ರಾಮ- ಸೀತೆಯರ ಪ್ರೀತಿ ಅಲೌಕಿಕ, ಧರ್ಮಸಮ್ಮತ : ರಾಘವೇಶ್ವರ ಸ್ವಾಮೀಜಿ

ಕುಮಟಾ: ರಾಮ- ಸೀತೆಯರ ಪ್ರೀತಿಯನ್ನು ಕ್ಷುದ್ರ ದೃಷ್ಟಿಯಿಂದ ನೋಡದೇ ಅದನ್ನು ಮೂಲ ಪ್ರಕೃತಿ ಮತ್ತು ಪರಮ ಪುರುಷನ ಪ್ರೀತಿಯಾಗಿ ಲೌಕಿಕ ದೃಷ್ಟಿಯಿಂದ ನೋಡಬೇಕು ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೂರೂರು ಪ್ರಗತಿ ವಿದ್ಯಾಲಯದ ರಾಮಲೀಲಾ ಮೈದಾನದಲ್ಲಿ ಐದು ದಿನಗಳ ನಡೆಯುತ್ತಿರುವ ‘ರಾಮಸೇತು’ ರಾಮಕಥಾ ಸರಣಿಯ ಎರಡನೇ ದಿನದ ಪ್ರವಚನದಲ್ಲಿ ಅವರು, ರಾಮ ಸೀತೆಯ ಪ್ರೀತಿ ಪರಿಪೂರ್ಣ. ಪರಿಪೂರ್ಣ ಪ್ರೀತಿಯಷ್ಟೇ ವಿಶ್ವದ ಪ್ರೀತಿಯಾಗಿ ಭಗವತ್ ಪ್ರೀತಿಯಾಗಿ ಮಾರ್ಪಡುತ್ತದೆ ಎಂದು ವಿಶ್ಲೇಷಿಸಿದರು.

ಪ್ರೀತಿ ಹಾಗೂ ತ್ಯಾಗಕ್ಕೆ ರಾಮ ಅಪೂರ್ವ ನಿದರ್ಶನ. ಅಯೋಧ್ಯೆಯಿಂದ ಆರಂಭವಾದ ರಾಮನ ಪ್ರಯಾಣ ಅವಲೋಕಿಸಿದರೆ ಇದು ವೇದ್ಯವಾಗುತ್ತದೆ. ಅಯೋಧ್ಯೆಯಿಂದ ಚಿತ್ರಕೂಟಕ್ಕೆ, ಅಲ್ಲಿಂದ ದಂಡಕಾರಣ್ಯ ಮೂಲಕ ಪಂಚವಟಿ, ಕಿಷ್ಕಿಂದೆಗೆ ಅಲ್ಲಿಂದ ವಾನರ ಸೇನಾ ಸಹಿತನಾಗಿ ಮಹೇಂದ್ರ ಪರ್ವತದತ್ತ ಹೀಗೆ ರಾಮ ಸಮಗ್ರ ಭಾರತ ಪರಿಭ್ರಮಣ ಕೈಗೊಂಡದ್ದು ಪಿತೃವಾಕ್ಯ ಪರಿಪಾಲನೆಗಾಗಿ ಮತ್ತು ಸೀತೆಯ ಪ್ರೀತಿಗಾಗಿ ಎಂದು ವರ್ಣಿಸಿದರು.
ಸಂಬಂಧಕ್ಕಾಗಿ ರಾಮ ಕೊಟ್ಟ ಬೆಲೆ ದೊಡ್ಡದು. ತಂದೆಗಾಗಿ ಮಾಡಿದ ತ್ಯಾಗ ದೊಡ್ಡದು. ಪ್ರೀತಿಸಿದರೆ ರಾಮನಂತೆ ಪ್ರೀತಿಸಬೇಕು. ತಂದೆಗೆ ರಾಮನಂಥ ಮಗ, ಪತ್ನಿಗೆ ರಾಮನಂಥ ಪತಿ ಸಿಗಲಾರ ಎಂದರು.

ಪ್ರಮುಖ ಸುದ್ದಿ :-   ಇನ್ಮುಂದೆ ಎಸ್ ​ಎಸ್ಎ ಲ್ ​ಸಿಗೆ ಗ್ರೇಸ್ ಮಾರ್ಕ್ಸ್ ರದ್ದು ಮಾಡಲು ಸಿಎಂ ಸಿದ್ದರಾಮಯ್ಯ ಸೂಚನೆ

ಕಾಲ ಕಳೆದಂತೆ ಶೋಕ ಇಳಿದು ಹೋಗುತ್ತದೆ ಎನ್ನುತ್ತಾರೆ. ದುಃಖಕ್ಕೆ ಕಾಲವೇ ಔಷಧ. ಆದರೆ ರಾವಣನ ವಶದಲ್ಲಿರುವ ಸೀತೆಯ ಆಯಸ್ಸು ಸೊರಗಿ ಹೋಗುತ್ತಿರುವ ದುಃಖ ಮಾತ್ರ ರಾಮನನ್ನು ಕೊನೆವರೆಗೂ ಕಾಡುತ್ತದೆ. ರಾಮ ರತ್ನ ಆಕೆಯ ಪಾಲಿಗೆ ದೊಡ್ಡದು. ಅದನ್ನೂ ಕಳೆದುಕೊಂಡು ರಾಕ್ಷಸರ ಮಧ್ಯೆ ಹೇಗೆ ಬದುಕುವಳೋ ಎಂಬ ವಿರಹ ಕಾಡುತ್ತದೆ. ಸೀತೆ ಬಗ್ಗೆ ರಾಮ ಹೊಂದಿದ ಪ್ರೀತಿ ಬಗ್ಗೆ ಸಂದೇಹ ವ್ಯಕ್ತಪಡಿಸುವವರು ಇದನ್ನು ಗಮನಿಸಬೇಕು ಎಂದು ಅಭಿಪ್ರಾಯಪಟ್ಟರು.
ರಾಮನ ಈ ಉತ್ಕಟ ಪ್ರೀತಿಯೇ ರಾವಣನ ಆತ್ಮವಿಶ್ವಾಸ ಕುಂದಲು ಕಾರಣವಾದದ್ದು. ರಾವಣನಿಗೂ ಪರಮಾತ್ಮನ ಬಗೆಗಿನ ವಿಶ್ವಾಸ ಹೆಚ್ಚಿದ್ದು, ಇದೇ ಕಾರಣದಿಂದ. ಲಕ್ಷ್ಮಣ- ವಾನರ ಸಹಿತನಾಗಿ ರಾಮ ಸಮುದ್ರ ದಾಟಿ ಲಂಕೆಗೆ ದಾಳಿ ಮಾಡುವುದು ನಿಶ್ಚಿತ ಎಂಬ ಅಭಿಪ್ರಾಯವನ್ನು ರಾವಣ ತುಂಬುಸಭೆಯಲ್ಲೇ ವ್ಯಕ್ತಪಡಿಸುತ್ತಾನೆ ಎಂದು ಸ್ವಾರಸ್ಯಕರವಾಗಿ ಬಣ್ಣಿಸಿದರು.

ವಿದ್ವಾನ್ ಸತ್ಯನಾರಾಯಣ ಶರ್ಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೀತ ರಚನೆಕಾರರಾದ ಡಾ.ಗಜಾನನ ಶರ್ಮಾ, ಕಥಾಸಿದ್ಧತೆಯ ಸತ್ಯನಾರಾಯಣ ಶರ್ಮಾ ಮತ್ತು ಸುರೇಶ್ ಅಡಗೋಡಿ ಉಪಸ್ಥಿತರಿದ್ದರು. ಗಾಯನದಲ್ಲಿ ಶ್ರೀಪಾದ ಭಟ್ ಕಡತೋಕ, ಶಂಕರಿಮೂರ್ತಿ ಬಾಳಿಲ, ರಘುನಂದನ ಬೇರ್ಕಡವು, ಸಾಕೇತ್ ಶರ್ಮಾ, ದೀಪಿಕಾ ಭಟ್, ಪೂಜಾ ಭಟ್, ಮೃದಂಗದಲ್ಲಿ ಗಣೇಶ್ ಭಾಗ್ವತ್ ಗುಂಡ್ಕಲ್, ಸಿತಾರದಲ್ಲಿ ಸುಬ್ರಹ್ಮಣ್ಯ ಹೆಗಡೆ, ಕೊಳಲಿನಲ್ಲಿ ನಿರಂಜನ ಹೆಗಡೆ, ಹಾರ್ಮೋನಿಯಂನಲ್ಲಿ ಪ್ರಜ್ಞಾಲೀಲಾ, ಚಿತ್ರಕಲೆಯಲ್ಲಿ ನೀರ್ನಳ್ಳಿ ಗಣಪತಿ ಸಹಕರಿಸಿದರು. ರೂಪಕವನ್ನು ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ನಿರ್ದೇಶಿಸಿದರು.
ರಾಮಕಥಾ ಸಮಿತಿ ಕಾರ್ಯಾಧ್ಯಕ್ಷ ಆರ್.ಜಿ.ಭಟ್, ಸಂಚಾಲಕ ಸುಬ್ರಾಯ ವಿ.ಭಟ್ ಕೊಣಾರೆ, ಪ್ರಧಾನ ಕಾರ್ಯದರ್ಶಿ ಎಸ್.ವಿ.ಹೆಗಡೆ, ಕಾರ್ಯದರ್ಶಿ ಟಿ.ಎಸ್.ಭಟ್, ಕುಮಟಾ ಹವ್ಯಕ ಮಂಡಲ ಅಧ್ಯಕ್ಷ ಜಿ.ಎಸ್.ಹೆಗಡೆ, ಹೊನ್ನಾವರ ಮಂಡಲದ ಅಧ್ಯಕ್ಷ ಆರ್.ಜಿ.ಹೆಗಡೆ ಮುಡಾರೆ. ಮುರೂರು-ಕಲ್ಲಬ್ಬೆ ವಲಯ ಅಧ್ಯಕ್ಷ ಎಲ್.ಆರ್.ಹೆಗಡೆ, ಪ್ರಸಾರ ಸಮಿತಿಯ ಅರುಣ್ ಹೆಗಡೆ ಮತ್ತು ರಾಮಕಥಾ ನಿರ್ವಹಣಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಹೊನ್ನಾವರ ಹವ್ಯಕ ಮಂಡಲ ಇಂದಿನ ಕಾರ್ಯಕ್ರಮದ ಯಜಮಾನತ್ವವನ್ನು ವಹಿಸಿಕೊಂಡಿತ್ತು.

ಪ್ರಮುಖ ಸುದ್ದಿ :-   ಪೆನ್‌ಡ್ರೈವ್ ಕೇಸ್‌ನಲ್ಲಿ ಎಚ್‌.ಡಿ. ಕುಮಾರಸ್ವಾಮಿ ಹೆಸರು ಹೇಳಲು ನನಗೆ 100 ಕೋಟಿ ರೂ. ಆಫರ್ ನೀಡಿದ್ದ ಡಿ.ಕೆ.ಶಿವಕುಮಾರ : ದೇವರಾಜೇ ಗೌಡ ಸ್ಫೋಟಕ ಹೇಳಿಕೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement