ಅಫ್ಘಾನಿಸ್ತಾನದಲ್ಲಿ ಭಾರೀ ಭೂಕಂಪ: 1,000ಕ್ಕೂ ಹೆಚ್ಚು ಜನರ ಸಾವು, 1500 ಮಂದಿಗೆ ಗಾಯ

ಕಾಬೂಲ್‌ :ಬುಧವಾರ ಮುಂಜಾನೆ ಪೂರ್ವ ಅಫ್ಘಾನಿಸ್ತಾನದ ಗ್ರಾಮೀಣ, ಪರ್ವತ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, 1,000 ಜನರು ಸಾವಿಗೀಡಾಗಿದ್ದಾರೆ ಮತ್ತು 1,500 ಜನರು ಗಾಯಗೊಂಡಿದ್ದಾರೆ ಎಂದು ಸರ್ಕಾರಿ ಸುದ್ದಿ ಸಂಸ್ಥೆಯೊಂದು ತಿಳಿಸಿದೆ. ಮೃತಪಟ್ಟವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
6.1 ತೀವ್ರತೆಯ ಕಂಪನವು ಖೋಸ್ಟ್ ಮತ್ತು ಪಕ್ಟಿಕಾ ಪ್ರಾಂತ್ಯಗಳಲ್ಲಿ ಕಟ್ಟಡಗಳನ್ನು ಹಾನಿಗೊಳಿಸಿತು. ಮತ್ತು ಕಳೆದ ವರ್ಷ ಇಲ್ಲಿಂದ ಅಮೆರಿಕ ಮಿಲಿಟರಿಯನ್ನು ಹಿಂತೆಗೆದುಕೊಂಡ ನಂತರ ದೇಶವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ಅನೇಕ ಅಂತಾರಾಷ್ಟ್ರೀಯ ನೆರವು ಏಜೆನ್ಸಿಗಳು ಅಫ್ಘಾನಿಸ್ತಾನವನ್ನು ತೊರೆದಿರುವುದರಿಂದ ಮಾನವೀಯ ನೆರವು ಪ್ರಯತ್ನಗಳು ಜಟಿಲವಾಗುವ ಸಾಧ್ಯತೆಯಿದೆ.

ನೆರೆಯ ಪಾಕಿಸ್ತಾನದ ಹವಾಮಾನ ಇಲಾಖೆಯು ಭೂಕಂಪದ ಕೇಂದ್ರಬಿಂದುವು ಅಫ್ಘಾನಿಸ್ತಾನದ ಪಕ್ಟಿಕಾ ಪ್ರಾಂತ್ಯದಲ್ಲಿದೆ, ಗಡಿಯ ಸಮೀಪದಲ್ಲಿದೆ ಮತ್ತು ಖೋಸ್ಟ್ ನಗರದ ನೈಋತ್ಯಕ್ಕೆ 50 ಕಿಲೋಮೀಟರ್ (31 ಮೈಲುಗಳು) ದೂರದಲ್ಲಿದೆ ಎಂದು ತಿಳಿಸಿದೆ.
ಪಕ್ಟಿಕಾ ಪ್ರಾಂತ್ಯದ ದೃಶ್ಯಾವಳಿಗಳು ಈ ಪ್ರದೇಶದಿಂದ ಜನರನ್ನು ಹೆಲಿಕಾಪ್ಟರ್‌ಗಳಲ್ಲಿ ಸಾಗಿಸುವುದನ್ನು ತೋರಿಸಿದೆ. ಇನ್ನು ಕೆಲವರಿಗೆ ನೆಲದಲ್ಲೇ ಚಿಕಿತ್ಸೆ ನೀಡಲಾಯಿತು. ಅಫ್ಘಾನಿಸ್ತಾನದ ತುರ್ತು ಅಧಿಕಾರಿ ಶರಫುದ್ದೀನ್ ಮುಸ್ಲಿಂ ಬುಧವಾರ ಸುದ್ದಿಗೋಷ್ಠಿಯಲ್ಲಿ ಸಾವಿನ ಸಂಖ್ಯೆಯನ್ನು ನೀಡಿದರು.

ತಾಲಿಬಾನ್ ಸರ್ಕಾರದ ಉಪ ವಕ್ತಾರ ಬಿಲಾಲ್ ಕರಿಮಿ ಅವರು ಯಾವುದೇ ನಿರ್ದಿಷ್ಟ ಸಾವಿನ ಸಂಖ್ಯೆಯನ್ನು ನೀಡಿಲ್ಲ ಆದರೆ ಪಕ್ಟಿಕಾದಲ್ಲಿ ನಾಲ್ಕು ಜಿಲ್ಲೆಗಳನ್ನು ನಡುಗಿಸಿದ ಭೂಕಂಪದಲ್ಲಿ ನೂರಾರು ಜನರು ಸಾವಿಗೀಡಾದ್ದಾರೆ ಮತ್ತು ಗಾಯಗೊಂಡಿದ್ದಾರೆ ಎಂದು ಟ್ವಿಟರ್‌ನಲ್ಲಿ ಬರೆದಿದ್ದಾರೆ.
“ಹೆಚ್ಚಿನ ದುರಂತವನ್ನು ತಡೆಗಟ್ಟಲು ತಕ್ಷಣವೇ ತಂಡಗಳನ್ನು ಕಳುಹಿಸಲು ನಾವು ಎಲ್ಲಾ ನೆರವು ಸಂಸ್ಥೆಗಳನ್ನು ಒತ್ತಾಯಿಸುತ್ತೇವೆ” ಎಂದು ಅವರು ಬರೆದಿದ್ದಾರೆ.
ಕಾಬೂಲ್‌ನಲ್ಲಿ, ಪಕ್ಟಿಕಾ ಮತ್ತು ಖೋಸ್ಟ್‌ನಲ್ಲಿ ಸಂತ್ರಸ್ತರಿಗೆ ಪರಿಹಾರ ಪ್ರಯತ್ನಗಳನ್ನು ಸಂಘಟಿಸಲು ಪ್ರಧಾನಿ ಮೊಹಮ್ಮದ್ ಹಸನ್ ಅಖುಂಡ್ ಅಧ್ಯಕ್ಷೀಯ ಅರಮನೆಯಲ್ಲಿ ತುರ್ತು ಸಭೆಯನ್ನು ಕರೆದರು.
ಪಾಕಿಸ್ತಾನದ ಅಫ್ಘಾನ್ ಗಡಿಯ ಸಮೀಪವಿರುವ ಪ್ರದೇಶಗಳಲ್ಲಿ ಮನೆಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ. ಅದಕ್ಕೆ ಮಳೆ ಅಥವಾ ಭೂಕಂಪದ ಕಾರಣವೇ ಎಂಬುದು ತಕ್ಷಣವೇ ಸ್ಪಷ್ಟವಾಗಿಲ್ಲ ಎಂದು ಪ್ರದೇಶದ ವಿಪತ್ತು ನಿರ್ವಹಣಾ ವಕ್ತಾರ ತೈಮೂರ್ ಖಾನ್ ಹೇಳಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement