ಕರ್ನಾಟಕದ ಅತ್ಯಂತ ಅಗತ್ಯದ ಕಳಸಾ-ಬಂಡೂರಿ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಸರ್ಕಾರದಿಂದ ಅನುಮತಿ : ಪ್ರಹ್ಲಾದ ಜೋಶಿ

ಹುಬ್ಬಳ್ಳಿ: ಇಂದು, ಗುರುವಾರ ಕೇಂದ್ರ ಜಲ ಆಯೋಗವು ಕರ್ನಾಟಕದ ಕಳಸಾ -ಬಂಡೂರಿ ವಿಸ್ತೃತ ಯೋಜನಾ ವರದಿಗೆ ಅನುಮತಿ ನೀಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟರಿನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಕರ್ನಾಟಕಕ್ಕೆ ಅತ್ಯಂತ ಅವಶ್ಯಕವಾಗಿದ್ದ ಈ ಯೋಜನೆಗೆ ಅನುಮೋದನೆ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ, ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಜಲ ಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಧನುವಾದಗಳನ್ನು ತಿಳಿಸಿದ್ದಾರೆ.

ಕಳಸಾ ಬಂಡೂರಿ ಯೋಜನೆಗೆ ಈ ಹಿಂದೆ ನಾವು ಕೂಡಾ ಹೋರಾಟ ಮಾಡಿದ್ದೆವು. ಈಗ ಈ ಕುಡಿಯುವ ನೀರಿನ ಯೋಜನೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌)ಗೆ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಹೇಳಿರುವ ಜೋಶಿ, ಬೊಮ್ಮಾಯಿ ಸರ್ಕಾರವೂ ಈ ವಿಚಾರದಲ್ಲಿ ಅತ್ಯಂತ ಪರಿಶ್ರಮಪಟ್ಟಿದೆ. ಹೀಗಾಗಿ ಮುಖ್ಯಮಂತ್ರಿ ಬೊಮ್ಮಾಯಿ, ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ ಬಹುಬೇಡಿಕೆಯ ನೀರಾವರಿ ಯೋಜನೆಗೆ ರಾಜ್ಯ ಸರ್ಕಾರ ಕಳುಹಿಸಿದ್ದ ವಿಸ್ತೃತ ಯೋಜನಾ ವರದಿ (ಡಿಪಿಆರ್‌)ಗೆ ಜಲ ಆಯೋಗದ ಅನುಮತಿ ಸಿಕ್ಕಿದ್ದು, ಧಾರವಾಡ, ಬೆಳಗಾವಿ, ಗದಗ ಸೇರಿ ಹಲವು ಜಿಲ್ಲೆಗಳಿಗೆ ಸಿಹಿ ಸುದ್ದಿಯಾಗಿದೆ. ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಶೇಖಾವತ್ ಅವರನ್ನ ಭೇಟಿಯಾಗಿದ್ದರು.

ಪ್ರಮುಖ ಸುದ್ದಿ :-   ಹಾಸನ ಶಾಲಾ ಶಿಕ್ಷಕಿ ಕಿಡ್ನಾಪ್ ಪ್ರಕರಣ ಸುಖಾಂತ್ಯ: ನೆಲ್ಯಾಡಿ ಬಳಿ ಅಪಹರಣಕಾರರ ಬಂಧನ

4.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement