ಪ್ರತಿಭಟನೆ ನಡೆಸುತ್ತಿದ್ದ ಪ್ರಿಯಾಂಕಾ ಗಾಂಧಿಯನ್ನು ರಸ್ತೆಯಲ್ಲೇ ಎಳೆದೊಯ್ದ ಪೊಲೀಸರು; ವೀಡಿಯೊ ವೈರಲ್

ನವದೆಹಲಿ: ಸಂಸತ್‌ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಜೈರಾಮ್ ರಮೇಶ್ ಮತ್ತು ರಂಜೀತ್ ರಂಜನ್ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಲೆ ಏರಿಕೆ ಮತ್ತು ಹಣದುಬ್ಬರವನ್ನು ವಿರೋಧಿಸಿ ರಾಷ್ಟ್ರಪತಿ ಭವನದ ಕಡೆಗೆ ಮೆರವಣಿಗೆ ನಡೆಸಲು ಯತ್ನಿಸಿದ ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಬಟ್ಟೆಗಳನ್ನು ಪೊಲೀಸರು ಹರಿದು ಹಾಕಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ. ಈ ಮಧ್ಯೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಪೊಲೀಸರು ರಸ್ತೆಯಲ್ಲಿ ಎಳೆದೊಯ್ದ ದೃಶ್ಯ ವೀಡಿಯೊದಲ್ಲಿ ಸೆರೆಯಾಗಿದೆ.

ಪ್ರತಿಭಟನೆಯ ಸಂಕೇತವಾಗಿ ಇತರ ಪಕ್ಷದ ನಾಯಕರಂತೆ ಕಪ್ಪು ಬಟ್ಟೆಯನ್ನು ಧರಿಸಿದ್ದ ಪ್ರಿಯಾಂಕಾ ಗಾಂಧಿ ಮೊದಲು ಬ್ಯಾರಿಕೇಡ್‌ಗಳ ಮೇಲೆ ಹತ್ತಿದರು. ಅಲ್ಲಿ ಅವರು ಸ್ವಲ್ಪ ಸಮಯದವರೆಗೆ ಧರಣಿ ನಡೆಸಿದರು. ಆ ಸಂದರ್ಭದಲ್ಲಿ ಪೊಲೀಸರು ಆಗಮಿಸಿ ಬಂಧಿಸಲು ಮುಂದಾದರು. ಅದಕ್ಕೆ ಪ್ರಿಯಾಂಕಾ ಒಪ್ಪದಿದ್ದಾಗ ಅವರನ್ನು ಎಳೆದುಕೊಂಡು ಹೋಗಲಾಯಿತು ಪೊಲೀಸರ ವರ್ತನೆಗೆ ಕಾಂಗ್ರೆಸ್ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆಗೂ ಮುನ್ನ ಮಾತನಾಡಿದ್ದ ರಾಹುಲ್ ಗಾಂಧಿ, 70 ವರ್ಷದ ಪ್ರಜಾಪ್ರಭುತ್ವ ವ್ಯವಸ್ಥೆ 8 ವರ್ಷದಲ್ಲಿ ನಾಶವಾಗಿದೆ. ಬೆಲೆ ಏರಿಕೆ, ನಿರುದ್ಯೋಗದ ಬಗ್ಗೆ ಚರ್ಚಿಸಲು ಅವಕಾಶ ನೀಡುತ್ತಿಲ್ಲ. ದೇಶದಲ್ಲಿ ಇಂದು 4 ಜನರಿಂದ ಸರ್ವಾಧಿಕಾರ ನಡೆಯುತ್ತಿದೆ. ಯಾರಾದರೂ ಆ ಸರ್ವಾಧಿಕಾರಿಗಳ ವಿರುದ್ಧ ತಿರುಗಿಬಿದ್ದರೆ ಸುಳ್ಳು ಕೇಸ್ ಹಾಕಿ ಜೈಲಿಗೆ ಕಳುಹಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಂಸತ್​​ನಲ್ಲಿ ಜನರ ಯಾವುದೇ ಸಮಸ್ಯೆಗಳು ಚರ್ಚೆಯಾಗುತ್ತಿಲ್ಲ. ನಾಲ್ಕೈದು ಉದ್ಯಮಿಗಳಿಗಾಗಿ ಇಬ್ಬರು ರಾಜಕಾರಣಿಗಳು ಕೆಲಸ ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದ ಜಾರಿ ನಿರ್ದೇಶನಾಲಯದ (ಇಡಿ) ತನಿಖೆ ಬಿಜೆಪಿಯ ಬೆದರಿಕೆ ತಂತ್ರವಾಗಿದೆ. ಬಿಜೆಪಿಯವರು ನಮ್ಮ ವಿರುದ್ಧ ಏನೇ ಷಡ್ಯಂತ್ರ ಮಾಡಿದರೂ ದೇಶ, ಅದರ ಪ್ರಜಾಪ್ರಭುತ್ವವನ್ನು ರಕ್ಷಿಸುವ ಕೆಲಸವನ್ನು ನಾನು ಮುಂದುವರಿಸುತ್ತೇನೆ. ಒತ್ತಡ ಹಾಕಿದರೆ ನಮ್ಮನ್ನು ಸುಮ್ಮನಿರಿಸಬಹುದು ಎಂದು ಅವರು ಭಾವಿಸಿದ್ದಾರೆ. ಆದರೆ ಬಿಜೆಪಿಯವರ ವಿರುದ್ಧ ನಾವು ನಿಲ್ಲುತ್ತೇವೆ. ನಾವು ಯಾವುದಕ್ಕೂ ಹೆದರುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಬಾಬಾ ರಾಮದೇವ ಕಂಪನಿ ತಯಾರಿಸಿದ 14 ಔಷಧಗಳ ತಯಾರಿಕಾ ಪರವಾನಗಿ ಅಮಾನತು ಮಾಡಿದ ಉತ್ತರಾಖಂಡ ಸರ್ಕಾರ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement