ಭೂಕಬಳಿಕೆ ತಿದ್ದುಪಡಿ ಕಾಯ್ದೆಗೆ ಸಚಿವ ಸಂಪುಟ ಒಪ್ಪಿಗೆ: ಗ್ರಾಮೀಣ ಪ್ರದೇಶ ವ್ಯಾಪ್ತಿಯಿಂದ ಹೊರಕ್ಕೆ,ರೈತರಿಗೆ ರಿಲೀಫ್‌

ಬೆಂಗಳೂರು: ಭೂಕಬಳಿಕೆ ಕಾಯ್ದೆ ಇನ್ನು ಮುಂದೆ ನಗರ ಪ್ರದೇಶಗಳಿಗೆ ಮಾತ್ರ ಅನ್ವಯವಾಗಲಿದ್ದು, ಗ್ರಾಮಾಂತರ ಪ್ರದೇಶವನ್ನು ಆ ವ್ಯಾಪ್ತಿಯಿಂದ ಹೊರಗಿಡಲು ‘ಸೆಕ್ಷನ್‌ 2 ಡಿ’ಗೆ ರಾಜ್ಯ ಸರ್ಕಾರ ತಿದ್ದುಪಡಿ ಮಾಡಿದ್ದು, ತಿದ್ದುಪಡಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ತಿದ್ದುಪಡಿಯಿಂದಾಗಿ ಗ್ರಾಮೀಣ ಪ್ರದೇಶದ ರೈತರು ಭೂಕಬಳಿಕೆ ನ್ಯಾಯಾಲಯದ ವ್ಯಾಪ್ತಿಗೆ ಒಳಪಡುವುದಿಲ್ಲ. ಕಬಳಿಕೆಗೆ ಸಂಬಂಧಿಸಿದಂತೆ ತಕರಾರುಗಳಿದ್ದರೆ ಕಂದಾಯ ಇಲಾಖೆಯೇ ಅದನ್ನು ಪರಿಶೀಲಿಸಿ, ಸೂಕ್ತ ಕ್ರಮ ತೆಗೆದುಕೊಳ್ಳಲಿದೆ. ಹೀಗಾಗಿ ರೈತರು ಅನಗತ್ಯವಾಗಿ ಭೂಕಬಳಿಕೆ ನ್ಯಾಯಾಲಯಕ್ಕೆ ಅಲೆಯುವುದು ತಪ್ಪಲಿದೆ ಎಂದು ತಿಳಿಸಿದರು.

ಭೂಕಬಳಿಕೆ ನಿಷೇಧ ಕಾಯ್ದೆ ತಂದಾಗ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಒಂದು ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಲಾಗಿತ್ತು. ಸ‌ಣ್ಣ ಪುಟ್ಟ ಪ್ರಕರಣಗಳಿಗೂ ರಾಜ್ಯದ ವಿವಿಧ ಭಾಗಗಳಿಂದ ಈ ನ್ಯಾಯಾಲಯಕ್ಕೆ ಅಲೆದಾಡಬೇಕಾಗಿತ್ತು. ರೈತರಿಗೆ ತೊಂದರೆಯಾಗುತ್ತಿತ್ತು. ಈಗ ರೈತರಿಗೆ ಇದರಿಂದ ಮುಕ್ತಿ ನೀಡಲಾಗಿದೆ ಎಂದರು.
ರೈತರು ಕೃಷಿ ಮಾಡುವ ಸಂದರ್ಭದಲ್ಲಿ ಗೊತ್ತಿಲ್ಲದೆಯೇ ಒತ್ತುವರಿ ಮಾಡಿದರೆ ಅದನ್ನು ಭೂಕಬಳಿಕೆ ಎಂದು ಪರಿಗಣಿಸಲಾಗುತ್ತಿತ್ತು. ಹೊಸ ತಿದ್ದುಪಡಿಯಿಂದ ಅದನ್ನು ಅತಿಕ್ರಮಣ ಎಂದು ಪರಿಗಣಿಸಲಾಗುವುದಿಲ್ಲ. ಅದನ್ನು ಭೂಕಬಳಿಕೆ ಕಾಯ್ದೆ ವ್ಯಾಪ್ತಿಯಿಂದ ಹೊರಗಿಡಲು ತೀರ್ಮಾನಿಸಲಾಗಿದೆ. ಭೂಕಬಳಿಕೆ ಕಾಯ್ದೆಯು ನಗರ ಪ್ರದೇಶಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

ಹೊಸ 8 ವಿಶ್ವವಿದ್ಯಾಲಯಗಳಿಗೆ ಅಸ್ತು
ನೂತನ ಎಂಟು ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಚಾಮರಾಜನಗರ, ಹಾವೇರಿ, ಹಾಸನ, ಕೊಡಗು, ಕೊಪ್ಪಳ, ಬಾಗಲಕೋಟೆ, ಬೀದರ್ ಮತ್ತು ಮಂಡ್ಯ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಹಾದಿ ಸುಲಭವಾದಂತಾಗಿದೆ.

ಮೃತ ಯೋಧರ ಕುಟುಂಬಕ್ಕೆ ನೌಕರಿ
ಸೇನೆಯಲ್ಲಿ ಮಡಿದ ಯೋಧರ ಕುಟುಂಬದ ಒಬ್ಬ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿಯನ್ನು ನೀಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಆದರೆ ಅಂತಹ ಕುಟುಂಬಗಳಿಗೆ ₹25 ಲಕ್ಷ ಎಕ್ಸ್‌ಗ್ರೇಷಿಯಾ, ನಿವೇಶನ ಅಥವಾ ಭೂಮಿ ಬದಲಿಗೆ ಸರ್ಕಾರಿ ಉದ್ಯೋಗ ನೀಡುವುದೇ ಸೂಕ್ತ ಎಂಬ ತೀರ್ಮಾನಕ್ಕೆ ಬರಲಾಗಿದೆ. ರಾಜ್ಯದಲ್ಲಿ 200 ಮಂದಿ ಅರ್ಹತೆ ಹೊಂದಿದ್ದಾರೆ.
ಮುಖ್ಯಮಂತ್ರಿಯವರ ರೈತ ವಿದ್ಯಾನಿಧಿ ಯೋಜನೆಯನ್ನು ಭೂರಹಿತ ಕೃಷಿ ಕಾರ್ಮಿಕರ ಮಕ್ಕಳಿಗೂ ವಿಸ್ತರಿಸಲು ತೀರ್ಮಾನಿಸಲಾಗಿದೆ.

‘ಡಿ’ ಗ್ರೂಪ್‌ ನೌಕರರ ಆಯ್ಕೆಗೆ ಸಂದರ್ಶನವಿಲ್ಲ
ರಾಜ್ಯ ಸರ್ಕಾರದ ‘ಡಿ’ ಗ್ರೂಪ್‌ ನೌಕರರ ಹುದ್ದೆಗಳಿಗೆ ಕೆಪಿಎಸ್‌ಸಿ ನಡೆಸುವ ನೇಮಕಾತಿಗಳಿಗೆ ಇನ್ನು ಮುಂದೆ ಸಂದರ್ಶನ (ವೈವಾ) ಇರುವುದಿಲ್ಲ. ಇದಕ್ಕಾಗಿ ಕರ್ನಾಟಕ ಲೋಕಸೇವಾ ಆಯೋಗದ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದ್ದು, ಕೇವಲ ಲಿಖಿತ ಪರೀಕ್ಷೆ ನಡೆಸಿ ಅದರ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement