ವಿಶ್ವ ಹಿಂದು ಪರಿಷತ್‌ ಪ್ರಮುಖ ಕೇಶವ ಹೆಗಡೆ ನಿಧನ

ಶಿರಸಿ: ವಿಶ್ವ ಹಿಂದು ಪರಿಷತ್ತಿನ ಹಿರಿಯ ಮುಖಂಡ, ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ (63) ಬುಧವಾರ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು.
ಶಂಕರಪುರದಲ್ಲಿರುವ ವಿಶ್ವ ಹಿಂದು ಪರಿಷತ್ ಕಾರ್ಯಾಲಯದಲ್ಲಿದ್ದ ಕೇಶವ ಹೆಗಡೆ ಅವರಿಗೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಹೃದಯಾಘಾತವಾಗಿತ್ತು. ಅವರನ್ನು ತಕ್ಷಣವೇ ಸಮೀಪದ ರಂಗದೊರೈ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆ ವೇಳೆಗಾಗಲೇ ಅವರು ಕೊನೆಯುಸಿರೆಳೆದಿದ್ದರು.
ಮೂಲತಃ ಶಿರಸಿಯ ತಟ್ಟಿಸರ ಮಣ್ಣಿಮನೆಯ ಕೇಶವ ಹೆಗಡೆ ಅವರು ವಿದ್ಯಾರ್ಥಿಯಾಗಿದ್ದಾಗಿನಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾಗಿದ್ದವರು‌. ನಂತರ ಪೂರ್ಣಾವಧಿ ಪ್ರಚಾರಕರಾಗಿ ತೊಡಗಿಸಿಕೊಂಡರು. ನಂತರ ಅವರನ್ನು ವಿಶ್ವ ಹಿಂದೂ ಪರಿಷತ್‌ಗೆ ನಿಯೋಜನೆ ಮಾಡಲಾಗಿತ್ತು. ರಾಮಮಂದಿರ ಹೋರಾಟ ಸೇರಿ ವಿಶ್ವ ಹಿಂದು ಪರಿಷತ್‌ನ ಎಲ್ಲ ಹೋರಾಟ, ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಪ್ರಖರ ಮಾತು ಹಾಗೂ ನೇರ ನುಡಿಯಿಂದ ಸಂಘಟನಾ ವಲಯದಲ್ಲಿ ಹೆಸರು ಮಾಡಿದ್ದರು.
ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕೇಶವ ಶಿಲ್ಪ ಸಭಾಂಗಣದಲ್ಲಿ ಬುಧವಾರ ರಾತ್ರಿ ತನಕ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಸಾರ್ವಜನಿಕರು ಅಂತಿಮ ದರ್ಶನ ಪಡೆದ ಬಳಿಕ ಅವರ ಊರಿಗೆ ಪಾರ್ಥೀವ ಶರೀರವನ್ನು ಕರತರಲಾಗುತ್ತಿದೆ.
ಮೃತರು ಓರ್ವ ಸಹೋದರ, ಐವರು ಸಹೋದರಿಯರು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.
ನೆಮ್ಮದಿಯಲ್ಲಿ‌ ಅಂತ್ಯಕ್ರಿಯೆ
ಕೇಶವ ಹೆಗಡೆ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ನಗರದ ಸಾಮ್ರಾಟ ಎದುರಿನ‌ ನೆಮ್ಮದಿಯ ಸದ್ಗತಿಯಲ್ಲಿ ಅವಕಾಶ ಮಾಡಲಾಗಿದೆ.
ಗುರುವಾರ ಬೆಳಿಗ್ಗೆ ೬ರಿಂದ‌ 11ರ ತನಕ ಸಾರ್ವಜನಿಕ ದರ್ಶನ, ಬಳಿಕ ಶ್ರದ್ಧಾಂಜಲಿ ಸಭೆ, ನಂತರ ಅಂತ್ಯಕ್ರಿಯೆ ನಡೆಯಲಿದೆ.

ಪ್ರಮುಖ ಸುದ್ದಿ :-   ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ , ಭೂ ಕುಸಿತದ ಸಾಧ್ಯತೆ ; ಹವಾಮಾನ ಇಲಾಖೆ ಮುನ್ನೆಚ್ಚರಿಕೆ

ಕೇಶವ ಹೆಗಡೆಯವರ ಸಮರ್ಪಣಾ ಭಾವ ಪ್ರೇರಣೆಯಾಗಲಿ
ವಿಶ್ವ ಹಿಂದೂ ಪರಿಷತ್ ಪ್ರಮುಖರಾಗಿದ್ದ ಕೇಶವ ಹೆಗಡೆಯವರು ನಮಗೆ ತುಂಬಾ ಆತ್ಮೀಯರಾಗಿದ್ದರು. ಅವರ ಅಗಲಿಕೆಗೆ ದುಃಖವಾಗಿದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶರಾದ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಶೋಕ ವ್ಯಕ್ತಪಡಿಸಿದ್ದಾರೆ.
ತಮ್ಮ ಜೀವನವನ್ನೇ ಹಿಂದೂ‌ ಸಂಘಟನೆಗಾಗಿ ಸಮರ್ಪಿಸಿಕೊಂಡು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿದ ದೃಢ ಮನಸ್ಸಿನ ಕಾರ್ಯಕರ್ತರಾಗಿದ್ದ ಕೇಶವ ಹೆಗಡೆಯವರು ನಮಗೆ ಹಾಗೂ ವಿಶ್ವ ಹಿಂದೂ ಪರಿಷತ್ ಹಾಗೂ ಸಂಘ ಪರಿವಾರದಲ್ಲಿ ಉನ್ನತ ಮಟ್ಟದ‌‌ ಸಂಪರ್ಕಕ್ಕೆ ಕಾರಣೀಕರ್ತರಾಗಿದ್ದರು. ಸಮರ್ಪಣಾ ಭಾವದ ಕೆಲಸಗಾರ ಅವರು. ಅವರು ಸದ್ಗತಿ ಹೊಂದಲಿ. ಅವರ ಸಮರ್ಪಣಾ ಭಾವ ನಮಗೆಲ್ಲ ಪ್ರೇರಣೆ ಆಗಲಿ ಎಂದು ಶೋಕ‌ ಸಂದೇಶದಲ್ಲಿ ತಿಳಿಸಿದ್ದಾರೆ.

3.8 / 5. 4

ಶೇರ್ ಮಾಡಿ :

  1. ಗಿರಿಜಾ

    ಕೇಶವ ಹೆಗಡೆ ಅವರು ಮತ್ತೊಮ್ಮೆ ಹುಟ್ಟಿ ಬರಲಿ

ನಿಮ್ಮ ಕಾಮೆಂಟ್ ಬರೆಯಿರಿ

advertisement