ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಬೇಕು ಯಾಕೆಂದರೆ…..ಇದು ರಸ್ತೆ ಅಭಿವೃದ್ಧಿಗಿಂತ ಹೆಚ್ಚು ಪರಿಸರ ಸ್ನೇಹಿ, ಮಿತವ್ಯಯಕಾರಿ, 3.40 ಕೋಟಿ ಜನರ ನಿರೀಕ್ಷೆ

ವಸಂತ ಲದವಾ, ಮಾಜಿ ಅಧ್ಯಕ್ಷರು, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಹುಬ್ಬಳ್ಳಿ

ಕಳೆದ ಅನೇಕ ವರ್ಷಗಳಿಂದ ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗಕ್ಕಾಗಿ ರಾಜ್ಯದ ಉತ್ತರ ಕರ್ನಾಟಕದ ೧೬ ಜಿಲ್ಲೆಗಳ ಸುಮಾರು ೩.೪೦ ಕೋಟಿ ಜನರ ನಿರೀಕ್ಷೆಯಲ್ಲಿದ್ದಾರೆ. ಮೂಲಭೂತ ಸೌಕರ್ಯಗಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳಿಗೆ ಅತ್ಯವಶ್ಯ ಮತ್ತು ಅನಿವಾರ್ಯ. ಇಂದಿಗೂ ರಾಜ್ಯದ ೮೦ ತಾಲೂಕುಗಳಿಗೆ ರೈಲು ಸೌಲಭ್ಯವಿಲ್ಲ. ಸುಮಾರು ೮೫%ಕ್ಕೂ ಹೆಚ್ಚು ಈ ಭಾಗದ ವಿದ್ಯಾವಂತರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿ ಮುಖ್ಯವಾಹಿನಿಯಿಂದ ದೂರವಾಗಿದ್ದಾರೆ. ಕೇವಲ ಕೆಲವರಿಂದ ಪರಿಸರ ನಾಶ ಸಂರಕ್ಷಣೆ ನೆಪದಲ್ಲಿ ಹುಬ್ಬಳ್ಳಿ -ಅಂಕೋಲಾ ರೈಲು ಯೋಜನೆ ಕುರಿತು ಅವೈಜ್ಞಾನಿಕ, ಅವಾಸ್ಥವಿಕ ಮಾಹಿತಿ ಮತ್ತು ಅಪಪ್ರಚಾರ ಹರಡಿದ್ದರಿಂದ ಈ ಯೋಜನೆ ಇಂದಿಗೂ ನೆನೆಗುದಿಗೆ ಬಿದ್ದಿದೆ.
ಕೆಲ ಅಧಿಕಾರಿಗಳು ಮತ್ತು ಸ್ವಹಿತಾಸಕ್ತರು ಈ ಯೋಜನೆಯಲ್ಲಿ ರಾಷ್ಟ್ರೀಯ ಹಿತಾಸಕ್ತಿ ಅಡಗಿಲ್ಲ, ೩೦೦೦ ಜಾತಿಯ ಸಸಿಗಳು, ಹುಲಿ, ಆನೆ ಮತ್ತು ಕರಡಿಯಂಥ ವನ್ಯಜೀವಿಗಳ ಚಲನವಲನೆಗೆ ಆತಂಕ ಸಂಭವಿಸುವುದರ ಜೊತೆಗೆ ರೈಲು ಡಿಕ್ಕಿ ಪರಿಣಾಮದಿಂದ ವನ್ಯ ಜೀವಿಗಳು ಅಪಘಾತಕ್ಕೀಡಾಗುವ ಮತ್ತು ಲಕ್ಷಾಂತರ ಗಿಡ ಮರಗಳು ನೆಲಕ್ಕುರುಳಿ ಪರಿಸರ ನಾಶ ಸಂಭವಿಸುವುದೆಂದು ಅವಾಸ್ತವಿಕ ಮತ್ತು ಸತ್ಯಕ್ಕೆ ದೂರವಾದಂತಹ ಕಾರಣಗಳನ್ನು ಒಡ್ಡಿ ಸತತ ಅಡ್ಡಿಪಡಿಸುತ್ತಿರುವದರಿಂದ ೧೬೮ ಕಿ.ಮೀ. ಉದ್ದದ ಈ ಯೋಜನೆ ನನೆಗುದಿಗೆ ಬಿದ್ದಿದೆ. ಈಗಾಗಲೇ ೧೧೭ ಕೋಟಿ ರೂ.ಗಳ ವೆಚ್ಚದಲ್ಲಿ ಹುಬ್ಬಳ್ಳಿ ಹಾಗೂ ಕಲಘಟಗಿ ಮದ್ಯ ೪೭ ಕಿಮೀ ಮಾರ್ಗ ಅಭಿವೃದ್ಧಿಪಡಿಸಿದ್ದರೂ ಮುಂದಿನ ಕಾಮಗಾರಿ ಸ್ಥಗಿತಗೊಂಡಿದೆ. ಮುಖ್ಯವಾಗಿ ಈ ಯೋಜನೆಗೆ ಯಲ್ಲಾಪುರ ತಾಲೂಕಿನ ೭೨೭ ಹೆಕ್ಟೇರ ಅರಣ್ಯ ಪ್ರದೇಶ ನಾಶವಾಗುವುದೆಂದು ಅಪಪ್ರಚಾರ ಮಾಡಲಾಗಿದೆ.

ವಾಸ್ತವವಾಗಿ ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆಗೆ ಅವಶ್ಯವಿರುವುದು ಕೇವಲ ೧೩೮ ಹೆಕ್ಟೇರ್‌ ಅರಣ್ಯ ಪ್ರದೇಶ ಮಾತ್ರ ೧೬೮ ಕಿ.ಮೀ. ಉದ್ದದ ಈ ಯೋಜನೆಯಲ್ಲಿ ೧೦೫ ಕಿ.ಮೀ. ಅರಣ್ಯವಿಲ್ಲದ ಬಯಲು ಪ್ರದೇಶವಿದೆ. ೨೦ ಕಿ.ಮಿ. ಉದ್ದ ಸುರಂಗ ಮಾರ್ಗ, ೨೦ ಕಿ.ಮಿ. ಅರಣ್ಯವಿಲ್ಲದ ಗುಡ್ಡಗಾಡು ಪ್ರದೇಶವಿದ್ದು ರೈಲು ಮಾರ್ಗಕ್ಕೆ ಕೇವಲ ೨೩ ಕಿ.ಮೀ. ಉದ್ದದಷ್ಟು ಅರಣ್ಯ ಪ್ರದೇಶದ ಅವಶ್ಯಕತೆಯಿದೆ. ಸಾಮಾನ್ಯವಾಗಿ ರೈಲು ಮಾರ್ಗಕ್ಕೆ ೬೦ ಮೀಟರ್‌ ಅಂದರೆ ೨೦೦ ಅಡಿ ಅಗಲದ ಪ್ರದೇಶ ಬೇಕಾಗುತ್ತದೆ. ೨೩ ಕಿಮೀ ರೈಲು ಮಾರ್ಗಕ್ಕೆ ಲೆಕ್ಕ ಹಾಕಿದರೆ (೬೦ಮೀಟರ * ೨೩ ಕಿ.ಮಿ.) ಈ ಯೋಜನೆಗೆ ಬೇಕಾಗಬಹುದಾದಂತಹ ಅರಣ್ಯ ಪ್ರದೇಶ ಕೇವಲ ೧೩೮ ಹೆಕ್ಟೇರ್‌ ಮಾತ್ರ. ೭೨೭ ಹೆಕ್ಟೇರ್‌ ಖಂಡಿತವಾಗಿಯೂ ಅಲ್ಲ. ಉತ್ತರ ಕನ್ನಡ ಜಿಲ್ಲೆ ೮೧ ಶೇಕಡಾ ಅರಣ್ಯ ಪ್ರದೇಶ ಹೊಂದಿದ್ದು ಕೇವಲ ಶೇ ೧ರಷ್ಟು ಅರಣ್ಯ ಪ್ರದೇಶ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಉಪಯೋಗಿಸಲ್ಪಟ್ಟರೆ ಪರಿಸರಕ್ಕೆ ಅಥವಾ ಕಾಡು ಪ್ರಾಣಿಗಳಿಗೆ ಯಾವುದೇ ವ್ಯತ್ಯಾಸವಾಗದು.
ಈ ಪ್ರದೇಶದಲ್ಲಿ ಸುಮಾರು ೩೦೦೦ ಮಿಮೀ ಮಳೆ ಆಗುತ್ತದೆಂದು ಪ್ರಚಾರಪಡಿಸಲಾಗುತ್ತದೆ. ಆದರೆ ಇದೇ ಕಾರಣಕ್ಕೆ ರಚಿಸಿದ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ. ಟಿ. ವಿ.. ರಾಮಚಂದ್ರ ಅವರು ನೀಡಿದ ವರದಿ ಪ್ರಕಾರ ಕೇವಲ ೧೨೦೦ ರಿಂದ ೧೮೦೦ ಮಿಮೀ. ವರೆಗೆ ಅದೂ ಸಹ ಸಣ್ಣ ಭಾಗದಲ್ಲಿ ಮಳೆಯಾಗುವುದೆಂದು ಸ್ಪಷ್ಟಪಡಿಸಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಜಲವಿದ್ಯುತ್ಛಕ್ತಿ ಯೋಜನೆಗೆ ಸುಮಾರು ೧೫೦೦೦ ಹೆಕ್ಟೇರ್‌ ಅರಣ್ಯ ಪ್ರದೇಶಕ್ಕೆ ಕೇಂದ್ರ ಪರಿಸರ ಇಲಾಖೆ ೧೯೮೦-೮೧ರಲ್ಲಿ ಮಂಜೂರಾತಿ ನೀಡಿದೆ. ಇದೇ ಜಿಲ್ಲೆಯಿಂದ ಹೋಗುವ ಕೊಂಕಣ ರೈಲು ಯೋಜನೆಗಳಿಗೆ ಅರಣ್ಯ ಮತ್ತು ಪರಿಸರ ಇಲಾಖೆ ಯಾವುದೇ ಅಡ್ಡಿ ಆತಂಕಗಳಿಲ್ಲದೇ ಮಂಜೂರು ಮಾಡಿದೆ. ೧೯೭೦ರಲ್ಲಿ ಕಾಳಿ ಯೋಜನೆಗೆ ಅರಣ್ಯ ಪರಿಸರ ಇಲಾಖೆ ಅನುಮೋದಿಸಿದೆ. ಈ ಪ್ರದೇಶದಲ್ಲಿದ್ದ ಬಹುದೊಡ್ಡ ಪ್ರಮಾಣದ ಆನೆಗಳ ಗುಂಪು ೧೯೭೦ರಲ್ಲಿಯೇ ಮೈಸೂರು ಅರಣ್ಯ ಪ್ರದೇಶಕ್ಕೆ ವಲಸೆ ಹೋಗಿದ್ದು ಅಳಿದುಳಿದ ಬೆರಳಣಿಕೆಯಷ್ಟು ಆನೆಗಳು ಸಹ ರೈಲು ಮಾರ್ಗದಿಂದ ಅತೀ ದೂರ ಇರಬಹುದಾಗಿವೆ. ಅವುಗಳ ಅಲೆದಾಟಕ್ಕೆ ಈ ಯೋಜನೆ ಯಾವುದೇ ಆತಂಕವಾಗದು. ಇದಕ್ಕೆ ಸಾಕ್ಷಿ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯ ಸಚಿವರು ರಾಜ್ಯ ಸಭೆಯಲ್ಲಿ ಕೇಳಿದ ೨೮೪೭ನೇ ಪ್ರಶ್ನೆಗೆ ದಿನಾಂಕ ೧೮-೧೨-೨೦೧೪ರಂದು ಲಿಖಿತ ಉತ್ತರದಲ್ಲಿ ಸ್ಪಷ್ಟವಾಗಿ, ಹುಬ್ಬಳ್ಳಿ -ಅಂಕೋಲಾ ರೈಲು ಯೋಜನೆಗೆ ಪರಿಸರ ಮೌಲ್ಯಮಾಪನ ಅಧಿಸೂಚನೆಯಲ್ಲಿ ಪರಿಸರ ಇಲಾಖೆಯಿಂದ ಅನುಮತಿ ಅಗತ್ಯವಿಲ್ಲವೆಂದು ರಾಜ್ಯ ಸಭೆಯಲ್ಲಿ ಉತ್ತರಿಸಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕದ 7 ಜಿಲ್ಲೆಗಳಲ್ಲಿ ನಾಳೆಯಿಂದ ಮತ್ತೆ ಮಳೆ ಅಬ್ಬರ ; ಉಳಿದ ಜಿಲ್ಲೆಗಳಲ್ಲಿ ಚುರುಕು

ಅತ್ಯಂತ ಆಶ್ಚರ್ಯದ ಸಂಗತಿಯೆಂದರೆ ಯಾವ ಪರಿಸರ ಇಲಾಖೆ ಈ ಯೋಜನೆಗೆ ಅಡ್ಡಿಪಡಿಸುತ್ತಿದೆಯೋ ಅದೇ ಇಲಾಖೆಯ ಉಪ ಅರಣ್ಯಾಧಿಕಾರಿ ಮತ್ತು ದಾಂಡೇಲಿ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ರಾಜೇಶ ಭಟ್ಟ ಅವರು ಮಾಹಿತಿ ಹಕ್ಕಿನಡಿ ಕೋರಿರುವ ಮಾಹಿತಿ ಅಧಿನಿಯಮದದಡಿ ದಿನಾಂಕ ೨೭-೧೦-೨೦೨೧ರಂದು ಪೂರೈಸಿದ ಮಾಹಿತಿ ವಿವರ ಕೆಳಗಿನಂತಿದೆ.
ಕೋರಿದ ಮಾಹಿತಿ :
The distance (in Kms.) between the proposed Hubli Ankola Rail line Project (HARP) and the outer boundary of MOEF-CC-ECO, Sensative zone vide draft notifiction No. SO-3369 (E) Dated 02-11-2016 in respect of two extreme peaks in Ankola-Yallapur Taluka of Uttar Kannada District

ಸಲ್ಲಿಸಿದ ಮಾಹಿತಿ :
ಪರಿಸರ ಸೂಕ್ಷ್ಮ ವಲಯದ ಕರಡು ಅಧಿಸೂಚನೆ ಸಂಖ್ಯೆ ಎಸ್.ಓ.೩೩೬೯ (ಇ)೨ ದಿನಾಂಕ ೦೨-೧೧-೨೦೧೬ರ ಪ್ರಕಾರ ಹುಬ್ಬಳ್ಳಿ- ಅಂಕೋಲಾ ರೈಲು ಯೋಜನೆ ಹಾಗೂ ಪರಿಸರ ಸೂಕ್ಷ್ಮ ವಲಯದ ಹೊರಗಡೆಯ ನಡುವಿನ ಅಂತರ ಅಂದಾಜು ವೈಮಾನಿಕ ಅಂತರ ೧೪ಕಿಮೀ. ಆಗಿರುತ್ತದೆ.
ಈ ಅಧಿಕೃತ ಮಾಹಿತಿ ಪ್ರಕಾರ ಈ ರೈಲು ಯೋಜನೆ ಸೂಕ್ಷ್ಮ ವಲಯ ಹಾಗೂ ಅದರ ಬಫರ್ ಪ್ರದೇಶದಿಂದ ೧೪ ಕಿಮೀ. ವೈಮಾನಿಕ ದೂರದಲ್ಲಿದೆ. ಆದರೆ ತಪ್ಪು ಮಾಹಿತಿ ಹಾಗೂ ಅಪಪ್ರಚಾರ ಮಾಡಿ ಆತಂಕ ಒಡ್ಡಲಾಗುತ್ತಿದೆ.

ಈ ಎಲ್ಲ ದಾಖಲೆಗಳು ಕಡತದಲ್ಲಿ ಇರುವುದರಿಂದ ರಾಜ್ಯದ ವಿವಿಧ ಸಂಘಗಳ ಅಭಿಪ್ರಾಯದ ಮೇರೆಗೆ, ಕೆಳ ಕಾಣಿಸಿದ ಕಾರಣಗಳಿಂದ ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗ ದೇಶದ ಮತ್ತು ರಾಜ್ಯದ ಸರ್ವತೋಮುಖ ಬೆಳವಣಿಗೆಗೆ ಅವಶ್ಯವಾಗಿದೆ ಎಂದು ತಮ್ಮಲ್ಲಿ ಅರಿಕೆ ಮಾಡಿಕೊಳ್ಳುತ್ತೇನೆ.
೧) ಈ ಯೋಜನೆ ಕೇವಲ ಕಬ್ಬಿಣದ ಅದಿರು ಸಾಗಾಣಿಕೆಗೆ ಇರದೇ ಉತ್ತರ ಮತ್ತು ಮಧ್ಯ ಕರ್ನಾಟದ ಶೇ. ೫೨ ಜನರಿಗೆ ಉತ್ತರ ಕನ್ನಡ ಜಿಲ್ಲೆ ಕರಾವಳಿಗೆ ಏಕಮಾತ್ರ ಸಮೂಹ ಸಾರಿಗೆ ಯೋಜನೆಯಾಗಿದೆ.
೨) ಈಗಾಗಲೇ ಕೊಂಕಣ ರೈಲ್ವೆ ಅಸ್ತಿತ್ವದಲ್ಲಿದ್ದು ಹುಬ್ಬಳ್ಳಿ -ಅಂಕೋಲಾ ರೈಲು ಯೋಜನೆಯಿಂದ ದೇಶದ ಬೇರೆ ಬೇರೆ ಭಾಗಗಳಿಗೆ ಸಂಪರ್ಕ ಸಾಧಿಸಲು ಅನುಕೂಲವಾಗುತ್ತದೆ.
೩) ರಾಷ್ಟ್ರಕವಿ ದಿ|| ನಾರಾಯಣರಾವ ಹುಯಿಲಗೋಳ ಅವರು ಕಂಡ ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು ಕನಸು ನನಸಾಗಬೇಕಾದರೆ ಕರ್ನಾಟಕದ ಸಮಗ್ರ ಗಮನಾರ್ಹ ಅಭಿವೃದ್ಧಿಗೆ, ಸಮೂಹ ಸಾರಿಗೆ, ಸರಕು, ಸಲಕರಣೆ, ಉಪಕರಣಗಳ ಮತ್ತು ಕಾರ್ಯಪಡೆಗಳ ಸಾಗಾಣಿಕೆಗೆ ಈ ಯೋಜನೆ ಅತ್ಯವಶ್ಯವಾಗಿದೆ.
೪) ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ಥಾಪಿಸಲ್ಪಟ್ಟ/ಸ್ಥಾಪಿಸಲ್ಪಡುವ ಸಿಬರ್ಡ ನೌಕಾನೆಲೆಗೆ, ಕೈಗಾ ಪರಮಾಣು ವಿದ್ಯುತ್‌ಸ್ಥಾವರ ಯೋಜನೆಗೆ, ಕಾರವಾರ-ಬೇಲಿಕೇರಿ ಮತ್ತು ತದ್ರಾ ಬಂದರುಗಳ ಅಭಿವೃದ್ಧಿಗೆ ತನ್ಮೂಲಕ ಉತ್ತರ ಕರ್ನಾಟಕದ ಅನೇಕ ಯೋಜನೆಗಳಿಗೆ ಕಲ್ಲಿದ್ದಲು, ತೈಲ, ಉಕ್ಕು, ಕೃಷಿ ಉತ್ಪನ್ನಗಳ, ಯಂತ್ರ ಸಾಮಗ್ರಿಗಳ ಕಚ್ಚಾ ವಸ್ತುಗಳ ಆಯಾತ-ನಿರ್ಯಾತಕ್ಕೆ ಹಾಗೂ ಉತ್ತರ ಕರ್ನಾಟಕದಲ್ಲಿ ನಿಯೋಜಿತ ಅನೇಕ ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ, ಪುಣೆ ಬೆಂಗಳೂರ ಹೆದ್ದಾರಿಯಲ್ಲಿ ಪ್ರಾರಂಭಗೊಳ್ಳುತ್ತಿರುವ ಕೈಗಾರಿಕಾ ಕಾರಿಡಾರ್‌ಗಳಿಗೆ ಸಹಕಾರಿಯಾಗಲಿದೆ.

ಪ್ರಮುಖ ಸುದ್ದಿ :-   ವಾಲ್ಮೀಕಿ ನಿಗಮದ ಹಗರಣ: ಮಾಜಿ ಸಚಿವ ನಾಗೇಂದ್ರ ವಶಕ್ಕೆ ಪಡೆದ ಇ.ಡಿ.

೫) ರಾಜ್ಯದಲ್ಲಿ ರೈಲು ಸಂಪರ್ಕ ದೇಶದ ಸರಾಸರಿಗಿಂತ ಅತೀ ಕಡಿಮೆ ಇದೆ. ದೇಶದ ಸರಾಸರಿ ರೈಲು ಸಂಪರ್ಕ ಪ್ರತಿ ಸಾವಿರ ಚದರ ಕಿಲೋ ಮೀಟರಗೆ ೨೭ ಕಿಮೀ. ಇದ್ದರೆ ರಾಜ್ಯದಲ್ಲಿ ಪ್ರತಿ ಸಾವಿರ ಚದರ ಕಿಮೀಗೆ ಕೇವಲ ೧೬ ಕಿಮೀ ಇದೆ.
೬) ಉತ್ತರ ಕನ್ನಡ ಜಿಲ್ಲೆ ವಿಶ್ವವಿಖ್ಯಾತ ಜೋಗ ಜಲಪಾತ ಸೇರಿದಂತೆ ೧೭೫ಕ್ಕೂ ಹೆಚ್ಚು ಪ್ರೇಕ್ಷಣಿಕ ಪ್ರವಾಸಿ ತಾಣವಾಗಿದೆ. ನೋಬಲ್ ಪ್ರಶಸ್ತಿ ಪುರಸ್ಕೃತ ದಿ|| ರವೀಂದ್ರನಾಥ ಟ್ಯಾಗೋರ ೧೮೯೬ರಲ್ಲಿ ಈ ಭಾಗಕ್ಕೆ ಭೇಟಿ ನೀಡಿದಾಗ ಉತ್ತರ ಕನ್ನಡ ಜಿಲ್ಲೆಯನ್ನು ಸ್ವಿಡ್ಜರ್ಲ್ಯಾಂಡ್‌ಗೆ ಹೋಲಿಕೆ ಮಾಡಿದ್ದರು. ಈ ಭಾಗದಲ್ಲಿ ದೇಶದ ಅತ್ಯುತ್ತಮ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಈ ಯೋಜನೆ ನಾಂದಿಯಾಗುವುದರ ಜೊತೆಗೆ ವಿಪುಲ ಉದ್ಯೋಗಾವಕಾಶ ಸೃಷ್ಟಿಸುತ್ತದೆ.
೭) ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗದ ಅವಶ್ಯಕತೆ ಅರಿತ ರಾಜ್ಯ ಸರ್ಕಾರ ಈ ಯೋಜನೆಗೆ ದೇಶದಲ್ಲಿಯೇ ಪ್ರಪ್ರಥಮವಾಗಿ ರೈಲ್ವೆ ಇಲಾಖೆ ಜೊತೆಗೆ ಶೇಕಡಾ ೫೦ರಷ್ಟು ಯೋಜನಾ ವೆಚ್ಚ ಭರಿಸಲು ಒಡಂಬಡಿಕೆ ಮಾಡಿಕೊಂಡು ಕೆ ರೈಡ್ ಸಂಸ್ಥೆ ಸ್ಥಾಪಿಸಿದೆ. ಇದರಿಂದ ಈ ಯೋಜನೆಗೆ ಹಣಕಾಸಿನ ಯಾವುದೇ ತೊಂದರೆಯಾಗದು.
೮) ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗ ರಸ್ತೆ ಅಭಿವೃದ್ಧಿಗಿಂತ ಹೆಚ್ಚು ಪರಿಸರ ಸ್ನೇಹಿ, ಮಿತವ್ಯಯಕಾರಿಯಾಗಿದೆ. ರೈಲು ವಿದ್ಯುತ್ ಚಾಲಿತವಾಗಿರುವುದರಿಂದ ಪರಿಸರ ಮಾಲಿನ್ಯ ತಡೆಯುವುದರ ಜೊತೆಗೆ ಇಂಧನದ ಉಳಿತಾಯವೂ ಆಗುವುದು.
ಮೇಲ್ಕಾಣಿಸಿದ ಅಂಶಗಳ ಜೊತೆಗೆ ಸ್ಪರ್ಧಾತ್ಮಕ ಇಂದಿನ ಯುಗದಲ್ಲಿ ಸಾರಿಗೆ ಮೂಲಭೂತ ಸೌಕರ್ಯಗಳಿಂದ ಅಂತರರಾಷ್ಟ್ರೀಯ ಮಟ್ಟಕ್ಕೇರಲು, ಬೆಳೆಯಲು ಸಹಕಾರಿಯಾಗುತ್ತದೆ ಎಂದು ತಮ್ಮಲ್ಲಿ ನಿವೇದಿಸುತ್ತ ತಾವು ನಮ್ಮ ಮನವಿಯನ್ನು ಸಹಾನುಭೂತಿಯಿಂದ ಜನಸಾಮಾನ್ಯರ, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳ ಅಭಿವೃದ್ಧಿಗೆ ಅನುಕೂಲ ಮಾಡಿಕೊಡಬೇಕೆಂದು ವಿನಂತಿಸುವೆ.
ಕರ್ನಾಟಕದ ಅನೇಕ ಸಂಘ ಸಂಸ್ಥೆಗಳ ಜೊತೆ ನಿಕಟ ಸಂಬಂಧವುಳ್ಳವನಾಗಿರುವ ನಾನು ಅವರ ಜೊತೆ ಚರ್ಚಿಸಿ ಅವರುಗಳ ಅಭಿಪ್ರಾಯಗಳನ್ನು ಕ್ರೂಢೀಕರಿಸಿ ಈ ಮನವಿ ತಮಗೆ ಸಲ್ಲಿಸುತ್ತಿರುವೆ.
ನಾನು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷನಾಗಿದ್ದಾಗ, ಕರ್ನಾಟಕ ವಿಶ್ವ ವಿದ್ಯಾಲಯದ ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯನಾಗಿದ್ದಾಗ ಮತ್ತು ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಯಾಗಿ ಈಗಾಗಲೇ ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಿರುವದು ತಮ್ಮ ಗಮನಕ್ಕೆ ತರುತ್ತೇನೆ.
-ವಸಂತ ಲದವಾ
ಮಾಜಿ ಅಧ್ಯಕ್ಷರು, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಹುಬ್ಬಳ್ಳಿ, ಮಾಜಿ ಕೆಪಿಸಿಸಿ ಕಾರ್ಯದರ್ಶಿ
ವಕ್ತಾರರು ಜಿಲ್ಲಾ ಕಾಂಗ್ರೆಸ್ ಸಮಿತಿ

 

3.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement