ಧಾರವಾಡ: ಗರ್ಭಿಣಿಯ ಚೆಕ್​ಅಪ್​ ವೇಳೆ ವೈದ್ಯಕೀಯ ನಿರ್ಲಕ್ಷ್ಯ ತೋರಿದ ವೈದ್ಯೆಗೆ ₹ 11.10 ಲಕ್ಷ ಪರಿಹಾರ ನೀಡಲು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ

ಧಾರವಾಡ: ಶಿಶುವಿನ ಅಂಗವೈಕಲ್ಯದ ಬಗ್ಗೆ ತಿಳಿಸದೆ ವೈದ್ಯಕೀಯ ನಿರ್ಲಕ್ಷ್ಯ ಮಾಡಿದ ಕಾರಣಕ್ಕೆ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ವೈದ್ಯೆಯೊಬ್ಬರಿಗೆ 11,10,000 ರೂ.ಗಳ ದಂಡ ವಿಧಿಸಿದೆ.
ಇಲ್ಲಿನ ಶ್ರೀನಗರ ಭಾವಿಕಟ್ಟಿ ಪ್ಲಾಟ ನಿವಾಸಿ ಪರಶುರಾಮ ಘಾಟಗೆ ಎಂಬವರು ತಮ್ಮ ಪತ್ನಿ ಗರ್ಭವತಿಯಾದ 3ನೇ ತಿಂಗಳಿಂದ 9ನೇ ತಿಂಗಳಿನ ವರೆಗೆ ಧಾರವಾಡದ ಮಾಳಮಡ್ಡಿ ನರ್ಸಿಂಗ್ ಹೋಂನ ಪ್ರಸೂತಿ ತಜ್ಞೆ ಬಳಿ ತಪಾಸಣೆ ಮಾಡಿಸಿ ಚಿಕಿತ್ಸೆ ಪಡೆದಿದ್ದರು. ಈ ಅವಧಿಯಲ್ಲಿ ಪ್ರಸೂತಿ ವೈದ್ಯೆ 5 ಬಾರಿ ಸ್ಕ್ಯಾನ್ ಮಾಡಿದ್ದರು. ಗರ್ಭದಲ್ಲಿನ ಮಗುವಿನ ಬೆಳವಣಿಗೆ ಚೆನ್ನಾಗಿದೆ ಹಾಗೂ ಮಗು ಆರೋಗ್ಯವಾಗಿದೆ ಎಂದು ಪ್ರತಿಸಲವೂ ಅವರು ತಿಳಿಸಿದ್ದರು. ದೂರುದಾರರ ಪತ್ನಿ ತನ್ನ 9ನೇ ತಿಂಗಳಿನಲ್ಲಿ ಅದೇ ವೈದ್ಯರ ಹತ್ತಿರ ತಪಾಸಣೆಗೆ ಹೋದಾಗ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲು ಅವರು ಸಲಹೆ ನೀಡಿದ್ದರು. ಆದರೆ ಹಣಕಾಸಿನ ತೊಂದರೆಯಿಂದಾಗಿ ಅವರು ಹೆರಿಗೆಯನ್ನು ಧಾರವಾಡ ಎಸ್.ಡಿ.ಎಂ. ಆಸ್ಪತ್ರೆಯಲ್ಲಿ 31-01-2019 ರಂದು ಮಾಡಿಸಿದರು. ಆಗ ಹೆಣ್ಣು ಮಗು ಜನಿಸಿತು. ಆದರೆ ಎರಡು ಕಾಲುಗಳು ಅಂಗವೈಕಲ್ಯದಿಂದ ಕೂಡಿತ್ತು.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

ಅಲ್ಟ್ರಾಸೌಂಡ್ ಸ್ಕ್ಯಾನ ಮಾಡಿದಾಗಲೂ ಮಗುವಿನ ಅಂಗವೈಕಲ್ಯದ ಬಗ್ಗೆ ತಿಳಿಸದೆ ವೈದ್ಯಕೀಯ ನಿರ್ಲಕ್ಷ್ಯ ತೋರಿದ್ದಾರೆ ಎಂದು ಹೇಳಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರರು ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ಸಲ್ಲಿಸಿದ್ದರು.
ಈ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ಅವರು ಪ್ರಸೂತಿ ತಜ್ಞರು ಕಾಲಕಾಲಕ್ಕೆ ದೂರುದಾರರ ಪತ್ನಿಯ ಸ್ಕ್ಯಾನಿಂಗ್ ಮಾಡಿಸಿ ತಪಾಸಣೆ ಮಾಡಿದಾಗ ಅವರಿಗೆ ಗರ್ಭದಲ್ಲಿರುವ ಶಿಶುವಿನ ಅಂಗವೈಕಲ್ಯದ ಗೊತ್ತಾಗುತ್ತದೆ. ಎಂ.ಟಿ.ಪಿ.ಕಾಯ್ದೆ ಪ್ರಕಾರ 20 ವಾರಗಳ ಗರ್ಭದ ಸಮಯದಲ್ಲಿ ಶಿಶುವಿನ ಅಂಗವೈಕಲ್ಯದ ಬಗ್ಗೆ ವೈದ್ಯರಿಗೆ ತಿಳಿಯುತ್ತದೆ, ಆದರೆ ಆ ಸಂಗತಿಯನ್ನು ಅವರು ದೂರುದಾರರಿಗೆ ತಿಳಿಸದೆ ವೈದ್ಯಕೀಯ ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ತನ್ನ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದ್ದಾರೆ. ವೈದ್ಯರ ಅಂತಹ ನಡಾವಳಿಕೆ ಗ್ರಾಹಕರ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯ ಮತ್ತು ರಾಷ್ಟ್ರೀಯ ಗ್ರಾಹಕರ ಆಯೋಗದ ತೀರ್ಪುಗಳನ್ನು ಆಧರಿಸಿ ಜಿಲ್ಲಾ ಗ್ರಾಹಕರ ಆಯೋಗ ಈ ತೀರ್ಪು ನೀಡಿದೆ. ಹಾಗೂ ಒಟ್ಟು 11,10,000 ರೂ.ಗಳ ಪರಿಹಾರ ನೀಡಬೇಕು. ಅಲ್ಲದೆ, ಈ ಹಣವನ್ನು ಒಂದು ತಿಂಗಳ ಒಳಗಾಗಿ ದೂರುದಾರರಿಗೆ ನೀಡದಿದ್ದಲ್ಲಿ ಆ ಮೊತ್ತದ ಮೇಲೆ ಶೇ.8% ರಂತೆ ಬಡ್ಡಿ ಕೊಡಬೇಕು ಎಂದು ಆಯೋಗ ಆದೇಶಿಸಿದೆ.
ಪರಿಹಾರದಲ್ಲಿ 8,00,000 ರೂ.ಗಳ ಹಣವನ್ನು ಆ ಹೆಣ್ಣು ಮಗು ವಯಸ್ಕಳಾಗುವವರೆಗೆ ಅವಳ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಕಾಯಂ ಠೇವಣಿ ಇಡಬೇಕು ಮತ್ತು ಪರಿಹಾರದ ಪೂರ್ತಿ ಹಣವನ್ನು ಆ ಮಗುವಿನ ಭವಿಷ್ಯಕ್ಕಾಗಿ ಖರ್ಚು ಮಾಡಬೇಕು ಎಂದು ಆಯೋಗ ತಿಳಿಸಿದೆ.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement