ಪಾಕಿಸ್ತಾನದ ಪ್ರಧಾನಿ ಅಭ್ಯರ್ಥಿಯಾಗಿ ಶೆಹಬಾಜ್ ಷರೀಫ್ ನಾಮನಿರ್ದೇಶನ, ಬಿಲಾವಲ್ ಭುಟ್ಟೋ ವಿದೇಶಾಂಗ ಸಚಿವರಾಗುವ ಸಾಧ್ಯತೆ

ಪಾಕಿಸ್ತಾನದ ARY ನ್ಯೂಸ್‌ನ ವರದಿಯ ಪ್ರಕಾರ, ಪಾಕಿಸ್ತಾನದ ವಿರೋಧ ಪಕ್ಷಗಳು ಭಾನುವಾರ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್‌ನಾಯಕ ಶೆಹಬಾಜ್ ಷರೀಫ್ ಅವರನ್ನು ಪ್ರಧಾನಿ ಚುನಾವಣೆಗೆ ತಮ್ಮ ಜಂಟಿ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಿದೆ.
ಶನಿವಾರ ತಡರಾತ್ರಿ ಅವಿಶ್ವಾಸ ನಿರ್ಣಯದ ಮೂಲಕ ಇಮ್ರಾನ್ ಖಾನ್ ಅವರನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿದ ನಂತರ ನವಾಜ್ ಷರೀಫ್ ಅವರ ಸಹೋದರ ಶೆಹಬಾಜ್ ಷರೀಫ್ ಅವರು ಪಾಕಿಸ್ತಾನದ ಮುಂದಿನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಯಿದೆ.

ಪಾಕಿಸ್ತಾನ್ ಮುಸ್ಲಿಂ ಲೀಗ್ (ನವಾಜ್) ಪಕ್ಷದ ಮುಖ್ಯಸ್ಥರು ಟ್ವಿಟರ್‌ನಲ್ಲಿ, “ಮಾಧ್ಯಮ, ನಾಗರಿಕ ಸಮಾಜ, ವಕೀಲರು, ನವಾಜ್ ಷರೀಫ್, ಆಸಿಫ್ ಜರ್ದಾರಿ, ಮೌಲಾನಾ ಫಜಲ್-ಉರ್-ರೆಹಮಾನ್, ಬಿಲಾವಲ್ ಭುಟ್ಟೊ, ಖಾಲಿದ್ ಮಕ್ಬೂಲ್ ಅವರಿಗೆ ವಿಶೇಷ ಧನ್ಯವಾದಗಳು. ಸಂವಿಧಾನದ ಪರವಾಗಿ ನಿಂತಿದ್ದಕ್ಕಾಗಿ ಖಾಲಿದ್ ಮಾಗ್ಸಿ, ಮೋಸಿನ್ ದಾವರ್, ಅಲಿ ವಜೀರ್, ಅಮೀರ್ ಹೈದರ್ ಹೋಟಿ ಮತ್ತು ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರಿಗೂ ಧನ್ಯವಾದಗಳು ತಿಳಿಸಿದ್ದಾರೆ.
ಶೆಹಬಾಜ್‌ ಷರೀಫ್ ಅವರು ಇಮ್ರಾನ್ ಖಾನ್ ಅವರ ಸರ್ಕಾರವನ್ನು ಉರುಳಿಸಲು ವಿರೋಧ ಪಕ್ಷಗಳನ್ನು ಮುನ್ನಡೆಸಿದ್ದಾರೆ ಮತ್ತು ಸತತವಾಗಿ ಪ್ರಧಾನಿ ಹುದ್ದೆಗೆ ವಿರೋಧ ಪಕ್ಷದ ಏಕೈಕ ಅಭ್ಯರ್ಥಿಯಾಗಿ ಗುರುತಿಸಿಕೊಂಡಿದ್ದಾರೆ. ಶೆಹಬಾಜ್ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿ ಮೂರು ಬಾರಿ ಸೇವೆ ಸಲ್ಲಿಸಿದ್ದಾರೆ.
ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಮುಖ್ಯಸ್ಥ ಬಿಲಾವಲ್ ಭುಟ್ಟೊ ಅವರು ಹೊಸ ಸರ್ಕಾರದಲ್ಲಿ ಮುಂದಿನ ವಿದೇಶಾಂಗ ಸಚಿವರಾಗಿ ನೇಮಕಗೊಳ್ಳುವ ಸಾಧ್ಯತೆಯಿದೆ ಎಂದು ಸ್ಥಳೀಯ ಮಾಧ್ಯಮ ವರದಿಯನ್ನು ಪಿಟಿಐ ಉಲ್ಲೇಖಿಸಿದೆ.

ವದಂತಿಗಳ ಪ್ರಕಾರ, ಬಿಲಾವಲ್ ಭುಟ್ಟೋ-ಜರ್ದಾರಿ ಅವರನ್ನು ವಿದೇಶಾಂಗ ವ್ಯವಹಾರಗಳ ಸಚಿವರನ್ನಾಗಿ ನೇಮಿಸುವ ಸಾಧ್ಯತೆಯಿದೆ” ಎಂದು ಜಿಯೋನ್ಯೂಸ್ ವರದಿ ಹೇಳಿದೆ.
ಬಿಲಾವಲ್ ಭುಟ್ಟೋ ಅವರು ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಮತ್ತು ಪಾಕಿಸ್ತಾನದ ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರ ಪುತ್ರರಾಗಿದ್ದಾರೆ. ಅವರು ಮಾಜಿ ಅಧ್ಯಕ್ಷ ಮತ್ತು ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೊ ಮೊಮ್ಮಗ.
ಶನಿವಾರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ, ಬಿಲಾವಲ್ ಅವರು ಪ್ರಸ್ತುತ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಅವರ ಮೇಲೆ ವಾಗ್ದಾಳಿ ನಡೆಸಿ ಪದಚ್ಯುತಗೊಳಿಸುವುದರ ಹಿಂದೆ “ವಿದೇಶಿ ಪಿತೂರಿ” ಎಂದು ಕರೆಯುವ ಪಿಟಿಐ ಸರ್ಕಾರದವರು ರಾಷ್ಟ್ರೀಯ ಭದ್ರತಾ ಸಮಿತಿಯ ಸಭೆಗೆ ಏಕೆ ಹಾಜರಾಗಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಸರ್ಕಾರದ ವಿರುದ್ಧ ಷಡ್ಯಂತ್ರ ನಡೆದಿದ್ದರೆ ಖಾನ್ ಕೂಡಲೇ ಕ್ರಮ ಕೈಗೊಳ್ಳಬೇಕಿತ್ತು ಎಂದು ಬಿಲಾವಲ್ ಹೇಳಿದ್ದಾರೆ. ಪ್ರಸ್ತುತ ಹೋರಾಟವು ಪಿಟಿಐ, ಪಿಪಿಪಿ ಅಥವಾ ಪಿಡಿಎಂ ನಡುವೆ ಅಲ್ಲ, ಬದಲಿಗೆ ಸಂವಿಧಾನವನ್ನು ಎತ್ತಿಹಿಡಿದವರು ಮತ್ತು ಅದನ್ನು ಕಡೆಗಣಿಸುವವರ ನಡುವೆ ಎಂದು ಅವರು ಸಮರ್ಥಿಸಿಕೊಂಡರು.
ಮುಂದಿನ ಪ್ರಧಾನಿಯನ್ನು ನಾಮನಿರ್ದೇಶನ ಮಾಡಲು ರಾಷ್ಟ್ರೀಯ ಅಸೆಂಬ್ಲಿ ಸೋಮವಾರ ಮತ್ತೆ ಸೇರಲಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement