ಕಾಂಗ್ರೆಸ್‌ಗೆ ಹೊಸ ತಲೆನೋವು..? : ಸಚಿನ್‌ ಪೈಲಟ್‌ ಜೂನ್‌ 11ಕ್ಕೆ ಹೊಸ ಪಕ್ಷ ಘೋಷಿಸುವ ಸಾಧ್ಯತೆ-ವರದಿ

ನವದೆಹಲಿ : ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು ತೀವ್ರಗೊಂಡಿದ್ದು, ಕಾಂಗ್ರೆಸ್‌ ಪಕ್ಷದ ಭಿನ್ನಮತೀಯ ನಾಯಕನಾಗಿ ಗುರುತಿಸಿಕೊಂಡಿರುವ ಮಾಜಿ ಉಪ ಮುಖ್ಯಮಂತ್ರಿ ಸಚಿನ್‌ ಪೈಲಟ್‌ ಅವರು ಹೊಸ ಪಕ್ಷ ಸ್ಥಾಪನೆಗೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ಸಚಿನ್‌ ಪೈಲಟ್‌ ಅವರು ತಮ್ಮ ತಂದೆ ರಾಜೇಶ್ ಪೈಲಟ್ ಅವರ ಪುಣ್ಯಸ್ಮರಣೆ ದಿನವಾದ ಜೂನ್ 11ರಂದು ಹೊಸ ಪಕ್ಷ ‘ಪ್ರಗತಿಶೀಲ ಕಾಂಗ್ರೆಸ್’ ಘೋಷಿಸುವ ಸಾಧ್ಯತೆ ಇದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಸಚಿನ್ ಪೈಲಟ್ ಅವರ ಹೊಸ ಪಕ್ಷ ಸ್ಥಾಪನೆಗೆ ಚುನಾವಣಾ ನೀತಿ ತಜ್ಞ ಪ್ರಶಾಂತ ಕಿಶೋರ ಅವರ ರಾಜಕೀಯ ಸಲಹಾ ಸಂಸ್ಥೆ ಇಂಡಿಯನ್ ಪೊಲಿಟಿಕಲ್ ಆ್ಯಕ್ಷನ್ ಕಮಿಟಿ (ಐಪಿಎಸಿ) ನೆರವು ಪಡೆಯಲಾಗುತ್ತಿದೆ ಎಂದು ವರದಿ ತಿಳಿಸಿದೆ. ಅಲ್ಲದೆ, ರಾಜಸ್ಥಾನದಲ್ಲಿ ತೃತೀಯ ರಂಗ ರಚನೆ ಸಲುವಾಗಿ ಹನುಮಾನ್ ಬೆನಿವಾಲ್ ಅವರ ರಾಷ್ಟ್ರೀಯ ಲೋಕತಾಂತ್ರಿಕ್ ಪಾರ್ಟಿ (ಆರ್‌ಎಲ್‌ಪಿ) ಮತ್ತು ಅಮ್ ಆದ್ಮಿ ಪಕ್ಷದ (ಎಎಪಿ) ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ.
ಸಚಿನ್‌ ಪೈಲಟ್ ಅವರು ಕಾಂಗ್ರೆಸ್‌ನಿಂದ ಹೊರಗೆ ಬಂದರೆ ಅವರ ಜೊತೆ ಎಷ್ಟು ಶಾಸಕರು ಹೆಜ್ಜೆ ಇಡಲಿದ್ದಾರೆ, ಇದರಿಂದ ರಾಜ್ಯ ಸರ್ಕಾರಕ್ಕೆ ತೊಂದರೆಯಾಗಲಿದೆಯೇ ಎಂಬ ಲೆಕ್ಕಾಚಾರವೂ ನಡೆಯುತ್ತಿದೆ.
ಸಚಿನ್ ಪೈಲಟ್ ಅವರು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರೊಂದಿಗೆ ಅಧಿಕಾರ ಹಂಚಿಕೆ, ಇತರ ವಿಷಯಗಳ ಸಂಬಂಧ ವಿಚಾರವಾಗಿ ಹಲವು ವರ್ಷಗಳಿಂದ ಭಿನ್ನಾಭಿಪ್ರಾಯ ಹೊಂದಿದ್ದಾರೆ.ಭ್ರಷ್ಟಾಚಾರ ಮತ್ತು ಸರ್ಕಾರಿ ನೇಮಕಾತಿ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಖಂಡಿಸಿ, ಏಪ್ರಿಲ್ 11 ರಂದು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದ್ದ ಪೈಲಟ್ ಅವರು ಮೇ 11 ರಂದು ಐದು ದಿನಗಳ ಪಾದಯಾತ್ರೆ ನಡೆಸಿದ್ದರು. ಈ ಹಿನ್ನೆಲೆ ಜೂನ್ 11ರಂದು ಹೊಸ ಪಕ್ಷ ಘೋಷಿಸಲಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.

ಪ್ರಮುಖ ಸುದ್ದಿ :-   ದೆಹಲಿ ಮದ್ಯ ನೀತಿ ಪ್ರಕರಣ : ಅರವಿಂದ ಕೇಜ್ರಿವಾಲಗೆ ದೊಡ್ಡ ರಿಲೀಫ್ ನೀಡಿದ ಸುಪ್ರೀಂ ಕೋರ್ಟ್

ಪೈಲಟ್ ಅವರು ಬಿಜೆಪಿಯ ವಸುಂಧರಾ ರಾಜೆ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಮೇಲೆ ಕ್ರಮ ಕೈಗೊಳ್ಳಲು ತಮ್ಮದೇ ಸರ್ಕಾರಕ್ಕೆ ಅಲ್ಟಿಮೇಟಮ್ ನೀಡಿದ್ದಾರೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ತಮ್ಮ ಆಂತರಿಕ ಪ್ರತಿಸ್ಪರ್ಧಿ, ಬಿಜೆಪಿ ನಾಯಕರೊಂದಿಗಿನ ಒಪ್ಪಂದದ ಕಾರಣ ವಸುಂಧರಾ ರಾಜೇ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್ ನಾಯಕ ಪೈಲಟ್‌ ಆರೋಪಿಸಿದ್ದಾರೆ, ಇದನ್ನು ಬಿಜೆಪಿ ಬಲವಾಗಿ ತಳ್ಳಿಹಾಕಿದೆ.
ಅವರ ಮುಂದಿನ ನಡೆಯ ಬಗ್ಗೆ ಊಹಾಪೋಹಗಳ ನಡುವೆ, ಪಕ್ಷದ ನಾಯಕತ್ವದಿಂದ ನಿರ್ಣಾಯಕ ಪ್ರತಿಕ್ರಿಯೆಗಾಗಿ ಅವರು ಕಾಯುತ್ತಿದ್ದಾರೆ ಎಂದು ಅವರ ನಿಕಟ ಮೂಲಗಳು ತಿಳಿಸಿವೆ.
ಕಳೆದ ತಿಂಗಳು ಕಾಂಗ್ರೆಸ್ ನಾಯಕತ್ವ ಮತ್ತು ರಾಜಸ್ಥಾನದ ಪ್ರತಿಸ್ಪರ್ಧಿಗಳಾದ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವಿನ ನಾಲ್ಕು ಗಂಟೆಗಳ ಸಭೆಯು ಪರಿಹಾರ ಕಂಡುಕೊಳ್ಳಲು ವಿಫಲವಾಗಿದೆ.
ನಾಯಕರು ಒಗ್ಗಟ್ಟಿನ ಪ್ರದರ್ಶನ ನೀಡಿ ರಾಜಸ್ಥಾನ ಚುನಾವಣೆಯಲ್ಲಿ ‘ಒಗ್ಗಟ್ಟಿನ ಹೋರಾಟ’ದ ಭರವಸೆ ನೀಡಿದ್ದರೂ ಕಹಿ ಮಾತ್ರ ಉಳಿದುಕೊಂಡಿರುವುದು ಸ್ಪಷ್ಟವಾಗಿದೆ. ಉಭಯ ನಾಯಕರ ನಡುವಿನ ಸಂಬಂಧವು ಹಿಂತಿರುಗದ ಹಂತವನ್ನು ತಲುಪಿರಬಹುದು ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತವೆ.

ಪ್ರಮುಖ ಸುದ್ದಿ :-   ಕೊಲೆ ಯತ್ನ: ಆಂಧ್ರ ಮಾಜಿ ಸಿಎಂ ಜಗನ್ಮೋಹನ ರೆಡ್ಡಿ, ಇಬ್ಬರು ಐಪಿಎಸ್‌ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು

2018 ರಲ್ಲಿ ರಾಜಸ್ಥಾನ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿದ ನಂತರ ಭಿನ್ನಮತ ಪ್ರಾರಂಭವಾಯಿತು ಮತ್ತು ಇಬ್ಬರು ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ನಡೆಸಿದರು. ಪಕ್ಷವು ಅಶೋಕ್ ಗೆಹ್ಲೋಟ್ ಅವರನ್ನು ಆಯ್ಕೆ ಮಾಡಿತು ಮತ್ತು ಸಚಿನ್ ಪೈಲಟ್ ಅವರ ಉಪಮುಖ್ಯಮಂತ್ರಿ ಹುದ್ದೆ ನೀಡಲಾಯಿತು. ಎರಡು ವರ್ಷಗಳ ನಂತರ, ಪೈಲಟ್ ಅವರು ಮುಖ್ಯಮಂತ್ರಿ ಅಶೋಕ ಗೆಲ್ಲೋಟ್‌ ವಿರುದ್ಧ ಬಂಡಾಯ ಎದ್ದರು, ಒಪ್ಪಂದದಂತೆ ಅಧಿಕಾರದಲ್ಲಿ “ನ್ಯಾಯಯುತವಾದ ಪಾಲು” ನೀಡುವಂತೆ ಒತ್ತಾಯಿಸಿದರು.
100ಕ್ಕೂ ಹೆಚ್ಚು ಶಾಸಕರು ಗೆಹ್ಲೋಟ್ ಅವರೊಂದಿಗೆ ಉಳಿಯಲು ನಿರ್ಧರಿಸಿದ ನಂತರ ಬಂಡಾಯವು ಭುಗಿಲೆದ್ದಿತು. ಯಾವುದೇ ಹಂತದಲ್ಲೂ ಪೈಲಟ್ ತನ್ನ ಬೆಂಬಲಕ್ಕೆ 20 ಕ್ಕೂ ಹೆಚ್ಚು ಶಾಸಕರನ್ನು ತರಲು ಸಾಧ್ಯವಾಗಲಿಲ್ಲ, ಆದರೂ ರಾಹುಲ್‌ ಗಾಂಧಿ ಪರಿಹಾರದ ಭರವಸೆ ನೀಡಿದ ನಂತರ ಪೈಲಟ್ ತಮ್ಮ ಬಂಡಾಯ ಕೊನೆಗೊಳಿಸಿದರು.
ಕಳೆದ ವರ್ಷ, ಗೆಹ್ಲೋಟ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡುವ ಕಾಂಗ್ರೆಸ್‌ನ ಕ್ರಮವನ್ನು ವಿರೋಧಿಸಿ 72 ಶಾಸಕರು ರಾಜೀನಾಮೆ ನೀಡಿದರು. ಗೆಹ್ಲೋಟ್, ತಮ್ಮ ಮಾಜಿ ಡಿಸಿಎಂ ಮೇಲೆ ಆಗಾಗ್ಗೆ ದಾಳಿ ಮಾಡುತ್ತಲೇ ಬಂದಿದ್ದಾರೆ. ಮುಖ್ಯಮಂತ್ರಿಗಳು ತಮ್ಮ ಕಿರಿಯ ಪ್ರತಿಸ್ಪರ್ಧಿಯನ್ನು ಗದ್ದರ್ (ದೇಶದ್ರೋಹಿ), ನಿಕಮ್ಮ (ನಿಷ್ಪ್ರಯೋಜಕ) ಮತ್ತು “ಕೊರೊನಾವೈರಸ್” ಎಂದು ಉಲ್ಲೇಖಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement