ತಿಹಾರ್ ಜೈಲಿನಲ್ಲಿ ಕುಸಿದು ಬಿದ್ದ ಎಎಪಿ ನಾಯಕ ಸತ್ಯೇಂದ್ರ ಜೈನ್‌; ಆಸ್ಪತ್ರೆಗೆ ದಾಖಲು

ನವದೆಹಲಿ: ಆಮ್‌ ಆದ್ಮಿ ಪಕ್ಷದ (ಎಎಪಿ) ನಾಯಕ ಹಾಗೂ ದೆಹಲಿಯ ಮಾಜಿ ಸಚಿವ ಸತ್ಯೇಂದ್ರ ಜೈನ್‌ ಅವರು ದೆಹಲಿಯ ತಿಹಾರ್‌ ಜೈಲಿನ ಸ್ನಾನಗೃಹದಲ್ಲಿ ಇಂದು, ಗುರುವಾರ (ಮೇ 25) ಕುಸಿದು ಬಿದ್ದ ಪರಿಣಾಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೂ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.
ಸತ್ಯೇಂದ್ರ ಜೈನ್‌ ಅವರು ಬೆಳಿಗ್ಗೆ ಜೈಲಿನ ಸ್ನಾನಗೃಹದಲ್ಲಿ ತಲೆ ತಿರುಗಿ ಬಿದ್ದಿದ್ದರು. ಕೂಡಲೇ ಸತ್ಯೇಂದ್ರ ಜೈನ್‌ ಅವರನ್ನು ದೀನ್‌ ದಯಾಳ್‌ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ನಂತರ ಅವರನ್ನು ಲೋಕ ನಾಯಕ ಜೈಪ್ರಕಾಶ್‌ ಆಸ್ಪತ್ರೆಗೆ ಒಯ್ಯಲಾಗಿದೆ ಎಂದು ಎಎಪಿ ಟ್ವೀಟ್‌ ಮೂಲಕ ತಿಳಿಸಿದೆ.

ಜೈನ್‌ ಅವರನ್ನು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿದೆ. .ವಿಚಾರಣಾಧೀನ ಕೈದಿಯಾಗಿರುವ ಸತ್ಯೇಂದ್ರ ಜೈನ್‌ ಅವರು ಬೆಳಿಗ್ಗೆ ಸುಮಾರು 6 ಗಂಟೆ ವೇಳೆ ಕೇಂದ್ರ ಕಾರಾಗೃಹದ ವೈದ್ಯಕೀಯ ತಪಾಸಣೆ ಕೊಠಡಿ ಸ್ನಾನಗೃಹದಲ್ಲಿ ಜಾರಿ ಬಿದ್ದಿದ್ದಾರೆ. ನಿಶ್ಯಕ್ತಿಯ ಕಾರಣದಿಂದ ಅವರನ್ನು ಕಾರಾಗೃಹದ ಆಸ್ಪತ್ರೆಯಲ್ಲಿ ಇರಿಸಿ ನಿಗಾ ಇಡಲಾಗಿತ್ತು ಎಂದು ಜೈಲಿನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜೈನ್‌ ಅವರಿಗೆ ಎಲ್ಲ ಅಗತ್ಯ ಪರೀಕ್ಷೆಗಳನ್ನು ಮಾಡಿಸಲಾಯಿತು. ಜೈನ್‌ ಅವರು ಈಗಾಗಲೇ ಬೆನ್ನುಮೂಳೆ ನೋವಿನಿಂದ ಬಳಲುತ್ತಿದ್ದರು. ಅವರಿಗೆ ಶಸ್ತ್ರಚಿಕಿತ್ಸೆ ನಿಗದಿಯಾಗಿತ್ತು. ಜೈನ್‌ ಅವರು ಜಾರಿ ಬಿದ್ದಿದ್ದರಿಂದ ಅವರಿಗೆ ತೀವ್ರ ಸ್ವರೂಪದಲ್ಲಿ ನೋವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ನನ್ನ ಬಳಿ ಹಣವಿಲ್ಲ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಜೈನ್‌ ಅವರು ಈ ಹಿಂದೆಯೂ ಸ್ನಾನಗೃಹದಲ್ಲಿ ಬಿದ್ದಿದ್ದರು. ಪರಿಣಾಮ ಅವರ ಬೆನ್ನಿನ ಮೂಳೆಗೆ ಗಂಭೀರವಾದ ಗಾಯವಾಗಿತ್ತು ಎಂದು ಎಎಪಿ ಹೇಳಿದೆ
ಸತ್ಯೇಂದ್ರ ಜೈನ್‌ ಅವರು ಸೋಮವಾರ ಅನಾರೋಗ್ಯದ ಕಾರಣ ದೆಹಲಿಯ ಸಫ್ಜರ್‌ಜಂಗ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement