ಮೊಸರು ಉಪಯೋಗಿಸುವ ಬಗ್ಗೆ ಆಯುರ್ವೇದ ಏನು ಹೇಳುತ್ತದೆ…?

ಡಾ. ಭಾವನಾ ಭಟ್ ಮುಖ್ಯಸ್ಥರು, ಅಪವರ್ಗ ಆಯುರ್ವೇದಾಲಯ ಹುಬ್ಬಳ್ಳಿ ಸಹಪ್ರಾಧ್ಯಾಪಕರು, ಸಂಜೀವಿನಿ ಆಯುರ್ವೇದ ವಿದ್ಯಾಲಯ ಮತ್ತು ಆಸ್ಪತ್ರೆ ಹುಬ್ಬಳ್ಳಿ ದೂರವಾಣಿ  8762151648

ಆಯುರ್ವೇದವು ಮನುಷ್ಯನ ಆರೋಗ್ಯಕರ ಜೀವನ ಶೈಲಿಯ ವಿಜ್ಞಾನ. ಆರೋಗ್ಯವು ದೋಷ , ಧಾತು, ಮಲ ಅಗ್ನಿ (ಜೈವಿಕ ಬೆಂಕಿ) ಮತ್ತು ವ್ಯಕ್ತಿಯ ಮಾನಸಿಕ ಸಾಮರ್ಥ್ಯದ ಸಮತೋಲನ ಸ್ಥಿತಿಯಾಗಿದೆ. ಆಹಾರ, ನಿದ್ರೆ ಮತ್ತು ಬ್ರಹ್ಮಚರ್ಯ ಇವೇ ದೇಹದ ಮೂರು ಸ್ತಂಭಗಳು.
ಆಹಾರದ ಪರಿಕಲ್ಪನೆಯನ್ನು ಆಯುರ್ವೇದದ ಸಾಹಿತ್ಯದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ವರ್ಣಿಸಲಾಗಿದೆ. ಆಹಾರವು ವಿವಿಧ ಸ್ಥಳ ಧರ್ಮ, ಸಮುದಾಯ, ಋತು ಆಧಾರಿತವಾಗಿದ್ದು ದೊಡ್ಡ ವೈವಿಧ್ಯತೆಯನ್ನೇ ಹೊಂದಿದೆ. ಒಂದು ಆಹಾರ ವಿವಿಧ ಸಮಯ, ಹತ್ತು ಹಲವಾರು ಸಂಯೋಜನ. ಹಾಗಾಗಿ ಜನರಲ್ಲಿ ಆಹಾರ ತತ್ವಗಳ ಬಗ್ಗೆ ಗೊಂದಲವಿದೆ. ವಿಜ್ಞಾನ ಅಭಿವೃದ್ಧಿಯ ಹಾದಿಯಲ್ಲಿದ್ದು; ಜನರ ಆಹಾರ ಮತ್ತು ವಿಹಾರಗಳು ವೇಗವಾಗಿ ಬದಲಾಗಿದೆ.
ಅಂತಹ ಒಂದು ಪ್ರಮುಖ ಆಹಾರ ದ್ರವ್ಯವೆಂದರೆ ಮೊಸರು, ದಧಿಯೆಂದು ಸಂಸ್ಕೃತದಲ್ಲಿ ಕರೆಯಲ್ಪಡುತ್ತದೆ. ಮೊಸರಿನ ನಿಯಮಿತ ಬಳಕೆಯ ಬಗ್ಗೆ ಮತ್ತು ಅದರ ಗುಣಧರ್ಮಗಳ ಕುರಿತಾಗಿ ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಮೊಸರು ಕಫಕಾರವು, ಪಿತ್ತ ವರ್ಧಕವೂ, ರಕ್ತ ವಿಕಾರಗಳನ್ನು ಮಾಡುವಂತಹ ಗುಣವುಳ್ಳದ್ದಾಗಿದೆ. ಜನಸಾಮಾನ್ಯರ ಒಂದು ದಿನನಿತ್ಯದ ಬಳಕೆ ಪದಗಳಲ್ಲಿ ಮೊಸರು ಒಂದು ಶೀತ, ಅಂದರೆ ತಂಪಾದ ಗುಣವನ್ನು ಹೊಂದಿದೆ ಎಂಬ ತಪ್ಪುಕಲ್ಪನೆ ಬೇರೂರಿದೆ. ಉಷ್ಣ ಗುಣವುಳ್ಳ ಮೊಸರು ಆಮ್ಲ ಅಂದರೆ ಹುಳಿ ವಿಪಾಕವನ್ನು ಜೀರ್ಣವಾದ ನಂತರ ದೇಹಕ್ಕೆ ನೀಡುತ್ತದೆ. ಆಯುರ್ವೇದ ತತ್ವಗಳ ವಿರುದ್ಧವಾಗಿ ಈ ಮೊಸರನ್ನು ಸೇವಿಸಿದರೆ ಜ್ವರ, ರಕ್ತಪಿತ್ತ , ರಕ್ತಸ್ರಾವ, ವಿಸರ್ಪ ಎಂಬ ಚರ್ಮದ ಕಾಯಿಲೆಗಳು ಕುಷ್ಟ, ರಕ್ತಹೀನತೆ ಹೀಗೆ ಮುಂತಾದ ರಕ್ತ ಸಂಬಂಧಿ ಕಾಯಿಲೆಗಳು ಉದ್ಭವಿಸಬಹುದು. ರಾತ್ರಿಯ ಸಮಯದಲ್ಲಿ ಮೊಸರಿನ ಸೇವನೆ ವರ್ಜನೀಯ. ಬಳಸುವುದಾದರೂ ಹೆಸರುಬೇಳೆಯ ಕಟ್ಟು (ಮುದ್ದ ಯುವ), ನೆಲ್ಲಿಕಾಯಿ ಚೂರ್ಣ, ಜೇನುತುಪ್ಪ, ಲವಣ, ಸಕ್ಕರೆ ಮುಂತಾದ ಪದಾರ್ಥಗಳೊಂದಿಗೆ ಸೇರಿಸಿ ಬಳಸಬಹುದಾಗಿದೆ. ಮೊಸರನ್ನು ಬಿಸಿ ಮಾಡಿ ಅಥವಾ ಬಿಸಿಯಾದ ಆಹಾರ ಪದಾರ್ಥಗಳ ಜೊತೆಯಲ್ಲಿ ಬೆರೆಸಿ ಸೇವಿಸಿದರೆ ದೇಹಕ್ಕೆ ಏರಿದ ಮೊಸರು ವಿಷವಾಗಿ ಪರಿಣಮಿಸುತ್ತದೆ. ಋತುಮಾನಗಳ ಪ್ರಕಾರ ಮೊಸರನ್ನು ಚಳಿಗಾಲದ ಕೊನೆಯಲ್ಲಿ ಮತ್ತು ಮಳೆಗಾಲದ ಮಧ್ಯದಲ್ಲಿ ಬಳಸಬಹುದು; ಬೇಸಿಗೆ ಮತ್ತು ಶರತ್ ಋತುವಿನಲ್ಲಿ ಬಳಸುವುದರಿಂದ ಉಷ್ಣತೆಯು ಹೆಚ್ಚಿ ರಕ್ತ ಮತ್ತು ಪಿತ್ತ ಸಂಬಂಧಿ ಕಾಯಿಲೆಗಳು ಮುಂಬರುವ ದಿನಗಳಲ್ಲಿ ಉಲ್ಬಣಿಸಬಹುದು. ಹೀಗಾಗಿ ನಾವು ಆಹಾರ ದ್ರವ್ಯಗಳ ಉಪಯೋಗವನ್ನು ಅವುಗಳ ಗುಣಧರ್ಮಗಳನ್ನು ಅರಿತು ಬಳಸಬೇಕೇ ವಿನಹ ನಾಲಿಗೆಯ ರುಚಿಗಷ್ಟೇ ಸೀಮಿತಗೊಳಿಸಿದರೆ ದೇಹದ ಮೇಲಾಗುವ ದುಷ್ಪರಿಣಾಮಗಳನ್ನು ಎದುರಿಸಬೇಕಾದೀತು. ಅರಿವಿಲ್ಲದ ಆಹಾರ ದ್ರವ್ಯ ಸೇವನೆ ಅಮೃತವಾಗದೆ ವಿಷವಾಗಬಹುದು. ಆಯುರ್ವೇದ ಆಹಾರ ಪದ್ಧತಿಗಳ ಪಾಲನೆ, ಆರೋಗ್ಯದಾಯಕ, ಉತ್ತಮ ಜೀವನದ ಸಂಕೇತ. ಆಯುರ್ವೇದದಲ್ಲಿ ಮೊಸರನ್ನು ಐದು ಪ್ರಕಾರವಾಗಿ ವಿಂಗಡಿಸಲಾಗಿದೆ. ಅವೆಂದರೆ…
1. ಮಂದ ದಧಿ
2. ಸ್ವಾದ ದಧಿ
3. ಸ್ವಾದ ಆಮ್ಲ ದಧಿ
4. ಆಮ್ಲ ದಧಿ
5. ಅತಿ ಆಮ್ಲ ದಧಿ

1. ಮಂದ ದಧಿಯು ಸರಿಯಾದ ರೀತಿಯಲ್ಲಿ ಹೆಪ್ಪುಗಟ್ಟದೆ ಉತ್ಪತ್ತಿಯಾದ; ಅದರ ರಸವು ಹಾಲಿನ ರುಚಿಯಂತೆ, ಲೋಳೆ ಆಗಿರುತ್ತದೆ. ದೋಷಗಳನ್ನು ಉಂಟುಮಾಡುತ್ತದೆ. ಅಮ್ಲ ಪಿತ್ತವನ್ನು ಉಂಟುಮಾಡಬಹುದು.
2. ಸ್ವಾದ ದದಿ ಸರಿಯಾಗಿ ಆದಂತಹ ಸಿಹಿಯಾದ ರುಚಿಯನ್ನು ಹೊಂದಿದ್ದು ಅಭಿವ್ಯಂದ ಅಂದರೆ ದೇಹವನ್ನು ಆಲಸ್ಯ ಮತ್ತು ಜಡತ್ವ ಉಂಟುಮಾಡುವುದು. ಜೀರ್ಣಕ್ರಿಯೆಗೆ ಕಷ್ಟಕರವೂ ಕಫಕಾರಕವಾಗಿರುತ್ತದೆ.
3. ಸ್ವಾದ ಆಮ್ಲ ದಧಿ ಅಂದರೆ ಮೊಸರು ಮತ್ತು ಸ್ವಲ್ಪ ಹುಳಿಯಾಗಿ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ದೇಹದ ಪಿತ್ತ ಕಫ ದೋಷಗಳ ವೃದ್ಧಿಯನ್ನು ಉಂಟು ಮಾಡುವುದು.
4. ಆಮ್ಲ ದಧಿ ಸರಿಯಾಗಿ ಹೆಪ್ಪುಗಟ್ಟಿಸಿದ ಮೊಸರಾಗಿದ್ದು ಹುಳಿ ಅಂಶ ಹೆಚ್ಚಾಗಿ ಪಿತ್ತವನ್ನು ವೃದ್ಧಿಸುವುದು.
5. ಅತಿ ಆಮ್ಲ ದಧಿ ಅತ್ಯಂತ ಹುಳಿಯಾದ ಮೊಸರು ಆಗಿದ್ದು ಸೇವಿಸಿದಾಗ ಬಾಯಿಯಲ್ಲಿ ಮತ್ತು ಹಲ್ಲುಗಳಲ್ಲಿ ಸಂವೇದನೆಯನ್ನು ಮಾಡುತ್ತದೆ. ದೋಷಕಾರಕ, ಆದರೆ ಜೀರ್ಣ ಶಕ್ತಿವರ್ಧಕ.
ಈ ಮೇಲೆ ಹೇಳಿದ ಮೊಸರಿನ ವಿಧದಲ್ಲಿ ಸ್ವಾದ ಆಮ್ಲ ದಧಿಯು ಸೇವಿಸಲು ಯೋಗ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಬಳಸುವ ಮೊಸರಿನ ಪದಾರ್ಥಗಳಾದ ಯೋಗರ್ಟ್‌, ವಿವಿಧ ರೀತಿಯ ಲಸ್ಸಿ ಪೇಯಗಳು, ಮೊಸರಿನ ಉತ್ಪನ್ನಗಳು ವಿರುದ್ಧವಾಗಿದ್ದು ದೇಹದ ಜೀರ್ಣಕ್ರಿಯೆಯನ್ನು ಕುಂಠಿತಗೊಳಿಸುತ್ತವೆ. ಅಮ್ಲಪಿತ್ತ ದಂತಹ (ಆಸಿಡಿಟಿ) ಕಾಯಿಲೆಗಳನ್ನು ಬಾಧಿಸಬಲ್ಲದು. ಈ ಮೇಲಿನ ಅಂಶಗಳಲ್ಲಿ ಹೇಳಿದಂತೆ ತಯಾರಿಸಲ್ಪಟ್ಟ ಮತ್ತು ಸರಿಯಾದ ವಿಧಾನದಲ್ಲಿ ಸೇವಿಸಲ್ಪಟ್ಟ ಮೊಸರು ದೇಹ ಪೋಷಣೆಗೆ ಕಾರಣವಾದೀತು. ಇಲ್ಲದೇ ಹೋದಲ್ಲಿ ರೋಗರುಜಿನಗಳ ಮೂಲವಾಗುವುದರಲ್ಲಿ ಸಂಶಯವಿಲ್ಲ. ಆಯುರ್ವೇದ ಶಾಸ್ತ್ರದಲ್ಲಿ ಉಲ್ಲೇಖಿಸಿದ ಜ್ಞಾನವನ್ನು ಪಡೆದು ಆಹಾರವನ್ನು ಸೇವಿಸುವುದು ಉತ್ತಮ.
ಆಯುರ್ವೇದ ಅಮೃತಾನಮ್

4.3 / 5. 6

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement