ಅಫ್ಘಾನಿಸ್ತಾನದಲ್ಲಿ ಹುಡುಗಿಯರಿಗೆ ವಿಶ್ವವಿದ್ಯಾಲಯಗಳ ಶಿಕ್ಷಣ ನಿಷೇಧಿಸಿದ ತಾಲಿಬಾನ್ ಆಡಳಿತ

ಕಾಬೂಲ್: ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತಗಾರರು ಮಂಗಳವಾರ ರಾಷ್ಟ್ರಾದ್ಯಂತ ಮಹಿಳೆಯರಿಗೆ ವಿಶ್ವವಿದ್ಯಾನಿಲಯ ಶಿಕ್ಷಣವನ್ನು ನಿಷೇಧಿಸಿದ್ದಾರೆ. ಮಹಿಳೆಯರಿಗೆ ಶಿಕ್ಷಣ ಮತ್ತು ಸ್ವಾತಂತ್ರ್ಯದ ಹಕ್ಕನ್ನು ಹತ್ತಿಕ್ಕುವುದನ್ನು ಮುಂದುವರೆಸಿದ್ದಾರೆ.
ಕಳೆದ ವರ್ಷ ಅಧಿಕಾರವನ್ನು ವಶಪಡಿಸಿಕೊಂಡಾಗ ಮೃದುವಾದ ಆಡಳಿತ ನೀಡುವ ಭರವಸೆ ನೀಡಿದ್ದರೂ, ತಾಲಿಬಾನ್ ಅಂತಾರಾಷ್ಟ್ರೀಯ ಆಕ್ರೋಶವನ್ನು ನಿರ್ಲಕ್ಷಿಸಿ ಮಹಿಳೆಯರ ಮೇಲೆ ನಿರ್ಬಂಧಗಳನ್ನು ಮುಂದುವರಿಸಿದ್ದಾರೆ.
ಮುಂದಿನ ಸೂಚನೆ ಬರುವವರೆಗೆ ಮಹಿಳಾ ಶಿಕ್ಷಣವನ್ನು ಅಮಾನತುಗೊಳಿಸುವ ಆದೇಶವನ್ನು ತಕ್ಷಣವೇ ಜಾರಿಗೆ ತರಲು ತಿಳಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ನೇದಾ ಮೊಹಮ್ಮದ್ ನದೀಮ್ ಸಹಿ ಮಾಡಿರುವ ಪತ್ರದಲ್ಲಿ ಎಲ್ಲಾ ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಿಗೆ ಆದೇಶ ಮಾಡಲಾಗಿದೆ.
ಪತ್ರವನ್ನು ಟ್ವೀಟ್ ಮಾಡಿರುವ ಸಚಿವಾಲಯದ ವಕ್ತಾರ ಜಿಯಾವುಲ್ಲಾ ಹಾಶಿಮಿ, ಎಎಫ್‌ಪಿಗೆ ಆದೇಶವನ್ನು ಖಚಿತಪಡಿಸಿದ್ದಾರೆ.
ವಾಷಿಂಗ್ಟನ್ ಈ ನಿರ್ಧಾರವನ್ನು “ಬಲವಾದ ಪದಗಳಲ್ಲಿ” ಖಂಡಿಸಿದೆ. ಅಫ್ಘಾನಿಸ್ತಾನದಲ್ಲಿರುವ ಎಲ್ಲರ ಹಕ್ಕುಗಳನ್ನು ಗೌರವಿಸುವವರೆಗೆ ತಾಲಿಬಾನ್ ಅಂತಾರಾಷ್ಟ್ರೀಯ ಸಮುದಾಯದ ಕಾನೂನುಬದ್ಧ ಸದಸ್ಯರಾಗುವುದನ್ನು ನಿರೀಕ್ಷಿಸಲಾಗುವುದಿಲ್ಲ. ಈ ನಿರ್ಧಾರದಿಂದ ತಾಲಿಬಾನ್‌ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಯಾವುದೇ ದೇಶವು ಅದರ ಜನಸಂಖ್ಯೆಯ ಅರ್ಧದಷ್ಟು ಜನರು ಹಿಂದಕ್ಕೆ ಹೋದಾಗ ಆ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ದೇಶದಾದ್ಯಂತ ಸಾವಿರಾರು ಹುಡುಗಿಯರು ಮತ್ತು ಮಹಿಳೆಯರು ವಿಶ್ವವಿದ್ಯಾನಿಲಯ ಪ್ರವೇಶ ಪರೀಕ್ಷೆಗಳಿಗೆ ಕುಳಿತುಕೊಂಡ ಮೂರು ತಿಂಗಳೊಳಗೆ ಉನ್ನತ ಶಿಕ್ಷಣದ ಮೇಲಿನ ನಿಷೇಧವು ಬಂದಿದೆ, ಅನೇಕರು ಬೋಧನೆ ಮತ್ತು ವೈದ್ಯಕೀಯವನ್ನು ಭವಿಷ್ಯದ ವೃತ್ತಿಯನ್ನಾಗಿ ಆಯ್ಕೆ ಮಾಡಲು ಬಯಸುತ್ತಾರೆ. ವಿಶ್ವವಿದ್ಯಾನಿಲಯಗಳು ಪ್ರಸ್ತುತ ಚಳಿಗಾಲದ ರಜೆಗಳಲ್ಲಿವೆ ಮತ್ತು ಮಾರ್ಚ್‌ನಲ್ಲಿ ಮತ್ತೆ ತೆರೆಯಲಿವೆ.

ತಾಲಿಬಾನ್‌ನಿಂದ ದೇಶವನ್ನು ಸ್ವಾಧೀನಪಡಿಸಿಕೊಂಡ ನಂತರ, ವಿಶ್ವವಿದ್ಯಾನಿಲಯಗಳು ಹುಡುಗರು ಹಾಗೂ ಹುಡುಗಿಯರನ್ನು ಪ್ರತ್ಯೇಕಿಸುವ ತರಗತಿಗಳು ಮತ್ತು ಪ್ರವೇಶಗಳು ಸೇರಿದಂತೆ ಹೊಸ ನಿಯಮಗಳನ್ನು ಜಾರಿಗೆ ತರಲಾಯಿತು. ವಿದ್ಯಾರ್ಥಿನಿಯರಿಗೆ ಮಹಿಳಾ ಪ್ರಾಧ್ಯಾಪಕರು ಅಥವಾ ವೃದ್ಧರು ಮಾತ್ರ ಕಲಿಸಲು ಅನುಮತಿ ನೀಡಲಾಯಿತು.
ದೇಶಾದ್ಯಂತ ಹೆಚ್ಚಿನ ಹದಿಹರೆಯದ ಹುಡುಗಿಯರನ್ನು ಮಾಧ್ಯಮಿಕ ಶಾಲಾ ಶಿಕ್ಷಣದಿಂದ ಈಗಾಗಲೇ ನಿಷೇಧಿಸಲಾಗಿದೆ, ವಿಶ್ವವಿದ್ಯಾನಿಲಯದ ಪ್ರವೇಶವನ್ನೂ ಸೀಮಿತಗೊಳಿಸಲಾಗಿತ್ತು. ಈಗ ವಿಶ್ವ ವಿದ್ಯಾಲಯದಲ್ಲಿ ಹುಡುಗಿಯರ ಕಲಿಕೆಯನ್ನು ನಿಷೇಧಿಸಲಾಗಿದೆ.
ಎಲ್ಲರೂ ತಮ್ಮ ಮುಂದಿರುವ ಅಜ್ಞಾತ ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದಾರೆ, ಅವರು ನಮ್ಮ ಕನಸುಗಳನ್ನು ಸಮಾಧಿ ಮಾಡಿದರು ಎಂದು ಹೆಸರು ಹೇಳಲಿಚ್ಛಸದ ವಿದ್ಯಾರ್ಥಿನಿಯೊಬ್ಬರು ಹೇಳಿದರು. ದೇಶವು “ಕರಾಳ ದಿನಗಳಿಗೆ” ಮರಳುತ್ತಿದೆ ಎಂದು ರಾಜಧಾನಿಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಹೇಳಿದ್ದಾರೆ. ನಾವು ಪ್ರಗತಿ ಸಾಧಿಸಲು ಆಶಿಸುತ್ತಿರುವಾಗ, ಅವರು ನಮ್ಮನ್ನು ಸಮಾಜದಿಂದಲೇ ತೆಗೆದುಹಾಕುತ್ತಿದ್ದಾರೆ ಎಂದು ಅವರು ಹೇಳಿದರು.
ತಾಲಿಬಾನ್‌ನ ಈ ಆದೇಶದಿಂದಾಗಿ ವಿಶ್ವಸಂಸ್ಥೆಯು “ತೀವ್ರವಾಗಿ ಕಳವಳಗೊಂಡಿದೆ” ಎಂದು ಅಫ್ಘಾನಿಸ್ತಾನದ ವಿಶ್ವಸಂಸ್ಥೆ ಮುಖ್ಯಸ್ಥರ ಉಪ ವಿಶೇಷ ಪ್ರತಿನಿಧಿ ರಮಿಜ್ ಅಲಕ್ಬರೋವ್ ಹೇಳಿದ್ದಾರೆ. ಶಿಕ್ಷಣವು ಮೂಲಭೂತ ಮಾನವ ಹಕ್ಕು. ಮಹಿಳಾ ಶಿಕ್ಷಣಕ್ಕೆ ಬಾಗಿಲು ಮುಚ್ಚಿರುವುದು ಆಫ್ಘಾನಿಸ್ತಾನದ ಭವಿಷ್ಯಕ್ಕೆ ಮುಚ್ಚಿದ ಬಾಗಿಲು” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಮಹಿಳೆಯರಿಗೆ ಶಿಕ್ಷಣದ ನಿಷೇಧದ ನಂತರ, ಅನೇಕ ಹದಿಹರೆಯದ ಹುಡುಗಿಯರು ಬೇಗನೆ ಮದುವೆಯಾಗಿದ್ದಾರೆ. ಹೆಚ್ಚು ವಯಸ್ಸಾದ ಪುರುಷರೊಂದಿಗೂ ಅವರ ಮದುವೆಯಾಗುತ್ತಿದೆ.

ಅಂತಾರಾಷ್ಟ್ರೀಯ ಒತ್ತಡ
ಮಹಿಳೆಯರನ್ನು ಅನೇಕ ಸರ್ಕಾರಿ ಉದ್ಯೋಗಗಳಿಂದ ಹೊರಹಾಕಲಾಗಿದೆ ಅಥವಾ ಅವರು ಮನೆಯಲ್ಲಿ ಉಳಿಯಲು ಕಡಿಮೆ ಸಂಬಳ ನೀಡಲಾಗುತ್ತಿದೆ. ಅಲ್ಲದೆ ಮಹಿಳೆಯರು ಅವರು ಪುರುಷ ಸಂಬಂಧಿ ಇಲ್ಲದೆ ಪ್ರಯಾಣಿಸುವುದನ್ನು ಸಹ ನಿರ್ಬಂಧಿಸಲಾಗಿದೆ ಮತ್ತು ಮನೆಯ ಹೊರಗೆ ಹೋಗುವಾಗ ಬುರ್ಖಾದೊಂದಿಗೆ ಮುಚ್ಚುಕೊಂಡಿ ಹೋಗಬೇಕು ಎಂದು ಸೂಚಿಸಲಾಗಿದೆ.
ನವೆಂಬರ್‌ನಲ್ಲಿ, ಮಹಿಳೆಯರು ಉದ್ಯಾನವನಗಳು, ಫನ್‌ಫೇರ್‌ಗಳು, ಜಿಮ್‌ಗಳು ಮತ್ತು ಸಾರ್ವಜನಿಕ ಸ್ನಾನಗೃಹಗಳಿಗೆ ಹೋಗುವುದನ್ನು ಸಹ ನಿಷೇಧಿಸಲಾಗಿದೆ.
ಅಂತಾರಾಷ್ಟ್ರೀಯ ಸಮುದಾಯವು ಆಫ್ಘನ್ ಮಹಿಳೆಯರು ಮತ್ತು ಹುಡುಗಿಯರನ್ನು ಮರೆಯುವುದಿಲ್ಲ ಎಂದು ವಿಶ್ವಸಂಸ್ಥೆ ಸೆಕ್ಯುರಿಟಿ ಕೌನ್ಸಿಲ್ ಸೆಪ್ಟೆಂಬರ್‌ನಲ್ಲಿ ಹೇಳಿಕೆಯಲ್ಲಿ ತಿಳಿಸಿದೆ. ತಾಲಿಬಾನ್‌ನ ಎರಡು ಆಳ್ವಿಕೆಯ ನಡುವಿನ 20 ವರ್ಷಗಳಲ್ಲಿ, ಹೆಣ್ಣುಮಕ್ಕಳಿಗೆ ಶಾಲೆಗೆ ಹೋಗಲು ಅವಕಾಶ ನೀಡಲಾಯಿತು ಮತ್ತು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಉದ್ಯೋಗವನ್ನು ಪಡೆಯಲು ಸಾಧ್ಯವಾಯಿತು, ಆದರೂ ದೇಶವು ಸಾಮಾಜಿಕವಾಗಿ ಸಂಪ್ರದಾಯವಾದಿಯಾಗಿ ಉಳಿದಿದೆ.
ಇತ್ತೀಚಿನ ವಾರಗಳಲ್ಲಿ ಇಸ್ಲಾಮಿಕ್ ಷರಿಯಾ ಕಾನೂನಿನ ತೀವ್ರ ತರವಾದ ವ್ಯಾಖ್ಯಾನವನ್ನು ಜಾರಿ ಮಾಡುತ್ತಿರುವುದರಿಂದ ಅಧಿಕಾರಿಗಳು ಸಾರ್ವಜನಿಕವಾಗಿ ಹೊಡೆಯುವುದು ಮತ್ತು ಪುರುಷರು ಮತ್ತು ಮಹಿಳೆಯರಿಗೆ ಸಾರ್ವಜನಿಕವಾಗಿ ಮರಣದಂಡನೆಗೆ ವಿಧಿಸುವುದನ್ನು ಪುನಃ ಜಾರಿ ಮಾಡುತ್ತಿದ್ದಾರೆ. ಇದೇವೇಳೆ ಅಫ್ಘಾನಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ಹದಗೆಟ್ಟಿದೆ

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement