ಕೇವಲ ಶಾಸಕರಾಗಬೇಕು, ಮಂತ್ರಿಗಳಾಗಬೇಕು ಎಂದು ಕಾಂಗ್ರೆಸ್‌ ಸೇರಬೇಡಿ, ಪಕ್ಷದ ತತ್ವ-ಸಿದ್ಧಾಂತ ಒಪ್ಪಿ ಬನ್ನಿ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ

ಬೆಂಗಳೂರು: ಈಗ ಶಾಸಕರಾಗಬೇಕು, ಮಂತ್ರಿಗಳಾಗಲು ಪಕ್ಷಕ್ಕೆ ಸೇರುತ್ತಾರೆ. ಶಾಸಕ, ಮಂತ್ರಿಗಳಾಗಬೇಕೆಂದು ಕಾಂಗ್ರೆಸ್‌ ಪಕ್ಷಕ್ಕೆ ಸೇರಬೇಡಿ. ಪಕ್ಷದ ಸಿದ್ಧಾಂತ ಒಪ್ಪಿ ಸೇರ್ಪಡೆಯಾಗಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಎಐಸಿಸಿ ಅಧ್ಯಕ್ಷ ಸ್ಥಾನವೇರಿ ಮೊದಲ ಬಾರಿಗೆ ಖರ್ಗೆ ರಾಜ್ಯಕ್ಕೆ ಆಗಮಿಸಿದ ಅವರಿಗೆ ಅಭಿನಂದನೆ ಸಲ್ಲಿಸಲು ಕೆಪಿಸಿಸಿ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಸರ್ವೋದಯ ಸಮಾವೇಶದಲ್ಲಿ ಮಾತನಾಡಿದ ಅವರು, ಪಕ್ಷದ ಸಿದ್ಧಾಂತ ನಂಬಿದವರು ಎಂದಿಗೂ ಪಕ್ಷ ಬಿಡುವುದಿಲ್ಲ. 1969ರಲ್ಲಿ ಮೊದಲ ಬಾರಿಗೆ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷನಾಗಿದ್ದೆ. ಬಳಿಕ ಹಂತಹಂತವಾಗಿ ನಾನು ಕಾಂಗ್ರೆಸ್ ಪಕ್ಷದಲ್ಲಿ ಬೆಳೆದಿದ್ದೇನೆ. ಈಗ ಸೋನಿಯಾಗಾಂಧಿರವರು ಎಐಸಿಸಿ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಯಾರೇ ಆದರೂ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಕೆಲಸ ಮಾಡಿ, ಕೇವಲ ಕುರ್ಚಿ ಆಸೆಗಾಗಿ ಕೆಲಸ ಮಾಡಬೇಡಿ ಎಂದು ಕರೆ ನೀಡಿದರು.
ಕಳೆದ 70 ವರ್ಷದಿಂದ ಏನು ಮಾಡಿದ್ದೀರೆಂದು ಪ್ರಧಾನಿ ನರೇಂದ್ರ ಮೋದಿ ಕೇಳುತ್ತಾರೆ. ನಾವು ಕೆಲಸ ಮಾಡಿದ್ದರಿಂದಲೇ ದೇಶ ಈ ಹಂತಕ್ಕೆ ಬೆಳೆದಿದೆ. ಕಾಂಗ್ರೆಸ್ ಪಕ್ಷ ಸಂವಿಧಾನ, ಪ್ರಜಾಪ್ರಭುತ್ವ ಉಳಿಸಿದೆ. ಹಿಂದಿನ ಯಾವ ಸರ್ಕಾರಗಳೂ ಈ ರೀತಿ ಕೆಟ್ಟದಾಗಿ ನಡೆದುಕೊಂಡಿಲ್ಲ ಎಂದು ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ವಿರುದ್ಧ ಖರ್ಗೆ ವಾಗ್ದಾಳಿ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರು: ರೈಲಿಗೆ ಸಿಲುಕಿ ಮೂವರು ಸಾವು

ಪದೇ ಪದೆ ಕಾಂಗ್ರೆಸ್‌ ಪಕ್ಷದ ನಾಯಕರನ್ನು ಟೀಕೆ ಮಾಡುತ್ತ ತಿರುಗುವುದು ಸರಿಯಲ್ಲ. ದೇಶಕ್ಕಾಗಿ ಗಾಂಧಿ ಕುಟುಂಬದ ತ್ಯಾಗ, ಕೊಡುಗೆ ಬಹಳಷ್ಟಿದೆ. ಇದರಲ್ಲಿ ಸ್ವಲ್ಪನಾದರೂ ನೀವು ಕೊಟ್ಟಿದ್ದರೆ ದೇಶ ಮತ್ತಷ್ಟು ಅಭಿವೃದ್ಧಿಯಾಗುತ್ತಿತ್ತು. ತಾಯಿ, ಮಕ್ಕಳ ಪಕ್ಷವೆಂದು ಪ್ರಧಾನಿ ಮೋದಿ ಕಾಂಗ್ರೆಸ್ ಪಕ್ಷವನ್ನು ಟೀಕಿಸುತ್ತಾರೆ. ನಮ್ಮ ಪಕ್ಷದ ಆಂತರಿಕ ವಿಚಾರ ನಿಮಗೇಕೆ ? ಜನ ನಿಮಗೆ ಅವಕಾಶ ಕೊಟ್ಟಿದ್ದಾರೆ, ದೇಶದ ಅಭಿವೃದ್ಧಿ ಮಾಡುವುದರ ಕಡೆ ಯೋಚಿಸಿ ಎಂದು ಹೇಳಿದರು.
ಸಂವಿಧಾನ ಇದ್ದರೆ ಮಾತ್ರ ಮೋದಿ, ಅಮಿತ್ ಶಾ ಅವರಿಗೆ ಅಸ್ತಿತ್ವ ಉಳಿಯುತ್ತದೆ ಎಂಬುದನ್ನು ಅವರು ನೆನಪಿಡಬೇಕು. ಅದಕ್ಕಾಗಿ ಸಾಂವಿಧಾನಾತ್ಮಕ ಸಂಸ್ಥೆಗಳನ್ನು ಹಾಳು ಮಾಡಬೇಡಿ. ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ದೇಶ ಉಳಿಯಬೇಕು. ಅದಕ್ಕಾಗಿ ಜನರನ್ನು ಒಗ್ಗೂಡಿಸಿ ಹೋರಾಟ ಮಾಡಬೇಕು. ಅಧಿಕಾರದಲ್ಲಿರುವ ಕೆಟ್ಟ ಸರ್ಕಾರಗಳನ್ನ ಕಿತ್ತೊಗೆಯಬೇಕು ಎಂದು ಗುಡುಗಿದರು.
ಕರ್ನಾಟಕ ವಿಧಾನಸಭಾ ಚುನಾವಣೆ ಬಹಳ ಮಹತ್ವದ್ದು. 40 ಪರ್ಸೆಂಟ್‌ ಸರ್ಕಾರ ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಹೀಗಾಗಬೇಕಾದರೆ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಬೇಕು. ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದಾಗ ಜನಪರ ಯೋಜನೆಗಳ ಜಾರಿಯಾಗಿದ್ದವು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸಾಕಷ್ಟು ಅಭಿವೃದ್ಧಿ ಆಗಿತ್ತು ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

2.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement