ಮೈಸೂರು: ಈ ಹೃದಯ ಯಾವ ಕ್ಷಣದಲ್ಲಿ ಆಘಾತಕ್ಕೆ (Heart Attack) ಒಳಗಾಗುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಕುಳಿತಲ್ಲೇ ಕುಸಿಯುವುದು, ಮಾತನಾಡುತ್ತಿರುವಾಗಲೇ ಸ್ತಬ್ದವಾಗುವುದು, ನೃತ್ಯ ಮಾಡುತ್ತಲೇ ಬೀಳುವುದು.. ಹೀಗೆ ಸಾವಿನ ಹತ್ತಾರು ಸನ್ನಿವೇಶಗಳು ಕಂಡುಬರುತ್ತಿವೆ. ಮೈಸೂರಿನಲ್ಲಿ ಔಷಧದ ಅಂಗಡಿಯೊಂದಕ್ಕೆ (Medical Stores) ಔಷಧ ತೆಗೆದುಕೊಳ್ಳಲೆಂದು ಬಂದ ವ್ಯಕ್ತಿ ಅಲ್ಲೇ ಕುಸಿದುಬಿದ್ದು ಮೃತಪಟ್ಟ ಘಟನೆಯೊಂದು ವರದಿಯಾಗಿದೆ. ಘಟನೆಯ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಮೈಸೂರಿನ ಉದಯಗಿರಿ ಮೆಡಿಕಲ್ ಸ್ಟೋರ್‌ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಮೃತರನ್ನು ಜಗದೀಶ (38) ಎಂದು ಗುರುತಿಸಲಾಗಿದೆ. ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಕ್ಯಾತಮಾರನಹಳ್ಳಿಯಲ್ಲಿ ಚಿಕನ್ ಅಂಗಡಿ ಇಟ್ಟುಕೊಂಡಿದ್ದ ಜಗದೀಶ ಅವರು ಉದಯಗಿರಿ ಮೆಡಿಕಲ್ ಸ್ಟೋರ್‌ಗೆ ಬರುತ್ತಲೇ ಎದೆಗೆ ಕೈ ಹಿಡಿದುಕೊಂಡಿದ್ದಾರೆ. ಅವರು ಔಷಧದ ಅಂಗಡಿಗೆ ಬಂದ ಕೂಡಲೇ ಕೌಂಟರ್‌ನ ಟೇಬಲ್‌ಗೆ ಒರಗಿಕೊಂಡು ನಿಂತಿರುವುದು ಕಂಡುಬರುತ್ತದೆ. ಆಗ ಅಂಗಡಿಯ ಮಾಲೀಕರು ಬೇರೊಬ್ಬರಿಗೆ ಔಷಧ ಕೊಡುತ್ತಿದ್ದವರು ಅವರು ಬಂದಿರುವುದನ್ನು ಗಮನಿಸಿ ಆ ಕಡೆಗೆಬರುತ್ತಾರೆ. ಅವರು ಜಗದೀಶ ಅವರನ್ನು ವಿಚಾರಿಸಿಕೊಳ್ಳುವಷ್ಟರಲ್ಲಿಯೇ ಜಗದೀಶ ಕುಸಿದು ಬೀಳುವುದು ಕಂಡುಬರುತ್ತದೆ.
ಆಗ ಅಂಗಡಿ ಮಾಲೀಕರು ಹೊರಗೆ ಓಡಿ ಬಂದು ಅವರನ್ನು ಎಬ್ಬಿಸಿ ಕೂರಿಸುವ ಯತ್ನ ಮಾಡುತ್ತಾರೆ. ಆದರೆ, ಎಷ್ಟೇ ಪ್ರಯತ್ನಿಸಿದರೂ ಎಚ್ಚರಿಸುವ ಪ್ರಯತ್ನ ಸಾಧ್ಯವಾಗುವುದಿಲ್ಲ. ಈ ಬಗ್ಗೆಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆ ಈ ಭಾಗದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ