ಕೋರಮಂಡಲ್ ಎಕ್ಸ್‌ಪ್ರೆಸ್-ಗೂಡ್ಸ್ ರೈಲಿನ ನಡುವೆ ಡಿಕ್ಕಿ: 179 ಮಂದಿಗೆ ಗಾಯ

ಬಾಲಸೋರ್: ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಎಕ್ಸ್‌ಪ್ರೆಸ್ ರೈಲು ಅಪಘಾತಕ್ಕೀಡಾಗಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಗೂಡ್ಸ್​ ರೈಲಿಗೆ 12841 ಯುಪಿ ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಶುಕ್ರವಾರ (ಜೂನ್​ 2) ಸಂಜೆ ಡಿಕ್ಕಿಯಾಗಿದೆ.
ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿನ ಎಂಟು ಬೋಗಿಗಳು ಹಳಿತಪ್ಪಿದ್ದು, ಕನಿಷ್ಠ 179 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸೂಪರ್‌ಫಾಸ್ಟ್ ರೈಲಿನ ಪಲ್ಟಿಯಾದ ಕೋಚ್‌ಗಳಲ್ಲಿ ಹೆಚ್ಚಿನವರು ಸಿಕ್ಕಿಹಾಕಿಕೊಂಡು ಎಕ್ಸ್‌ಪ್ರೆಸ್ ರೈಲಿನ ಹಲವಾರು ಪ್ರಯಾಣಿಕರು ಸಾವಿಗೀಡಾಗಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಬೋಗಿಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಪ್ರಯಾಣಿಕರನ್ನು ರಕ್ಷಿಸಲು ಮತ್ತು ಶೋಧ ಕಾರ್ಯಾಚರಣೆಗಾಗಿ ರಕ್ಷಣಾ ತಂಡಗಳು ಸ್ಥಳಕ್ಕೆ ತೆರಳಿವೆ. ಸ್ಥಳೀಯರು ಕೂಡ ರಕ್ಷಣಾ ಕಾರ್ಯಾಚರಣೆಗೆ ಸಾಥ್ ನೀಡುತ್ತಿದ್ದಾರೆ.

ಪಶ್ಚಿಮ ಬಂಗಾಳದ ಶಾಲಿಮಾರ್ ನಿಲ್ದಾಣದಿಂದ ಹೊರಡುವ ಈ ಎಕ್ಸ್​ಪ್ರೆಸ್​ ರೈಲು ಚೆನ್ನೈನ ಪುರಟ್ಚಿ ತಲೈವರ್ ಡಾ. ಎಂ.ಜಿ. ರಾಮಚಂದ್ರನ್ ಸೆಂಟ್ರಲ್ ರೈಲು ನಿಲ್ದಾಣವನ್ನು ತಲುಪಬೇಕಾಗಿತ್ತು. ರೈಲು ಸಂಜೆ 6:30 ಕ್ಕೆ ಬಾಲಸೋರ್ ನಿಲ್ದಾಣವನ್ನು ತಲುಪಿತ್ತು. ನಾಳೆ ( ಜೂನ್ 3) ಸಂಜೆ 4:50ಕ್ಕೆ ಚೆನ್ನೈ ತಲುಪಬೇಕಿತ್ತು. ಆದರೆ ಬಾಲಸೋರ್‌ನಿಂದ ಸುಮಾರು 40 ಕಿಲೋಮೀಟರ್ ದೂರದ ಬಹನಾಗಾ ರೈಲು ನಿಲ್ದಾಣದ ಬಳಿ ಅಪಘಾತ ಸಂಭವಿಸಿದೆ.
ಒಡಿಶಾ ಮುಖ್ಯಮಂತ್ರಿ ನವೀನ ಪಟ್ನಾಯಕ್​ ಅವರು ರಾಜ್ಯ ಸಚಿವೆ ಪ್ರಮೀಳಾ ಮಲ್ಲಿಕ್ ಮತ್ತು ವಿಶೇಷ ಪರಿಹಾರ ಆಯುಕ್ತರಿಗೆ (ಎಸ್‌ಆರ್‌ಸಿ) ತಕ್ಷಣ ಅಪಘಾತ ಸ್ಥಳಕ್ಕೆ ತಲುಪುವಂತೆ ಸೂಚಿಸಿದ್ದಾರೆ. ಸಚಿವರು ಮತ್ತು ಎಸ್‌ಆರ್‌ಸಿ ಘಟನಾ ಸ್ಥಳಕ್ಕೆ ಹೋಗುತ್ತಿದ್ದಾರೆ. ಕೋರಮಂಡಲ್ ಎಕ್ಸ್‌ಪ್ರೆಸ್ ಹಳಿತಪ್ಪಿದ ಬಗ್ಗೆ ಪ್ರಶ್ನೆಗಳಿದ್ದರೆ ತಾತ್ಕಾಲಿಕ ಸಹಾಯವಾಣಿ 044- 2535 4771 ಕರೆ ಮಾಡಬಹುದು.

ಪ್ರಮುಖ ಸುದ್ದಿ :-   ಸಂಗಾತಿಗಳಲ್ಲಿ ಒಬ್ಬರು ವಿವಾಹಿತರಾಗಿದ್ದರೆ ಲಿವ್-ಇನ್ ಸಂಬಂಧ ಮಾನ್ಯವಾಗುವುದಿಲ್ಲ : ಮದ್ರಾಸ್ ಹೈಕೋರ್ಟ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement