ಜಿಂಬಾಬ್ವೆಯ ಕ್ರಿಕೆಟ್ ತಂಡದ ಮಾಜಿ ನಾಯಕ ಹೀತ್ ಸ್ಟ್ರೀಕ್ ( 49 ವರ್ಷ) ಭಾನುವಾರ, ಸೆಪ್ಟೆಂಬರ್ 3 ರಂದು ನಿಧನರಾಗಿದ್ದಾರೆ. ಅವರು ಕೊಲೊನ್ ಮತ್ತು ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಈ ಸುದ್ದಿಯನ್ನು ಹೀತ್ ಸ್ಟ್ರೀಕ್ ಪತ್ನಿ ನಡಿನ್ ಸ್ಟ್ರೀಕ್ ತಮ್ಮ ಫೇಸ್‌ಬುಕ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ, ಸ್ಟ್ರೀಕ್ ನಿಧನರಾದರು ಎಂಬ ವದಂತಿಗಳು ಹಬ್ಬಿದ್ದವು. ಆದರೆ ನಂತರ, ಜಿಂಬಾಬ್ವೆಯ ಮಾಜಿ ಬೌಲರ್ ಹೆನ್ರಿ ಒಲೊಂಗಾ ಅವರು ದಿಗ್ಗಜ ಕ್ರಿಕೆಟಿಗ ಜೀವಂತವಾಗಿದ್ದಾರೆ ಎಂದು ಖಚಿತಪಡಿಸಿದ್ದರು.
ಮೇ ತಿಂಗಳಲ್ಲಿ, ದಕ್ಷಿಣ ಆಫ್ರಿಕಾದ ಅತ್ಯುತ್ತಮ ಆಂಕೊಲಾಜಿಸ್ಟ್‌ಗಳಲ್ಲಿ ಒಬ್ಬರ ಮೇಲ್ವಿಚಾರಣೆಯಲ್ಲಿ ಸ್ಟ್ರೀಕ್ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.
ಸ್ಟ್ರೀಕ್ ಜಿಂಬಾಬ್ವೆ ಕಂಡ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರು. 65 ಟೆಸ್ಟ್‌ಗಳು ಮತ್ತು 189 ಏಕದಿನದ ಪಂದ್ಯಗಳಲ್ಲಿ, ಸ್ಟ್ರೀಕ್ 455 ವಿಕೆಟ್‌ಗಳನ್ನು ಪಡೆದಿದ್ದಾರೆ. 23 ಸಲ ನಾಲ್ಕು-ವಿಕೆಟ್‌ಗಳ ಪಡೆದಿದ್ದರು ಮತ್ತು ಎಂಟು ಸಲ ಐದು-ವಿಕೆಟ್‌ಗಳ ಪಡೆದು ಸಾಧನೆ ಮಾಡಿದ್ದಾರೆ. ಸ್ಟ್ರೀಕ್ ಬ್ಯಾಟಿಂಗ್‌ನಲ್ಲಿಯೂ ಟೆಸ್ಟ್ ಮತ್ತು ODIಗಳಲ್ಲಿ ಕ್ರಮವಾಗಿ 1990 ಮತ್ತು 2943 ರನ್ ಗಳಿಸಿದರು, ಅವರ ಹೆಸರಿನಲ್ಲಿ ಒಂದು ಶತಕ ಮತ್ತು 24 ಅರ್ಧ ಶತಕಗಳಿವೆ.
ಸ್ಟ್ರೀಕ್ ಅವರು 1993 ರಲ್ಲಿ ಅಂತಾರಾಷ್ಟರೀಯ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದರು ಮತ್ತು 2005 ರವರೆಗೆ ಆಡಿದರು. ಜಿಂಬಾಬ್ವೆಗಾಗಿ ಅವರ ಕೊನೆಯ ಮತ್ತು ಅಂತಿಮ ಅಂತಾರಾಷ್ಟ್ರೀಯ ಪ್ರದರ್ಶನವು ಸೆಪ್ಟೆಂಬರ್ 2005 ರಲ್ಲಿ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಭಾರತದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ನಡೆಯಿತು. ಸ್ಟ್ರೀಕ್, ಈಯವರೆಗೆ, ಟೆಸ್ಟ್‌ಗಳಲ್ಲಿ 1000 ರನ್ ಮತ್ತು 100 ವಿಕೆಟ್‌ಗಳು ಮತ್ತು ODIಗಳಲ್ಲಿ 2000 ರನ್ ಮತ್ತು 200 ವಿಕೆಟ್‌ಗಳನ್ನು ಪಡೆದು ಜಿಂಬಾಬ್ವೆಯ ಏಕೈಕ ಆಟಗಾರನಾಗಿ ಉಳಿದಿದ್ದಾರೆ. ಅವರ ಹಲವಾರು ದಾಖಲೆಗಳು ಜಿಂಬಾಬ್ವೆಯಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಕ್ರಿಕೆಟಿಗರಿಗೆ ಇನ್ನೂ ಸ್ಫೂರ್ತಿ ನೀಡುತ್ತವೆ.
ನಿಮ್ಮ ಕಾಮೆಂಟ್ ಬರೆಯಿರಿ