ವಿವಾಹ ವಿಚ್ಛೇದನಕ್ಕೆ ಇನ್ನು 6 ತಿಂಗಳು ಕಾಯಬೇಕಾಗಿಲ್ಲ: ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್‌

ನವದೆಹಲಿ: ಸುಪ್ರೀಂಕೋರ್ಟ್‌ ನ ಐವರು ನ್ಯಾಯಾಧೀಶರನ್ನೊಳಗೊಂಡ ಪೀಠ ವಿವಾಹ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಇಂದು, ಸೋಮವಾರ ಮಹತ್ವದ ತೀರ್ಪು ಪ್ರಕಟಿಸಿದೆ.
ವಿಚ್ಛೇದನ ಪಡೆಯಲು ಬಯಸುವವರು ಪರಸ್ಪರ ಬಾಳಲು ಸಾಧ್ಯವೇ ಇಲ್ಲ ಎಂಬ ಸಂದರ್ಭದಲ್ಲಿ ಸಹಮತದ ವಿಚ್ಛೇದನ ನೀಡಲು ಸಂವಿಧಾನದ 142ನೇ ವಿಧಿ ಬಳಸಿ ಸುಪ್ರೀಂ ಕೋರ್ಟ್‌ ತನ್ನ ಪೂರ್ಣ ಅಧಿಕಾರ ಚಲಾಯಿಸಬಹುದು ಹಾಗೂ ಆರು ತಿಂಗಳು ಕಾಯದೆ ವಿಚ್ಛೇದನ ನೀಡಬಹುದು ಎಂದು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ ಇಂದು, ಸೋಮವಾರ ಹೇಳಿದೆ.
ಒಟ್ಟಿಗೆ ಬಾಳು ಸಾಧ್ಯವೇ ಇಲ್ಲ ಎಂಬಂತಹ ಸಂದರ್ಭದಲ್ಲಿ ಹಿಂದೂ ವಿವಾಹ ಕಾಯಿದೆಯಡಿ ವಿಚ್ಛೇದನಕ್ಕಾಗಿ ನಿಗದಿಪಡಿಸಿದ ಆರು ತಿಂಗಳ ಅವಧಿ ವರೆಗೆ ಕಾಯಬೇಕಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಅಭಯ್ ಎಸ್ ಓಕಾ, ವಿಕ್ರಂ ನಾಥ ಹಾಗೂ ಜೆ ಕೆ ಮಾಹೇಶ್ವರಿ ಎಂದು ಅವರಿದ್ದ ಸಾಂವಿಧಾನಿಕ ಪೀಠ ಹೇಳಿದೆ.
ಸಂವಿಧಾನದ 142ನೇ ವಿಧಿಯನ್ನು ಮೂಲಭೂತ ಹಕ್ಕುಗಳ ಮೂಸೆಯಲ್ಲಿ ನೋಡಬೇಕು. ಸಂವಿಧಾನದ ಅತಿಕ್ರಮಿಸಲಾಗದ ಕಾರ್ಯವನ್ನು ಇದು ಉಲ್ಲಂಘಿಸಬೇಕು. ನ್ಯಾಯಾಲಯವು ಇದರಡಿ ಹೊಂದಿರುವ ಅಧಿಕಾರವು ನ್ಯಾಯದಾನವನ್ನು ಪೂರ್ಣಗೊಳಿಸುವ ಶಕ್ತಿಯನ್ನು ನೀಡಿದೆ” ಎಂದು ಪೀಠ ಹೇಳಿದೆ.

ಪ್ರಮುಖ ಸುದ್ದಿ :-   ತಾಯಿಯ ಸಂಪತ್ತು ಉಳಿಸಿಕೊಳ್ಳಲು ಪಿತ್ರಾರ್ಜಿತ ತೆರಿಗೆ ಕಾನೂನು ರದ್ದುಗೊಳಿಸಿದ ರಾಜೀವ ಗಾಂಧಿ : ಪ್ರಧಾನಿ ಮೋದಿ ಆರೋಪ

ಹಿಂದೂ ವಿವಾಹ ಕಾಯಿದೆಯ ಸೆಕ್ಷನ್ 13-ಬಿ ಅಡಿಯಲ್ಲಿ ಸೂಚಿಸಿದಂತೆ ವಿಚ್ಛೇದನ ಅಪೇಕ್ಷಿಸುವ ವ್ಯಕ್ತಿಗಳು ವಿಚ್ಛೇದನಕ್ಕಾಗಿ ಕಡ್ಡಾಯವಾಗಿ ಆರು ತಿಂಗಳ ಅವಧಿಯವರೆಗೆ ಕಾಯಬೇಕಿತ್ತು. ಇದನ್ನು ಪ್ರಶ್ನಿಸಲಾಗಿತ್ತು. ಜೊತೆಗೆ ಕೌಟುಂಬಿಕ ನ್ಯಾಯಾಲಯಗಳ ಮೆಟ್ಟಿಲೇರದೆಯೂ ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಛೇದನ ಪಡೆಯಲು ಸುಪ್ರೀಂ ಕೋರ್ಟ್‌ಗೆ ಇರುವ ಸಂಪೂರ್ಣ ಅಧಿಕಾರದ ಬಳಕೆ ಕುರಿತಂತೆ ಅರ್ಜಿ ಸಲ್ಲಿಸಲಾಗಿತ್ತು.
ಸಂವಿಧಾನದ 142ನೇ ವಿಧಿಯು ಸುಪ್ರೀಂ ಕೋರ್ಟ್‌ ಮುಂದೆ ಬಾಕಿ ಇರುವ ಯಾವುದೇ ದಾವೆ ಅಥವಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ನ್ಯಾಯ ಒದಗಿಸುವುದಕ್ಕಾಗಿ ಅಗತ್ಯ ತೀರ್ಪು ಮತ್ತು ಆದೇಶ ನೀಡಲು ಅದಕ್ಕೆ ಅಧಿಕಾರ ನೀಡುತ್ತದೆ.
ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ವಿಚ್ಛೇದನಕ್ಕೆ ಸುಪ್ರೀಂ ಕೋರ್ಟ್ ತನ್ನ ಅಧಿಕಾರ ಚಲಾಯಿಸಬಹುದೇ ಮತ್ತು ಅಂತಹ ಅಧಿಕಾರಗಳ ವಿಶಾಲ ಮಾನದಂಡಗಳ ಕುರಿತಾದ ವಿಚಾರಗಳನ್ನು ಈ ಪ್ರಕರಣ ಒಳಗೊಂಡಿತ್ತು.

ವಿಚ್ಛೇದನಕ್ಕೆ ಸಂಬಂಧಿಸಿದಂತೆ ಕೌಟುಂಬಿಕ ನ್ಯಾಯಾಲಯ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನಕ್ಕೆ ಆರು ತಿಂಗಳ ಕಾಲಾವಕಾಶ ನೀಡುತ್ತಿತ್ತು. ಸಂವಿಧಾನದ 142ನೇ ವಿಧಿಯು ಬಾಕಿ ಇರುವ ವಿಚ್ಛೇದನ ಪ್ರಕರಣಗಳಲ್ಲಿ ಮದುವೆಯನ್ನು ರದ್ದುಗೊಳಿಸುವ ಪರಮಾಧಿಕಾರವನ್ನು ಸುಪ್ರೀಂಕೋರ್ಟ್‌ ಗೆ ನೀಡುತ್ತದೆ.
ಈ ಬಗ್ಗೆ ನ್ಯಾಯಮೂರ್ತಿಗಳಾದ ಶಿವ ಕೀರ್ತಿ ಸಿಂಗ್ ಮತ್ತು ಆರ್ ಭಾನುಮತಿ ಅವರನ್ನೊಳಗೊಂಡ ವಿಭಾಗೀಯ ಪೀಠ ಐದು ವರ್ಷಗಳ ಹಿಂದೆ ಅಂದರೆ ಜೂನ್ 29, 2016ರಂದು ಈ ಪ್ರಕರಣವನ್ನು ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿತ್ತು. ವಾದಗಳನ್ನು ಆಲಿಸಿದ್ದ, ಸಾಂವಿಧಾನಿಕ ಪೀಠ ತನ್ನ ತೀರ್ಪನ್ನು ಸೆಪ್ಟೆಂಬರ್ 29, 2022ರಲ್ಲಿ ತೀರ್ಪು ಕಾಯ್ದಿರಿಸಿತ್ತು.
ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಾಯ ಮಾಡಲು ಹಿರಿಯ ನ್ಯಾಯವಾದಿಗಳಾದ ಇಂದಿರಾ ಜೈಸಿಂಗ್, ವಿ ಗಿರಿ, ಕಪಿಲ್ ಸಿಬಲ್, ದುಷ್ಯಂತ್ ದವೆ ಹಾಗೂ ಮೀನಾಕ್ಷಿ ಅರೋರಾ ಅವರನ್ನು ಅಮಿಕಸ್‌ಕ್ಯೂರಿಯನ್ನಾಗಿ ನೇಮಿಸಲಾಗಿತ್ತು. ಪ್ರಕರಣದಲ್ಲಿ ಹಿರಿಯ ವಕೀಲರಾದ ವಿ ಮೋಹನಾ ಮತ್ತು ಜೇ ಸಾವ್ಲಾ ಮತ್ತು ವಕೀಲ ಅಮೋಲ್ ಚಿತಳೆ ಕೂಡ ವಾದ ಮಂಡಿಸಿದ್ದರು.

ಪ್ರಮುಖ ಸುದ್ದಿ :-   ಇವಿಎಂ ಮತಗಳ ಜೊತೆ ವಿವಿಪ್ಯಾಟ್ ಮತಗಳ ಸಂಪೂರ್ಣ ಎಣಿಕೆ : ಎಲ್ಲ ಅರ್ಜಿಗಳನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement