ಬಾಲಚಂದ್ರ ಸಾಯಿಮನೆಗೆ ಪಾವನಾ ಪರಿಸರ ಪ್ರಶಸ್ತಿ

ಶಿರಸಿ: ಪಾವನಾ ಪರಿಸರ ಪ್ರತಿಷ್ಠಾನದಿಂದ ಕೊಡಲಾಗುತ್ತಿರುವ ಪ್ರತಿಷ್ಠಿತ “ಪಾವನಾ ಪರಿಸರ ಪ್ರಶಸ್ತಿ”ಯನ್ನು ಈ ಬಾರಿ ಕೃಷಿಕ-ಪರಿಸರ ವಿಜ್ಞಾನಿ ಬಾಲಚಂದ್ರ ಸಾಯಿಮನೆ ಅವರಿಗೆ ನೀಡಲಾಗುತ್ತಿದೆ. ಪ್ರಶಸ್ತಿಯು . ೫೦ ಸಾವಿರ ರೂ.ಗಳ ನಗದುಹಾಗೂ ಸ್ಮರಣಿಕೆಯನ್ನೊಳಗೊಂಡಿದೆ.
ಜೂನ್‌ ೫ರಂದು “ವಿಶ್ವ ಪರಿಸರ ದಿನ”ದಂದು ಶಿರಸಿಯಲ್ಲಿ ನಡೆಯುವ ಸಮಾರಂಭದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎಚ್‌. ಎನ್‌. ನಾಗಮೋಹನದಾಸ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಜಲಪರಿಸರ ತಜ್ಞರಿಗೆಂದೇ ಮೀಸಲಾದ ಪ್ರತಿಷ್ಠಿತ ʼಅನುಪಮ್ ಮಿಶ್ರಾ ರಾಷ್ಟ್ರ ಪ್ರಶಸ್ತಿʼಯ ಮೊದಲ ಪುರಸ್ಕೃತರಾದ ನ್ಯಾಶನಲ್‌ ಜಿಯಾಗ್ರಫಿಕ್‌ ಸಂಸ್ಥೆಯ ಅನ್ವೇಷಕಿ ಆರತಿ ಕುಮಾರ ರಾವ್‌ ಪಶ್ಚಿಮಘಟ್ಟದ ಪರಿಸರ ಮತ್ತು ವಿಜ್ಞಾನ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಈ ಕಾರ್ಯಕ್ರಮದಲ್ಲಿಯೇ ಬಾಲಚಂದ್ರ ಸಾಯಿಮನೆ ಅವರ “ಬಿಂಗ್‌ಲಾಂಗ್‌ಮತ್ತು ಲಂಬನಾಗ್‌” ಹೆಸರಿನ ಪ್ರವಾಸ ಕಥನವನ್ನು ನ್ಯಾಶನಲ್‌ ಜಿಯಾಗ್ರಫಿಕ್‌ ಸಂಸ್ಥೆಯ ಅನ್ವೇಷಕಿ ಆರತಿ ಕುಮಾರ ರಾವ್‌ ಬಿಡುಗಡೆ ಮಾಡಲಿದ್ದಾರೆ. ಚೀನಾ ಮತ್ತು ಫಿಲಿಪೈನ್ಸ್‌ದೇಶಗಳ ಅಡಕೆ, ಬೆತ್ತ, ಬಿದಿರು ಕೃಷಿಯನ್ನು ಪರಿಚಯಿಸುವ ಈ ಕೃತಿಯನ್ನು ʼಕನ್ನಡ ಪ್ರಭʼದ ಪತ್ರಕರ್ತ ಹಾಗೂ ಲೇಖಕ ಮಹಾಬಲ ಸೀತಾಳಭಾವಿ ಪರಿಚಯಿಸಲಿದ್ದಾರೆ.
ಬಾಲಚಂದ್ರ ಸಾಯಿಮನೆ ಏಳು ದೇಶಗಳ ಎಂಟು ವಿಶ್ವವಿದ್ಯಾಲಯಗಳಲ್ಲಿ ಪರಿಸರ ವಿಜ್ಞಾನ ಕುರಿತು ವಿಶೇಷ ಅಧ್ಯಯನ ನಡೆಸಿದ್ದು ಪ್ರಸ್ತುತ ಶಿರಸಿಯ ಬಳಿ ಕೃಷಿ ಕಾಯಕ ಮಾಡುತ್ತಲೇ ಜಾಗತಿಕ ಹವಾಗುಣ ಬದಲಾವಣೆಗೆ ಪಶ್ಚಿಮಘಟ್ಟಗಳು ಹೇಗೆ ಸ್ಪಂದಿಸುತ್ತಿವೆ ಎಂಬುದರ ಕುರಿತು ತಮ್ಮದೇ ಪರಿಸರದಲ್ಲಿ ನಡೆಸುತ್ತಿರುವ ಪ್ರಯೋಗಗಳು ಬೆಂಗಳೂರು, ಪುಣೆ, ಇಂಗ್ಲಂಡ್‌ ಮತ್ತು ರುಮೆನಿಯಾದ ಹೆಸರಾಂತ ವಿಜ್ಞಾನ ಸಂಸ್ಥೆಗಳ ಮಾನ್ಯತೆ ಪಡೆದಿವೆ.

ಪ್ರಮುಖ ಸುದ್ದಿ :-   ಗದಗ: ನಗರಸಭೆ ಅಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

ಬಕ್ಕೆಮನೆಯ ಸ್ವಾತಂತ್ರ‍್ಯಯೋಧ ನಾರಾಯಣ ಹೆಗಡೆ ದಂಪತಿ‌ ಹೆಸರಿನಲ್ಲಿ ಅವರ ಮಕ್ಕಳು ಸ್ಥಾಪಿಸಿದ ʼಪಾವನಾ ಪರಿಸರ ಪ್ರತಿಷ್ಠಾನʼ ನಾಡಿನ ಅನೇಕ ಪರಿಸರ ಸಂರಕ್ಷಣಾ ಕಾರ್ಯಗಳಿಗೆ ನೆರವಾಗುತ್ತ, ಈ ರಂಗದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳಿಗೆ ಪ್ರಶಸ್ತಿ ನೀಡುತ್ತ ಬಂದಿದೆ. ಇದುವರೆಗೆ ಡಾ. ಕುಸುಮಾ ಸೊರಬ, ಶ್ರೀ ಪಡ್ರೆ, ಶಿವಾನಂದ ಕಳವೆ, ಡಾ. ಅ.ನ. ಯಲ್ಲಪ್ಪರೆಡ್ಡಿ ಮತ್ತು ಡಾ. ಎಸ್‌.ಆರ್‌. ಹಿರೇಮಠ ಅವರಿಗೆ ʼಪಾವನಾ ಪರಿಸರ ಪ್ರಶಸ್ತಿʼ ನೀಡಿ ಗೌರವಿಸಿದೆ.
ನಾಡೋಜ ನಾರಾಯಣ ರೆಡ್ಡಿ, ಸ್ವಾತಂತ್ರ‍್ಯಯೋಧ ಎಚ್‌.ಎಸ್‌. ದೊರೆಸ್ವಾಮಿ, ಜಸ್ಟಿಸ್‌ ಇ.ಎಸ್‌. ವೆಂಕಟರಾಮಯ್ಯ, ಪ್ರೊ. ಎಸ್‌.ಕೆ.ರಾಮಚಂದ್ರ ರಾವ್‌, ಜಸ್ಟಿಸ್‌ಸಂತೋಷ್‌ಹೆಗಡೆ ಇವರುಗಳು ಈ ಹಿಂದೆ ಪಾವನಾ ಪರಿಸರ ಪ್ರಶಸ್ತಿ ಸಂಮಾನ ಸಂದರ್ಭದಲ್ಲಿ ಗೌರವ ಉಪನ್ಯಾಸ ನೀಡಿದ್ದಾರೆ.

 

 

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement