ದಾಖಲೆಯ ವರಮಾನ ಕಂಡ ರಿಲಯನ್ಸ್ ಇಂಡಸ್ಟ್ರೀಸ್: ಆದಾಯ 47% ಹೆಚ್ಚಳ, ನಿವ್ವಳ ಲಾಭ 26% ಜಾಸ್ತಿ

ಮುಂಬೈ: ಮಾರ್ಚ್‌ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್‌) ಕಂಪನಿಯು ಒಟ್ಟು ₹ 7.92 ಲಕ್ಷ ಕೋಟಿ (104.6 ಬಿಲಿಯನ್ ಅಮೆರಿಕನ್ ಡಾಲರ್) ವರಮಾನ ಗಳಿಸಿದೆ. ಭಾರತದ ಕಂಪನಿಯೊಂದು 100 ಬಿಲಿಯನ್ ಡಾಲರ್‌ಗಿಂತ ಹೆಚ್ಚಿನ ವಾರ್ಷಿಕ ವರಮಾನ ಗಳಿಸಿರುವುದು ಇದೇ ಮೊದಲು. 2021–22ನೇ ಹಣಕಾಸು ವರ್ಷದಲ್ಲಿ ಕಂಪನಿಯ ವರಮಾನವು ಹಿಂದಿನ ಆರ್ಥಿಕ ವರ್ಷದ ವರಮಾನಕ್ಕಿಂತ ಶೇಕಡ 47ರಷ್ಟು ಹೆಚ್ಚು ಎಂದು ಕಂಪನಿ ತಿಳಿಸಿದೆ.
2021–22ನೇ ಆರ್ಥಿಕ ವರ್ಷದಲ್ಲಿ ಕಂಪನಿಯು ಒಟ್ಟು ರೂ 67,845 ಕೋಟಿ ನಿವ್ವಳ ಲಾಭ ಗಳಿಸಿದೆ. ಇದು ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇಕಡ 26.2ರಷ್ಟು ಜಾಸ್ತಿ. ಕಂಪನಿಯ ಪ್ರತಿ ಷೇರಿನ ಗಳಿಕೆಯು (ಇಪಿಎಸ್) 2021–22ರಲ್ಲಿ 92 ರೂ ಗಳಾಗಿದೆ.

ರಿಲಯನ್ಸ್ ಸಮೂಹದ ಅಂಗಸಂಸ್ಥೆಯಾಗಿರುವ ಜಿಯೊ ಪ್ಲಾಟ್‌ಫಾರ್ಮ್ಸ್‌ ಲಿಮಿಟೆಡ್‌, 2021–22ನೇ ಹಣಕಾಸು ವರ್ಷದಲ್ಲಿ ಒಟ್ಟು ₹ 15,487 ಕೋಟಿ ನಿವ್ವಳ ಲಾಭ ಕಂಡಿದೆ. ಇದು ಹಿಂದಿನ ಹಣಕಾಸು ವರ್ಷದ ಲಾಭದ ಪ್ರಮಾಣಕ್ಕೆ ಹೋಲಿಸಿದರೆ ಶೇಕಡ 23.6ರಷ್ಟು ಹೆಚ್ಚು. ರಿಲಯನ್ಸ್ ರಿಟೇಲ್ ಕಂಪನಿಯ ನಿವ್ವಳ ಲಾಭವು ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಶೇಕಡ 28.7ರಷ್ಟು ಹೆಚ್ಚಾಗಿ 7,055 ಕೋಟಿ ರೂ.ಗಳಿಗೆ ತಲುಪಿದೆ.
ರಿಲಯನ್ಸ್ ರಿಟೇಲ್ ಕಂಪನಿಯು 2021–22ರಲ್ಲಿ ಹೊಸದಾಗಿ 2,566 ಮಳಿಗೆಗಳನ್ನು ಆರಂಭಿಸಿದೆ. ಕಂಪನಿಯು ಒಟ್ಟು 15,196 ಮಳಿಗೆಗಳನ್ನು ಹೊಂದಿದೆ.
ಮಾರ್ಚ್‌ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ (2022ರ ಜನವರಿಯಿಂದ ಮಾರ್ಚ್‌ 31ರವರೆಗಿನ ಅವಧಿ) ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಮೂಹವು ಒಟ್ಟು ₹ 18,021 ಕೋಟಿ ನಿವ್ವಳ ಲಾಭ ಕಂಡಿದೆ. ಇದು ಹಿಂದಿನ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿ ದಾಖಲಿಸಿದ್ದ ಲಾಭಕ್ಕೆ ಹೋಲಿಸಿದರೆ ಶೇಕಡ 20.2ರಷ್ಟು ಹೆಚ್ಚಾಗಿದೆ.
ಮಾರ್ಚ್‌ ತ್ರೈಮಾಸಿಕದಲ್ಲಿ ಜಿಯೊ ಪ್ಲಾಟ್‌ಫಾರ್ಮ್ಸ್‌ ಕಂಪನಿಯು 4,313 ಕೋಟಿ ರೂ.ಗಳಷ್ಟು ಲಾಭ ಕಂಡಿದೆ. ಇದೇ ಅವಧಿಯಲ್ಲಿ ರಿಲಯನ್ಸ್ ರಿಟೇಲ್ ಕಂಪನಿಯು 2,139 ಕೋಟಿ ರೂ. ಲಾಭ ದಾಖಲಿಸಿದೆ.

ಓದಿರಿ :-   ತೊರೆಯಿರಿ ಅಥವಾ ಸಾವನ್ನು ಎದುರಿಸಿ: ಪುಲ್ವಾಮಾದಲ್ಲಿ ಕಾಶ್ಮೀರಿ ಪಂಡಿತರಿಗೆ ಬೆದರಿಕೆ ಹಾಕಿದ ಭಯೋತ್ಪಾದಕರ ಗುಂಪು..!

ಕೋವಿಡ್ ಸಾಂಕ್ರಾಮಿಕ ಹಾಗೂ ಜಾಗತಿಕ ಮಟ್ಟದಲ್ಲಿನ ಕೆಲವು ಬಿಕ್ಕಟ್ಟುಗಳಿಂದ ಉಂಟಾಗಿರುವ ಸಮಸ್ಯೆಗಳ ನಡುವೆಯೂ 2021–22ನೇ ಹಣಕಾಸು ವರ್ಷದಲ್ಲಿ ರಿಲಯನ್ಸ್ ಕಂಪನಿಯು ಭಾರಿ ಸಾಧನೆ ತೋರಿದೆ. ನಮ್ಮ ಡಿಜಿಟಲ್ ಸೇವೆಗಳು ಹಾಗೂ ರಿಟೇಲ್ ವಹಿವಾಟಿನಲ್ಲಿ ಗಟ್ಟಿಯಾದ ಬೆಳವಣಿಗೆ ಆಗಿರುವುದನ್ನು ತಿಳಿಸಲು ಸಂತೋಷವಾಗುತ್ತಿದೆ. ಇಂಧನ ಮಾರುಕಟ್ಟೆಯಲ್ಲಿ ಅಸ್ಥಿರತೆ ಇದ್ದರೂ ನಮ್ಮ ತೈಲ–ರಾಸಾಯನಿಕ ವಹಿವಾಟು ಕುಂದಿಲ್ಲ. ಅದು ಭಾರಿ ಚೇತರಿಕೆ ಕಂಡಿದೆ‘ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಹೇಳಿದ್ದಾರೆ.

2021–22ನೆಯ ಹಣಕಾಸು ವರ್ಷದಲ್ಲಿ ರಿಲಯನ್ಸ್ ಕಂಪನಿಯು ಗಣನೀಯ ಸಂಖ್ಯೆಯಲ್ಲಿ ಉದ್ಯೋಗ ಅವಕಾಶಗಳನ್ನು ದೇಶದ ಜನರಿಗಾಗಿ ಸೃಷ್ಟಿಸಿದೆ. ದೇಶದ ಖಾಸಗಿ ವಲಯದ ಅತಿದೊಡ್ಡ ಉದ್ಯೋಗದಾತರ ಪೈಕಿ ಒಂದಾಗಿ ಮುಂದುವರಿದಿದೆ. ನಮ್ಮ ಬೇರೆ ಬೇರೆ ವಹಿವಾಟುಗಳಲ್ಲಿ 2021–22ನೆಯ ಆರ್ಥಿಕ ವರ್ಷದಲ್ಲಿ ಒಟ್ಟು 2.1 ಲಕ್ಷ ಹೊಸ ಉದ್ಯೋಗಿಗಳು ಸೇರಿಕೊಂಡಿದ್ದಾರೆ‘ ಎಂದು ಅಂಬಾನಿ ಅವರು ಹೇಳಿದ್ದಾರೆ.
‘ನಮ್ಮ ರಿಟೇಲ್ ವಹಿವಾಟು 15 ಸಾವಿರ ಮಳಿಗೆಗಳ ಗಡಿಯನ್ನು ದಾಟಿದೆ. ಜಿಯೊ ಫೈಬರ್ ಈಗ ದೇಶದ ಅತಿದೊಡ್ಡ ಬ್ರಾಡ್‌ಬ್ಯಾಂಡ್ ಸೇವಾದಾತ ಕಂಪನಿಯಾಗಿದೆ. ಆರಂಭಗೊಂಡ ಎರಡೇ ವರ್ಷಗದೊಳಗೆ ಇದು ಸಾಧ್ಯವಾಗಿದೆ.ನಮ್ಮ ತೈಲ ಮತ್ತು ಅನಿಲ ವಹಿವಾಟು ದೇಶದ ಶೇಕಡ 20ರಷ್ಟು ಅನಿಲ ಉತ್ಪಾದನೆಗೆ ಕೊಡುಗೆ ನೀಡುತ್ತಿದೆ’ ಎಂದೂ ಅಂಬಾನಿ ಅವರು ತಿಳಿಸಿದ್ದಾರೆ.

ಓದಿರಿ :-   ರಷ್ಯಾ ಅಧ್ಯಕ್ಷ ಪುತಿನ್‌ಗೆ "ಗಂಭೀರ ಆರೋಗ್ಯ ಸಮಸ್ಯೆ ಎಂದ ಮಾಜಿ ಸ್ಪೈ, ಬ್ಲಡ್ ಕ್ಯಾನ್ಸರ್ ಎನ್ನುತ್ತವೆ ಕೆಲ ವರದಿಗಳು

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ