ಗೋಕರ್ಣದ ಅಶೋಕೆಯಲ್ಲಿ ರಾಘವೇಶ್ವರ ಶ್ರೀಗಳ ಗುರುಕುಲ ಚಾತುರ್ಮಾಸ್ಯ ಆರಂಭ : ಭಾರತದ ಜ್ಞಾನಪರಂಪರೆ ವಿಶ್ವಕ್ಕೆ ಬೆಳಕಾಗಲಿ-ರಾಘವೇಶ್ವರ ಶ್ರೀಗಳು

ಗೋಕರ್ಣ: ಸಮಸ್ತ ಸಮಾಜಕ್ಕೆ ಸುಜ್ಞಾನದ ಬೆಳಕನ್ನು ಹರಿಸಿದ ಗುರುಪರಂಪರೆಯ ಪೂಜೆಯೇ ಗುರುಪೂರ್ಣಿಮೆಯ ವಿಶೇಷ. ಭಾರತದ ಜ್ಞಾನಪರಂಪರೆ ವಿಶ್ವಕ್ಕೆ ಬೆಳಕಾಗಬೇಕು ಎಂಬ ಮಹತ್ಸಂಕಲ್ಪದೊಂದಿಗೆ ಈ ಬಾರಿಯ ಚಾತುರ್ಮಾಸ್ಯವನ್ನು ಗುರುಕುಲ ಚಾತುರ್ಮಾಸ್ಯವಾಗಿ ಆಚರಿಸಲಾಗುತ್ತಿದೆ ಎಂದು ರಾಮಚಂದ್ರಾಪುರ ಮಠದ ಮಠಾಧೀಶರಾದ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದ್ದಾರೆ.
ಗುರುಕುಲ ಚಾತುರ್ಮಾಸ್ಯ ಆರಂಭದ ದಿನವಾದ ಬುಧವಾರ (ಜುಲೈ ೧೩) ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀಗಳು “ಗುರುಪೂರ್ಣಿಮೆ ಎನ್ನುವುದು ಜ್ಞಾನಚೈತನ್ಯದ ಪೂಜೆ. ಅಶೋಕೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಮೂಲ ಉದ್ದೇಶವೂ ಸುಜ್ಞಾನ ಪ್ರಸಾರ. ವಿಶ್ವವಿದ್ಯಾಪೀಠ ಕಟ್ಟಲು ಸಮಸ್ತ ಸಮಾಜವನ್ನು ತೊಡಗಿಸುವುದೇ ಗುರುಕುಲ ಚಾತುರ್ಮಾಸ್ಯದ ಸಂಕಲ್ಪ” ಎಂದರು.

ಗುರುಪೂರ್ಣಿಮೆಯಂದು ನಡೆಯುವುದು ಸುಜ್ಞಾನದ ಪೂಜೆ. ಇಂದು ನಡೆದಿರುವುದು ಜ್ಞಾನಚೈತನ್ಯದ ಪೂಜೆ. ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ ಎನಿಸಿದ ಜ್ಞಾನವನ್ನು ನೀಡುವುದೇ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಗುರಿ. ಜೀವನ ತತ್ವದ ಜ್ಞಾನವನ್ನು ವಿಶ್ವಕ್ಕೆ ಪರಿಚಯಿಸುವುದು ಉದ್ದೇಶ ಎಂದು ಹೇಳಿದರು.
ಗುರು ಇದ್ದರೆ ಬದುಕು ಪೂರ್ಣಿಮೆ; ಇಲ್ಲದಿದ್ದರೆ ಬದುಕು ಅಮಾವಾಸ್ಯೆ. ಹುಣ್ಣಿಮೆಯ ಬೆಳಕು ನಮ್ಮನ್ನು ತಂಪುಗೊಳಿಸುವಂಥದ್ದು. ಗುರು, ಕೋಟಿ ಸೂರ್ಯರ ಪ್ರಕಾಶ, ಕೋಟಿ ಚಂದ್ರರ ತಂಪು. ಬದುಕಿಗೆ ಬೆಳಕು ಮತ್ತು ತಂಪು ಎರಡನ್ನೂ ನೀಡುವಂಥವನು ಗುರು.
ಭೋಗದ ಮಧ್ಯೆ ಯೋಗಿಯಾಗಿ ಹೇಗೆ ಇರಬಹುದು ಎನ್ನುವುದನ್ನು ಬದುಕಿ ತೋರಿಸಿ, ಯುದ್ಧದ ನಡುವೆ ಶಾಂತಿಯ ವೇದಾಂತ, ತತ್ವೋಪದೇಶ ಮಾಡಿದವನು ಕೃಷ್ಣ. ಗೀತೆಯ ಸಾರ ವಿಶ್ವದ ಎಲ್ಲ ಸಮಸ್ಯೆಗಳಿಗೆ ಪರಿಹಾರ. ಜಗತ್ತಿಗೆ ಬೆಳಕಾದ ಭಗವದ್ಗೀತೆಯನ್ನು ನೀಡಿದ ಕೃಷ್ಣ ಜಗದ್ಗುರುವಾಗಿರುವುದರಿಂದಲೇ ಗುರುಪೂರ್ಣಿಮೆಯಂದು ವಿಶ್ವವಂದ್ಯನಾದ ಕೃಷ್ಣನನ್ನೂ ವಿಶೇಷವಾಗಿ ಪೂಜಿಸಲಾಗುತ್ತದೆ ಎಂದು ವಿವರಿಸಿದರು.

ಆಯುರ್ವೇದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಒಂದು ಅವಿಭಾಜ್ಯ ಅಂಗ. ಆಯುರ್ವೇದ ಎನ್ನುವುದು ಋಗ್ವೇದದ ಉಪವೇದ. ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಪರಿಪೂರ್ಣತೆ ಬರುವುದು ಆಯುರ್ವೇದದಿಂದ. ಆಯುರ್ವೇದ ಎನ್ನುವುದು ಜೀವನ ಶೈಲಿ. ಪರಮಾತ್ಮನನ್ನು ಕಾಣುವ ದಾರಿಯನ್ನು ಆಯುರ್ವೇದ ತೋರಿಸಿಕೊಡುತ್ತದೆ. ಗುರುಕುಲ ಚಾತುರ್ಮಾಸ್ಯದ ಆರಂಭದ ದಿನ ಆಯುರ್ವೇದ ಕ್ಷೇತ್ರದಲ್ಲಿ ಮಹತ್ಸಾಧನೆ ಮಾಡಿದ ಡಾ.ಗಿರಿಧರ ಕಜೆಯವರ ‘ಪೌಷ್ಟಿಕ’ ಕೃತಿ ಬಿಡುಗಡೆಯಾಗಿರುವುದು ಔಚಿತ್ಯಪೂರ್ಣ ಎಂದರು.
ತುಂಡು ತುಂಡಾದ ಬದುಕನ್ನು ಅಖಂಡವಾಗಿಸುವವನು ಗುರು. ಈ ಕಾರಣದಿಂದಲೇ ಗುರುಪೂರ್ಣಿಮೆ ಪರಿಪೂರ್ಣತೆಯ ಸಂಕೇತ. ಮಠದ ಬೇರುಗಳು ಇರುವಲ್ಲೇ, ಮೂಲಸ್ಥಾನದಲ್ಲೇ ಚಾತುರ್ಮಾಸ್ಯ ನಡೆಯುತ್ತಿರುವುದು ಈ ಬಾರಿಯ ವಿಶೇಷ. ಮಠದ ಅರ್ಥವೇ ಗುರುಕುಲ. ವಿದ್ಯಾದಾನ, ಜ್ಞಾನದಾನ ಮಾಡದ ಮಠವಿದ್ದರೆ ಅದು ನಿಜ ಅರ್ಥದಲ್ಲಿ ಮಠ ಅಲ್ಲ. ಸಮಸ್ತ ಸಮಾಜಕ್ಕೆ ಜೀವನದ ಪಾಠ ಹೇಳಿಕೊಡುವವನು ಗುರು; ಹೇಳಿಕೊಡುವ ತಾಣವೇ ಮಠ ಎಂದು ವಿಶ್ಲೇಷಿಸಿದರು.

ಪ್ರಮುಖ ಸುದ್ದಿ :-   ಕುಮಟಾ : ಬಾಡದಲ್ಲಿ ಚಿರತೆ ದಾಳಿಗೆ ಇಬ್ಬರಿಗೆ ಗಾಯ ; ಮನೆಯೊಳಗೆ ನುಗ್ಗಿ ಅವಿತುಕೊಂಡ ಚಿರತೆ

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಗುರುಪೂರ್ಣಿಮೆ, ಜ್ಞಾನದ ಬೆಳಕು ನೀಡುವ ಗುರುಗಳನ್ನು ಸ್ಮರಿಸುವ ಪುಣ್ಯ ದಿನ. ಇಡೀ ಗುರುಪರಂಪರೆಯನ್ನು ಪೂಜಿಸುವ ಜೊತೆಗೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಪಣ ತೊಡೋಣ ಎಂದರು.
ಆಧ್ಯಾತ್ಮಿಕವಾಗಿ ನಮ್ಮ ತಹಳದಿಯನ್ನು ನಾವು ಬಲಗೊಳಿಸಬೇಕು. ದೇಶಮೊದಲು ಎಂಬ ಜಾಗೃತಭಾವದಲ್ಲಿ ಜ್ಞಾನ ಸಂಪತ್ತು ರಕ್ಷಿಸಿಕೊಳ್ಳಲು ಮುಂದಾಗೋಣ. ಅಶೋಕೆಯಲ್ಲಿ ಹಚ್ಚಿದ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಎಂಬ ಜ್ಞಾನದ ದೀಪ ಇಡೀ ವಿಶ್ವವನ್ನು ಬೆಳಗುವಂತಾಗಲಿ ಎಂದು ಆಶಿಸಿದರು.
ಭಾರತ ವಿಶ್ವಗುರು; ಸಾಧನೆಯ ಉತ್ತುಂಗದಲ್ಲಿತ್ತು. ಜಗತ್ತಿಗೇ ಜ್ಞಾನದ ಬೆಳಕನ್ನು ಕೊಟ್ಟಿದ್ದೆವು. ಇದು, ಶಕ್ತಿ, ಸಂಪತ್ತು ಅಥವಾ ವಿಜ್ಞಾನದ ಆವಿಷ್ಕಾರದ ಕಾರಣದಿಂದಲ್ಲ. ಸೃಷ್ಟಿಯ ಸತ್ಯದ ಜ್ಞಾನದ ಬೆಳಕನ್ನು ನಾವು ವಿಶ್ವಕ್ಕೆ ನೀಡಿ ವಿಶ್ವಗುರು ಎನಿಸಿಕೊಂಡೆವು. ಋಷಿಮುನಿಗಳು ವೇದ ಉಪನಿಷತ್‍ಗಳಲ್ಲಿ ಹೇಳಿರುವುದೇ ಸಾರ್ವತ್ರಿಕ ಸತ್ಯ ಎನ್ನುವುದು ಇಂದು ವಿಶ್ವಕ್ಕೆ ತಿಳಿದಿದೆ ಎಂದು ಹೇಳಿದರು.

ಚಾತುರ್ಮಾಸ್ಯ ಸೇವಾ ಸಮಿತಿಯ ಗೌರವಾಧ್ಯಕ್ಷ ಡಿ.ಡಿ.ಶರ್ಮಾ, ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ, ಸಂಕಲ್ಪ ಟ್ರಸ್ಟ್‌ ಪ್ರಮೋದ ಹೆಗಡೆ, ಡಾ.ಗಜಾನನ ಶರ್ಮ, ಹವ್ಯಕ ಮಹಾಮಂಡಲ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ ವೇದಿಕೆಯಲ್ಲಿದ್ದರು. ಡಾ.ಕಜೆಯವರ ಆಯುರ್ವೇದದ ಜ್ಞಾನಯಾನ ಮಾಲಿಕೆಯ ಮೊದಲ ಪುಸ್ತಕವಾದ ‘ಪೌಷ್ಟಿಕ’ ಕೃತಿಯನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು. ಚಾತುರ್ಮಾಸ್ಯ ಮಹತ್ವದ ಬಗ್ಗೆ ವಿದ್ವಾನ್ ಸತ್ಯನಾರಾಯಣ ಶರ್ಮ ಮಾತನಾಡಿದರು. ಹವ್ಯಕ ಮಹಾಮಂಡಲ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ ದಂಪತಿ ಸಭಾಪೂಜೆ ನೆರವೇರಿಸಿದರು. ಮೋಹನ್ ಭಾಸ್ಕರ ಹೆಗಡೆ ಸ್ವಾಗತಿಸಿದರು. ಗಣೇಶ ಜೋಶಿ ಕಾರ್ಯಕ್ರಮ ನಿರೂಪಿಸಿದರು.
ಸಂತೋಷ ಹೆಗಡೆಯವರನ್ನು ಶ್ರೀಮಠದ ಸಿಓಓ ಆಗಿ ನೇಮಕ ಮಾಡಿ, ಶ್ರೀಗಳು ಆಶೀರ್ವದಿಸಿದರು. ದಿನೇಶ ಹೆಗಡೆಯವರನ್ನು ಶ್ರೀಸಂಸ್ಥಾನದ ಆಪ್ತ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಕೇಂದ್ರೀಯ ಸಮಿತಿ ಅಧ್ಯಕ್ಷರಾಗಿ, ಲೋಕಸಂಪರ್ಕಾಧಿಕಾರಿಯಾಗಿ ಹರಿಪ್ರಸಾದ ಪೆರಿಯಾಪು ಅವರನ್ನು ನೇಮಕ ಮಾಡಲಾಯಿತು.

ಪ್ರಮುಖ ಸುದ್ದಿ :-   ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ ; ತಕ್ಷಣವೇ ಸಿಪಿಆರ್‌ ಮಾಡಿ ಜೀವ ಉಳಿಸಿದ ಮತದಾನ ಮಾಡಲು ಬಂದಿದ್ದ ವೈದ್ಯ

ಶ್ರೀಮಠದ ಮಾತೃವಿಭಾಗದ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಹವ್ಯಕ ಮಹಾಮಂಡಲ ಉಪಾಧ್ಯಕ್ಷೆ ಶೈಲಜಾ ಭಟ್, ಕಾರ್ಯದರ್ಶಿ ಪಿದಮಲೆ ನಾಗರಾಜ ಭಟ್, ಸೇವಾ ಸಮಿತಿ ಕಾರ್ಯದರ್ಶಿ ಹರಿಪ್ರಸಾದ ಪೆರಿಯಾಪು, ಪದಾಧಿಕಾರಿಗಳಾದ ಮಂಜುನಾಥ ಸುವರ್ಣಗದ್ದೆ, ಶ್ರೀಕಾಂತ ಹೆಗಡೆ, ಮೂರೂರು ಸುಬ್ರಾಯ ಭಟ್, ಜಿಲ್ಲಾ ಬಿಜೆಪಿ ಅಧ್ಯಕ್ಷ ವೆಂಕಟೇಶ ನಾಯಕ್, ಗ್ರಾಮ ಪಂಚಾಯತ ಅಧ್ಯಕ್ಷ ವೆಂಕಟೇಶ ಜನ್ನ, ಎನ್.ಎಸ್.ಹೆಗಡೆ ಕರ್ಕಿ, ಉಮೇಶ್ ನಾಯ್ಕ್, ಭಾಸ್ಕರ್ ನಾರ್ವೇಕರ್, ವೆಂಕಟರಮಣ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement