾಗದಷ್ಟು ಇದ್ದಾರೆ. ಅವರ ಬಳಿಯೂ ಇಂಧನ ಖಾಲಿಯಾಗಿದೆ. ಶುಕ್ರವಾರದಿಂದ ಸಾರಿಗೆ ಸೇವೆ ಅಸಾಧ್ಯ ಎಂದು ಹೇಳುತ್ತಿದ್ದಾರೆ.
ನಮ್ಮ ಡೀಸೆಲ್‌ ದಾಸ್ತಾನನ್ನು ಬಳಸಿ ಬಸ್‌ಗಳನ್ನು ಓಡಿಸುತ್ತಿದ್ದೇವೆ. ಇಂದು ಸಂಜೆಯೊಳಗೆ ನಮಗೆ ಡೀಸೆಲ್‌ ಸರಬರಾಜು ಆಗದಿದ್ದರೆ ಬಸ್‌ಗಳ ಕಾರ್ಯಾಚರಣೆ ಅಸಾಧ್ಯ ಎಂದು ಖಾಸಗಿ ಬಸ್‌ ನಿರ್ವಾಹಕರ ಸಂಘದ ಅಧ್ಯಕ್ಷ ಗೆಮುನು ವಿಜೆರತ್ನೆ ತಿಳಿಸಿದ್ದಾರೆ.
ಜನರೇಟರ್‌ಗಳಿಗೆ ಡೀಸೆಲ್‌ ಇಲ್ಲ. ಹೀಗಾಗಿ ಗುರುವಾರದಿಂದ 13 ಗಂಟೆಗಳ ಕಾಲ ದೇಶದಲ್ಲಿ ವಿದ್ಯುತ್‌ ಕಡಿತ ಜಾರಿಗೊಳಿಸಬೇಕಾಯಿತು.
ಶ್ರೀಲಂಕಾ ತನ್ನ 51 ಬಿಲಿಯನ್ ಡಾಲರ್ ವಿದೇಶಿ ಸಾಲವನ್ನು ತೀರಿಸಲು ಅಗತ್ಯವಾದ ವಿದೇಶಿ ಕರೆನ್ಸಿಯನ್ನು ಉಳಿಸುವ ಪ್ರಯತ್ನದಲ್ಲಿ ಮಾರ್ಚ್ 2020ರಲ್ಲಿ ವಿಶಾಲ ಆಮದು ನಿಷೇಧವನ್ನು ವಿಧಿಸಿತು. ಆದರೆ ಇದು ಅಗತ್ಯ ವಸ್ತುಗಳ ವ್ಯಾಪಕ ಕೊರತೆ ಮತ್ತು ತೀವ್ರ ಬೆಲೆ ಏರಿಕೆಗೆ ಕಾರಣವಾಗಿದೆ.

ಓದಿರಿ :-   1955ರ ಮರ್ಸಿಡಿಸ್-ಬೆಂಜ್ 300 SLR ಕಾರು ಮಾರಾಟವಾದ ದುಬಾರಿ ಕಾರು...ಮೊತ್ತ ಕೇಳಿದರೆ ಬೆಚ್ಚಿ ಬೀಳ್ತೀರಾ..!

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ