ವೀಡಿಯೊ..:.ಪದ್ಮಶ್ರೀ ಪುರಸ್ಕೃತ ಸುಕ್ರಿ ಗೌಡ-ತುಳಸಿ ಗೌಡರಿಗೆ ಶಿರಬಾಗಿ ನಮಸ್ಕರಿಸಿದ ಪ್ರಧಾನಿ ಮೋದಿ | ವೀಕ್ಷಿಸಿ

ಅಂಕೋಲಾ : ಅಂಕೋಲಾ : ಬಿಜೆಪಿ ಪ್ರಚಾರಾರ್ಥ ಅಂಕೋಲಾಕ್ಕೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿಯವರು ಬುಡಕಟ್ಟು ಹಾಲಕ್ಕಿ ಸಮುದಾಯದ ಪದ್ಮಪ್ರಶಸ್ತಿ ಪುರಸ್ಕೃತರಾದ ಸುಕ್ರಿ ಗೌಡ ಮತ್ತು ತುಳಸಿ ಗೌಡ ಅವರನ್ನು ಭೇಟಿಯಾದರು, ನಂತರ ಅವರಿಗೆ ಶಿರಬಾಗಿ ನಮಸ್ಕರಿಸಿದರು.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಹಟ್ಟಿಕೇರಿಯ ಟೋಲ್ ಗೇಟ್ ಬಳಿಯ ಗೌರಿಕೆರೆಯಲ್ಲಿ ಬಿಜೆಪಿ ಸಮಾವೇಶದಲ್ಲಿ ಜಿಲ್ಲೆಯ ಆರು ಕ್ಷೇತ್ರದ ಅಭ್ಯರ್ಥಿಗಳ ಪರವಾಗಿ ಬುಧವಾರ ಬೃಹತ್‌ ಸಮಾವೇಶದಲ್ಲಿ ಚುನಾವಣಾ ಭಾಷಣ ಮಾಡುವ ಮೊದಲು ಪದ್ಮಶ್ರೀ ಪುರಸ್ಕೃತರಾದ ಸಾರಾಯಿ ವಿರೋಧಿ ಹೋರಾಟಗಾರ್ತಿ ಹಾಗೂ ಜನಪದ ಹಾಡುಗಳ ಭಂಡಾರ ಸುಕ್ರಿ  ಗೌಡ ಹಾಗೂ ವೃಕ್ಷ ಮಾತೆ ತುಳಸಿ ಗೌಡ ಅವರನ್ನು ಭೇಟಿ ಮಾಡಿದರು. ಉಭಯ ಕುಶಲೋಪರಿ ಮಾತನಾಡಿದ ನಂತರ ಅವರ ನಮಸ್ಕಾರಕ್ಕೆ ಪ್ರತಿಯಾಗಿ ಅವರಿಬ್ಬರಿಗೆ ಶಿರಬಾಗಿ ನಮಸ್ಕರಿಸಿದರು. ಪದ್ಮಪುರಸ್ಕೃತರಿಬ್ಬರು ಮೋದಿಯನ್ನು ಆಶೀರ್ವದಿಸಿದರು.
ನಂತರ ಸಮಾರಂಭದಲ್ಲೂ ಈ ಇಬ್ಬರ ಬಗ್ಗೆ ಪ್ರಸ್ತಾಪ ಮಾಡಿದ ಮೋದಿ, ಬಿಜೆಪಿ ಸರ್ಕಾರ ಅಂಕೋಲೆಯ ಜಾನಪದ ಕೋಗಿಲೆ ಸುಕ್ರಿ ಬೊಮ್ಮ ಗೌಡ, ಪರಿಸರ ತಜ್ಞೆ ತುಳಸಿ ಗೌಡರಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಿದೆ ಎಂದರು.
ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಮೋದಿ, ನನಗೆ ಯಾರೂ ರಿಮೋಟ್ ಕಂಟ್ರೋಲ್ ಇಲ್ಲ. ನಮ್ಮ ರಿಮೋಟ್ ಕಂಟ್ರೋಲ್ 140 ಕೋಟಿ ಭಾರತೀಯರು, ನನ್ನ ರಿಮೋಟ್ ಕಂಟ್ರೋಲ್ ನೀವೇ. ನಾನು ಹಿಂದಿಯಲ್ಲಿ ಮಾತನಾಡಬಹುದೇ ಎಂದಾಗ ಸಭೆಯಲ್ಲಿ ಜಯಕಾರದ ಮೂಲಕ ಸಮ್ಮತಿಸಲಾಯಿತು.

ಪ್ರಮುಖ ಸುದ್ದಿ :-   ಲೈಂಗಿಕ ದೌರ್ಜನ್ಯ ಪ್ರಕರಣ: ಶಾಸಕ ಎಚ್‌.ಡಿ. ರೇವಣ್ಣಗೆ ಜಾಮೀನು ಮಂಜೂರು

ರಾಷ್ಟ್ರ ಮೊದಲು, ದೇಶದ ನಾಗರಿಕ ಮೊದಲು ಎನ್ನುವುದು ಬಿಜೆಪಿಯ ಸಂಕಲ್ಪವಾಗಿದೆ. ಕರಪ್ಷನ್ (ಭ್ರಷ್ಟಾಚಾರ) ಫಸ್ಟ್ ಎನ್ನುವುದು ಕಾಂಗ್ರೆಸ್ಸಿನ ಸಂಕಲ್ಪವಾಗಿದೆ. ದೆಹಲಿಯಲ್ಲಿ ಕುಳಿತಿರುವ ಕಾಂಗ್ರೆಸ್ ಕುಟುಂಬವೊಂದು ಅನೇಕ ವರ್ಷಗಳ ಕಾಲ ದೇಶ ಆಡಳಿತ ನಡೆಸಿ ದೇಶವನ್ನು ಲೂಟಿ ಮಾಡಿದೆ ಎಂದು ಹೇಳಿದರು.
ದೇಶದ ವಿಕಾಸದ ಬದಲು ಆ ಕುಟುಂಬ ತಮ್ಮ ವಿಕಾಸಕ್ಕೇ ಒತ್ತು ನೀಡಿತು. ಕಪ್ಪುಹಣದಿಂದಲೇ ತಮ್ಮ ಖಜಾನೆ ತುಂಬಿರಬೇಕು ಎಂದು ಕಾಂಗ್ರೆಸ್ ಕೋಟಿಗಟ್ಟಲೇ ನಕಲಿ ವ್ಯಕ್ತಿಗಳ ಹೆಸರಿನಲ್ಲಿ ಕಾಗದ ಪತ್ರಗಳನ್ನು ಸಿದ್ಧಪಡಿಸುವ ವ್ಯವಸ್ಥೆ ಜಾರಿಗೆ ತಂದಿತು ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಕಲಿ ಸೌಲಭ್ಯ ಪಡೆದುಕೊಂಡವರ ಸಂಖ್ಯೆ ಕರ್ನಾಟಕದ ಜನಸಂಖ್ಯೆಗಿಂತ ಹೆಚ್ಚಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 4.20 ಲಕ್ಷ ಕೋಟಿ ನಕಲಿ ಪಡಿತರದಾರರಿಗೆ ಪಡಿತರ ನೀಡಲಾಗಿದೆ. 4 ಕೋಟಿ ನಕಲಿ ಹೆಸರಿಗೆ ಗ್ಯಾಸ್ ಸಬ್ಸಿಡಿ ನೀಡಲಾಗಿದೆ. 1 ಕೋಟಿ ನಕಲಿ ಹೆಸರಿಗೆ ಮಹಿಳಾ ಕಲ್ಯಾಣ ಹಣ ನೀಡಲಾಗಿದೆ. 30 ಲಕ್ಷ ನಕಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದೆ. ಒಟ್ಟೂ ಹತ್ತು ಕೋಟಿ ನಕಲಿ ಹೆಸರನ್ನು ಕಾಂಗ್ರೆಸ್ ಸರ್ಕಾರಿ ಕಾಗದ ಪತ್ರಗಳಲ್ಲಿ ಸೇರಿಸಿತು. ವಿಶೇಷವೆಂದರೆ ಹತ್ತು ಕೋಟಿ ನಕಲಿ ಹೆಸರು ಹೊಂದಿದವರ ಜನ್ಮವೇ ಆಗಿರಲಿಲ್ಲ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಮುಖ ಸುದ್ದಿ :-   ಸಾಲದ ಹಣ ಮರಳಿ ಕೊಡಲು ತಡವಾಗಿದ್ದಕ್ಕೆ ಪತ್ನಿ, ಪುತ್ರನಿಗೆ ಗೃಹ ಬಂಧನ : ಮನನೊಂದು ರೈತ ಆತ್ಮಹತ್ಯೆ

ಈ ನಕಲಿ ಖಾತೆಗಳ ಮೂಲಕ ಹಣವೆಲ್ಲ ಬುಡದಿಂದ ತುದಿಯವರೆಗೆ ಇರುವ ಕಾಂಗ್ರೆಸ್ ನಾಯಕ ಕಿಸೆಗೆ ಹೋಗುತ್ತಿತ್ತು. ಈ ನಕಲಿ ಹಗರಣವನ್ನು ಬಯಲಿಗೆಳೆದಿದ್ದೇನೆ. ಅದಕ್ಕಾಗಿ ಕಾಂಗ್ರೆಸ್ಸಿನವರು ನನ್ನ ಮೇಲೆ ಮುಗಿಬೀಳುತ್ತಾರೆ. ನನ್ನನ್ನು ನಿಂದಿಸುತ್ತಾರೆ. ಬಡವರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದ ನಕಲಿ ಹೆಸರಗಳನ್ನು ರದ್ದು ಮಾಡಿ ಬಡವರಿಗೆ ಸೌಕರ್ಯ ಸಿಗುವಂತೆ ಬಿಜೆಪಿ ಸರ್ಕಾರ ಮಾಡಿದೆ. ಹೀಗೆ ಮಾಡುವ ಮೂಲಕ 3.15 ಲಕ್ಷ ಕೋಟಿ ಹಣ ದುಷ್ಟರ ಕೈ ಸೇರುವುದನ್ನು ಬಿಜೆಪಿ ತಡೆದಿದೆ ಎಂದು ಅವರು ಪ್ರತಿಪಾದಿಸಿದರು.
ಬಿಜೆಪಿ ಸರ್ಕಾರ ಬಡವರ ಭಾವನೆಯನ್ನು ಅರ್ಥ ಮಾಡಿಕೊಂಡು ಕೆಲಸ ಮಾಡುತ್ತಿದೆ. ಬಡವನ ಜೀವನ ನಿರಾಯಾಸವಾಗಿ ನಡೆಯಲಿದೆ. ಅವರಿಗೆ ಹೊಸ ಅವಕಾಶ ಸಿಗಲಿ ಎನ್ನುವುದು ನಮ್ಮ ಧೈಯವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ವೇದಿಕೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಶ್ರೀನಿವಾಸ ಪೂಜಾರಿ, ಶಿವರಾಮ ಹೆಬ್ಬಾರ್, ರೂಪಾಲಿ ನಾಯ್ಕ, ದಿನಕರ ಶೆಟ್ಟಿ, ಸುನಿಲ್ ನಾಯ್ಕ, ಸುನಿಲ ಹೆಗಡೆ, ವಿಧಾನ ಪರಿಷತ್‌ ಸದಸ್ಯರಾದ ಗಣಪತಿ ಉಳ್ವೇಕರ, ಶಾಂತಾರಾಮ್ ಸಿದ್ದಿ ಮೊದಲಾದವರು ಇದ್ದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement