ನಟ ಚೇತನ್ ವಿರುದ್ಧ ನಾವು ಪಂಜುರ್ಲಿ ದೈವಕ್ಕೆ ದೂರು ಕೊಡ್ತೇವೆ

ಉಡುಪಿ: “ಕಾಂತಾರ” ಸಿನಿಮಾ ಸದ್ಯ ಅಂತಾರಾಷ್ಟೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಚಿತ್ರದಲ್ಲಿ ತೋರಿಸಿರುವ ಭೂತಾರಾಧನೆಯ ಕುರಿತಾಗಿ ಹಲವರು ಪರ, ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲಿಯೂ ನಟ ಚೇತನ್ ದೈವದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ, ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಈಗ ಭೂತಾರಾಧನೆಯ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ನಟ ಚೇತನ್ ವಿರುದ್ಧ ಇದೀಗ ಪಂಜುರ್ಲಿ ದೈವಕ್ಕೆ ದೂರು ನೀಡಲು ನಿರ್ಧರಿಸಲಾಗಿದೆ.
ಈ ಬಗ್ಗೆ ಉಡುಪಿಯಲ್ಲಿ ಹಿರಿಯ ದೈವಾರಾಧಕ ಕುಮಾರ ಪಂಪದ ಪ್ರತಿಕ್ರಿಯೆ ನೀಡಿದ್ದಾರೆ. ಸಂಸ್ಕೃತಿಯ ಅವಹೇಳನ ಆದಾಗ ನಾವು ದೈವದ ಮುಂದೆ ಪ್ರಾರ್ಥನೆ ಮಾಡುತ್ತೇವೆ. ನಾವು ಸೇವೆ ಕೊಡುವ ದೈವಗಳ ಮುಂದೆಯೇ ನಾವು ಪ್ರಾರ್ಥನೆ ಮಾಡುತ್ತೇವೆ. ಈಗಲೂ ನಮ್ಮ ಮೂಲ ಆರಾಧನೆಯ ಪಂಜುರ್ಲಿ ದೈವದ ಮುಂದೆ ಈ ಬಗ್ಗೆ ಪ್ರಾರ್ಥನೆ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ.

ನಟರಿಗೆ ನಟನೆ ಮಾಡಲು ಗೊತ್ತಿದೆ. ಆದರೆ ನಾವು ದೈವಾರಾಧಕರು ನಮಗೆ ನಟಿಸಲು ಗೊತ್ತಿಲ್ಲ. ತಲೆಮಾರುಗಳಿಂದ ಸತ್ಯವನ್ನು ಪಾಲನೆ ಮಾಡಿಕೊಂಡು ಬಂದವರು. ಭೂತಾರಾಧನೆಗೆ ಇಂತಿಷ್ಟು ವರ್ಷದ ಹಿನ್ನೆಲೆ ಎಂಬ ದಾಖಲೆ ನಮ್ಮ ಬಳಿ ಇಲ್ಲ. ಯಾವುದೋ ಒಂದು ಪುಸ್ತಕ ಹಿಡಿದುಕೊಂಡು ಮಾತನಾಡಿದರೆ ಅದು ತಪ್ಪಾಗುತ್ತದೆ. ನಾವು ಅಲೆಮಾರಿಗಳು ಎಂಬ ಮಾತನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ. ನಾವು ಹಿಂದೂ ಸಂಪ್ರದಾಯವನ್ನು ಆರಾಧನೆ ಮಾಡಿಕೊಂಡು ಬಂದಿದ್ದೇವೆ. ನಮ್ಮ ದೈವಗಳಿಗೆ ಮೂಲ ಶಬ್ದವೇ ತುಳು ಎಂದು ಹೇಳಿದ ಅವರು ನಮ್ಮ ನೆಲ, ಕುಲ ಆಚರಣೆ ಬಗ್ಗೆ ಮಾತಾಡುವ ಜ್ಞಾನ ಅವರಿಗಿಲ್ಲ ಎಂದು ಹೇಳಿದ್ದಾರೆ.
ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುವುದಿಲ್ಲ. ಇದಕ್ಕೆ ಸಂಬಂಧಪಟ್ಟಂತೆ ರಿಷಬ್​ ಶೆಟ್ಟಿ ಅವರು ಹೇಳಿರುವುದು ನಿಜವಲ್ಲ ಎಂದು ಚೇತನ್​ ಹೇಳಿದ್ದರ ಕುರಿತು ಹಿಂದೂ ಜಾಗರಣಾ ವೇದಿಕೆಯವರು ಕಾರ್ಕಳ ಪೊಲೀಸರ ಬಳಿ ಈಗಾಗಲೇ ದೂರು ದಾಖಲು ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ : 9 ಮಂದಿಗೆ ಗಾಯ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement