ಬಿಲ್ಕಿಸ್ ಬಾನೊ ಪ್ರಕರಣ : ಕಡತ ಸಲ್ಲಿಸುವ ಆದೇಶ ಪ್ರಶ್ನಿಸಬಹುದು; ಹೀಗಾಗಿ ಸುಪ್ರೀಂ ಕೋರ್ಟ್‌ಗೆ ಅಪರಾಧಿಗಳ ಕ್ಷಮಾಪಣೆ ಫೈಲ್‌ ಸಲ್ಲಿಸುವುದಿಲ್ಲ ಎಂದ ಕೇಂದ್ರ, ಗುಜರಾತ್ ಸರ್ಕಾರ

ನವದೆಹಲಿ: ಗುಜರಾತ್‌ ಹತ್ಯಾಕಾಂಡ ಸಂದರ್ಭದಲ್ಲಿ ಬಿಲ್ಕಿಸ್‌ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ 11 ಅಪರಾಧಿಗಳಿಗೆ ಕ್ಷಮಾದಾನ ನೀಡಿದ್ದಕ್ಕೆ ಸಂಬಂಧಿಸಿದ ಕಡತವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಹೇಳಿರುವ ಸುಪ್ರೀಂ ಕೋರ್ಟ್‌ ಆದೇಶವನ್ನು ಪ್ರಶ್ನಿಸುವ ಸಾಧ್ಯತೆ ಇದೆ ಎಂದು ಕೇಂದ್ರ ಮತ್ತು ಗುಜರಾತ್‌ ಸರ್ಕಾರಗಳು ಸರ್ವೋಚ್ಚ ನ್ಯಾಯಾಲಯಕ್ಕೆ ಗುರುವಾರ ತಿಳಿಸಿವೆ.
ಗುಜರಾತ್‌ ಹತ್ಯಾಕಾಂಡದ ಸಂದರ್ಭದಲ್ಲಿ ಬಿಲ್ಕಿಸ್‌ ಬಾನೊ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬ ಸದಸ್ಯರ ಕೊಲೆಯ 11 ಅಪರಾಧಿಗಳಿಗೆ ಕ್ಷಮಾದಾನ ನೀಡಿರುವ ಗುಜರಾತ್‌ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್‌ ಮತ್ತು ಬಿ ವಿ ನಾಗರತ್ನ ಅವರಿದ್ದ ವಿಭಾಗೀಯ ಪೀಠವು ನಡೆಸಿತು ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.
ವರದಿ ಪ್ರಕಾರ, ಕೇಂದ್ರ ಹಾಗೂ ಗುಜರಾತ್‌ ಸರ್ಕಾರಗಳನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌.ವಿ. ರಾಜು ಅವರು “ಸುಪ್ರೀಂ ಕೋರ್ಟ್‌ ಆದೇಶವನ್ನು ಸರ್ಕಾರಗಳು ಪ್ರಶ್ನಿಸುವ ಸಾಧ್ಯತೆ ಇದೆ. ಈ ಸಂಬಂಧ ಸ್ಪಷ್ಟ ಉತ್ತರ ನೀಡಲು ಹೆಚ್ಚಿನ ನಿರ್ದೇಶನಗಳನ್ನು ಪಡೆಯಬೇಕಿದೆ” ಎಂದು ಪೀಠಕ್ಕೆ ತಿಳಿಸಿದರು.

ಪ್ರಮುಖ ಸುದ್ದಿ :-   ವೀಡಿಯೊ..| ರಾಷ್ಟ್ರದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಆದ್ಯತೆ ; ಮನಮೋಹನ ಸಿಂಗ್ ಹಳೆಯ ವೀಡಿಯೊ ಮೂಲಕ ಕಾಂಗ್ರೆಸ್ಸಿಗೆ ತಿರುಗೇಟು ನೀಡಿದ ಬಿಜೆಪಿ

ಇದಕ್ಕೆ ನ್ಯಾ. ಜೋಸೆಫ್‌ ಅವರು ಆಗ “ಇಂದು ಕಡತಗಳನ್ನು ನಮಗೆ ತೋರಿಸಲು ಸಮಸ್ಯೆ ಏನು? ಅವುಗಳನ್ನು ಇಲ್ಲಿ ಸಲ್ಲಿಸದಿರುವುದು ನ್ಯಾಯಾಂಗ ನಿಂದನೆಯಾಗಿದೆ. (ಈಗ) ಏಕೆ ಹಿಂಜರಿಯುತ್ತಿದ್ದೀರಿ? ನೀವು ಆದೇಶ ಮರುಪರಿಶೀಲನಾ ಅರ್ಜಿ ಸಲ್ಲಿಸಿಲ್ಲ; ಈಗ ಮಾಡಬಾರದು ಎಂದು ನಾವು ನಿಮ್ಮನ್ನು ತಡೆದಿಲ್ಲ” ಎಂದರು.
ಅಲ್ಲದೇ, “ಕೇಂದ್ರ ಸರ್ಕಾರ ಸಮ್ಮತಿಸಿದೆ ಎಂದು ನೀವು (ಗುಜರಾತ್‌ ಸರ್ಕಾರ) ಪ್ರತ್ಯೇಕವಾಗಿ ಚಿಂತನೆ ನಡೆಸಬಾರದು ಎಂದಿಲ್ಲ. ಯಾವುದೇ ರಾಜ್ಯ ಕಾನೂನಿನ ಗೆರೆಯಿಂದ ತಪ್ಪಿಸಿಕೊಳ್ಳಲಾಗದು. ಕಾರಣ ನೀಡಲು ಅಥವಾ ಕಡತವನ್ನು ಸಲ್ಲಿಸಲು ನೀವು ಇಚ್ಛಿಸದಿದ್ದರೆ… ತೀರ್ಮಾನ ಕೈಗೊಳ್ಳಲು ನಾವು ಸ್ವತಂತ್ರರು” ಎಂದು ಹೇಳಿದರು.
ನ್ಯಾ. ನಾಗರತ್ನ ಅವರು “ಕಡತವನ್ನು ಸಲ್ಲಿಸಿದರೆ ನೀವು ಉತ್ತಮ ಸ್ಥಿತಿಯಲ್ಲಿರುತ್ತೀರಿ” ಎಂದರು. ಈ ಸಂದರ್ಭದಲ್ಲಿ ಅರ್ಜಿದಾರರೊಬ್ಬರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು “ಕಡತವನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬಹುದು” ಎಂದರು.

ಆಗ ನ್ಯಾ. ನಾಗರತ್ನ ಅವರು “ಆರೋಪಿಗಳು ಕನಿಷ್ಠ ಡಿಸೆಂಬರ್‌ವರೆಗೆ ಪ್ರಕರಣವನ್ನು ವಿಸ್ತರಿಸುವ ಕಾರ್ಯತಂತ್ರದ ಬಗ್ಗೆ ನಮಗೆ ಅರಿವಿದೆ. ಅರ್ಜಿಯನ್ನು ನಮಗೆ ಸಲ್ಲಿಸಿಲ್ಲ, ಆಕ್ಷೇಪಣೆ ಸಲ್ಲಿಸಲು ನಾಲ್ಕು ವಾರ ನೀಡಬೇಕು ಎಂದು ಪ್ರತಿವಾದಿಗಳು ಕೋರಬಹುದು. ಮುಂದಿನ ವಿಚಾರಣೆಗೆ ಬೇರೆ ಆರೋಪಿ ಇನ್ನೊಂದು ಹೇಳಬಹುದು” ಎಂದರು.
ಕಳೆದ ವಿಚಾರಣೆಯಲ್ಲಿ ನ್ಯಾಯಾಲಯವು ಮುಂದಿನ ವಿಚಾರಣೆಯ ವೇಳೆಗೆ ಮೊದಲ ಪ್ರತಿವಾದಿಯಾದ ಕೇಂದ್ರ ಸರ್ಕಾರ ಮತ್ತು ಎರಡನೇ ಪ್ರತಿವಾದಿಯಾದ ಗುಜರಾತ್‌ ಸರ್ಕಾರವು ಉಳಿದ ಪ್ರತಿವಾದಿಗಳಿಗೆ ಕ್ಷಮಾದಾನ ನೀಡಿರುವುದಕ್ಕೆ ಸಂಬಂಧಿಸಿದ ಕಡತಗಳನ್ನು ಸಲ್ಲಿಸಬೇಕು ಎಂದು ಆದೇಶಿಸಿತ್ತು. ವಾದ-ಪ್ರತಿವಾದ ಆಲಿಸಿದ ಪೀಠವು ಪ್ರಕರಣದ ವಿಲೇವಾರಿಗಾಗಿ ವಿಚಾರಣೆಯನ್ನು ಮೇ 2ಕ್ಕೆ ನಿಗದಿಪಡಿಸಿದೆ.

ಪ್ರಮುಖ ಸುದ್ದಿ :-   ಇವಿಎಂ ಮತಗಳ ಜೊತೆ ವಿವಿಪ್ಯಾಟ್ ಮತಗಳ ಸಂಪೂರ್ಣ ಎಣಿಕೆ : ಎಲ್ಲ ಅರ್ಜಿಗಳನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement