ಊಟಿ ಬಳಿ ಕಂದಕಕ್ಕೆ ಬಸ್‌ ಉರುಳಿ ಬಿದ್ದು 8 ಜನರು ಸಾವು

ಉದಕಮಂಡಲಂ : ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ 55 ಪ್ರವಾಸಿಗರಿದ್ದ ಬಸ್ ಕಣಿವೆಗೆ ಉರುಳಿ ಬಿದ್ದು 8 ಪ್ರವಾಸಿಗರು ಮೃತಪಟ್ಟಿದ್ದು, ಹಲವು ಜನರು ಗಾಯಗೊಂಡಿದ್ದಾರೆ.
ನೀಲಗಿರಿ ಬೆಟ್ಟದ ವ್ಯಾಪ್ತಿಯಲ್ಲಿ ಬರುವ ಕೂನೂರು ಬಳಿಯ ಊಟಿ-ಮಟ್ಟುಪಾಳ್ಯಂ ರಸ್ತೆಯ ಘಾಟ್‌ನಲ್ಲಿ ಹೆಡ್‌ಪಿನ್ ತಿರುವಿನಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಕಣಿವೆಗೆ ಉರುಳಿದೆ.
ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಹಗ್ಗವನ್ನು ಬಳಸಿ ಕಣಿವೆಯಲ್ಲಿ ಸಿಲುಕಿರುವ ಪ್ರವಾಸಿಗರನ್ನು ಮೇಲಕ್ಕೆ ಕರೆತರಲಾಗುತ್ತಿದೆ. ಪೊಲೀಸರ ಮಾಹಿತಿ ಪ್ರಕಾರ ಈ ಪ್ರವಾಸಿ ಬಸ್ ಊಟಿಯಿಂದ ಮೆಟ್ಟುಪಾಳ್ಯಂಗೆ ಸಂಚಾರ ನಡೆಸುತ್ತಿತ್ತು.

ಪೊಲೀಸ್ ವರಿಷ್ಠಾಧಿಕಾರಿ ಕೆ. ಪ್ರಭಾಕರ್ ಘಟನೆ ಬಗ್ಗೆ ಮಾಹಿತಿ ನೀಡಿದ್ದು, “ಪ್ರಾಥಮಿಕ ಮಾಹಿತಿಯಂತೆ ಚಾಲಕನ ನಿಯಂತ್ರಣ ತಪ್ಪಿ ಬಸ್ ಕಣಿವೆಗೆ ಉರುಳಿದೆ ಎಂದು ಅಂದಾಜಿಸಲಾಗಿದೆ. ತನಿಖೆ ನಡೆಯುತ್ತಿದೆ” ಎಂದು ತಿಳಿಸಿದ್ದಾರೆ. ಬಸ್ಸಿನಲ್ಲಿದ್ದವರು ಮೆಟ್ಟುಪಾಳ್ಯಂ ಸುತ್ತಮುತ್ತಲಿನ ಪ್ರವಾಸಿ ತಾಣ ನೋಡಿಕೊಂಡು ವಾಪಸ್‌ ಊಟಿಗೆ ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಈ ರಸ್ತೆ ಅಪಘಾತದಲ್ಲಿ ಮೃತಪಟ್ಟವರಲ್ಲಿ ಮೂವರು ಮಹಿಳೆಯರು. ಐವರು ಪುರುಷರು ಎಂದು ಕೂನೂರು ಸರ್ಕಾರಿ ಆಸ್ಪತ್ರೆಯ ಜಂಟಿ ನಿರ್ದೇಶಕ ಪಳನಿ ಸ್ವಾಮಿ ಹೇಳಿದ್ದಾರೆ. ಸರ್ಕಾರ ಗಾಯಾಳುಗಳು ಚಿಕಿತ್ಸೆಗೆ ಅಗತ್ಯ ಸೂಚನೆಯನ್ನು ನೀಡಿದೆ ಎಂದು ತಿಳಿಸಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ರಸ್ತೆ ಅಪಘಾತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ. ಮೃತಪಟ್ಟವರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಮತ್ತು ಗಂಭೀರವಾಗಿ ಗಾಯಗೊಂಡವರಿಗೆ 1 ಲಕ್ಷ, ಸಾಮಾನ್ಯವಾಗಿ ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಹೊರಗೆ ಸಿಗು...ಮನೆಗೆ ಹೇಗೆ ಹೋಗ್ತೀಯಾ ನೋಡ್ತೀನಿ': ನ್ಯಾಯಾಲಯದ ಕೋಣೆಯೊಳಗೆ ಮಹಿಳಾ ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ನಿವೃತ್ತ ಶಿಕ್ಷಕ...

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement