ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ ʼಕಾನೂನುಬಾಹಿರ’ ಎಂದ ಪಾಕಿಸ್ತಾನ ಸುಪ್ರೀಂ ಕೋರ್ಟ್‌ : ತಕ್ಷಣವೇ ಬಿಡುಗಡೆಗೆ ಆದೇಶ

ಇಸ್ಲಾಮಾಬಾದ್‌ : ಅಲ್-ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಅಧ್ಯಕ್ಷ ಇಮ್ರಾನ್ ಖಾನ್ ಅವರ ಬಂಧನವನ್ನು ಕಾನೂನುಬಾಹಿರ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ ಮತ್ತು ಅವರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಆದೇಶಿಸಿದೆ.
ಪಾಕಿಸ್ತಾನದ ಸುಪ್ರೀಂ ಕೋರ್ಟ್‌ ಇಮ್ರಾನ್‌ ಖಾನ್ ಅವರನ್ನು ಬಂಧಿಸಿದ ರೀತಿಗಾಗಿ ಎನ್‌ಎಬಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು ಮತ್ತು “ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋ (NAB) ನ್ಯಾಯಾಲಯವನ್ನು ಅಗೌರವಿಸಿದೆ” ಎಂದು ಹೇಳಿತು.
ಇಮ್ರಾನ್‌ ಖಾನ್, 70, ಅವರನ್ನು ಸುಪ್ರೀಂ ಕೋರ್ಟ್‌ ಮುಂದೆ ಹಾಜರುಪಡಿಸುವಂತೆ ಮುಖ್ಯ ನ್ಯಾಯಮೂರ್ತಿ ಉಮರ್ ಅತಾ ಬಂಡಿಯಾಲ್, ನ್ಯಾಯಮೂರ್ತಿ ಮುಹಮ್ಮದ್ ಅಲಿ ಮಜರ್ ಮತ್ತು ನ್ಯಾಯಮೂರ್ತಿ ಅಥರ್ ಮಿನಲ್ಲಾ ಅವರ ತ್ರಿಸದಸ್ಯ ಪೀಠವು ಆದೇಶಿಸಿತು. ಸುಪ್ರೀಂ ಕೋರ್ಟ್‌ ಸೂಚನೆಯ ನಂತರ, ಬಿಗಿ ಭದ್ರತೆಯ ನಡುವೆ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಮುಖ್ಯಸ್ಥ ಇಮ್ರಾನ್ ಖಾನ್ ಅವರನ್ನು ಸುಪ್ರೀಂ ಕೋರ್ಟ್‌ ಮುಂದೆ ಹಾಜರುಪಡಿಸಲಾಯಿತು.

ಅಲ್-ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ತನ್ನ ಬಂಧನದ ವಿರುದ್ಧ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಅಧ್ಯಕ್ಷರ ಮನವಿಯನ್ನು ಗುರುವಾರ ಆಲಿಸಿದ ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಉಮರ್ ಅತಾ ಬಂಡಿಯಾಲ್ ಸೇರಿದಂತೆ ಮೂವರು ನ್ಯಾಯಮೂರ್ತಿಗಳ ತ್ರಿಸದಸ್ಯ ಪೀಠವು ಅವರ ಬಂಧನ ಕಾನೂನು ಬಾಹೀರ ಎಂದು ಹೇಳಿ ತಕ್ಷಣವೇ ಬಿಡುಗಡೆಗೆ ಆದೇಶಿಸಿತು.
ಮಂಗಳವಾರ ಇಸ್ಲಾಮಾಬಾದ್ ಹೈಕೋರ್ಟ್‌ನ ಕೊಠಡಿಗೆ ನುಗ್ಗಿದ ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋ (ಎನ್‌ಎಬಿ) ಅಧಿಕಾರಿಗಳ ಆದೇಶದ ಮೇರೆಗೆ ಅರೆಸೈನಿಕ ಪಡೆಗಳು ಖಾನ್‌ ಅವರನ್ನು ಹೈಕೋರ್ಟ್‌ ಆವರಣದಲ್ಲಿ ಬಂಧಿಸಿದ್ದವು. ಅಲ್-ಖಾದಿರ್ ಟ್ರಸ್ಟ್ ಲ್ಯಾಂಡ್ ಡೀಲ್ ಪ್ರಕರಣದಲ್ಲಿ 8 ದಿನಗಳ ಕಾಲ ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋ (NAB) ರಿಮಾಂಡ್‌ಗೆ ಕಳುಹಿಸಲಾಗಿತ್ತು.

ಪ್ರಮುಖ ಸುದ್ದಿ :-   ವೈಟ್ ಲಂಗ್ ಸಿಂಡ್ರೋಮ್ -ಜಾಗತಿಕವಾಗಿ ಹರಡುತ್ತಿದೆ ನಿಗೂಢ ಶ್ವಾಸಕೋಶದ ರೋಗ ; ಪ್ರಕರಣಗಳು ವಿಶ್ವದಾದ್ಯಂತ ವರದಿ

ಇಮ್ರಾನ್ ಖಾನ್ ಬಂಧನದ ನಂತರ ಕರಾಚಿ, ಪೇಶಾವರ್, ರಾವಲ್ಪಿಂಡಿ ಮತ್ತು ಲಾಹೋರ್ ಸೇರಿದಂತೆ ಪಾಕಿಸ್ತಾನದ ಹಲವಾರು ಪ್ರದೇಶಗಳು ಗುರುವಾರ ಸತತ ಮೂರನೇ ದಿನವೂ ಹಿಂಸಾಚಾರ ಮುಂದುವರಿದಿದೆ.
ಏನಿದು ಅಲ್-ಖಾದಿರ್ ಟ್ರಸ್ಟ್ ಪ್ರಕರಣ?: ರಾಷ್ಟ್ರೀಯ ಖಜಾನೆಗೆ 190 ಮಿಲಿಯನ್ ಪೌಂಡ್ ನಷ್ಟ ಉಂಟು ಮಾಡಿರುವ ಆಸ್ತಿ ಉದ್ಯಮಿಯೊಬ್ಬರನ್ನು ಒಳಗೊಂಡ ಪ್ರಕರಣದಲ್ಲಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿ ಅವರನ್ನು ಎನ್‌ಎಬಿ ತನಿಖೆ ನಡೆಸುತ್ತಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement