ರಿಯಾದ್: ಯೆಮನ್ ಗಡಿಭಾಗದಲ್ಲಿ ಹೌತಿ (Ansar Allah)ಗಳ ದಾಳಿಗಳು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಇಸ್ರೇಲ್‌ನಿಂದ ಗುಪ್ತಚರ ಮಾಹಿತಿ (Intelligence) ನೆರವು ಕೋರಿದೆ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ. ಈ ಸಂಪರ್ಕವು ನೇರವಾಗಿ ನಡೆಯದೆ ಅಮೆರಿಕದ ಸೆಂಟ್ರಲ್ ಕಮಾಂಡ್ (US Central Command) ಮೂಲಕ ನಡೆದಿರುವುದಾಗಿ ತಿಳಿದುಬಂದಿದೆ.
ಕಳೆದ ವಾರ ಹೌತಿ ಉಗ್ರಗಾಮಿಗಳು ಯೆಮೆನ್‌ನ ಕೆಂಪು ಸಮುದ್ರದ ಕರಾವಳಿಯ ಬಹುಭಾಗ ಮತ್ತು ಬಾಬ್-ಎಲ್-ಮಂಡೇಬ್ ಜಲಸಂಧಿಯನ್ನು ವಶಪಡಿಸಿಕೊಂಡ ನಂತರ, ತೈಲ-ಸಮೃದ್ಧ ಗಲ್ಫ್ ರಾಷ್ಟ್ರವಾದ ಸೌದಿ ಅರೇಬಿಯಾವು ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದೆ. ಸೌದಿಯ ಮಿತ್ರರಾಷ್ಟ್ರಗಳು — ಅದರಲ್ಲೂ ವಿಶೇಷವಾಗಿ ‘ಮಕ್ಕಾ ಒಪ್ಪಂದ’ದ ಮಿತ್ರಕೂಟದ ದೇಶವಾದ ಪಾಕಿಸ್ತಾನವು ಈ ಬಿಕ್ಕಟ್ಟಿನಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ, ಸೌದಿ ಅರೇಬಿಯಾ ಈಗ ಇಸ್ರೇಲ್‌ನತ್ತ ಮುಖ ಮಾಡಿದೆ ಎಂದು ವರದಿಗಳಿ ತಿಳಿಸಿದೆ. ಗಮನಿಸಬೇಕಾದ ಅಂಶವೆಂದರೆ, ಸೌದಿ ಅರೇಬಿಯಾವು ಇಸ್ರೇಲ್ ಅನ್ನು ಸ್ವತಂತ್ರ ರಾಷ್ಟ್ರವೆಂದು ಈವರೆಗೆ ಮಾನ್ಯ ಮಾಡಿಲ್ಲ.
ಇಸ್ರೇಲ್‌ನ ಜೆರುಸಲೇಮ್ ಪೋಸ್ಟ್ (The Jerusalem Post) ಮಂಗಳವಾರ ಪ್ರಕಟಿಸಿದ ವರದಿಯ ಪ್ರಕಾರ, ಹೌತಿ ಉಗ್ರಗಾಮಿಗಳ ದಾಳಿಗಳ ವಿರುದ್ಧ ಸೌದಿ ಅರೇಬಿಯಾವನ್ನು ಹೇಗೆ ರಕ್ಷಿಸಬಹುದು ಎಂಬ ಕುರಿತು ಇಸ್ರೇಲ್ ಮತ್ತು ಸೌದಿ ಅರೇಬಿಯಾ ನಡುವೆ ಅಮೆರಿಕದ ಸೆಂಟ್ರಲ್ ಕಮಾಂಡ್ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆದಿದೆ. ಈ ಮಾತುಕತೆಯಲ್ಲಿ ಗುಪ್ತಚರ ಮಾಹಿತಿ ಹಂಚಿಕೆ ಸೇರಿದಂತೆ ವಿವಿಧ ಸಹಕಾರದ ಮಾರ್ಗಗಳ ಕುರಿತು ಚರ್ಚಿಸಲಾಗಿದೆ ಎಂದು ವರದಿ ತಿಳಿಸಿದೆ.
ಇನ್ನೊಂದೆಡೆ, ಇಸ್ರೇಲ್ ಹಯೋಮ್ (Israel Hayom) ಪತ್ರಿಕೆಯ ವರದಿಯ ಪ್ರಕಾರ, ಸೌದಿ ಅರೇಬಿಯಾದ ಯುವರಾಜ ಹಾಗೂ ಪ್ರಧಾನಿಯಾಗಿರುವ ಮೊಹಮ್ಮದ್ ಬಿನ್ ಸಲ್ಮಾನ್ (Mohammed bin Salman) ಹೌತಿ ದಾಳಿಗಳಿಗೆ ಪ್ರತಿಕ್ರಿಯೆ ನೀಡುವ ವಿಚಾರದಲ್ಲಿ ಇತರೆ ಗಲ್ಫ್ ರಾಷ್ಟ್ರಗಳು ಮತ್ತು ಈಜಿಪ್ಟ್‌ನ ಸಹಾಯವನ್ನೂ ಕೋರಿದ್ದಾರೆ ಎನ್ನಲಾಗಿದೆ.
ವರದಿಯ ಪ್ರಕಾರ, ಕೆಂಪು ಸಮುದ್ರ (Red Sea) ಮತ್ತು ಏಡನ್ ಕೊಲ್ಲಿ (Gulf of Aden) ನಡುವಿನ ಪ್ರಮುಖ ಸಮುದ್ರ ಮಾರ್ಗವಾಗಿರುವ ಬಾಬ್ ಅಲ್-ಮಂದೇಬ್ ಜಲಸಂಧಿ (Bab el-Mandeb Strait) ಪ್ರದೇಶದಲ್ಲಿನ ಭದ್ರತಾ ಬೆದರಿಕೆಗಳ ಕುರಿತು ಮಾಹಿತಿ ಪಡೆಯಲು ಸೌದಿ ಅರೇಬಿಯಾ ಅಮೆರಿಕದ ಸೆಂಟ್ರಲ್ ಕಮಾಂಡ್ ಮೂಲಕ ಪರೋಕ್ಷವಾಗಿ ಇಸ್ರೇಲ್ ಸಂಪರ್ಕಿಸಿದೆ ಎಂದು ಹೇಳಲಾಗಿದೆ.
ಸೌದಿ ಅರೇಬಿಯಾ ಮತ್ತು ಇಸ್ರೇಲ್ ನಡುವೆ ಅಧಿಕೃತ ರಾಜತಾಂತ್ರಿಕ ಸಂಬಂಧಗಳಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇಸ್ರೇಲ್‌ನ ನೆರವು ಕೋರಲಾಗಿದೆ ಎಂಬ ವರದಿಗಳು ನಿಜವಾಗಿದ್ದರೆ, ಅದು ಮಹತ್ವದ ರಾಜತಾಂತ್ರಿಕ ಬೆಳವಣಿಗೆಯಾಗಿ ಪರಿಗಣಿಸಲಾಗುತ್ತದೆ. ಜೊತೆಗೆ ಯೆಮನ್ ಸಂಘರ್ಷ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಎದುರಿಸುತ್ತಿರುವ ಭದ್ರತಾ ಸವಾಲುಗಳ ಗಂಭೀರತೆಯನ್ನೂ ಇದು ಸೂಚಿಸುತ್ತದೆ.
ಸೌದಿ ಮನವಿಗೆ ಮಿತ್ರರಾಷ್ಟ್ರಗಳಿಂದ ಸೀಮಿತ ಬೆಂಬಲ
ಹೌತಿ ದಾಳಿಗಳನ್ನು ತಡೆಯಲು ಸೌದಿ ಅರೇಬಿಯಾ ಮಿತ್ರ ರಾಷ್ಟ್ರಗಳಿಂದ ಸೈನಿಕ ನೆರವನ್ನೂ ಕೋರಿದೆ ಎಂದು ವರದಿಗಳು ತಿಳಿಸಿವೆ. ಆದರೆ ಈ ಮನವಿಗೆ ನಿರೀಕ್ಷಿತ ಮಟ್ಟದ ಸ್ಪಂದನೆ ದೊರೆತಿಲ್ಲ ಎನ್ನಲಾಗಿದೆ. ಅಮೆರಿಕ ಮತ್ತು ಬ್ರಿಟನ್ (UK) ಯೆಮನ್‌ನಲ್ಲಿ ಹೌತಿ ಪಡೆಗಳ ವಿರುದ್ಧ ನೇರ ವಾಯುದಾಳಿ ಅಥವಾ ಸೈನಿಕ ಕಾರ್ಯಾಚರಣೆಗೆ ಮುಂದಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಇತರ ರೀತಿಯ ಸಹಾಯ ನೀಡಲು ಸಿದ್ಧವಿರುವುದಾಗಿ ತಿಳಿಸಿವೆ.
ಸೌದಿ ಅರೇಬಿಯಾ ಮತ್ತು ಟರ್ಕಿ ಜೊತೆ ನಿಕಟ ರಕ್ಷಣಾ ಸಂಬಂಧ ಹೊಂದಿರುವ ಪಾಕಿಸ್ತಾನ ಕೂಡ ಹೌತಿಗಳ ವಿರುದ್ಧ ಯುದ್ಧ ಕಾರ್ಯಾಚರಣೆಗೆ ತನ್ನ ಸೈನ್ಯವನ್ನು ಕಳುಹಿಸುವ ಸಾಧ್ಯತೆಯನ್ನು ತಳ್ಳಿಹಾಕಿದೆ ಎಂದು ವರದಿಯಾಗಿದೆ. ಆದರೆ ಸೌದಿ ಅರೇಬಿಯಾದ ಭೂಭಾಗದ ರಕ್ಷಣೆಗೆ ಅಗತ್ಯವಿದ್ದರೆ ತನ್ನ ಪಡೆಗಳನ್ನು ಬಳಸಬಹುದು ಎಂದು ಪಾಕಿಸ್ತಾನದ ಸರ್ಕಾರ ಸೂಚಿಸಿದ್ದು, ವಿದೇಶಿ ನೆಲದಲ್ಲಿ ನೇರ ಯುದ್ಧ ಕಾರ್ಯಾಚರಣೆಯಲ್ಲಿ ಭಾಗವಹಿಸುವುದಿಲ್ಲ ಎಂಬ ನಿಲುವನ್ನು ಪುನರುಚ್ಚರಿಸಿದೆ ಎಂದು ಹೇಳಲಾಗಿದೆ.
ಸೌದಿ ಅರೆಬಿಯಾದ ಮೇಲೆ ಹೌತಿಗಳ ಸರಣಿ ದಾಳಿ
ಇತ್ತೀಚಿನ ದಿನಗಳಲ್ಲಿ ಹೌತಿ ಬಂಡುಕೋರರು ಸೌದಿ ಅರೇಬಿಯಾದ ವಿರುದ್ಧ ದಾಳಿಗಳನ್ನು ಹೆಚ್ಚಿಸಿವೆ ಎಂದು ವರದಿಗಳು ತಿಳಿಸಿವೆ. ಡ್ರೋನ್ ದಾಳಿಯೊಂದರಲ್ಲಿ ತೈಲ ಪೈಪ್‌ಲೈನ್‌ಗಳು ಹಾಗೂ ಪಂಪಿಂಗ್ ಕೇಂದ್ರಗಳನ್ನು ಟಾರ್ಗೆಟ್ ಮಾಡಲಾಗಿದ್ದು, ಪರಿಣಾಮವಾಗಿ ಪ್ರಮುಖ ತೈಲ ಸಾಗಣೆ ಮಾರ್ಗದ ಕಾರ್ಯಾಚರಣೆಯನ್ನು ಭಾಗಶಃ ಸ್ಥಗಿತಗೊಳಿಸಬೇಕಾದ ಪರಿಸ್ಥಿತಿ ಉಂಟಾಗಿದೆ ಎನ್ನಲಾಗಿದೆ.
ಇದಲ್ಲದೆ, ಯೆಮನ್–ಸೌದಿ ಗಡಿಯ ಸಮೀಪದ ಮಸೀದಿ ಮತ್ತು ಸುತ್ತಮುತ್ತಲಿನ ಕಟ್ಟಡಗಳನ್ನು ಗುರಿಯಾಗಿಸಿ ಹೌತಿ ಪಡೆಗಳು ದಾಳಿ ನಡೆಸಿದ್ದು, ಈ ದಾಳಿಯಲ್ಲಿ ನಾಗರಿಕ ಪ್ರದೇಶಗಳು ಟಾರ್ಗೆಟ್ ಆಗಿದ್ದವು ಎಂದು ವರದಿಗಳು ಹೇಳಿವೆ.
ಇನ್ನೊಂದೆಡೆ, ಕೆಂಪು ಸಮುದ್ರದಲ್ಲಿರುವ ಕೆಲವು ತಂತ್ರಾತ್ಮಕ ಮಹತ್ವದ ದ್ವೀಪಗಳ ಮೇಲೂ ಹೌತಿ ಪಡೆಗಳು ನಿಯಂತ್ರಣ ಸಾಧಿಸಿರುವುದಾಗಿ ಹೇಳಿಕೊಂಡಿವೆ. ಜೊತೆಗೆ ಬಾಬ್ ಅಲ್-ಮಂದೇಬ್ ಜಲಸಂಧಿಯ ಮೂಲಕ ಸೌದಿ ಹಡಗುಗಳ ಸಂಚಾರಕ್ಕೆ ತೊಂದರೆ ಮಾಡಲು ಪ್ರಯತ್ನಿಸುತ್ತಿವೆ ಎನ್ನಲಾಗಿದೆ.
ಜಾಗತಿಕ ವ್ಯಾಪಾರ ಮಾರ್ಗದ ಮೇಲೆ ಹೆಚ್ಚಿದ ಆತಂಕ
ಕೆಂಪು ಸಮುದ್ರವನ್ನು ಏಡನ್ ಕೊಲ್ಲಿಯೊಂದಿಗೆ ಸಂಪರ್ಕಿಸುವ ಬಾಬ್ ಅಲ್-ಮಂದೇಬ್ ಜಲಸಂಧಿ ವಿಶ್ವದ ಅತ್ಯಂತ ಪ್ರಮುಖ ಸಮುದ್ರ ವ್ಯಾಪಾರ ಮಾರ್ಗಗಳಲ್ಲಿ ಒಂದಾಗಿದೆ. ಈ ಪ್ರದೇಶದಲ್ಲಿ ಹೌತಿ ಚಟುವಟಿಕೆಗಳು ಹೆಚ್ಚುತ್ತಿರುವುದು ಜಾಗತಿಕ ಸಾಗರ ವಾಣಿಜ್ಯಕ್ಕೆ ಮತ್ತಷ್ಟು ಅಡಚಣೆ ಉಂಟುಮಾಡುವ ಸಾಧ್ಯತೆಯನ್ನು ಹೆಚ್ಚಿಸಿದೆ. ಜೊತೆಗೆ ಸೌದಿ ಅರೇಬಿಯಾದ ಭದ್ರತಾ ವ್ಯವಸ್ಥೆ ಹಾಗೂ ಇಂಧನ ಮೂಲಸೌಕರ್ಯಗಳ ಮೇಲೆಯೂ ದಾಳಿಗಳಾಗುವ ಆತಂಕ ಮೂಡಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ