ಖಾಲಿಸ್ತಾನ್‌ ಪ್ರತಿಪಾದಕ ಅಮೃತಪಾಲ್ ಸಿಂಗ್ ದುಬೈ ತೊರೆದು ಭಾರತಕ್ಕೆ ಹಿಂತಿರುಗಿದ್ದರ ಹಿಂದಿನ ಮೆದುಳೇ ಪಾಕಿಸ್ತಾನದ ಐಎಸ್‌ಐ : ವರದಿ

ನವದೆಹಲಿ: ಪಂಜಾಬ್‌ನಲ್ಲಿ ಭಯೋತ್ಪಾದನೆಯನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಸಾಗರೋತ್ತರ ಸಿಖ್ ಪ್ರತ್ಯೇಕತಾವಾದಿಗಳ ಸಹಾಯದಿಂದ, ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಅಮೃತಪಾಲ್ ಸಿಂಗ್‌ನನ್ನು ದುಬೈನಿಂದ ಭಾರತಕ್ಕೆ ಕಳುಹಿಸಿದ್ದರ ಹಿಂದಿನ ಮೆದುಳಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
30 ವರ್ಷ ವಯಸ್ಸಿನ ಅಮೃತಪಾಲ್ ಸಿಂಗ್‌, ದುಬೈನಲ್ಲಿ ಟ್ರಕ್ ಚಾಲಕನಾಗಿದ್ದ. ಆದರೆ ಐಎಸ್‌ಐ, ಭಾರತದ ಹೊರಗೆ ನೆಲೆಸಿರುವ ಖಾಲಿಸ್ತಾನ್ ಬೆಂಬಲಿಗರ ಸಹಾಯದಿಂದ, ಪಂಜಾಬ್ ಅನ್ನು ಮತ್ತೆ ಭಯೋತ್ಪಾದನೆಯ ಕರಾಳ ದಿನಗಳಿಗೆ ದೂಡಲು ಆತನನ್ನು ತೀವ್ರಗಾಮಿಯನ್ನಾಗಿ ಮಾಡಿತು ಎಂದು ಅವರು ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಅವರಿಗೆ ಬೆದರಿಕೆ ಹಾಕುವ ಮೂಲಕ, ಭಾರತದಿಂದ ಪ್ರತ್ಯೇಕಿಸಿ ಖಲಿಸ್ತಾನ ರಚಿಸುವ ಬಗ್ಗೆ ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಿದ್ದ ಈತ ಭಯೋತ್ಪಾದಕರಿಂದ ಹತ್ಯೆಗೀಡಾದ ಮಾಜಿ ಪ್ರಧಾನಿ ಇಂದಿರಾಗಾಂಧಿ ಮತ್ತು ಪಂಜಾಬ್‌ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಕುರಿತು ಸಹ ಮಾತನಾಡುತ್ತಿದ್ದ.
ಇಂದಿರಾಗಾಂಧಿ ತಮ್ಮದೇ ಸೆಕ್ಯುರಿಟಿಗಳ ಬಲಿಯಾದರೆ, ಬಿಯಾಂತ್ ಸಿಂಗ್ ಅವರನ್ನು ಮಾನವ ಬಾಂಬ್ ಆಗಿ ಕಾರ್ಯನಿರ್ವಹಿಸಿ ದಿಲಾವರ್ ಸಿಂಗ್ ಎಂಬಾತ ಕೊಂದ. ಪಂಜಾಬ್‌ನ ಪ್ರಸ್ತುತ ಸನ್ನಿವೇಶದಲ್ಲಿ ಅನೇಕ ದಿಲಾವರ್‌ಗಳು ಸಿದ್ಧರಾಗಿದ್ದಾರೆ ಎಂದು ಈತ ಹೇಳಿದ್ದ. ಈ ವರ್ಷದ ಗಣರಾಜ್ಯೋತ್ಸವದಂದು ತರಣ್ ತಾರಣ್‌ದಲ್ಲಿ ಆತನ ರ್ಯಾಲಿಯಾಗಿರಲಿ ಅಥವಾ ಮಾಧ್ಯಮ ಸಂದರ್ಶನಗಳಾಗಲಿ, ಆತ ಪ್ರತ್ಯೇಕತಾವಾದ ಮತ್ತು ಖಾಲಿಸ್ತಾನ್ ರಚನೆಯನ್ನು ಬಹಿರಂಗವಾಗಿ ಬೆಂಬಲಿಸಿದ್ದ.‘ಖಾಲಿಸ್ತಾನ’ ರಚನೆ ಗುರಿ’ ಸಾಧಿಸಲು ಸಿಖ್ ಯುವಕರನ್ನು ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರಗಳ ವಿರುದ್ಧ ಸಶಸ್ತ್ರ ದಂಗೆ ಏಳುವಂತೆ ಪ್ರೇರೇಪಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಶಿಂಧೆ ಬಣದ ಶಿವಸೇನೆ ಸೇರಿದ ಬಾಲಿವುಡ್‌ ನಟ ಗೋವಿಂದ : 14 ವರ್ಷಗಳ ವನವಾಸದ ನಂತರ ರಾಜಕೀಯಕ್ಕೆ

ಮೋಗಾ ಜಿಲ್ಲೆಯ ರೋಡ್‌ ಎಂಬಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಸಿಖ್ ಅಲ್ಲದ ಸರ್ಕಾರಗಳಿಗೆ ಪಂಜಾಬ್‌ನ ಜನರನ್ನು ಆಳುವ ಹಕ್ಕಿಲ್ಲ ಮತ್ತು ಪಂಜಾಬ್‌ನ ಜನರನ್ನು ಸಿಖ್ಖರು ಮಾತ್ರ ಆಳಬೇಕು ಎಂದು ಹೇಳಿದ್ದ. 1984ರಲ್ಲಿ ನಡೆದ ಆಪರೇಷನ್ ಬ್ಲೂ ಸ್ಟಾರ್ ವೇಳೆ ಹತರಾದ ಭಯೋತ್ಪಾದಕ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆಯ ಉಡುಗೆ ತೊಡುಗೆ, ನಡೆ-ನುಡಿಗಳನ್ನು ನಕಲು ಮಾಡಿ, ಬಾಣ ಹಿಡಿದು, ಶಸ್ತ್ರಸಜ್ಜಿತ ಅಂಗರಕ್ಷಕರ ಪಡೆಯೊಂದಿಗೆ ಧರ್ಮದ ಕವಚದಡಿ ತನ್ನದೇ ಆದ ಸ್ಟೈಲ್‌ ರೂಪಿಸಿಕೊಂಡಿದ್ದ.
ಪ್ರಸ್ತುತ ಪರಾರಿಯಾಗಿರುವ ಅಮೃತಪಾಲ್‌ ಸಿಂಗ್, ಭಾರತದಲ್ಲಿ ವಿಚಾರಣೆಗೆ ಒಳಗಾಗಿರುವ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆ (ಆರ್‌ಡಿಎಕ್ಸ್ ಸ್ಫೋಟಕ ಸೇರಿದಂತೆ) ಪ್ರಕರಣಗಳಲ್ಲಿ ಬೇಕಾಗಿರುವ ಇಂಟರ್‌ನ್ಯಾಶನಲ್ ಸಿಖ್ ಯೂತ್ ಫೆಡರೇಶನ್ ಮುಖ್ಯಸ್ಥ ಲಖ್ಬೀರ್ ಸಿಂಗ್ ರೋಡ್ ಎಂಬಾತನೊಂದಿಗೆ ಸಂಪರ್ಕ ಹೊಂದಿದ್ದ ಎಂದು ಆರೋಪಿಸಲಾಗಿದೆ.
ಆತನ ಚಲನವಲನಗಳನ್ನು ಪತ್ತೆಹಚ್ಚಿದ ಅಧಿಕಾರಿಗಳು, ಅಮೃತಪಾಲ್‌ ಸಿಂಗ್ ದುಬೈನಲ್ಲಿರುವ ಸಮಯದಲ್ಲಿ ರೋಡ್ ಸಹೋದರ ಜಸ್ವಂತ್ ಎಂಬಾತನೊಂದಿಗೆ ನಿಕಟ ಸಂಪರ್ಕದಲ್ಲಿದ್ದ. ಐಎಸ್‌ಐ (ISI) ಸೂಚನೆಯಂತೆ ಪಂಜಾಬ್‌ಗೆ ಹಿಂದಿರುಗಿದ ಸಿಂಗ್, ತನ್ನ ಸಂಘಟನೆಯನ್ನು ಸ್ಥಾಪಿಸಲು ಅಮೃತ್ ಸಂಚಾರ್‌ನ ಸಹಾಯ ಪಡೆದ. ನಂತರ ಆತ ‘ಖಾಲ್ಸಾ ವಹೀರ್’ ಎಂಬ ಅಭಿಯಾನ ಪ್ರಾರಂಭಿಸಿದ ಮತ್ತು ಹಳ್ಳಿಗಳಿಗೆ ಹೋಗಿ ತಮ್ಮ ಸಂಘಟನೆ ಬಲಪಡಿಸಲು ಪ್ರಯತ್ನಿಸಿದ ಎಂದು ಅಧಿಕಾರಿ ಹೇಳಿದರು.

ಅಮೃತಪಾಲ್ ಸಿಂಗ್ ಬಗ್ಗೆ 5 ಸಂಗತಿಗಳು….
“ಸಮಾಜದ ಕೆಳಸ್ತರ ಮತ್ತು ಗುರಿಯಿಲ್ಲದ ಯುವಕರನ್ನು ಸಿಂಗ್ ಸುಲಭ ಗುರಿಯಾಗಿಸುತ್ತಿದ್ದ ಮತ್ತು ಧರ್ಮದ ಹೆಸರಿನಲ್ಲಿ ಅವರ ಭಾವನೆಗಳನ್ನು ಬಳಸಿಕೊಳ್ಳಲು ಆರಂಭಿಸಿದ ಎಂದು ವರದಿಯೊಂದು ಹೇಳುತ್ತದೆ.
ಅಧಿಕಾರಿಗಳ ಪ್ರಕಾರ, ಆತನ ಮುಖ್ಯ ಗುರಿಯು ಪಂಜಾಬ್ ಅನ್ನು ಕರಾಳ ದಶಕಗಳ ಉಗ್ರಗಾಮಿತ್ವದತ್ತ ತಳ್ಳುವುದಾಗಿದೆ. ಸಿಂಗ್ ನೇತೃತ್ವದ ಸಂಘಟನೆಯು ಪಾಕಿಸ್ತಾನದಿಂದ ಹಣವನ್ನು ಪಡೆಯುತ್ತಿದೆ.
ಈತ ತನ್ನ ಚಿಕ್ಕಪ್ಪ ಹರ್ಜಿತ್ ಸಿಂಗ್ ಎಂಬವರ ಸಹಾಯದಿಂದ ವಾರಿಸ್ ಪಂಜಾಬ್ ದೆ ಸಂಘಟನೆಯ ಖಾತೆಗಳ ನಿಯಂತ್ರಣ ತೆಗೆದುಕೊಂಡ, ಮತ್ತು ಅದನ್ನು ಕುಟುಂಬ-ಚಾಲಿತ ಸಂಸ್ಥೆಯನ್ನಾಗಿ ಮಾಡಿದ. ತನ್ನ ಫೆಬ್ರವರಿ ಆಂದೋಲನದ ಸಮಯದಲ್ಲಿ ಶ್ರೀ ಗುರು ಗ್ರಂಥ ಸಾಹಿಬ್ ಅನ್ನು ತನ್ನ ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಬಳಸುತ್ತಿದ್ದ. ಅದನ್ನು ಒಂದು ರೀತಿಯ ಧರ್ಮನಿಂದೆಯೆಂದು ಪರಿಗಣಿಸಲಾಗಿದೆ. ಆತನ ಈ ಕೃತ್ಯವನ್ನು ಇಡೀ ಸಿಖ್ ಸಮುದಾಯವು ಖಂಡಿಸಿದೆ ಮತ್ತು ಘಟನೆಯ ನಂತರ ಶ್ರೀ ಅಕಾಲ್ ತಖ್ತ್ ಸಾಹಿಬ್ ಅವರು ಸಮಿತಿ ರಚಿಸಿದರು ಮತ್ತು ಈ ವಿಷಯದ ಬಗ್ಗೆ ತನಿಖೆಗೆ ಆದೇಶಿಸಿದರು. ಅಮೃತಪಾಲ್‌ ಸಿಂಗ್ ಜತ್ತೇದಾರ್ ಅಕಾಲ್ ತಖ್ತ್ ಬಳಿಗೆ ಹೋಗಿ ಈ ವಿಷಯದಲ್ಲಿ ಸುಮ್ಮನಿರುವಂತೆ ಬೆದರಿಕೆ ಹಾಕಿದ್ದಾನೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಬಿಹಾರದಲ್ಲಿ ಇಂಡಿಯಾ ಮೈತ್ರಿಕೂಟ ಸೀಟು ಹಂಚಿಕೆ ಅಂತಿಮ; ಆರ್‌ಜೆಡಿ 26, ಕಾಂಗ್ರೆಸ್‌ 9 ಸ್ಥಾನಗಳಲ್ಲಿ ಸ್ಪರ್ಧೆ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement