ಬೆಂಗಳೂರು : ಮತದಾನಕ್ಕೆ ವಯೋಮಿತಿ ನಿಗದಿ ಮಾಡಿರುವ ರೀತಿಯಲ್ಲಿಯೇ ಸಾಮಾಜಿಕ ಜಾಲತಾಣ ಬಳಕೆ ಮಾಡಲು ವಯೋಮಿತಿ ನಿಗದಿ ಮಾಡಲು ಚಿಂತನೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಮೌಖಿಕವಾಗಿ ಸಲಹೆ ನೀಡಿದೆ.
ವೈಯಕ್ತಿಕ ಖಾತೆಗಳನ್ನು ನಿರ್ಬಂಧಿಸಿ ಕೇಂದ್ರ ಸರ್ಕಾರವು 2021ರ ಫೆಬ್ರವರಿ ಮತ್ತು 2022ರ ಅವಧಿಯಲ್ಲಿ ಮಾಡಿದ್ದ ಆದೇಶಗಳನ್ನು ಪ್ರಶ್ನಿಸಿದ್ದ ಅರ್ಜಿ ವಜಾ ಮಾಡಿರುವ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಎಕ್ಸ್ ಕಾರ್ಪ್ (ಟ್ವಿಟರ್) ಸಲ್ಲಿಸಿರುವ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಜಿ ನರೇಂದರ್ ಮತ್ತು ವಿಜಯಕುಮಾರ್ ಎ. ಪಾಟೀಲ ಅವರ ನೇತೃತ್ವದ ವಿಭಾಗೀಯ ಪೀಠವು ಮಂಗಳವಾರ ವಿಚಾರಣೆ ನಡೆಸಿತು.
ಸಾಮಾಜಿಕ ಮಾಧ್ಯಮ ನಿಷೇಧಿಸುವುದು ಉತ್ತಮ. ಇದರಿಂದ ಸಾಕಷ್ಟು ಒಳ್ಳೆಯದಾಗುತ್ತದೆ. ಈಗ ಶಾಲೆಗೆ ಹೋಗುವ ಮಕ್ಕಳೂ ಅದಕ್ಕೆ ದಾಸರಾಗಿದ್ದಾರೆ. ಕನಿಷ್ಠ ಪಕ್ಷ ಕೇಂದ್ರ ಸರ್ಕಾರ ಸಾಮಾಜಿಕ ಮಾಧ್ಯಮ ಬಳಕೆಗೆ ವಯೋಮಿತಿ ನಿಗದಿಪಡಿಸಬೇಕು ಎಂದು ಪೀಠವು ಮೌಖಿಕವಾಗಿ ಹೇಳಿತು ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ವರದಿ ಪ್ರಕಾರ, ಕೇಂದ್ರ ಸರ್ಕಾರ ಪ್ರತಿನಿಧಿಸಿದ್ದ ವಕೀಲ ಎಂ.ಎನ್. ಕುಮಾರ ಅವರು “ಕೆಲವು ಆನ್‌ಲೈನ್ ಗೇಮ್ ಆಡಲು ಕಾನೂನಿನ ಪ್ರಕಾರ ಈಗ ಆಧಾರ್ ಮತ್ತು ಇತರೆ ದಾಖಲೆಗಳನ್ನು ಸಲ್ಲಿಸಬೇಕು” ಎಂದರು.
ಆಗ ಪೀಠವು “ಹಾಗಾದರೆ ಆ ಕ್ರಮಗಳನ್ನು ಸಾಮಾಜಿಕ ಮಾಧ್ಯಮ ಬಳಕೆ ಮಾಡುವವರಿಗೆ ಏಕೆ ವಿಸ್ತರಿಸಿಲ್ಲ. ಈಗ ಎಲ್ಲದಕ್ಕೂ ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ನಿಮ್ಮ ಕಕ್ಷಿದಾರರು (ಎಕ್ಸ್ ಕಾರ್ಪ್) ಇದಕ್ಕೆ ಒಪ್ಪದಿರಬಹುದು” ಎಂದು ಹೇಳಿತು..
ಗೌಪ್ಯತೆ ಕಾಪಾಡುವುದರ ಜೊತೆಗೆ ಪೋಸ್ಟ್ ಅಥವಾ ಖಾತೆ ನಿರ್ಬಂಧಿಸಬೇಕು ಎಂದು ಕೇಂದ್ರ ಸರ್ಕಾರ ಆದೇಶಿಸಿದರೆ ಬಳಕೆದಾರರು ಮಧ್ಯಸ್ಥಿಕೆ ಸಂಸ್ಥೆ ಎಕ್ಸ್ ಕಾರ್ಪ್‌ಗೆ ದಾವೆಯ ಬೆದರಿಕೆ ಹಾಕುವುದರಿಂದ ತಪ್ಪಿಸಲು ಸಹ ನಿಯಮಗಳಲ್ಲಿ ಸೂಕ್ತ ಮಾರ್ಪಾಟು ಮಾಡಬೇಕು ಎಂಬ ಇಂಗಿತವನ್ನು ನ್ಯಾಯಾಲಯ ವ್ಯಕ್ತಪಡಿಸಿತು.
ಇದಕ್ಕೂ ಮುನ್ನ ಪೀಠವು “ಎಕ್ಸ್ ಕಾರ್ಪ್ ಬಳಕೆದಾರರಿಗೆ ಯಾವುದೇ ಕಾರಣ ನೀಡದೇ ಖಾತೆ ನಿರ್ಬಂಧಿಸಿದರೆ ಏನಾಗಲಿದೆ. ವಿಚಾರ ಸಾರ್ವಜನಿಕವಾಗಿದ್ದರೆ ಅದು ಜನರಿಗೆ ತಿಳಿದೇ ತಿಳಿಯುತ್ತದೆ. ಇದನ್ನು ಯಾರಾದರೂ ಪ್ರಶ್ನಿಸಿ, ಎಕ್ಸ್ ಕಾರ್ಪ್ ವಿರುದ್ಧ ಮಾನಹಾನಿ ದಾವೆ ಹೂಡಿದರೆ ಅವರಿಗೆ ಪರಿಹಾರವೇನು? ಇದಕ್ಕಾಗಿ ನಿಯಮದಲ್ಲಿ ಕೊಂಚ ಬದಲಾವಣೆ ಮಾಡಬೇಕಿದೆ. ಎಕ್ಸ್ ಕಾರ್ಪ್‌ಗೆ ಇಂತಹ ಸನ್ನಿವೇಶದಲ್ಲಿ ರಕ್ಷಣೆ ನೀಡಬೇಕು. ನಿಮ್ಮ ಅಣತಿಗೆ ಅನುಗುಣವಾಗಿ ಎಕ್ಸ್ ಕಾರ್ಪ್ ಖಾತೆ ನಿರ್ಬಂಧವನ್ನು ಮಾಡುತ್ತಿದೆ. ಹೀಗಿರುವಾಗ ನೀವು (ಕೇಂದ್ರ ಸರ್ಕಾರ) ಅವರ (ಎಕ್ಸ್ ಕಾರ್ಪ್) ಕೈಬಿಟ್ಟರೆ?” ಎಂದು ಪೀಠ ಪ್ರಶ್ನಿಸಿತು.
ಇದೇ ವೇಳೆ ಪೀಠವು ಯಾವ ಪೋಸ್ಟ್ ತೆಗೆದು ಹಾಕಬೇಕು, ಅಕೌಂಟ್‌ಅನ್ನು ನಿರ್ಬಂಧಿಸಬೇಕು ಎನ್ನುವುದನ್ನು ನಿರ್ಧರಿಸುವ ಸ್ಥಾನದಲ್ಲಿ ಎಕ್ಸ್ ಕಾರ್ಪ್‌ಅನ್ನು ಕೂಡ್ರಿಸಲು ಸಾಧ್ಯವಿಲ್ಲ ಎಂದಿತು. ಆಕ್ಷೇಪಾರ್ಹವಾದ ವಿಷಯವು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ಗಳಾದ 69ಎ (1) ಮತ್ತು (2) ಉಲ್ಲಂಘಿಸುತ್ತವೆಯೇ ಎಂಬುದನ್ನು ಪರಿಶೀಲಿಸಬೇಕಿದೆ. ಇದನ್ನು ಉಲ್ಲಂಘಿಸುವುದು ಕಂಡುಬಂದರೆ ಎಕ್ಸ್ ಕಾರ್ಪ್ ನಿರ್ಬಂಧ ಆದೇಶಗಳನ್ನು ಪಾಲಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿತು.
ಎಕ್ಸ್ ಕಾರ್ಪ್ ಪ್ರತಿನಿಧಿಸಿದ್ದ ವಕೀಲರು “ಈ ಹಿಂದೆ ಪ್ರಶ್ನಿಸಿದ್ದ ಎಲ್ಲಾ ನಿರ್ಬಂಧ ಆದೇಶಗಳನ್ನು ಪಾಲಿಸಲಾಗಿದೆ. ಸಕಾರಣವಿಲ್ಲದೇ 1,000 ಟ್ವೀಟ್‌ಗಳನ್ನು ತೆಗೆಯುವಂತೆ ಹೇಳಲಾಗಿದೆ” ಎಂದರು. ಆಗ ಪೀಠವು “ಕೇಂದ್ರ ಸರ್ಕಾರವು ತಾನು ನಿರ್ಬಂಧ ಆದೇಶ ಮಾಡುವಾಗ ಅದಕ್ಕೆ ಸಮರ್ಥನೆ ನೀಡಬೇಕು. ಇಲ್ಲವಾದಲ್ಲಿ ಸಾಮಾಜಿಕ ಮಧ್ಯಸ್ಥಿಕೆ ಮಾಧ್ಯಮವನ್ನು ಅದರ ಬಳಕೆದಾರರು ನ್ಯಾಯಾಲಯಕ್ಕೆ ಎಳೆಯಬಹುದು” ಎಂದು ಮೌಖಿಕವಾಗಿ ಹೇಳಿತು.
ನಿಮ್ಮ ಕಾಮೆಂಟ್ ಬರೆಯಿರಿ