ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಳಲಿ ಮಸೀದಿಯಲ್ಲಿ ದೇವಾಲಯ ಮಾದರಿಯ ರಚನೆ ಪತ್ತೆಯಾಗಿದೆ ಎನ್ನಲಾದ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅಸಲಿ ದಾವೆಯ (ಒರಿಜಿನಲ್ ಸೂಟ್) ಸಿಂಧುತ್ವದ ಕುರಿತು ಯಾವುದೇ ಆದೇಶ ಹೊರಡಿಸದಂತೆ ಮಂಗಳೂರಿನ ವಿಚಾರಣಾಧೀನ ನ್ಯಾಯಾಲಯಕ್ಕೆ ಕರ್ನಾಟಕ ಹೈಕೋರ್ಟ್ ಸೋಮವಾರ ನಿರ್ದೇಶಿಸಿದೆ.
ಮಂಗಳೂರಿನ ತೆಂಕಳೈಪಡಿ ಗ್ರಾಮದ ಧನಂಜಯ ಹಾಗೂ ಬಡುಗಳೈಪಡಿ ಗ್ರಾಮದ ಮನೋಜಕುಮಾರ್ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಮ್ ನೇತೃತ್ವದ ಏಕಸದಸ್ಯ ಪೀಠವು ನಡೆಸಿ ಈ ನಿರ್ದೇಶನ ನೀಡಿದೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.
ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಾಲಯವು ಪ್ರತಿವಾದಿಯಾದ ಮಳಲಿಪೇಟೆ ಜುಮ್ಮಾ ಮಸೀದಿಯ ಅಧ್ಯಕ್ಷರಿಗೆ ನೋಟಿಸ್ ಜಾರಿಗೊಳಿಸಿದೆ. ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅಸಲಿ ದಾವೆಯ ಸಿಂಧುತ್ವದ ಕುರಿತು ವಾದ-ಪ್ರತಿವಾದ ಆಲಿಸಿದರೂ, ಯಾವುದೇ ಆದೇಶ ಹೊರಡಿಸಬಾರದು ಎಂದು ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯಕ್ಕೆ ನಿರ್ದೇಶಿಸಿದೆ ಹಾಗೂ ವಿಚಾರಣೆಯನ್ನು ಜೂನ್ 17ಕ್ಕೆ ಮುಂದೂಡಿದೆ ಎಂದು ವರದಿ ಹೇಳಿದೆ.
ವರದಿ ಪ್ರಕಾರ, ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ವಿವೇಕ್ ಸುಬ್ಬಾರೆಡ್ಡಿ ಅವರು, ಈ ಕುರಿತ ಪ್ರಕರಣ ಸಿವಿಲ್ ನ್ಯಾಯಾಲಯದಲ್ಲಿದೆ. ಆದರೆ, 1991ರ ಸಾರ್ವಜನಿಕ ಪೂಜಾ ಸ್ಥಳ ಕಾಯಿದೆಯ ಅನುಸಾರ ದಾವೆಯು ವಿಚಾರಣಾ ಮಾನ್ಯತೆ ಹೊಂದಿಲ್ಲ. ಆದ್ದರಿಂದ, ಅದನ್ನು ವಜಾಗೊಳಿಸಬೇಕು ಎಂದು ಮಸೀದಿ ಅರ್ಜಿ ಸಲ್ಲಿಸಿತ್ತು. ಅದನ್ನು ಪರಿಗಣಿಸಿದ ವಿಚಾರಣಾಧೀನ ನ್ಯಾಯಾಲಯವು ಮೊದಲು ದಾವೆಯ ಸಿಂಧುತ್ವದ ಬಗ್ಗೆ ನಿರ್ಧರಿಸುವುದಾಗಿ ತಿಳಿಸಿದೆ. ಆದರೆ, ಪುರಾತನ ಸ್ಮಾರಕಗಳಿಗೆ ಸಾರ್ವಜನಿಕ ಪೂಜಾ ಸ್ಥಳ ಕಾಯಿದೆ ಅನ್ವಯವಾಗುವುದಿಲ್ಲ ಎಂದು ಅವರು ವಾದಿಸಿದರು.
ನೂರು ವರ್ಷಕ್ಕೂ ಹಳೆಯ ಕಟ್ಟಡ ಪ್ರಾಚೀನ ಸ್ಮಾರಕ ಎನಿಸಿಕೊಳ್ಳುತ್ತದೆ. ಮಳಲಿ ಮಸೀದಿ 700 ವರ್ಷಕ್ಕೂ ಹಳೆಯದಾಗಿದೆ ಎಂದು ಮಸೀದಿಯವರೇ ಹೇಳುತ್ತಿದ್ದಾರೆ. ಹೀಗಿರುವಾಗ ಒಳಗೆ ಪತ್ತೆಯಾಗಿರುವ ದೇವಾಲಯ ಅದಕ್ಕಿಂತ ಹಳೆಯದಾಗಿರುವ ಸಾಧ್ಯತೆ ಇರುತ್ತದೆ. ಮಸೀದಿಯವರ ಮಾತನ್ನೇ ಒಪ್ಪಕೊಂಡರೂ ಪ್ರಾಚೀನ ಸ್ಮಾರಕಗಳಿಗೆ ಸಾರ್ವಜನಿಕ ಪೂಜಾ ಸ್ಥಳ ಕಾಯಿದೆ ಅನ್ವಯಿಸುವುದಿಲ್ಲ. ಆದ್ದರಿಂದ, ಆ ಕಾಯಿದೆ ಅಡಿ ದಾವೆ ವಿಚಾರಣಾ ಮಾನ್ಯತೆ ಹೊಂದಿಲ್ಲ ಎಂಬ ಅವರ ವಾದ ಒಪ್ಪಲು ಸಾಧ್ಯವಿಲ್ಲ ಎಂದು ವಕೀಲ ವಿವೇಕ್ ಸುಬ್ಬಾರೆಡ್ಡಿ ವಾದಿಸಿದರು.
“ಮೊದಲು ಕಮಿಷನರ್ ನೇಮಕ ಮಾಡಬೇಕು. ಅವರು ಸ್ಥಳದ ಸಮೀಕ್ಷೆ ನಡೆಸಿ ವಸ್ತುನಿಷ್ಠ ವರದಿ ನೀಡಬೇಕು. ಅದಕ್ಕೂ ಮೊದಲು ದಾವೆಯ ಸಿಂಧುತ್ವದ ಬಗ್ಗೆ ವಿಚಾರಣೆ ನಡೆಸಿ, ಒಂದೊಮ್ಮೆ ಅದು ವಿಚಾರಣಾ ಮಾನ್ಯತೆ ಹೊಂದಿಲ್ಲ ಎಂದು ಆದೇಶ ನೀಡಿದರೆ, ತಕ್ಷಣವೇ ಒಳಗಿರುವ ದೇವಾಲಯ ರಚನೆಯನ್ನು ನೆಲಸಮಗೊಳಿಸುವ ಸಾಧ್ಯತೆ ಇದೆ. ಆದ್ದರಿಂದ, ಕಮಿಷನರ್ ನೇಮಕಗೊಂಡು, ಪರಿಶೀಲನೆ ನಡೆಸುವವರೆಗೆ ದಾವೆಯ ಸಿಂಧುತ್ವದ ಕುರಿತು ಯಾವುದೇ ಆದೇಶ ನೀಡದಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ನಿರ್ದೇಶಿಸಬೇಕು” ಎಂದು ಕೋರಿದರು.
ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ | |
ವಾಟ್ಸಾಪ್ ಗ್ರೂಪ್ ಸೇರಿ | |
ಫೇಸ್ ಬುಕ್ ಫಾಲೋ ಮಾಡಿ | |
ಗೂಗಲ್ ನ್ಯೂಸ್ ನಲ್ಲಿ ಸೇರಿ | |
ಟ್ವಿಟರ್ ನಲ್ಲಿ ಫಾಲೋ ಮಾಡಿ |
ನಿಮ್ಮ ಕಾಮೆಂಟ್ ಬರೆಯಿರಿ