ಬಿಜೆಪಿ ಪ್ರಣಾಳಿಕೆ ಬಿಡುಗಡೆ : ಅಟಲ್ ಆಹಾರ ಕೇಂದ್ರ, ಬಿಪಿಎಲ್‌ ಕುಟುಂಬಕ್ಕೆ ನಂದಿನಿ ಹಾಲು,10 ಲಕ್ಷ ವಸತಿ ನಿವೇಶನಗಳ ವಿತರಣೆ, ಏಕರೂಪ ನಾಗರಿಕ ಸಹಿತೆ ಜಾರಿ ಭರವಸೆ…

ಬೆಂಗಳೂರು: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗಾಗಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖ್ಯಸ್ಥ ಜಗತ್ ಪ್ರಕಾಶ್ ನಡ್ಡಾ ಅವರು ಸೋಮವಾರ ‘ಪ್ರಜಾ ಪ್ರಣಾಳಿಕೆ’ (ಚುನಾವಣಾ ಪ್ರಣಾಳಿಕೆ) ಬಿಡುಗಡೆ ಮಾಡಿದರು. ಬಿಜೆಪಿಯ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಮತ್ತು ಪಕ್ಷದ ರಾಜ್ಯ ಮುಖ್ಯಸ್ಥ ನಳಿನಕುಮಾರ ಕಟೀಲು ಅವರ ಸಮ್ಮುಖದಲ್ಲಿ ಮುಂಬರುವ ಚುನಾವಣೆಗೆ ಪಕ್ಷದ ವಿಷನ್ ಡಾಕ್ಯುಮೆಂಟ್ ಬಿಡುಗಡೆ ಮಾಡಲಾಯಿತು.
ಬಿಜೆಪಿ ಪ್ರಣಾಳಿಕೆಯಲ್ಲಿ ಮತದಾರರಿಗೆ ನೀಡಿರುವ ಹಲವಾರು ಆಶ್ವಾಸನೆಗಳ ಪೈಕಿ ರೈತರು ಮತ್ತು ದಿನಗೂಲಿ ಕಾರ್ಮಿಕರ ಕಲ್ಯಾಣ ಯೋಜನೆಗಳು ಪ್ರಮುಖ ಆದ್ಯತೆ ಪಡೆದಿವೆ. ಪ್ರಣಾಳಿಕೆಯ ಪ್ರಕಾರ, ರೈತರಿಗೆ 5 ಲಕ್ಷ ರೂ. ಸಾಲದ ವರೆಗೆ ಶೂನ್ಯ ಬಡ್ಡಿ ವಿಧಿಸಲಾಗುತ್ತದೆ, 1,000 ಕ್ಕೂ ಹೆಚ್ಚು ಕೃಷಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಮತ್ತು ಕೃಷಿ ನಿಧಿಗಳನ್ನು ರಚಿಸಲು ಕಾರ್ಯವಿಧಾನವನ್ನು ಜಾರಿಗೊಳಿಸಲಾಗುವುದು.
ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಬಿಜೆಪಿ ಪ್ರಣಾಳಿಕೆ ಪ್ರಮುಖ ಭರವಸೆಗಳು…
ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಕಾಯ್ದೆ, 1972 ಅನ್ನು ಸುಧಾರಿಸಲು ಮತ್ತು ಕುಂದುಕೊರತೆ ನಿವಾರಣಾ ಕಾರ್ಯವಿಧಾನವನ್ನು ಆಧುನೀಕರಿಸಲು ಕರ್ನಾಟಕ ನಿವಾಸಿಗಳ ಕಲ್ಯಾಣ ಸಮಾಲೋಚನಾ ಸಮಿತಿ ರಚಿಸುವ ಮೂಲಕ ಬೆಂಗಳೂರಿನ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ “ಸುಲಭ ಜೀವನ” ಯೋಜನೆ ಬಿಜೆಪಿ ಭರವಸೆ
ಕರ್ನಾಟಕದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲು ಉದ್ದೇಶಿಸಿದ್ದು, ಉನ್ನತ ಮಟ್ಟದ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ರಚಿಸುವ ಭರವಸೆ
ಎಲ್ಲಾ BPL ಕುಟುಂಬಗಳಿಗೆ ವಾರ್ಷಿಕವಾಗಿ 3 ಉಚಿತ ಅಡುಗೆ ಅನಿಲ ಸಿಲಿಂಡರ್‌ಗಳ ವಿತರಣೆ ; ಯುಗಾದಿ, ಗಣೇಶ ಚತುರ್ಥಿ ಮತ್ತು ದೀಪಾವಳಿಯ ಹಬ್ಬದ ಸಮಯದಲ್ಲಿ ತಲಾ ಒಂದು.
‘ಸರ್ವರಿಗೂ ಸೂರು’ ಯೋಜನೆ ಜಾರಿಯಾಗಲಿದ್ದು, ಇದರಡಿಯಲ್ಲಿ ಕಂದಾಯ ಇಲಾಖೆಯು ನಿವೇಶನ ರಹಿತ/ ವಸತಿ ರಹಿತ ಫಲಾನುಭವಿಗಳಿಗೆ ರಾಜ್ಯಾದ್ಯಂತ 10 ಲಕ್ಷ ವಸತಿ ನಿವೇಶನಗಳ ವಿತರಣೆ
‘ಒನಕೆ ಓಬವ್ವ ಸಾಮಾಜಿಕ ನ್ಯಾಯ ನಿಧಿ’ ಯೋಜನೆಯನ್ನು ಪ್ರಾರಂಭ ಈ ಮೂಲಕ ಎಸ್‌ಸಿ, ಎಸ್‌ಟಿ ಕುಟುಂಬಗಳ ಮಹಿಳೆಯರು ಯೋಜನೆಯಡಿಯಲ್ಲಿ ಮಾಡುವ 5 ವರ್ಷಗಳ ಸ್ಥಿರ ಠೇವಣಿಗಳ ಮೇಲೆ 10,000 ರೂ.ವರೆಗೆ ಹೊಂದಾಣಿಕೆ ಠೇವಣಿ ನೀಡುವುದಾಗಿ ಭರವಸೆ.

ಪ್ರಮುಖ ಸುದ್ದಿ :-   ಸುಗಾವಿ ಶಾಲೆಯ ʼಶತಮಾನೋತ್ಸವ ಸಂಭ್ರಮʼ ಕಾರ್ಯಕ್ರಮ ಭಾನುವಾರ ಉದ್ಘಾಟನೆ : ವಿವಿಧ ಕಾರ್ಯಕ್ರಮ ಆಯೋಜನೆ

ಆಹಾರ ಸುರಕ್ಷತೆ:
ರಾಜ್ಯದಾದ್ಯಂತ ಕೈಗೆಟಕುವ, ಗುಣಮಟ್ಟದ ಮತ್ತು ಆರೋಗ್ಯಕರ ಆಹಾರವನ್ನು ಒದಗಿಸಲು ರಾಜ್ಯದ ಪ್ರತಿ ಮುನ್ಸಿಪಲ್ ಕಾರ್ಪೊರೇಷನ್‌ನ ಪ್ರತಿ ವಾರ್ಡ್‌ಗಳಲ್ಲಿ ‘ಅಟಲ್ ಆಹಾರ ಕೇಂದ್ರ’ವನ್ನು ಸ್ಥಾಪಿಸಲಾಗುವುದು.
‘ಪೋಷಣ’ ಯೋಜನೆಯನ್ನು ಪ್ರಾರಂಭಿಸಲಾಗುವುದು. ಈ ಮೂಲಕ ಪ್ರತಿ ಬಿಪಿಎಲ್ ಮನೆಗಳಿಗೆ ಪ್ರತಿದಿನ ಅರ್ಧ ಲೀಟರ್ ನಂದಿನಿ ಹಾಲು ನೀಡಲಾಗುವುದು ಎಂದು ಭರವಸೆ.
ಶಿಕ್ಷಣ:
ವಿಶ್ವೇಶ್ವರಯ್ಯ ವಿದ್ಯಾ ಯೋಜನೆಯನ್ನು ಪ್ರಾರಂಭಿಸಲಾಗುವುದು, ಇದರ ಅಡಿಯಲ್ಲಿ ರಾಜ್ಯ ಸರ್ಕಾರವು ಸರ್ಕಾರಿ ಶಾಲೆಗಳ ಸಮಗ್ರ ಉನ್ನತೀಕರಣಕ್ಕಾಗಿ ಪ್ರಖ್ಯಾತ ವ್ಯಕ್ತಿಗಳು ಮತ್ತು ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಲಿದೆ.
ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮತ್ತು ಐಟಿಐಗಳ ನಡುವಿನ ಸಹಯೋಗವನ್ನು ಹೆಚ್ಚಿಸಲು ಮತ್ತು ಪ್ರತಿಭಾವಂತ ಯುವ ವೃತ್ತಿಪರರಿಗೆ ಶಿಕ್ಷಣ ಮತ್ತು ಉದ್ಯೋಗದ ಕ್ರಿಯಾತ್ಮಕ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಲು ‘ಸಮನ್ವಯ’ ಯೋಜನೆ ಜಾರಿ.
ಮಹತ್ವಾಕಾಂಕ್ಷೆಯ ಯುವಕರಿಗೆ ವೃತ್ತಿ ಬೆಂಬಲವನ್ನು ಒದಗಿಸಲು, ವಿದ್ಯಾರ್ಥಿಗಳಿಗೆ ಐಎಎಸ್/ಕೆಎಎಸ್/ಬ್ಯಾಂಕಿಂಗ್/ಸರ್ಕಾರಿ ಉದ್ಯೋಗಗಳಿಗೆ ತರಬೇತಿ ಪಡೆಯಲು ಆರ್ಥಿಕ ಪ್ರೋತ್ಸಾಹ ನೀಡುವ ಭರವಸೆ.
ಆರೋಗ್ಯ:
ಮುನ್ಸಿಪಲ್ ಕಾರ್ಪೊರೇಷನ್‌ಗಳ ಪ್ರತಿ ವಾರ್ಡ್‌ಗಳಲ್ಲಿ ಡಯಾಗ್ನೋಸ್ಟಿಕ್ ಸೌಲಭ್ಯಗಳನ್ನು ಹೊಂದಿರುವ ನಮ್ಮ ಕ್ಲಿನಿಕ್ ಅನ್ನು ಸ್ಥಾಪಿಸುವ ಮೂಲಕ ‘ಮಿಷನ್ ಸ್ವಾಸ್ಥ್ಯ ಕರ್ನಾಟಕ’ ಮೂಲಕ ರಾಜ್ಯದಲ್ಲಿ ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ ಬಲಪಡಿಸುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ.
ರಾಜ್ಯ ಅಭಿವೃದ್ಧಿ (ಮೂಲಸೌಕರ್ಯ/ಸ್ಟಾರ್ಟ್‌ಅಪ್‌ಗಳು)
ಬೆಂಗಳೂರನ್ನು ಮುಂದಿನ ಪೀಳಿಗೆಗೆ ‘ರಾಜ್ಯ ರಾಜಧಾನಿ ಪ್ರದೇಶ’ ಎಂದು ಗೊತ್ತುಪಡಿಸುವ ಮೂಲಕ ಅಭಿವೃದ್ಧಿ ಪಡಿಸುವುದಾಗಿ ಬಿಜೆಪಿ ಭರವಸೆ ನೀಡಿದೆ ಮತ್ತು ಸಮಗ್ರ, ತಂತ್ರಜ್ಞಾನದ ನೇತೃತ್ವದ ನಗರ ಅಭಿವೃದ್ಧಿ ಕಾರ್ಯಕ್ರಮವನ್ನು ಜಾರಿಗೊಳಿಸುತ್ತದೆ.
ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುವ ಮೂಲಕ, 1,000 ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸುವ ಮೂಲಕ, ಬಿಎಂಟಿಸಿ ಬಸ್‌ಗಳನ್ನು ಸಂಪೂರ್ಣ ಎಲೆಕ್ಟ್ರಿಕ್ ಬಸ್‌ಗಳಾಗಿ ಪರಿವರ್ತಿಸುವ ಮೂಲಕ ಮತ್ತು ಬೆಂಗಳೂರಿನ ಹೊರವಲಯದಲ್ಲಿ “ಇವಿ ಸಿಟಿ” ರಚಿಸುವ ಮೂಲಕ ಕರ್ನಾಟಕವನ್ನು ಎಲೆಕ್ಟ್ರಿಕ್ ವಾಹನಗಳ ಪ್ರಮುಖ ಕೇಂದ್ರವನ್ನಾಗಿ ಮಾಡಲು ಪ್ರಯತ್ನಿಸಲಾಗುವುದು ಎಂದು ಪ್ರಣಾಳಿಕೆ ಹೇಳಿದೆ.
ಮೈಕ್ರೋ ಕೋಲ್ಡ್ ಸ್ಟೋರೇಜ್ ಸೌಲಭ್ಯಗಳು, ಎಲ್ಲಾ ಗ್ರಾಮ ಪಂಚಾಯತಗಳಲ್ಲಿ ಕೃಷಿ ಸಂಸ್ಕರಣಾ ಘಟಕಗಳು, ಎಪಿಎಂಸಿಗಳ ಆಧುನೀಕರಣ ಮತ್ತು ಡಿಜಿಟಲೀಕರಣ ಕೈಗೊಳ್ಳುವುದಾಗಿ ಭರವಸೆ ನೀಡಿದೆ. ಫಾರ್ಮ್ ಯಾಂತ್ರೀಕರಣವನ್ನು ವೇಗಗೊಳಿಸುವುದು, 5 ಹೊಸ ಕೃಷಿ-ಕೈಗಾರಿಕಾ ಕ್ಲಸ್ಟರ್‌ಗಳನ್ನು ಸ್ಥಾಪಿಸುವುದು ಮತ್ತು 3 ಹೊಸ ಆಹಾರ ಸಂಸ್ಕರಣೆಗೆ 30,000 ಕೋಟಿ ರೂ.ಗಳ ಕೆ-ಅಗ್ರಿ ನಿಧಿ ಸ್ಥಾಪನೆ ಮಾಡುವುದಾಗಿ ಪ್ರಣಾಳಿಕೆ ಹೇಳಿದೆ.
ಪ್ರವಾಸೋದ್ಯಮ
ಕಲ್ಯಾಣ ಸರ್ಕ್ಯೂಟ್, ಬನವಾಸಿ ಸರ್ಕ್ಯೂಟ್, ಪರಶುರಾಮ ಸರ್ಕ್ಯೂಟ್, ಕಾವೇರಿ ಸರ್ಕ್ಯೂಟ್ ಮತ್ತು ಗಾಣಗಾಪುರ ಕಾರಿಡಾರ್ ಅನ್ನು ಅಭಿವೃದ್ಧಿಪಡಿಸಲು, ಕರ್ನಾಟಕವನ್ನು ಭಾರತದ ಅತ್ಯಂತ ಮೆಚ್ಚಿನ ಪ್ರವಾಸಿ ತಾಣವಾಗಿ ಪರಿವರ್ತಿಸಲು ₹ 1,500 ಕೋಟಿ ನಿಧಿಯನ್ನು ವಿನಿಯೋಗಿಸಲಾಗುವುದು.
ಲಾಜಿಸ್ಟಿಕ್ಸ್, ಕೈಗಾರಿಕಾ ಕ್ಲಸ್ಟರ್‌ಗಳು, ಸಂಪರ್ಕ ಮತ್ತು ರಫ್ತು ಸೌಲಭ್ಯಗಳನ್ನು ಒಳಗೊಂಡಿರುವ 10 ಲಕ್ಷ ಉತ್ಪಾದನಾ ಉದ್ಯೋಗಗಳನ್ನು ‘ಬೆಂಗಳೂರಿನಾಚೆಗೆ’ ಉತ್ಪಾದಿಸುವ ಸಮಗ್ರ ಯೋಜನೆಯನ್ನು ಸಂಯೋಜಿಸುವ ಮೂಲಕ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಸ್ಕೀಮ್‌ನ ವ್ಯಾಪ್ತಿಯನ್ನು ವಿಸ್ತರಿಸುವ ಗುರಿಯನ್ನು ಪಕ್ಷ ಹೊಂದಿದೆ.
170 ವಿಧಾನಸಭಾ ಕ್ಷೇತ್ರಗಳಿಂದ ಪಡೆದ 900 ಸಲಹೆಗಳ ಆಧಾರದ ಮೇಲೆ ಮಾಡಿದ ಪ್ರಣಾಳಿಕೆಯು ಕರ್ನಾಟಕದ ಸುಮಾರು 38 ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಒತ್ತು ನೀಡಿದೆ. ಕೇಸರಿ ಪಕ್ಷದ ಪ್ರಕಾರ, 17 ರಾಷ್ಟ್ರೀಯ ನಾಯಕರು ಪ್ರಣಾಳಿಕೆ ಕರಡು ಸಮಿತಿಯ ಭಾಗವಾಗಿದ್ದರು.

ಪ್ರಮುಖ ಸುದ್ದಿ :-   ಬೆಂಗಳೂರು: ರಸ್ತೆ ದಾಟುತ್ತಿದ್ದಾಗ ಬೈಕ್ ಡಿಕ್ಕಿ ; ಅಂಧ ದಂಪತಿ ಸಾವು

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement